
ಬೆಂಗಳೂರು(ಮೇ.26): ಕೋವಿಡ್ ಸಂಕಷ್ಟದ ಮಧ್ಯೆಯೇ ರಾಜ್ಯದ ಆಡಳಿತಾರೂಢ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಸಂಬಂಧಿಸಿದಂತೆ ಪಕ್ಷದ ಕೆಲವು ಶಾಸಕರು ತೆರೆಮರೆಯಲ್ಲಿ ಪ್ರಯತ್ನ ಆರಂಭಿಸಿದ್ದಾರೆ.
ಆದರೆ, ಪಕ್ಷದ ಹೈಕಮಾಂಡ್ ಮಾತ್ರ ಇದುವರೆಗೆ ಈ ದಿಕ್ಕಿನಲ್ಲಿ ಯಾವುದೇ ರೀತಿಯ ಗಂಭೀರ ಚಿಂತನೆ ನಡೆಸಿಲ್ಲ. ಬದಲಾವಣೆ ಆಗಬೇಕು ಎಂಬ ಕೆಲವು ಶಾಸಕರ ಆಶಯಕ್ಕೆ ಸ್ಪಂದನೆಯನ್ನೂ ವ್ಯಕ್ತಪಡಿಸಿಲ್ಲ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಸೀಡಿಯಲ್ಲಿದ್ದದ್ದು ನಾನೇ: ರೇಪ್ ಮಾಡಿಲ್ಲ, ಸಮ್ಮತಿಯ ಸೆಕ್ಸ್: ಜಾರಕಿಹೊಳಿ ಕೇಸಿಗೆ ಟ್ವಿಸ್ಟ್!
ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಹಾಗೂ ಶಾಸಕ ಅರವಿಂದ್ ಬೆಲ್ಲದ್ ಅವರು ಸೋಮವಾರವೇ ದಿಢೀರನೆ ದೆಹಲಿಗೆ ತೆರಳಿ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಮಾತುಕತೆ ನಡೆಸುವ ಪ್ರಯತ್ನ ನಡೆಸಿದರೂ ಪ್ರಯೋಜನವಾಗಿಲ್ಲ. ವರಿಷ್ಠರು ಭೇಟಿಗೆ ಅವಕಾಶ ನೀಡಿಲ್ಲ ಎಂದು ಮೂಲಗಳು ಖಚಿತಪಡಿಸಿವೆ.
ಮುಂದಿನ ಸಿಎಂ ಬಗ್ಗೆ ಚರ್ಚೆ:
ಈ ನಡುವೆ ನಾಯಕತ್ವ ಬದಲಾವಣೆ ಪ್ರಯತ್ನದ ವದಂತಿ ಹಬ್ಬಿದ ಬೆನ್ನಲ್ಲೇ ಮುಂದಿನ ಮುಖ್ಯಮಂತ್ರಿ ಯಾರಾಗಬಹುದು ಎಂಬ ಚರ್ಚೆಯೂ ರಾಜ್ಯ ರಾಜಕಾರಣದಲ್ಲಿ ನಡೆದಿದ್ದು, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಉಪಮುಖ್ಯಮಂತ್ರಿಗಳಾದ ಡಾ.ಸಿ.ಎನ್.ಅಶ್ವತ್ಥನಾರಾಯಣ, ಲಕ್ಷ್ಮಣ ಸವದಿ, ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ, ಸಂಸದ ಶಿವಕುಮಾರ್ ಉದಾಸಿ, ಶಾಸಕರಾದ ಅರವಿಂದ್ ಬೆಲ್ಲದ್, ಬಸನಗೌಡ ಪಾಟೀಲ ಯತ್ನಾಳ ಅವರ ಹೆಸರುಗಳು ಪ್ರಮುಖವಾಗಿ ಕೇಳಿಬರುತ್ತಿವೆ.
ಸಚಿವರೊಬ್ಬರು ಸಿಎಂ ಬದಲಾವಣೆಗೆ ಒತ್ತಾಯಿಸಿದ್ದಾರೆ : ರೆಣುಕಾಚಾರ್ಯ ಬಾಂಬ್
ಸದ್ಯ ದೇಶವನ್ನು ತೀವ್ರವಾಗಿ ಕಾಡುತ್ತಿರುವ ಕೋವಿಡ್ ನಿಯಂತ್ರಣದಲ್ಲಿ ನಿರತರಾಗಿರುವ ಬಿಜೆಪಿ ವರಿಷ್ಠರು ನಾಯಕತ್ವ ಬದಲಾವಣೆಯಂಥ ಪ್ರಯತ್ನಗಳಿಗೆ ಕಿವಿಗೊಡುವ ಸ್ಥಿತಿಯಲ್ಲಿ ಇಲ್ಲ. ಅವರ ಆದ್ಯತೆ ಏನಿದ್ದರೂ ಕೋವಿಡ್ ನಿಯಂತ್ರಿಸಿ ಜನಜೀವನವನ್ನು ಸಹಜ ಸ್ಥಿತಿಗೆ ಬರುವಂತೆ ಮಾಡುವುದಷ್ಟೇ ಆಗಿದೆ. ಇಂಥ ಸನ್ನಿವೇಶದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಯಾರೇ ಪ್ರಸ್ತಾಪ ಮಾಡುವುದಾಗಲಿ ಅಥವಾ ಪ್ರಯತ್ನ ಮಾಡುವುದಾಗಲಿ ಸರಿಯಲ್ಲ ಎಂಬ ಅಭಿಪ್ರಾಯವನ್ನು ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.