ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣ ಕೇಳಿದ ಹೈಕಮಾಂಡ್‌ಗೆ ಖಡಕ್ ಉತ್ತರದೊಂದಿಗೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದಾರೆ. ದೂರವಾಣಿ ಕರೆಯಲ್ಲಿ ಸಿದ್ದರಾಮಯ್ಯ ಹೈಕಮಾಂಡ್ ವಿರುದ್ಧವೇ ಗುಡುಗಿದ್ದಾರೆ. ಹಾಗಾದ್ರೆ, ಹೈಕಮಾಂಡ್ ವಿರುದ್ಧ ಸಿದ್ದು ಗುಡುಗಿದ್ದೇನು..? ಕಾರಣ ಕೇಳಿದ ಹೈಕಮಾಂಡ್‌ಗೆ ಸಿದ್ದು ಕೊಟ್ಟ ಖಡಕ್ ಉತ್ತರವೇನು..? ಸಿದ್ದರಾಮಯ್ಯ ಆಪ್ತವಲಯದಿಂದ ತಿಳಿದುಬಂದ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.
ಬೆಂಗಳೂರು, (ಡಿ.09): ತೀವ್ರ ಕುತೂಹಲ ಮೂಡಿಸಿದ್ದ ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ ಗೆದ್ದು ಬೀಗಿದೆ.
ಆದ್ರೆ, ಕಾಂಗ್ರೆಸ್ ಕೇವಲ 2 ಸ್ಥಾನಗಳಲ್ಲಿ ಗೆಲ್ಲುವಲ್ಲಿ ಮಾತ್ರ ಯಶಸ್ವಿಯಾಗಿದೆ. ಮತ್ತೊಂದೆಡೆ ಈ ಫಲಿತಾಂಶ ರಾಜ್ಯ ಕಾಂಗ್ರೆಸ್‌ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.
ಸೋಲಿನ ಹೊಣೆಹೊತ್ತು ಸಿದ್ದು ರಾಜೀನಾಮೆ, ಕಾಂಗ್ರೆಸ್‌ನಲ್ಲಿ ಅಲ್ಲೋಲ ಕಲ್ಲೋಲ
ಒಂದು ಕಡೆ ಸಿದ್ದರಾಮಯ್ಯ ಅವರು ವಿಪಕ್ಷ ಹಾಗೂ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ರೆ, ಮತ್ತೊಂದೆಡೆ ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷ ಸ್ಥಾನ ತೊರೆಯಲು ತೀರ್ಮಾನ ಮಾಡಿದ್ದಾರೆ.
ಈಗಾಗಲೇ ಸಿದ್ದರಾಮಯ್ಯನವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಎರಡು ಹುದ್ದೆಗಳಿಗೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ದು, ರಾಜೀನಾಮೆ ಪತ್ರವನ್ನು ಹೈಕಮಾಂಡ್‌ಗೆ ಫ್ಯಾಕ್ಸ್ ಮೂಲಕ ರವಾನಿಸಿದ್ದಾರೆ.
ಇನ್ನು ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಹೈಕಮಾಂಡ್ ಕಾರಣ ಕೇಳಿದ್ದು, ಇದಕ್ಕೆ ಸಿದ್ದರಾಮಯ್ಯ ಹೈಕಮಾಂಡ್‌ಗೆ ಖಡಕ್ ಉತ್ತರ ಕೊಟ್ಟು ತಮ್ಮ ವಿಪಕ್ಷ ಹಾಗೂ ಶಾಸಕಾಂಗ ಪಕ್ಷದ ನಾಯಕ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಹೈಕಮಾಂಡ್‌ಗೆ ಸಿದ್ದು ಗುದ್ದು
ಹೌದು...ಕಾಂಗ್ರೆಸ್ ಸೋಲಿಗೆ ಕಾರಣ ಕೇಳಿ ಕರೆ ಮಾಡಿದ್ದ ಹೈಕಮಾಂಡ್‌ಗೆ ಸಿದ್ದರಾಮಯ್ಯ ಖಡಕ್ ಉತ್ತರ ನೀಡಿದ್ದಾರೆ. ಫಲಿತಾಂಶದ ಬಗ್ಗೆ ನನ್ನನ್ನ ಮಾತ್ರ ಕೇಳಿದರೆ ಹೇಗೆ, ಎಲ್ಲರನ್ನೂ ಕೂರಿಸಿಕೊಂಡು ಕೇಳಿ ಎಂದು ಸಿದ್ದರಾಮಯ್ಯ ವೇಣುಗೋಪಾಲ್‌ಗೆ ಗದರಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಮೂಲ ಕಾಂಗ್ರೆಸಿಗರು ಅಂತ ಚುನಾವಣೆ ಸಂದರ್ಭದಲ್ಲಿ ಗಲಾಟೆ ಮಾಡಿದವರನ್ನು ಕೇಳಿ, ಪ್ರಚಾರಕ್ಕೆ ಕರೆದರೆ ಯಾರು ಸರಿಯಾಗಿ ಬಂದಿಲ್ಲ. ಕೆಲವರು ಬಂದರೂ ಬೇಕಾಬಿಟ್ಟಿ ಪ್ರಚಾರ ಮಾಡಿದ್ದಾರೆ. ನಾನು ಒಬ್ಬನೇ ಎಷ್ಟಂತ ಮಾಡಲಿ. ನಾನು ರಾಜೀನಾಮೆ ನೀಡುತ್ತೇನೆ ಮುಂದಿನದ್ದು ನಿಮಗೆ ಬಿಟ್ಟದು ಎಂದ ಗುಡುಗಿದ್ದಾರೆ ಸಿದ್ದರಾಮಯ್ಯ ಆಪ್ತ ಮೂಲಗಳಿಂದ ತಿಳಿದುಬಂದಿದೆ.
ಏಕಾಂಗಿಯಾಗಿದ್ದ ಸಿದ್ದರಾಮಯ್ಯ
ಉಪಚುನಾವಣೆ ಪ್ರಚಾರಲ್ಲಿ ಸಿದ್ದರಾಮಯ್ಯ ಅವರು ಅಕ್ಷರಶಃ ಏಕಾಂಗಿಯಾಗದ್ದರು. 15 ಕ್ಷೇತ್ರಗಳಲ್ಲಿ ಕಾಲಿಗೆ ಚಕ್ರಕಟ್ಟಿಕೊಂಡವರಂತೆ ಏಕಾಧಿಪತಿಯಾಗಿ ಪ್ರಚಾರ ಮಾಡಿದ್ದರು. ಆದ್ರೆ, ಮೂಲಕ ಕಾಂಗ್ರೆಸ್ಸಿಗರು ಮಾತ್ರ ಉಪಚುನಾವಣೆಯಿಂದ ದೂರ ಉಳಿದಿದ್ದರು.
ಉಪಚುನಾವಣೆಯಲ್ಲಿ ಏಕಾಂಗಿ ಎಂದು ಸಿದ್ದರಾಮಯ್ಯನವರನ್ನು ಬಿಜೆಪಿ ನಾಯಕರು ಹಿಯಾಳಿಸಿದ್ದರು. ಆದರೂ ಸಿದ್ದರಾಮಯ್ಯ ಅವರು ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಉಪಚುನಾವಣೆಯಲ್ಲಿ ತಮ್ಮ ಸಾಮಥ್ಯ ಮೀರಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ್ದರು.
ಮೂಲ ಕಾಂಗ್ರೆಸ್ಸಿಗರ ಅಪಸ್ವರ
ಮೂಲ ಕಾಂಗ್ರೆಸ್ ನಾಯರು ಅಂದುಕೊಂಡಿದ್ದೇ ಆಗಿದೆ ಉಪಚುನಾವಣೆಯಲ್ಲಿ ಆಗಿದೆ. ವಿಪಕ್ಷ ನಾಯಕ ಸ್ಥಾನ ಸಿದ್ದರಾಮಯ್ಯನವರಿಗೆ ನೀಡಿದ್ದರಿಂದ ಮೂಲ ಕಾಂಗ್ರೆಸ್ಸಿಗರು ಅಪಸ್ವರ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೇ ಉಪಚುನಾವಣೆ ಹೊಣೆ ಸಿದ್ದುಗೆ ನೀಡಿದ್ದರಿಂದ ಮೂಲ ನಾಯಕರ ಕಣ್ಣು ಕೆಂಪಾಗಿಸಿತ್ತು. ಇನ್ನೊಂದು ಹೆಜ್ಜೆ ಮುಂದೆ ಹೋಗಿದ್ದ ಸಿದ್ದರಾಮಯ್ಯ ತನಗೆ ಬೇಕಾದವರಿಗೆ ಉಪಚುನಾವಣೆಯ ಟಿಕೆಟ್ ನೀಡಿದ್ದು, ಕೆಲ ನಾಯಕ ಆಕ್ರೋಶಕ್ಕೆ ಕಾರಣವಾಗಿತ್ತು.
ಕುಗ್ಗಿದ ಕಾಂಗ್ರೆಸ್ ಬಲ
ಕರ್ನಾಟಕ ವಿಧಾನಸಭೆಯಲ್ಲಿ ಬಿಜೆಪಿ 105 ಸದಸ್ಯ ಬಲ ಹೊಂದಿದೆ. ವಿಧಾನಸಭೆ ಸದಸ್ಯ ಬಲ 112 ಆಗಲು ಬಿಜೆಪಿ 7 ಸ್ಥಾನವನ್ನು ಗೆಲ್ಲಲೇಬೇಕಾಗಿತ್ತು. ಆದರೆ, ಈಗ 12 ಸ್ಥಾನ ಗೆದ್ದಿದೆ. ಇಂದು (ಸೋಮವಾರ) ಫಲಿತಾಂಶ ಪ್ರಕಟಗೊಂಡ ಬಳಿಕ ಸದನದ ಬಲ 222ಕ್ಕೆ ಏರಿಕೆಯಾಗಿದೆ. ಈ ಮೂಲಕ ಸರ್ಕಾರ ಬಹುಮತ ಪಡೆದುಕೊಂಡಿದ್ದು, ಸೇಫ್ ಆಗಿದೆ.
ಇನ್ನೂ ಮಸ್ಕಿ ಹಾಗೂ ಬೆಂಗಳೂರಿನ ರಾಜರಾಜೇಶ್ವರಿ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಬೇಕಿದೆ. ಇವೆರಡು ಕ್ಷೇತ್ರಗಳ ಫಲಿತಾಂಶ ವಿವಾದ ಕೋರ್ಟ್‌ನಲ್ಲಿರುವುದರಿಂದ ಉಪಚುನಾವಣೆ ಘೋಷಣೆಯಾಗಿಲ್ಲ.