2.3 ಲಕ್ಷ ಮತದಾರರಲ್ಲಿ ಮುಸ್ಲಿಮರು 40, ಒಕ್ಕಲಿಗರು 40 ಸಾವಿರ, ಕುರುಬರು 20 ಸಾವಿರ, ಬಲಿಜಿಗರು ಸುಮಾರು 10 ಸಾವಿರ ಮತದಾರರು.
ಕೋಲಾರ(ಜ.10): ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೋಲಾರದಿಂದ ಸ್ಪರ್ಧಿಸಲು ಉತ್ಸುಕನಾಗಿರುವುದಾಗಿ ಬಹಿರಂಗವಾಗಿಯೇ ಘೋಷಿಸಿದ ಬೆನ್ನಲ್ಲೇ ಇದೀಗ ರಾಜಕೀಯ ಪಂಡಿತರ ಗಮನ ಕ್ಷೇತ್ರದ ಜಾತಿ ಲೆಕ್ಕಾಚಾರಗಳ ಕುರಿತು ತಿರುಗಿದೆ. ಒಕ್ಕಲಿಗರು ಮತ್ತು ಅಲ್ಪಸಂಖ್ಯಾತ ಮತದಾರರು ಸರಿಸಮಾನ ಸಂಖ್ಯೆಯಲ್ಲಿರುವ ಈ ಕ್ಷೇತ್ರದಲ್ಲಿ ಯಾರ ಬೆನ್ನಿಗೆ ಗಟ್ಟಿಯಾಗಿ ನಿಲ್ಲಲಿದ್ದಾರೆಂಬುದರ ಮೇಲೆ ಸೋಲು-ಗೆಲುವುಗಳು ನಿರ್ಧಾರವಾಗಲಿದೆ.
ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2.31 ಲಕ್ಷ ಮತದಾರರಿದ್ದಾರೆ. ಇದರಲ್ಲಿ 40 ಸಾವಿರ ಒಕ್ಕಲಿಗ ಮತದಾರರಾಗಿದ್ದರೆ, ಅಷ್ಟೇ ಪ್ರಮಾಣದಲ್ಲಿ ಅಂದರೆ ಸುಮಾರು 40 ಸಾವಿರ ಅಲ್ಪಸಂಖ್ಯಾತ ಮತದಾರರೂ ಇದ್ದಾರೆ. ಉಳಿದಂತೆ ಸಿದ್ದರಾಮಯ್ಯ ಪ್ರತಿನಿಧಿಸುವ ಕುರುಬ ಸಮಾಜದ 20 ಸಾವಿರ ಮತ್ತು ಬಲಿಜಿಗ ಹಾಗೂ ಇತರೆ ಸಮುದಾಯಗಳ ತಲಾ 10 ಸಾವಿರ ಮತಗಳಿವೆ.
ಸಿದ್ದರಾಮಯ್ಯ ನನಗೆ ಪ್ರತಿಸ್ಪರ್ಧಿಯೇ ಅಲ್ಲ: ವರ್ತೂರು ಪ್ರಕಾಶ್
ಜೆಡಿಎಸ್‌ನ ಕೆ.ಶ್ರೀನಿವಾಸಗೌಡ ಕ್ಷೇತ್ರದ ಹಾಲಿ ಶಾಸಕ. ಕಳೆದ ಚುನಾವಣೆಯಲ್ಲಿ ಅವರು 82,788 ಮತಗಳನ್ನು ಗಳಿಸಿದ್ದರು. ಇನ್ನು ಕಾಂಗ್ರೆಸ್‌ನಿಂದ ಮುಸ್ಲಿಂ ಅಭ್ಯರ್ಥಿ ಕಣಕ್ಕಿಳಿದಿದ್ದರೂ ಕೇವಲ 38,537 ಮಂದಿಯಷ್ಟೇ ಬೆಂಬಲಿಸಿದ್ದರು. ಇನ್ನು ಒಂದು ಕಾಲದ ಸಿದ್ದರಾಮಯ್ಯ ಅವರ ಶಿಷ್ಯ ವರ್ತೂರು ಪ್ರಕಾಶ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ 35,544 ಮತಗಳನ್ನು ಗಳಿಸಿದ್ದರು. ಬಿಜೆಪಿ ಅಭ್ಯರ್ಥಿ ಆರ್.ವೆಂಕಟಾಚಲಪತಿ ಅವರು ಗಳಿಸಿದ್ದು ಕೇವಲ 12,458 ಮತ. ಸದ್ಯ ಹಾಲಿ ಶಾಸಕ ಶ್ರೀನಿವಾಸಗೌಡ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಜತೆಗೆ ಗುರುತಿಸಿಕೊಂಡಿದ್ದು, ಸಿದ್ದರಾಮಯ್ಯ ಕಣಕ್ಕಿಳಿದರೆ ಕ್ಷೇತ್ರ ಬಿಟ್ಟುಕೊಡುವುದಾಗಿ ಈಗಾಗಲೇ ಘೋಷಿಸಿದ್ದಾರೆ.
ಒಂದು ಕಡೆ ಹಾಲಿ ಶಾಸಕ ಶ್ರೀನಿವಾಸಗೌಡ ಅವರು ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿರುವುದು ಮತ್ತು ಸಿದ್ದರಾಮಯ್ಯ ಅವರ ಪ್ರವೇಶದಿಂದಾಗಿ ಕೋಲಾರ ವಿಧಾನಸಭಾ ಕ್ಷೇತ್ರದ ರಾಜಕೀಯ ಚಿತ್ರಣವೇ ಬದಲಾಗಲಿದ್ದು, ಮುಸ್ಲಿಮರು ಮತ್ತು ಒಕ್ಕಲಿಗರು ಯಾರನ್ನು ಬೆಂಬಲಿಸಲಿದ್ದಾರೆ ಎನ್ನುವುದರ ಮೇಲೆ ಅಭ್ಯರ್ಥಿಗಳ, ಸೋಲು ಗೆಲುವು ನಿರ್ಧಾರವಾಗುವ ನಿರೀಕ್ಷೆ ಇದೆ.