ಮೈಸೂರಿನ ಕೆಆರ್‌ಎಸ್‌ ರಸ್ತೆಗೆ ಸಿದ್ದರಾಮಯ್ಯ ಹೆಸರು: ಬಿಜೆಪಿಯಲ್ಲಿ ಭಿನ್ನಾಭಿಪ್ರಾಯ

Published : Dec 26, 2024, 06:59 AM IST
ಮೈಸೂರಿನ ಕೆಆರ್‌ಎಸ್‌ ರಸ್ತೆಗೆ ಸಿದ್ದರಾಮಯ್ಯ ಹೆಸರು: ಬಿಜೆಪಿಯಲ್ಲಿ ಭಿನ್ನಾಭಿಪ್ರಾಯ

ಸಾರಾಂಶ

ಮೈಸೂರಿನ ಕೆಆರ್‌ಎಸ್‌ ರಸ್ತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರು ನಾಮಕರಣ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷ ಬಿಜೆಪಿಯಲ್ಲಿ ಭಿನ್ನಾಭಿಪ್ರಾಯ ಮೂಡಿದೆ.

ಮೈಸೂರು/ ಬೆಂಗಳೂರು (ಡಿ.26): ಮೈಸೂರಿನ ಕೆಆರ್‌ಎಸ್‌ ರಸ್ತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರು ನಾಮಕರಣ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷ ಬಿಜೆಪಿಯಲ್ಲಿ ಭಿನ್ನಾಭಿಪ್ರಾಯ ಮೂಡಿದೆ. ಈ ಪ್ರಸ್ತಾಪಕ್ಕೆ ಸ್ಥಳೀಯ ಸಂಸದ ಯದುವೀರ್‌ ಒಡೆಯರ್‌ ಸೇರಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷದ ನಾಯಕ ಆರ್‌.ಅಶೋಕ್ ಮತ್ತಿತರರು ತೀವ್ರವಾಗಿ ವಿರೋಧಿಸಿದ್ದರೆ, ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಸಿದ್ದರಾಮಯ್ಯ ಅವರ ಹೆಸರು ನಾಮಕರಣ ಮಾಡುವುದನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. 

ಮೈಸೂರಿನ ಪ್ರಿನ್ಸೆಸ್ ರಸ್ತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿಡುವ ಪ್ರಸ್ತಾಪಕ್ಕೆ ಸಂಸದ ಯದುವೀರ್‌ ಒಡೆಯರ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೈಸೂರು ಅರಸರ ಅಭಿವೃದ್ಧಿ ಕೆಲಸಗಳಿಂದ ಹಳೇ ಮೈಸೂರು ಭಾಗ ಅಭಿವೃದ್ಧಿಯಾಗಿದೆ. ಜನರಿಂದ ಆಯ್ಕೆಯಾಗಿ ಬರುವ ಜನಪ್ರತಿನಿಧಿಗಳ ಹೆಸರನ್ನು ಇಡುವುದು ಸರಿಯಲ್ಲ ಎಂದು ಹೇಳಿದ್ದಾರೆ. ಬುಧವಾರ ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಒಡೆಯರ್‌, ಪ್ರಿನ್ಸೆಸ್ ಹೆಸರು ಆ ರಸ್ತೆಗೆ ಸುಮ್ಮನೆ ಬಂದಿಲ್ಲ. ಅದು ಕೆಆರ್‌ಎಸ್‌ಗೆ ಸಂಪರ್ಕ ಕಲ್ಪಿಸುತ್ತದೆ. ಹೀಗಾಗಿ, ಕೆಆರ್‌ಎಸ್ ರಸ್ತೆ ಅಂತ ಜನರು ಸಾಮಾನ್ಯವಾಗಿ ಕರೆಯುತ್ತಾರೆ. 

ಚಿಕ್ಕಮಗಳೂರು, ಧರ್ಮಸ್ಥಳ, ಕೊಡಗಲ್ಲಿ ಮಿನಿ ಏರ್‌ಪೋರ್ಟ್‌: ರಾಜ್ಯ ಸರ್ಕಾರದಿಂದ ಸಿದ್ಧತೆ

ಮಹಾರಾಣಿ ಕೃಷ್ಣಾಜಮ್ಮಣ್ಣಿಯವರ ನೆನಪಿಗೋಸ್ಕರ ಅವರ ಕುಟುಂಬ ಈ ಹೆಸರಿಟ್ಟಿತ್ತು. ಕೃಷ್ಣಾಜಮ್ಮಣ್ಣಿಯವರು ಕ್ಷಯರೋಗದಿಂದ ಮೃತಪಟ್ಟರು. ಅದರ ಅಧ್ಯಯನಕ್ಕಾಗಿ ಕ್ಷಯ ರೋಗ ಆಸ್ಪತ್ರೆಯನ್ನು ಮಾಡಲಾಯಿತು. ಹೀಗಾಗಿ, ಅವರ ಹೆಸರನ್ನು ಆ ರಸ್ತೆಗೆ ನಾಮಕರಣ ಮಾಡಲಾಗಿದೆ ಎಂದರು. ಅಲ್ಲಿ ಕೃಷ್ಣಾಜಮ್ಮಣ್ಣಿ ಸ್ಯಾನಿಟೋರಿಯಂ ಶುರು ಮಾಡಲಾಗಿತ್ತು. ಆದರೆ, ಈಗ ಸಿದ್ದರಾಮಯ್ಯ ಹೆಸರು ಇಡುವ ಬೆಳವಣಿಗೆ ಬೇಸರ ಎನಿಸುತ್ತದೆ. ಅವರ ಹೆಸರನ್ನು ಇಡಬೇಕೆಂದಿದ್ದರೆ ಬೇರೆ ರಸ್ತೆಗಳಿವೆ. ಅವುಗಳಿಗೆ ಇಟ್ಟುಕೊಳ್ಳಿ ಎಂದು ಸಲಹೆ ನೀಡಿದರು.

ತುಘಲಕ್ ಆಡಳಿತ ನಡೆ -ವಿಜಯೇಂದ್ರ: ಮೈಸೂರು ಸಂಸ್ಥಾನ ಕಟ್ಟಿ ಬೆಳೆಸಿದವರು ಮೈಸೂರಿನ ರಾಜ ಮಹಾರಾಜರು, ಅಂತಹ ಶ್ರೇಷ್ಠ ರಾಜ ಮನೆತನದವರ ಹೆಸರಿರುವ ರಸ್ತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮದೇ ಹೆಸರಿಟ್ಟುಕೊಳ್ಳಲು ಹೊರಟಿದ್ದಾರೆ. ಜನಪ್ರತಿನಿಧಿಗಳೇ ಇಲ್ಲದ ಮೈಸೂರು ಮಹಾನಗರ ಪಾಲಿಕೆ ಈ ನಿರ್ಧಾರ ತೆಗೆದುಕೊಂಡಿರುವುದು ಎಷ್ಟು ಕ್ರಮಬದ್ಧ ಹಾಗೂ ಎಷ್ಟು ಸಮಂಜಸ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪ್ರಶ್ನಿಸಿದ್ದಾರೆ. ತಾವೇ ಅಧಿಕಾರದಲ್ಲಿದ್ದು ತಮ್ಮ ಹೆಸರನ್ನೇ ಪ್ರತಿಷ್ಠಾಪಿಸಿಕೊಳ್ಳಲು ಹೊರಟಿರುವ ಮುಖ್ಯಮಂತ್ರಿಗಳಿಗೆ ನೈತಿಕತೆ ಚುಚ್ಚುವುದಿಲ್ಲವೇ? ತುಘಲಕ್ ಆಡಳಿತ ಅನುಸರಿಸುವವರಲ್ಲಿ ಮಾತ್ರ ಇಂತಹ ನಡೆಯನ್ನು ಕಾಣಲು ಸಾಧ್ಯ ಎಂದು ಅವರು ಸಾಮಾಜಿಕ ಜಾಲತಾಣದ ಮೂಲಕ ಹೇಳಿಕೆ ನೀಡಿದ್ದಾರೆ.

ರಸ್ತೆಗೆ ಸಿದ್ದು ಹೆಸರು ಸರಿಯಲ್ಲ -ಅಶೋಕ್: ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಿಪಕ್ಷದ ನಾಯಕ ಅಶೋಕ್‌, ಕರ್ನಾಟಕಕ್ಕೆ ಕೃಷ್ಣರಾಜಸಾಗರ ಅಣೆಕಟ್ಟನ್ನು ನೀಡಿದ ಮನೆತನದವರ ಹೆಸರನ್ನು ತೆಗೆದು ಕೆ.ಆರ್.ರಸ್ತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರು ಇಡುವುದು ಒಳ್ಳೆಯ ಬೆಳವಣಿಗೆ ಅಲ್ಲ. ಹಾಗೇನಾದರೂ ಹೆಸರು ಇಡಬೇಕು ಎಂದಿದ್ದರೆ ಹೊಸ ರಸ್ತೆಯೊಂದನ್ನು ನಿರ್ಮಿಸಿ ಅವರ ಹೆಸರು ಅಥವಾ ಅವರ ಕುಟುಂಬದವರ ಹೆಸರನ್ನು ಇಡಲಿ ಎಂದು ಹೇಳಿದ್ದಾರೆ.

ಸಿದ್ದು ಹೆಸರಿಟ್ಟರೆ ತಪ್ಪೇನು?: ಮೈಸೂರಿಗೆ ಸಿದ್ದರಾಮಯ್ಯ ಅವರ ಕೊಡುಗೆ ಬಹಳ ಇದೆ. ಅವರ ಹೆಸರು ಇಡುವುದರಲ್ಲಿ ತಪ್ಪೇನಿದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಮೈಸೂರಿನ ಸುಪುತ್ರ. ಸೈದ್ಧಾಂತಿಕವಾಗಿ ಅವರನ್ನು ವಿರೋಧಿಸುತ್ತೇನೆ. ಆದರೆ, ಈ ವಿಚಾರದಲ್ಲಿ ವಿರೋಧ ಮಾಡಲ್ಲ. ಸ್ಪಷ್ಟ ಬಹುಮತದೊಂದಿಗೆ ಅವರು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದಾರೆ ಎಂದರು.

ಮೃತ ಮಹಿಳೆ ಕುಟುಂಬಕ್ಕೆ ಅಲ್ಲು ಅರ್ಜುನ್, ‘ಪುಷ್ಪ’ ತಂಡದಿಂದ 2 ಕೋಟಿ ರು.

ಜಯದೇವ ಆಸ್ಪತ್ರೆ ಕಟ್ಟಡ ನಿರ್ಮಾಣ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಿಸಿದ್ದು, ರಾಜಪಥ ಮಾಡಿಸಿದ್ದು ಸಿದ್ದರಾಮಯ್ಯ. 40 ವರ್ಷದಿಂದ ವಿಧಾನಸಭೆಗೆ ಸಿದ್ದರಾಮಯ್ಯ ಹೋಗಿದ್ದಾರೆ. ಈ ವಿಚಾರದಲ್ಲಿ ತಕರಾರು ಎತ್ತಿದರೆ ಮೊಸರಿನಲ್ಲಿ ಕಲ್ಲು ಹುಡುಕಿದಂತೆ ಆಗುತ್ತದೆ. ಸಾಧಕರು ಬರೀ ಬಿಜೆಪಿಯಲ್ಲಿ ಮಾತ್ರ ಇಲ್ಲ. ಎಲ್ಲ ಪಕ್ಷದಲ್ಲೂ ಇದ್ದಾರೆ. ಸಿದ್ದರಾಮಯ್ಯ ಅವರ ಹೆಸರು ಇಡುವ ವಿಚಾರದಲ್ಲಿ ಪಕ್ಷಭೇದ ಮಾಡಬೇಡಿ. ಸಣ್ಣತನ ತೋರಿಸಬೇಡಿ ಎಂದರು. ಬೆಂಗಳೂರಿನಲ್ಲಿ ಕೆಂಪೇಗೌಡರ ನಂತರ ಬಂದ ಸಾಧಕರಿಗೆ ಎಷ್ಟು ಗೌರವ ಕೊಟ್ಟಿದ್ದೇವೋ ಅದೇ ರೀತಿ ಮೈಸೂರಿನಲ್ಲೂ ಮಹಾರಾಜರ ನಂತರ ಬಂದವರಿಗೆ ಗೌರವ ಕೊಡಬೇಕಿದೆ ಎಂದು ಅವರು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕರ್ನಾಟಕ ಗದ್ದುಗೆ ಫೈಟ್‌ ಬಗ್ಗೆ ಹೈಕಮಾಂಡ್‌ ನಾಯಕರ ಚರ್ಚೆ
ಚುಂಚ ಶ್ರೀ ಬಳಿ ಕೈ ಮುಗಿದು ಎಚ್‌ಡಿಕೆ ಕ್ಷಮೆ