ಮುಡಾ ಅಕ್ರಮ: ಸಿಎಂ ಸಿದ್ಧರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ ಕೋರಿ ರಾಜ್ಯಪಾಲರಿಗೆ ಅರ್ಜಿ

By Kannadaprabha News  |  First Published Jul 27, 2024, 4:52 AM IST

ತೀವ್ರ ವಿವಾದ ಸೃಷ್ಟಿಸಿರುವ ಮುಡಾ ಅಕ್ರಮ ನಿವೇಶನ ಹಂಚಿಕೆ ಪ್ರಕರಣ ಬಿಜೆಪಿ, ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಡುವೆ ದೊಡ್ಡ ಸಮರಕ್ಕೆ ಕಾರಣವಾಗಿರುವ ಹಂತದಲ್ಲೇ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಖಾಸಗಿ ದೂರು ದಾಖಲಿಸಲು ಪ್ರಾಸಿಕ್ಯೂಷನ್‌ ಅನುಮತಿಗಾಗಿ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ ಅವರು ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ. 


ಬೆಂಗಳೂರು (ಜು.27): ತೀವ್ರ ವಿವಾದ ಸೃಷ್ಟಿಸಿರುವ ಮುಡಾ ಅಕ್ರಮ ನಿವೇಶನ ಹಂಚಿಕೆ ಪ್ರಕರಣ ಬಿಜೆಪಿ, ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಡುವೆ ದೊಡ್ಡ ಸಮರಕ್ಕೆ ಕಾರಣವಾಗಿರುವ ಹಂತದಲ್ಲೇ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಖಾಸಗಿ ದೂರು ದಾಖಲಿಸಲು ಪ್ರಾಸಿಕ್ಯೂಷನ್‌ ಅನುಮತಿಗಾಗಿ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ ಅವರು ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ. ಶುಕ್ರವಾರ ರಾಜ್ಯಪಾಲ ಥಾವರ್‌ ಚಂದ್‌ ಗೆಹಲೋತ್‌ ಅವರನ್ನು ಭೇಟಿಯಾದ ಟಿ.ಜೆ.ಅಬ್ರಹಾಂ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣ ಕುರಿತು ಸುಮಾರು ಒಂದೂವರೆ ತಾಸುಗಳ ಕಾಲ ವಿವರಣೆ ನೀಡಿದರು. 

ದಾಖಲೆಗಳ ಸಮೇತ ಮಾಹಿತಿ ನೀಡಿದ ಅವರು ರಾಜ್ಯಪಾಲರಿಗೆ ಹಗರಣ ಬಗ್ಗೆ ಸಂಪೂರ್ಣ ವಿವರಣೆ ನೀಡಿದರು. ಮುಖ್ಯಮಂತ್ರಿಗಳ ವಿರುದ್ಧ ಖಾಸಗಿ ದೂರು ದಾಖಲಿಸಲು ರಾಜ್ಯಪಾಲರ ಪ್ರಾಸಿಕ್ಯೂಷನ್‌ ಅನುಮತಿ ಅಗತ್ಯವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಅನುಮತಿಗಾಗಿ ಮನವಿ ಮಾಡಲಾಗಿದೆ. ರಾಜ್ಯಪಾಲರಿಂದ ಅನುಮತಿ ನೀಡಿದ ಬಳಿಕ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

Latest Videos

undefined

ಹೊಟ್ಟೆಕಿಚ್ಚಿನಿಂದ ನನ್ಮೇಲೆ ವೈಯಕ್ತಿಕ ದಾಳಿ, 40 ವರ್ಷದ ನಿಷ್ಕಳಂಕ ಜೀವನಕ್ಕೆ ಮಸಿ ಹಚ್ಚಲೆತ್ನ: ಸಿದ್ದರಾಮಯ್ಯ

2000 ಪುಟಗಳ ದಾಖಲೆ: ಸುಮಾರು ಎರಡು ಸಾವಿರಕ್ಕೂ ಹೆಚ್ಚು ಪುಟಗಳ ದಾಖಲೆಗಳನ್ನು ನೀಡಿರುವ ಅಬ್ರಾಹಿಂ ಅವರು, ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ, ಪುತ್ರ ಎಸ್‌‍.ಯತೀಂದ್ರ, ಮುಡಾ ಆಯುಕ್ತ ನಟೇಶ್‌ ಹಾಗೂ ಹಿಂದಿನ ಮುಡಾ ಅಧ್ಯಕ್ಷ ಎಚ್‌.ವಿ.ರಾಜೀವ್‌ ವಿರುದ್ಧ ದೂರು ದಾಖಲಿಸಲು ಅನುಮತಿ ನೀಡಬೇಕೆಂದು ಕೋರಿದ್ದಾರೆ. ಸಿದ್ದರಾಮಯ್ಯ ಹಾಗೂ ಅವರ ಪತ್ನಿ ಪಾರ್ವತಿ ವಿರುದ್ಧ ದೂರು ದಾಖಲಿಸಿದ್ದರೂ ಲೋಕಾಯುಕ್ತ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

45 ಕೋಟಿ ರು.ನಷ್ಟ: ಬದಲಿ ನಿವೇಶನ ಪಡೆದಿದ್ದರಿಂದ ಸರ್ಕಾರದ ಬೊಕ್ಕಸಕ್ಕೆ ಸುಮಾರು 45 ಕೋಟಿ ರು. ನಷ್ಟವಾಗಿದೆ. ಭೂಮಿ ವಶಪಡಿಸಿಕೊಂಡ ಜಾಗದಲ್ಲಿ, ಅಥವಾ ಸಮಾನಾಂತರ ಜಾಗದಲ್ಲಿ ಬದಲಿ ಭೂಮಿ ನೀಡಬೇಕು ಎಂಬುದು ಕಾನೂನಿನಲ್ಲಿದೆ. ಆದರೆ ಮುಖ್ಯಮಂತ್ರಿಗಳ ಪತ್ನಿಗೆ ಭೂಸ್ವಾಧೀನವಾದ ಜಾಗ ಬಿಟ್ಟು, ವಿಜಯನಗರದಲ್ಲಿ ಭೂಮಿ ಕೊಡಲಾಗಿದೆ. 50:50 ಅನುಪಾತ ನಿಯಮವನ್ನು ದುರುಪಯೋಗಪಡಿಸಿಕೊಂಡು, 1998ರಲ್ಲಿ ವಶಪಡಿಸಿಕೊಂಡ ಜಾಗಕ್ಕೆ 2020ರಲ್ಲಿ ಜಾರಿಗೆ ಬಂದ 50-50 ಅನುಪಾತ ಬಳಸಿಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ.

ಮುಡಾ ಹಗರಣ ಸಿಬಿಐ ತನಿಖೆ, ಸಿಎಂ ರಾಜೀನಾಮೆಗೆ ಪಟ್ಟು: ಮೈಸೂರಿಗೆ ಬಿಜೆಪಿ ನಡಿಗೆ ಪಕ್ಕಾ

ಈ ಹಿಂದೆ ಅಕ್ರಮ ಡಿನೋಟಿಫಿಕೇಷನ್‌ ಪ್ರಕರಣ ಸಂಬಂಧ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ದೂರು ದಾಖಲಿಸಲು ವಕೀಲರಾದ ಕೆ.ಎನ್‌.ಬಾಲರಾಜ್‌ ಹಾಗೂ ಸಿರಾಜುದ್ದೀನ್‌ ಪಾಷ ಅವರು ಮಾಜಿ ರಾಜ್ಯಪಾಲ ಹಂಸರಾಜ್‌ ಭಾರದ್ವಾಜ್‌ ಬಳಿ ಅನುಮತಿ ಕೋರಿದ್ದು, ದೂರು ದಾಖಲಿಸಲು ಅನುಮತಿ ನೀಡಿದ್ದರು ಎಂಬುದನ್ನು ಮನವಿಯಲ್ಲಿ ಪ್ರಸ್ತಾಪಿಸಿದ್ದಾರೆ. ಹೀಗಾಗಿ ಉನ್ನತ ಸ್ಥಾನದಲ್ಲಿರುವ ಸಿದ್ದರಾಮಯ್ಯ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ದೂರು ದಾಖಲಿಸಲು ಅನುಮತಿ ನೀಡಬೇಕು ಎಂದು ಕೋರಲಾಗಿದೆ.

click me!