ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ, ಪತ್ನಿ ಸೇರಿ ಆರು ಮಂದಿ ವಿರುದ್ಧ ಲೋಕಾಯುಕ್ತಕ್ಕೆ ರಮೇಶ್ ದೂರು

By Kannadaprabha News  |  First Published Jul 21, 2024, 1:28 PM IST

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತವರ ಪತ್ನಿ ಬಿ.ಎಂ.ಪಾರ್ವತಿ ಸೇರಿ ಆರು ಮಂದಿ ವಿರುದ್ಧ ಲೋಕಾಯುಕ್ತ ಸಂಸ್ಥೆಗೆ ಬಿಜೆಪಿ ಮುಖಂಡ ಎನ್.ಆರ್. ರಮೇಶ್ ದೂರು ನೀಡಿದ್ದಾರೆ. 


ಬೆಂಗಳೂರು (ಜು.20): ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತವರ ಪತ್ನಿ ಬಿ.ಎಂ.ಪಾರ್ವತಿ ಸೇರಿ ಆರು ಮಂದಿ ವಿರುದ್ಧ ಲೋಕಾಯುಕ್ತ ಸಂಸ್ಥೆಗೆ ಬಿಜೆಪಿ ಮುಖಂಡ ಎನ್.ಆರ್. ರಮೇಶ್ ದೂರು ನೀಡಿದ್ದಾರೆ. ಲೋಕಾಯುಕ್ತ ಸಂಸ್ಥೆಗೆ ತೆರಳಿ, ಮುಡಾದಲ್ಲಿ ಅಧಿಕಾರ ದುರುಪಯೋಗ, ವಂಚನೆ ಮತ್ತು ಭ್ರಷ್ಟಾಚಾರ ನಡೆಸಲಾಗಿದೆ ಎಂದು ಆರೋಪಿಸಿ 383 ಪುಟಗಳ ದಾಖಲೆಗಳೊಂದಿಗೆ ದೂರು ನೀಡಿದ್ದಾರೆ. ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ ಸೇರಿ ಪತ್ನಿಯ ಸಹೋದರ ಬಿ.ಎಂ.ಮಲ್ಲಿಕಾರ್ಜುನಸ್ವಾಮಿ, ಮುಡಾದ ಮಾಜಿ‌ ಅಧ್ಯಕ್ಷ ಬಸವನಗೌಡ, ಎಚ್.ವಿ.ರಾಜೀವ್‌, ಆಯುಕ್ತರಾಗಿದ್ದ ಡಿ.ಬಿ.ನಟೇಶ್ ವಿರುದ್ಧವೂ ದೂರು ದಾಖಲು ಮಾಡಲಾಗಿದೆ.

ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಮೇಶ್‌, ರಾಜಕೀಯ ಪ್ರಭಾವದಿಂದ ತಮ್ಮ ಪತ್ನಿಯ ಹೆಸರಿಗೆ ಕಾನೂನು ಬಾಹಿರವಾದ ಬದಲಿ ನಿವೇಶನಗಳ ಹಂಚಿಕೆಯಲ್ಲಿ 40 ಕೋಟಿ ರು.ಗಿಂತ ಹೆಚ್ಚು ಮೊತ್ತ ಸರ್ಕಾರಕ್ಕೆ ನಷ್ಟ ಉಂಟು ಮಾಡಲಾಗಿದೆ. ಮಾರುಕಟ್ಟೆ ಬೆಲೆ ಪ್ರತಿ ಚ.ಅಡಿಗೆ 5 ಸಾವಿರ ರು.ನಷ್ಟು ಇರುವ ಮೈಸೂರಿನ ದೇವನೂರು 3ನೇ ಹಂತದ ಬಡಾವಣೆಯಲ್ಲಿನ ನಿವೇಶನಗಳ ಬದಲಾಗಿ ಪ್ರತಿ ಚ.ಅಡಿಗೆ 12 ಸಾವಿರ ರು.ಗಿಂತಲೂ ಹೆಚ್ಚಿರುವ ಮೈಸೂರಿನ ಅತ್ಯಂತ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾಗಿರುವ ವಿಜಯನಗರ 3 ಮತ್ತು 4ನೇ ಹಂತದ ಬಡಾವಣೆಗಳಲ್ಲಿ ಒಟ್ಟು 38,284 ಚ. ಅಡಿ ವಿಸ್ತೀರ್ಣದ 14 ನಿವೇಶನಗಳನ್ನು ಬದಲಿ ನಿವೇಶನದ ಹೆಸರಿನಲ್ಲಿ ಪಾರ್ವತಿಯವರ ಹೆಸರಿಗೆ 2021-2022ರಲ್ಲಿ ಕಾನೂನಿನ ಎಲ್ಲಾ ನಿಯಮಗಳನ್ನು ಮೀರಿ ಹಂಚಿಕೆ ಮಾಡಲಾಗಿದೆ ಎಂದು ದೂರಿದರು.

Tap to resize

Latest Videos

ದರ್ಶನ್ ಫ್ಯಾನ್ಸ್‌ಗಳೇ ನನ್ನ ಮಗಳ ಬಗ್ಗೆ ಕೆಟ್ಟದಾಗಿ ಮಾತನಾಡಿರೋದು: ಕಣ್ಣೀರಿಟ್ಟ ದಿವ್ಯಾ ವಸಂತ ತಾಯಿ!

ನಗರಾಭಿವೃದ್ಧಿ ಇಲಾಖೆಯ ನಿಯಮ ಪ್ರಕಾರ ಬಡಾವಣೆಯ ನಿರ್ಮಾಣಕ್ಕೆಂದು ಪ್ರಾಧಿಕಾರವು ಸ್ಥಳೀಯರ ಸ್ವತ್ತುಗಳನ್ನು ಎಲ್ಲಿ ಭೂಸ್ವಾಧೀನ ಪಡಿಸಿಕೊಳ್ಳುತ್ತದೆಯೋ, ಅಂತಹ ಸ್ವತ್ತುಗಳ ಮಾಲೀಕರಿಗೆ ಅದೇ ಬಡಾವಣೆಯಲ್ಲಿ ನಿವೇಶನಗಳನ್ನು ಹಂಚಬೇಕು. ಇಲ್ಲವಾದರೆ ಆ ಬಡಾವಣೆಯ ನಂತರ ಪ್ರಾಧಿಕಾರವು ಅಭಿವೃದ್ಧಿಪಡಿಸುವ ಬಡಾವಣೆಯಲ್ಲಿ ಬದಲಿ ನಿವೇಶನ ಹಂಚಿಕೆ ಮಾಡಬಹುದಾಗಿರುತ್ತದೆ. ಆದರೆ, ಎಂತಹ ಸಂದರ್ಭದಲ್ಲಿಯೂ ಸಹ ಉದ್ದೇಶಿತ ಬಡಾವಣೆಯ ನಿವೇಶನಗಳಿಗೆ ಬದಲಾಗಿ, ಬಡಾವಣೆಗಿಂತಲೂ ಮುಂಚಿತವಾಗಿ ಅಭಿವೃದ್ಧಿಪಡಿಸಿರುವ ಬಡಾವಣೆಗಳಲ್ಲಿ ಬದಲಿ ನಿವೇಶನಗಳನ್ನು ಹಂಚಿಕೆ ಮಾಡುವುದು ಅಪರಾಧವಾಗಿದೆ ಎಂದು ಹೇಳಿದರು.

ಪ್ರಕರಣದಲ್ಲಿ ಪಾರ್ವತಿಯವರಿಗೆ ವಾಸ್ತವವಾಗಿ ದೇವನೂರು 3ನೇ ಹಂತದ ಬಡಾವಣೆಯಲ್ಲಿ ಹಂಚಿಕೆಯಾಗಿದ್ದ ನಿವೇಶನಗಳಿಗೆ ಬದಲಾಗಿ, ಅದಕ್ಕಿಂತಲೂ ಹತ್ತಾರು ವರ್ಷಗಳ ಹಿಂದೆಯೇ ಮುಡಾ ಅಭಿವೃದ್ಧಿಪಡಿಸಿರುವ ವಿಜಯನಗರ 3 ಮತ್ತು 4ನೇ ಹಂತದ ಬಡಾವಣೆಗಳಲ್ಲಿನ ಅತ್ಯಂತ ಆಯಕಟ್ಟಿನ ಸ್ಥಳಗಳಲ್ಲಿರುವ ದುಬಾರಿ ನಿವೇಶನಗಳನ್ನು ಬದಲಿ ನಿವೇಶನದ ಹೆಸರಿನಲ್ಲಿ ಹಂಚಿಕೆ ಮಾಡಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

2004ರಲ್ಲಿ ಕೆಸರೆ ಗ್ರಾಮದ ಸರ್ವೆ ನಂ 464 ರ 3.16 ಎಕರೆ ವಿಸ್ತಿರ್ಣದ ಸ್ವತ್ತಿನ ಮಾಲೀಕರಾದ ನಿಂಗ ಎಂಬುವವರ ಮಗನಾದ ದೇವರಾಜು ಅವರಿಂದ ಸಿದ್ಧರಾಮಯ್ಯ ಭಾವಮೈದುನ ಮಲ್ಲಿಕಾರ್ಜುನ ಸ್ವಾಮಿ ಕ್ರಯಕ್ಕೆ ಪಡೆದು ತಮ್ಮ ಹೆಸರಿಗೆ ನೊಂದಣಿ ಮಾಡಿಸಿಕೊಳ್ಳುತ್ತಾರೆ. 2005ರಲ್ಲಿ ಸದರಿ ಜಮೀನನ್ನು ವ್ಯವಸಾಯ ಪ್ರದೇಶದಿಂದ ವಸತಿ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡಿಸಿಕೊಳ್ಳಲಾಗುತ್ತದೆ. ಆದರೆ, ಸದರಿ ಜಮೀನಿನ ಮಾಲೀಕ ನಿಂಗ ಮರಣ ಹೊಂದಿದ್ದರೂ ಸಹ ಅವರ ಹೆಸರಿನಲ್ಲಿಯೇ ಜಿಲ್ಲಾಧಿಕಾರಿಗಳ ಕಛೇರಿಯಿಂದ ಭೂ ಪರಿವರ್ತನೆ ಮಾಡಲಾಗಿರುತ್ತದೆ ಎಂದರು.

ಸ್ಥಳೀಯ ಸಂಸ್ಥೆ ಚುನಾವಣೆಗೆ ಡಿಕೆಶಿ ಶಂಖನಾದ: ಪಕ್ಷ ಸಂಘಟನೆ, ಚುನಾವಣೆ ತಯಾರಿಗೆ ಸೂಚನೆ

2010 ರಲ್ಲಿ ಮಲ್ಲಿಕಾರ್ಜುನ ಸ್ವಾಮಿ ಸ್ವತ್ತನ್ನು ಪಾರ್ವತಿ ಹೆಸರಿಗೆ ದಾನವಾಗಿ ನೀಡುತ್ತಾರೆ. ದಾನ ಪತ್ರದ ಮೂಲಕ ದೇವನೂರು 3ನೇ ಹಂತದ ಬಡಾವಣೆಯಲ್ಲಿ ಬಂದಿದ್ದ ಸ್ವತ್ತಿಗೆ ಬದಲಾಗಿ, ಈಗಾಗಲೇ ಅಭಿವೃದ್ಧಿಯಾಗಿರುವ ಮೂಡಾದ ಇನ್ನೊಂದು ಬಡಾವಣೆಯಲ್ಲಿ ಬದಲಿ ನಿವೇಶನಗಳನ್ನು ಮಂಜೂರು ಮಾಡುವಂತೆ 2014 ರಲ್ಲಿ ಪಾರ್ವತಿಯವರು ಅರ್ಜಿ ಸಲ್ಲಿಸುತ್ತಾರೆ. ಪಾರ್ವತಿಯವರ ಅರ್ಜಿಯನ್ನು ಪುರಸ್ಕರಿಸಿದ ನಗರಾಭಿವೃದ್ಧಿ ಇಲಾಖೆಯು ಬದಲಿ ನಿವೇಶನಗಳನ್ನು ಮಂಜೂರು ಮಾಡುವ ಬಗ್ಗೆ ಅನುಮೋದನೆ ನೀಡಿ ಸರ್ಕಾರಿ ಆದೇಶವನ್ನು ಹೊರಡಿಸಲಾಗುತ್ತದೆ ಎಂದು ವಿವರಿಸಿದರು.

click me!