ಸರ್ಕಾರ ನಡೆಯುತ್ತಿಲ್ಲ, 8 ತಿಂಗಳು ಕಾಲ ಹಾಕಿದರೆ ಸಾಕೆಂಬ ಕಾರಣಕ್ಕೆ ಎಲ್ಲವನ್ನೂ ಮ್ಯಾನೇಜ್ ಮಾಡ್ತಿದ್ದೇವೆ ಎಂದು ತಮ್ಮ ಸರ್ಕಾರದ ವಿರುದ್ಧ ಅಸಹಾಯಕತೆ ಹೊರಹಾಕಿದ್ದ ಕಾನೂನು ಮತ್ತು ಸಂಸದೀಯ ವ್ಯವಹಾರ ಖಾತೆ ಸಚಿವ ಮಾಧುಸ್ವಾಮಿ ಸ್ವಪಕ್ಷದ ನಾಯಕರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ಆಗಸ್ಟ್.15):: ಸರ್ಕಾರ ನಡೆಯುತ್ತಿಲ್ಲ, 8 ತಿಂಗಳು ಕಾಲ ಹಾಕಿದರೆ ಸಾಕೆಂಬ ಕಾರಣಕ್ಕೆ ಎಲ್ಲವನ್ನೂ ಮ್ಯಾನೇಜ್ ಮಾಡ್ತಿದ್ದೇವೆ ಎಂದು ತಮ್ಮ ಸರ್ಕಾರದ ವಿರುದ್ಧ ಅಸಹಾಯಕತೆ ಹೊರಹಾಕಿದ ಸಚಿವ ಮಾಧುಸ್ವಾಮಿ ವಿರುದ್ಧ ಸ್ವಪಕ್ಷದ ನಾಯಕರೇ ಗರಂ ಆಗಿದ್ದಾರೆ.
ಇನ್ನು ಈ ಬಗ್ಗೆ ಕೋಲಾರದ ಸಚಿವ ಮುನಿರತ್ನ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಇಂಥ ಹೇಳಿಕೆಗಳು ಮಾಧುಸ್ವಾಮಿ ಅವರ ಹಿರಿತನಕ್ಕೆ ಶೋಭೆ ತರುವುದಿಲ್ಲ. ಸಚಿವ ಸಂಪುಟದ ಎಲ್ಲ ನಿರ್ಧಾರಗಳಲ್ಲೂ ಅವರು ಭಾಗವಹಿಸುತ್ತಾರೆ. ಹೀಗಾಗಿ ಸರ್ಕಾರದ ಕಾರ್ಯನಿರ್ವಹಣೆಯಲ್ಲಿ ಅವರು ಸಹ ಪಾಲುದಾರರಾಗಿದ್ದಾರೆ. ಜವಾಬ್ದಾರಿ ಸ್ಥಾನದಲ್ಲಿರುವವರು ಈ ರೀತಿ ಮಾತನಾಡಬಾರದು. ಬೇಕಿದ್ರೆ ರಾಜೀನಾಮೆ ಕೊಡಲಿ ಎಂದು ಕಿಡಿಕಾರಿದರು.
ಸರ್ಕಾರ ನಡೆಯುತ್ತಿಲ್ಲ ಹೇಗೋ ಮ್ಯಾನೇಜ್ ಮಾಡ್ತಿದ್ದೀವಿ ಅಷ್ಟೇ: ಸಚಿವ ಮಾಧುಸ್ವಾಮಿ ಆಡಿಯೋ ವೈರಲ್
ಸಿಟಿ ರವಿ ಹೇಳಿಕೆ
ಸರಕಾರ ಮತ್ತು ಪಕ್ಷದ ವರ್ಚಸ್ಸು ಹೆಚ್ಚಿಸುವ ಜವಾಬ್ದಾರಿ ಹಿರಿಯ ಸಚಿವರ ಮೇಲಿದೆ. ನಮ್ಮ ಬದ್ಧತೆ ರಾಜ್ಯದ ಜನತೆಗೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಸಚಿವರು ಎಚ್ಚರಿಕೆಯಿಂದ ಮಾತನಾಡಬೇಕೆಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಮಾಧುಸ್ವಾಮಿ ಹೇಳಿದ್ದೇನು?
ಈ ಸರ್ಕಾರ ನಡೆಯುತ್ತಿಲ್ಲ ಕಣಪ್ಪ, ಏಳೆಂಟು ತಿಂಗಳು ಇದೆ ಅಂತ ಮ್ಯಾನೇಜ್ ಮಾಡುತ್ತಿದ್ದೇವೆ ಎಂದು ಸರ್ಕಾರದ ನಡೆ ಕುರಿತು ಕಾನೂನು ಸಚಿವ ಮಾಧುಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆನ್ನಲಾದ ಅವರ ಆಡಿಯೋ ವೈರಲ್ ಆಗಿದೆ. ಸೊಸೈಟಿಗಳಲ್ಲಿ ಹಣ ವಸೂಲಿ ಬಗ್ಗೆ ಸಚಿವರಿಗೆ ಸಾಮಾಜಿಕ ಹೋರಾಟಗಾರ ಕರೆ ಮಾಡಿದ್ದು, ಈ ವೇಳೆ ಸರ್ಕಾರದ ನಡೆ ಬಗ್ಗೆ ಸಚಿವ ಮಾಧುಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ವೇಳೆ ರೈತರ ಸಮಸ್ಯೆ ಬಗೆಹರಿಸಲಾಗುವುದಿಲ್ಲ. ಸಹಕಾರ ಸಚಿವರ ಗಮನಕ್ಕೆ ತಂದರೂ ಅವರು ಏನು ಕ್ರಮ ಕೈಗೊಂಡಿಲ್ಲ ಏನು ಮಾಡೋಣ ಎಂದು ಮಾಧುಸ್ವಾಮಿ ಹೇಳಿದ್ದು, ಈ ಸರ್ಕಾರ ಏನೂ ನಡೆಯುತ್ತಿಲ್ಲ, ಏಳೆಂಟು ತಿಂಗಳಿದೆ ಎಂದು ಮ್ಯಾನೇಜ್ ಮಾಡುತ್ತಿದ್ದೇವೆ ಎಂದು ಸರ್ಕಾರದ ಬಗ್ಗೆ ಮಾಧುಸ್ವಾಮಿ ಮಾತಾಡಿದ್ದಾರೆನ್ನಲಾದ ಆಡಿಯೋ ವೈರಲ್ ಆಗುತ್ತಿದೆ.
ಆಡಿಯೋದಲ್ಲಿ ಏನಿದೆ..?
ಭಾಸ್ಕರ್: ನಮಸ್ತೆ ಸರ್, ನಾನು ಚನ್ನಪಟ್ಟಣದಿಂದ ಸಮಾಜ ಸೇವಕ ಭಾಸ್ಕರ್ ಅಂತ. ವಿಎಸ್ಎಸ್‌ಎನ್ ಬ್ಯಾಂಕ್‌ನಲ್ಲಿ 50 ಸಾವಿರ ರೂಪಾಯಿ ಸಾಲ ಪಡೆದಿದ್ದಾರೆ ರೈತರು. ಆ ಹಣ ಕಟ್ಟಬೇಕಾದರೆ ರಿನೀವಲ್‌ಗೆ ಅಂತ 1,300 ರೂಪಾಯಿಯನ್ನ ಬ್ಯಾಂಕ್ ಸಿಬ್ಬಂದಿಗಳು ತಗೊಂಡು ಅವರೇ ಬಡ್ಡಿಗೆ ಅಂತ ಹಣ ಇಡ್ಕೊತ್ತಿದ್ದಾರೆ.
ಮಾಧುಸ್ವಾಮಿ: ಏನಪ್ಪ ಮಾಡ್ಲಿ... ಇದೆಲ್ಲ ನನಗೆ ಗೊತ್ತು, ಬಡ್ಡಿ ಹೊಡ್ಕೊಂಡು ತಿಂತಾರೆ ಅಂತ ಸನ್ಮಾನ್ಯ ಸೋಮಶೇಖರ್ ಅವರ ಗಮನಕ್ಕೂ ತಂದಿದ್ದೇನೆ. ಅವರೇನು ಕ್ರಮ ಜರುಗಿಸ್ತಾ ಇಲ್ವಲ್ಲಾ… ಏನ್ ಮಾಡೋದು?
ಭಾಸ್ಕರ್: ರೈತರನ್ನ ಬ್ಯಾಂಕ್‌ನವರು ಮಂಗನಂತೆ ಮಾಡಿಬಿಟ್ಟಿದ್ದಾರೆ ನೋಡಿ ಸರ್
ಮಾಧುಸ್ವಾಮಿ: ನಾನೇ ಕಟ್ಟಿದ್ದೀನಿ ಮಾರಾಯಾ, ರೈತರಲ್ಲ ನನ್ನ ಅತ್ರನೂ ತಗೊಂಡವೋ.
ಭಾಸ್ಕರ್: ನೋಡಿ ಸರ್ ಇದೆಲ್ಲಾ ನೋಡೋಕೆ ಸರಿ ಕಾಣೋದಿಲ್ಲ
ಮಾಧುಸ್ವಾಮಿ: ಸರ್ಕಾರ ನಡೀತಾ ಇಲ್ಲ ಇಲ್ಲಿ, ಮ್ಯಾನೇಜ್‌ಮೆಂಟ್ ಮಾಡ್ತಿದ್ದೀವಿ ಅಷ್ಟೆ. ತಳ್ಳಿದ್ರೆ ಸಾಕು ಇನ್ನು 8 ತಿಂಗಳು ಅಂತ ತಳ್ತಾ ಇದ್ದೀವಿ.