ತಮ್ಮ ವಿರುದ್ಧ ಕಮಿಷನ್ ಆರೋಪ ಮಾಡಿರುವ ಗುತ್ತಿಗೆದಾರರ ಸಂಘದ ಅಧ್ಯಕ್ಷರ ವಿರುದ್ಧ ಸಚಿವ ಮುನಿರತ್ನ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.
ಕೋಲಾರ, ಆಗಸ್ಟ್.28): ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ತಮ್ಮ ವಿರುದ್ಧ ಕಮಿಷನ್ ಆರೋಪ ಮಾಡಿರುವುದಕ್ಕೆ ಸಚಿವ ಮುನಿರತ್ನ ವಾಗ್ದಾಳಿ ನಡೆಸಿದ್ದಾರೆ.
ದೊಡ್ಡಬಳ್ಳಾಪುರದಲ್ಲಿ ನಡೆಯುತ್ತಿರುವ ಜನೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಗೆ ಆಗಮಿಸಿದ ಸಚಿವ ಮುನಿರತ್ನ,ಸಭೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ ಅವರು, ಜಿಲ್ಲೆಯ ಡಿಸಿಸಿ ಬ್ಯಾಂಕ್ ನಲ್ಲಿ ನಡೆಯುತ್ತಿರುವ ಅಕ್ರಮ ಹಾಗೂ ಕಳಪೆ ರಸ್ತೆಗಳ ವಿರುದ್ಧವೂ ತನಿಖೆ ನಡೆಯಲಿದೆ.ನನ್ನ ವಿರುದ್ಧ ಕಮಿಷನ್ ಆರೋಪ ಮಾಡಿರುವ ಗುತ್ತಿಗೆದಾರರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಸಿದ್ಧತೆಯಾಗಿದೆ ಎಂದರು.
undefined
ಪರ್ಸೆಂಟೇಜ್ ಕಲೆಕ್ಟ್ ಮಾಡದಿದ್ರೆ ಅಧಿಕಾರಿಗಳು ಸಸ್ಪೆಂಡ್: ಈ ಆರೋಪಕ್ಕೆ ಮುನಿರತ್ನ ಹೇಳಿದ್ದಿಷ್ಟು
ಇಂದು (ಭಾನುವಾರ) ಆಗಿರೋದ್ರಿಂದ ಅಂಚೆ ಕಚೇರಿಗಳು ರಜೆ ಇದೆ,ಆಗಾಗಿ ನಾಳೆ (ಸೋಮವಾರ) ಬೆಳಿಗ್ಗೆ 11 ಗಂಟೆಗೆ ಮಾನನಷ್ಟದ ನೊಟೀಸ್ ಕಳುಹಿಸಲಾಗುವುದು.ನೋಟಿಸ್ ತಲುಪಿದ 8 ದಿನಗಳ ಬಳಿಕ ಗುತ್ತಿಗೆದಾರರು ಏನೂ ಪ್ರತಿಕ್ರಿಯೆ ನೀಡುತ್ತಾರೆ ಎಂದು ಗಮನಿಸಿ ಮುಂದಿನ ನಡೆಯನ್ನು ನಿರ್ಧರಿಸುತ್ತೇನೆ ಎಂದು ಹೇಳಿದರು.
ಇನ್ನು ಅವರ ವಿರುದ್ಧ ಕೇವಲ ಮಾನನಷ್ಟ ಮೊಕದ್ದಮೆ ಮಾತ್ರವಲ್ಲದೆ ಕ್ರಿಮಿನಲ್ ಮೊಕದ್ದಮೆಯನ್ನೂ ಹೂಡಲು ತೀರ್ಮಾನಿಸಲಾಗಿದೆ. ಅಲ್ಲದೇ ಕೋಲಾರದಲ್ಲಿ ಅಧಿಕಾರಿಗಳ ಸಮ್ಮುಖದಲ್ಲಿ ಮುಂದಿನ ವಾರದಿಂದ ಕಾಮಗಾರಿ ಪರಿಶೀಲನೆ ಚಟುವಟಿಕೆಯು ನಿರಂತರವಾಗಿ ನಡೆಯಲಿದೆ ಎಂದು ತಿಳಿಸಿದರಲ್ಲದೇ,ಡಿಸಿಸಿ ಬ್ಯಾಂಕ್ ಅಕ್ರಮ ಹಾಗೂ ಕಳಪೆ ರಸ್ತೆಗಳ ವಿರುದ್ಧವೂ ತನಿಖೆ ನಡೆಸಲಾಗುವುದು ಎಂದು ಪರೋಕ್ಷವಾಗಿ ಕೆಲವರಿಗೆ ಎಚ್ಚರಿಕೆ ನೀಡಿದ್ರು.
ಇನ್ನು ನಾವು ನೋಟಿಸ್ ಕಳುಹಿಸಿದ ಬಳಿಕ ಏನಾದ್ರು ಪತ್ರದ ಮೂಲಕ ಕ್ಷಮಾಪಣೆ ಕೋರಿದರೆ,ಪ್ರಧಾನಿಗೆ ನೇರವಾಗಿ ಕ್ಷಮಾಪಣೆ ಪತ್ರ ನೀಡದರೆ,ತಮ್ಮ ಬಳಿ ಇರುವ ದಾಖಲೆಗಳನ್ನು ಲೋಕಾಯುಕ್ತರಿಗೆ ಮತ್ತು ರಾಜ್ಯಪಾಲರಿಗೆ ನೀಡಿದರೆ ಮಾನನಷ್ಟ ಮೊಕದ್ದಮೆ ಹಿಂಪಡೆಯುತ್ತೇನೆ.ಇಲ್ಲವಾದಲ್ಲಿ ಇದನ್ನು ಇಲ್ಲಿ ಬಿಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಇದರ ನಡುವೆ ವಿರೋಧ ಪಕ್ಷಗಳು ನನ್ನ ರಾಜೀನಾಮೆಗೆ ಒತ್ತಾಯ ಮಾಡುವ ಮೊದಲು ಅವರ ಬಳಿ ಇರುವ ದಾಖಲೆಗಳನ್ನು ಒದಗಿಸಲಿ,ಇಲ್ಲವಾದರೆ ವಿರೋಧ ಪಕ್ಷಗಳಿಗೆ ನನ್ನ ಸಚಿವ ಸ್ಥಾನದ ರಾಜೀನಾಮೆ ಕೇಳುವ ಹಕ್ಕು ಇಲ್ಲ ಎಂದು ವಾಗ್ದಾಳಿ ನಡೆಸಿದ್ರು.