ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಸ್ಪರ್ಧೆ ಮಾಡುವುದಿಲ್ಲ. ಸಾಮಾನ್ಯ ಕಾರ್ಯಕರ್ತರಿಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ಕೊಡುವ ನಿರ್ಧಾರ ಮಾಡಲಾಗಿದೆ. ಚಿಕ್ಕೋಡಿ ಕಾಂಗ್ರೆಸ್‌ನಲ್ಲಿ ಸಾಕಷ್ಟು ಜನ ಆಕಾಂಕ್ಷಿಗಳಿದ್ದಾರೆ. ಅಲ್ಲದೇ ಕ್ರೀಯಾಶೀಲ ಕಾರ್ಯಕರ್ತರು ಇರುವಾಗ ನಮ್ಮ ಕುಟುಂಬದಿಂದ ಯಾರೂ ಸ್ಪರ್ಧಿಸುವುದಿಲ್ಲ: ಸಚಿವ ಸತೀಶ ಜಾರಕಿಹೊಳಿ
ಬೆಳಗಾವಿ(ಫೆ.23): ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ನಾನಾಗಲಿ ಅಥವಾ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ನನ್ನ ಪುತ್ರಿ ಪ್ರಿಯಾಂಕಾ ಆಗಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಸ್ಪಷ್ಟಪಡಿಸಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಸ್ಪರ್ಧೆ ಮಾಡುವುದಿಲ್ಲ. ಸಾಮಾನ್ಯ ಕಾರ್ಯಕರ್ತರಿಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ಕೊಡುವ ನಿರ್ಧಾರ ಮಾಡಲಾಗಿದೆ. ಚಿಕ್ಕೋಡಿ ಕಾಂಗ್ರೆಸ್‌ನಲ್ಲಿ ಸಾಕಷ್ಟು ಜನ ಆಕಾಂಕ್ಷಿಗಳಿದ್ದಾರೆ. ಅಲ್ಲದೇ ಕ್ರೀಯಾಶೀಲ ಕಾರ್ಯಕರ್ತರು ಇರುವಾಗ ನಮ್ಮ ಕುಟುಂಬದಿಂದ ಯಾರೂ ಸ್ಪರ್ಧಿಸುವುದಿಲ್ಲ. ಬೆಳಗಾವಿ ಹಾಗೂ ಚಿಕ್ಕೋಡಿ ಕ್ಷೇತ್ರಕ್ಕೆ ಎರಡು ಹೆಸರುಗಳನ್ನು ಫೈನಲ್ ಮಾಡಲಾಗಿದೆ. ಅಂತಿಮ ತಿರ್ಮಾನ ಹೈಕಮಾಂಡ್ ತೆಗೆದುಕೊಳ್ಳಲಿದೆ ಎಂದರು.
ಬೆಳಗಾವಿ ಎಥೆನಾಲ್ ಉತ್ಪಾದನೆಯ ಹಬ್ ಆಗಲಿ: ಕೇಂದ್ರ ಸಚಿವ ನಿತಿನ್ ಗಡ್ಕರಿ
ಈ ಲೋಕಸಭಾ ಚುನಾವಣೆಯಲ್ಲಿ ಸತೀಶ ಜಾರಕಿಹೊಳಿ ಅವರನ್ನು ನಿಲ್ಲಿಸಿದರೆ ಇತರರ ಹಾದಿಗಳು ಸುಗಮವಾಗುತ್ತವೆ ಎಂಬ ಮಾತುಗಳು ಜಿಲ್ಲೆಯಲ್ಲಿ ಹರಿದಾಡುತ್ತಿವೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು. ನನ್ನನ್ನು ಕಣಕ್ಕೆ ಇಳಿಸಬೇಕು ಎಂಬ ಚರ್ಚೆ ನಡೆದಿರುವುದು ಸತ್ಯ. ಆದರೆ, ನಿಷ್ಠಾವಂತ ಕಾರ್ಯಕರ್ತರಿಗೂ ಅವಕಾಶ ನೀಡಬೇಕೆಂಬ ಉದ್ದೇಶದಿಂದ ನಾನು ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಬೆಳಗಾವಿ, ಚಿಕ್ಕೋಡಿ ಕ್ಷೇತ್ರಗಳ ಟಿಕೆಟ್ ಹಂಚಿಕೆಗೆ ಜಾತಿ ಲೆಕ್ಕಾಚಾರದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮೊದಲು ಇಲ್ಲಿ ಗೆಲ್ಲುವ ಹಾಗೂ ಜನಪ್ರಿಯ ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆಯುತ್ತದೆ. ಆಮೇಲೆ ಜಾತಿ ಲೆಕ್ಕಾಚಾರ. ನಮ್ಮ ಡ್ಯೂಟಿ ಎರಡು ಕ್ಷೇತ್ರಕ್ಕೆ ಹೆಸರು ಪಟ್ಟಿ ಮಾಡುವುದು ಅಷ್ಟೆ. ಹೈಕಮಾಂಡಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪುತ್ರ ಸೇರಿದಂತೆ ಇಬ್ಬರ ಹೆಸರು ಕಳುಹಿಸಲಾಗಿದೆ. ಮುಖ್ಯವಾಗಿ ಎರಡು ಕ್ಷೇತ್ರದಲ್ಲಿ ಸಚಿವೆಯ ಮಗನ ಹೆಸರಿದ್ದು, ಸರ್ವೆಯಲ್ಲಿ ಯಾರ ಹೆಸರು ಬರುತ್ತದೆಯೋ ಅವರನ್ನೇ ಅಂತಿಮವಾಗಿ ಕಣಕ್ಕಿಳಿಸಲಾಗುವುದು ಎಂದರು.
ಎರಡೂ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಗೆಲುವಿಗೆ ಬೂತಮಟ್ಟದ ಸಭೆಗಳನ್ನು ಮಾಡಲಾಗುತ್ತಿದೆ. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳ ಜಾಗೃತಿ ಮೂಡಿಸುವ ಕೆಲಸವನ್ನು ಕಾರ್ಯಕರ್ತರು ಮಾಡಲಿದ್ದಾರೆ. ಇನ್ನೊಂದು ವಾರದಲ್ಲಿ ಅಂತಿಮವಾಗಿ ಅಭ್ಯರ್ಥಿಗಳ ಘೋಷಣೆಯಾಗಲಿದೆ ಎಂದು ತಿಳಿಸಿದರು.
ಚಿಕ್ಕೋಡಿ ಕ್ಷೇತ್ರದಲ್ಲಿ ಹೊಸಬರಿಗೆ ಅಂದರೆ ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶ ನೀಡಲಾಗುತ್ತಿದೆ. ಕ್ಷೇತ್ರದಲ್ಲಿ ಹಳಬರೆ ನಾಯಕನಾಗುತ್ತಾ ಹೊರಟರೇ ಹೇಗೆ? ಮುಂದೊಂದು ದಿನ ಹೊಸ ಪೀಳಿಗೆ ಬರಬೇಕಲ್ವಾ ಎಂದ ಸಚಿವರು, ಮುಖ್ಯವಾಗಿ ನಮ್ಮ ಕ್ಷೇತ್ರದಲ್ಲಿ ಈ ಭಾರಿ ಮಹಿಳೆಯರಿಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.
ಲೋಕಸಭೆ ಚುನಾವಣೆ 2024: ಬಿಜೆಪಿಯಲ್ಲಿ ಟಿಕೆಟ್‌ಗಾಗಿ ನಡೆದಿದೆ ಭಾರೀ ಕಸರತ್ತು..!
ತಿನಿಸು ಕಟ್ಟೆ ಅಕ್ರಮ ಮಳಿಗೆಗಳ ಬಗ್ಗೆ ತನಿಖೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯಲ್ಲಿರುವ ತಿನಿಸು ಕಟ್ಟೆ ಅಕ್ರಮ ಮಳಿಗೆ ನಿರ್ಮಾಣದ ತನಿಖೆ ಒಂದು ಹಂತಕ್ಕೆ ಬಂದಿದೆ. ಅಧಿಕಾರ ಮಟ್ಟದಲ್ಲಿ ಸಹ ಚರ್ಚಿಸಿ ನೋಟಿಸ್ ನೀಡಲಾಗಿದೆ. ಅವರಿಂದ ಉತ್ತರ ನೋಡುತ್ತಿದ್ದೇವೆ. ಸರ್ಕಾರದ ಮಟ್ಟದಲ್ಲಿ ಕಾನೂನು ತೊಡಕುಗಳಿಗೆ ಇರುವುದು ಸಾಮಾನ್ಯ, ಒದೊಂದೇ ಪರಿಹಾರ ಮಾಡುವ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ ಭೂ ಸ್ವಾಧೀನ ಮಾಡಿಕೊಡಲಾಗಿದೆ. ಅಲ್ಲದೇ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡುವ ಸಂಬಂಧ ಕೇಂದ್ರ ಹೆದ್ದಾರಿ ಸಚಿವ ನಿತೀನ್ ಗಡ್ಕರಿ ಅವರೊಂದಿಗೆ ಐದು ಬಾರಿ ಸಭೆ ನಡೆಸಿ ಚರ್ಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹೆದ್ದಾರಿ ನಿರ್ಮಾಣಕ್ಕಾಗಿ ಶಂಕುಸ್ಥಾಪನೆ ಮಾಡಲಾಗಿದೆ ಎಂದರು.