
ಮಂಡ್ಯ (ಆ.27) : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಾನು ಮಾಡಿರುವ ತಪ್ಪಿನ ಅರಿವಾಗಿಲ್ಲ. ಸರ್ಕಾರಿ ಭೂಮಿ ಲಪಟಾಯಿಸಿ ಈಗ ಟಾರ್ಚ್ ಬಿಟ್ಕೊಂಡು ನೋಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು.
ದಿಶಾ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಮೂಡಾ ಜಾಗ ಯಾರದ್ದು?. ಅವರ ಪತ್ನಿದಾ ಅಥವಾ ಬಾಮೈದನದ್ದ. ಮೊದಲು ಜಾಗ ಯಾರದ್ದು ಎಂದು ಹೇಳಲಿ. ಸುಳ್ಳು ದಾಖಲೆ ಸೃಷ್ಟಿ ಮಾಡಿ ಸರ್ಕಾರಿ ಜಾಗ ಲಪಟಾಯಿಸಿದ್ದಾರೆ ಎಂದು ದೂರಿದರು.
ಮುಖ್ಯಮಂತ್ರಿಗಳು ಸರ್ಕಾರಿ ಜಾಗವನ್ನು ನನ್ನ ಜಾಗ ಅಂತ ಹೇಳಿ ಪಡೆದು 62 ಕೋಟಿ ರು.ಲೂಟಿ ಮಾಡಿದ್ದಾರೆ. ಸೈಟ್ ತಗೋಂಡು ಈಗ ಬ್ಯಾಟರಿ ಬಿಟ್ಕೊಂಡು ನೋಡುತ್ತಿದ್ದಾರೆ. ಇಂತಹ ಪರಿಸ್ಥಿತಿ ಅವರಿಗೆ ಬೇಕಿತ್ತಾ ಎಂದು ಪ್ರಶ್ನಿಸಿದರು.
ಅರೆಸ್ಟ್ ಮಾಡೋಕೆ ಒಬ್ಬ ಪೊಲೀಸ್ ಸಾಕು; ನೂರು ಸಿದ್ದರಾಮಯ್ಯ ಬಂದ್ರೂ ಏನು ಮಾಡೋಕಾಗೊಲ್ಲ ಎಂದ ಹೆಚ್‌ಡಿಕೆಗೆ ಸಿಎಂ ಟಾಂಗ್!
ವಿರೋಧ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ಮುಖ್ಯಮಂತ್ರಿಗಳಿಗೆ ಇಲ್ಲ. ನಾನು ಎಂದಿಗೂ ದ್ವೇಷ ರಾಜಕಾರಣ ಮಾಡಿಲ್ಲ. ಆದರೆ, ಅವರು ಮಾಡಿದ್ದಾರೆ. ನನ್ನ ವಿರುದ್ಧ ಅದೇನು ಮಾಡುತ್ತಾರೋ ಮಾಡಲಿ ಅದಕ್ಕೆ ನಾನು ಸಿದ್ಧವಾಗಿದ್ದೀನಿ ಎಂದು ತಿರುಗೇಟು ನೀಡಿದರು.
ನಾನು ಜೈಲಿಗೆ ಹೋಗುವಂಥದ್ದು ಏನೂ ಮಾಡಿಲ್ಲ. ನೂರು ಜನ್ಮ ಎತ್ತಿ ಬಂದರೂ ನನ್ನನ್ನು ಏನು ಮಾಡಲು ಆಗಲ್ಲ. ನನ್ನ ವಿರುದ್ಧದ ಷಡ್ಯಂತರಕ್ಕೆ ಭಗವಂತ ತೀರ್ಪು ಕೊಡುತ್ತಾನೆ. ನನ್ನ ವಿರುದ್ಧ ದಾಖಲೆಗಳನ್ನು ಕಾರಲ್ಲೆ ಇಟ್ಟುಕೊಂಡಿದ್ದಾರೆ. ಏನೇ ದಾಖಲೆ ಇದ್ದರೆ ಧಾರಾಳವಾಗಿ ಜನಗಳ ಮುಂದೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.
ಅವರು ನನ್ನ ದಾಖಲೆ ಬಿಡುಗಡೆ ಮಾಡೋದು ಇರಲಿ ಅವರ ದಾಖಲೆಗಳೇ ಹೊರಗೆ ಬರುತ್ತಿವೆ. ಅವರು ಗಾಜಿನ ಮನೆಯಲ್ಲಿ ಕುಳಿತಿದ್ದಾರೆ. ನಾನು ಜನರ ನಡುವೆ ಇದ್ದೇನೆ. ನಾನೇಕೆ ಭಯಪಡಲಿ. ಸಾಯಿ ವೆಂಕಟೇಶ್ವರ ಪ್ರಕರಣ ಯಾವತ್ತೊ ಸತ್ತಿರುವ ಪ್ರಕರಣ. ನನ್ನ ಪಾತ್ರ ಏನಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್ ನಾಯಕರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರ ತೆಗೆಯುತ್ತೇನೆ ಅಂತ ಪ್ರಧಾನಿ ಮೋದಿ ಅವರಿಗೆ ನಾನು ಯಾಕೆ ಮಾತು ಕೊಡಲಿ. ನಾನು ಏನು ಜ್ಯೋತಿಷಿನಾ ಸರ್ಕಾರ ಬೀಳತ್ತೆ ಅಂತ ಹೇಳೋದಿಕ್ಕೆ. ಸರ್ಕಾರ ಬೀಳಿಸೋಕೆ ನೂರು ಕೊಟ್ಟಿ ಕೊಟ್ಟು ಖರೀದಿ ಮಾಡೋಕಾಗತ್ತಾ. ನೂರು ಕೋಟಿ ಏನು ಕಡ್ಲೆ ಪುರಿನಾ ಎಂದು ಪ್ರಶ್ನಿಸಿದರು.
ಮುಡಾ ಹೋರಾಟ ದೆಹಲಿಗೆ ಒಯ್ಯಲು ಬಿಜೆಪಿ ಚಿಂತನೆ - ಸಂಸದರು, ಶಾಸಕರ ಜತೆಗೂಡಿ ಪ್ರತಿಭಟನೆ?
ರಾಜ್ಯದಲ್ಲಿ ಆಪರೇಶನ್ ಕಮಲ ಆರಂಭವಾಗಿದೆ. ಕಾಂಗ್ರೆಸ್ ಶಾಸಕರೊಬ್ಬರು ತಲಾ 100 ಕೋಟಿ ಆಫರ್ ಮಾಡಲಾಗಿದೆ ಎಂದು ಹೇಳಿದ್ದಾರೆ. ನೂರು ಕೋಟಿಗೆ ಎಷ್ಟು ಸಂಖ್ಯೆ ಇದೆ ಎಂದು ಗೊತ್ತಿದೆಯಾ. ಸರ್ಕಾರ ತೆಗೆಯುವುದಕ್ಕೆ 5000 ಸಾವಿರ ಕೋಟಿ ಖರ್ಚು ಮಾಡುತ್ತಾರೆ ಎಂದರೆ ಯಾರಾದರೂ ನಂಬುತ್ತಾರೆಯೇ ಎಂದು ಅಚ್ಚರಿ ವ್ಯಕ್ತಪಡಿಸಿದರು.
ಕಾಂಗ್ರೆಸ್ ನವರಿಗೆ ನನ್ನ ಬಗ್ಗೆ ಭಜನೆ ಮಾಡದಿದ್ದರೆ ತಿಂದನ್ನ ಅರಗಲ್ಲ. ಅವರಿಗೆಲ್ಲಾ ಈ ಕುಮಾರಸ್ವಾಮಿನೇ ಟಾರ್ಗೆಟ್ ಆಗಿದ್ದು, ಸರ್ಕಾರ ಹೋಗುತ್ತದೆ ಅಂತ ಅವರೇ ದಿನ ಭಜನೆ ಮಾಡುತ್ತಿದ್ದಾರೆ. ಸರ್ಕಾರದ ಸ್ಥಿರತೆ ಬಗ್ಗೆ ಅವರಿಗೆ ನಂಬಿಕೆ ಇಲ್ಲ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.