ಎಂಟಿಬಿ ಆಸ್ತಿ 18 ತಿಂಗಳಲ್ಲಿ 180 ಕೋಟಿ ರು. ಹೆಚ್ಚಳ!

By Kannadaprabha NewsFirst Published Nov 16, 2019, 7:47 AM IST
Highlights

ಉಪ ಚುನಾವಣೆ ಹಿನ್ನೆಲೆಯಲ್ಲಿ ಮತ್ತೊಮ್ಮೆ ತಮ್ಮ ಆಸ್ತಿ ವಿವರ ಘೋಷಿಸಿಕೊಂಡಿದ್ದು, ತಮ್ಮ ಹಾಗೂ ಪತ್ನಿ ಹೆಸರಿನಲ್ಲಿ ಬರೋಬ್ಬರಿ 1195.80 ಕೋಟಿ ರು.ಗಳಷ್ಟುಚರ ಮತ್ತು ಸ್ಥಿರ ಆಸ್ತಿ ಹೊಂದಿರುವುದಾಗಿ ತಿಳಿಸಿದ್ದಾರೆ.

ಬೆಂಗಳೂರು [ನ.16]:  ರಾಜ್ಯದ ಶ್ರೀಮಂತ ರಾಜಕಾರಣಿ ಎನ್‌. ನಾಗರಾಜ್‌ (ಎಂ.ಟಿ.ಬಿ. ನಾಗರಾಜ್‌) ಅವರು ಉಪ ಚುನಾವಣೆ ಹಿನ್ನೆಲೆಯಲ್ಲಿ ಮತ್ತೊಮ್ಮೆ ತಮ್ಮ ಆಸ್ತಿ ವಿವರ ಘೋಷಿಸಿಕೊಂಡಿದ್ದು, ತಮ್ಮ ಹಾಗೂ ಪತ್ನಿ ಹೆಸರಿನಲ್ಲಿ ಬರೋಬ್ಬರಿ 1195.80 ಕೋಟಿ ರು.ಗಳಷ್ಟುಚರ ಮತ್ತು ಸ್ಥಿರ ಆಸ್ತಿ ಹೊಂದಿರುವುದಾಗಿ ತಿಳಿಸಿದ್ದಾರೆ.

ಅಲ್ಲದೆ, ಕಳೆದ 2018ರ ಮೇ ತಿಂಗಳಲ್ಲಿ 1,015 ಕೋಟಿ ರು. ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದ ಎಂಟಿಬಿ ನಾಗರಾಜ್‌ ಅವರ ಆಸ್ತಿ ಒಂದೂವರೆ ವರ್ಷದಲ್ಲಿ 180 ಕೋಟಿ ರು. ಹೆಚ್ಚಳ ಕಂಡಿದೆ.

ಎಂಟಿಬಿ ನಾಗರಾಜ್‌ 2013ರ ಚುನಾವಣೆ ವೇಳೆ 470 ಕೋಟಿ ರು. ಮೊತ್ತದ ಆಸ್ತಿ ವಿವರ ಘೋಷಣೆ ಮಾಡಿದ್ದರು. 2018ರ ಚುನಾವಣೆಯಲ್ಲಿ 1015 ಕೋಟಿ ರು. ಘೋಷಿಸಿದ್ದು, ಪ್ರಸ್ತುತ 1,195.80 ಕೋಟಿ ರು. ಘೋಷಣೆ ಮಾಡಿದ್ದಾರೆ.

ಇದರಲ್ಲಿ ಎಂಟಿಬಿ ನಾಗರಾಜ್‌ ತಮ್ಮ ಬಳಿ 43.44 ಲಕ್ಷ ರು. ನಗದು ಹಾಗೂ ಪತ್ನಿ ಎಂ. ಶಾಂತಕುಮಾರಿ ಅವರ ಬಳಿ 45.60 ಲಕ್ಷ ರು. ನಗದು ಹೊಂದಿರುವುದಾಗಿ ಹೇಳಿದ್ದಾರೆ.

ನಾಗರಾಜ್‌ ತಮ್ಮ ಬಳಿ ಒಟ್ಟು 419.28 ಕೋಟಿ ರು. ಚರಾಸ್ತಿ ಹಾಗೂ ಪತ್ನಿ ಬಳಿ 167.34 ಕೋಟಿ ರು. ಚರಾಸ್ತಿ ಹೊಂದಿದ್ದಾರೆ. ತಮ್ಮ ಬಳಿಯಿರುವ ಚರಾಸ್ತಿ ಪೈಕಿ 271 ಕೋಟಿ ರು. ಸಾಲ ಹಾಗೂ ಮುಂಗಡ ಹಣ ಪಾವತಿ ನೀಡಿರುವುದಾಗಿ ಹೇಳಿಕೊಂಡಿದ್ದಾರೆ. ಸ್ಥಿರಾಸ್ತಿ ಪೈಕಿ ತಮ್ಮ ಹೆಸರಿನಲ್ಲಿ 419.76 ಕೋಟಿ ರು. ಸ್ಥಿರಾಸ್ತಿ ಹಾಗೂ ಪತ್ನಿ ಹೆಸರಿನಲ್ಲಿ 189.41 ಕೋಟಿ ರು. ಸ್ಥಿರಾಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.

3.6 ಕೆ.ಜಿ. ಚಿನ್ನ:

ಎಂಟಿಬಿ ನಾಗರಾಜ್‌ 134 ಕೋಟಿ ರು. ಬ್ಯಾಂಕ್‌ಗಳಲ್ಲಿ ಠೇವಣಿ ಹೊಂದಿದ್ದಾರೆ. 4.53 ಕೋಟಿ ರು. ಹಣವನ್ನು ಉಳಿತಾಯ ಖಾತೆಯಲ್ಲಿ ಹೊಂದಿದ್ದಾರೆ. ಪತ್ನಿ ಬ್ಯಾಂಕ್‌ ಖಾತೆಯಲ್ಲಿ 32 ಕೋಟಿ ರು. ಠೇವಣಿ ಹಾಗೂ 27 ಲಕ್ಷ ರು. ಉಳಿತಾಯ ಖಾತೆಯಲ್ಲಿ ಹೊಂದಿದ್ದಾರೆ.

ಇನ್ನು ನಾಗರಾಜ್‌ ಬಳಿ 819.13 ಗ್ರಾಂ ಚಿನ್ನ ಹಾಗೂ ಪತ್ನಿ ಬಳಿ 2.787 ಕೇಜಿ ಚಿನ್ನ ಸೇರಿ ಒಟ್ಟು 3 ಕೇಜಿ 606 ಗ್ರಾಂ ಚಿನ್ನ ಹೊಂದಿದ್ದಾರೆ. ಇದಲ್ಲದೆ 174 ಗ್ರಾಂ ಪ್ಲಾಟಿನಂ ಹಾಗೂ ಹಲವು ವಜ್ರಾಭರಣ ಸೇರಿದಂತೆ 3.71 ಕೋಟಿ ರು. ಮೊತ್ತದ ಆಭರಣಗಳನ್ನೇ ಹೊಂದಿರುವುದಾಗಿ ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.

ಚರಾಸ್ತಿ ಪೈಕಿ 2.54 ಕೋಟಿ ರು. ಮೌಲ್ಯದ ಆರು ಕಾರುಗಳನ್ನು ನಾಗರಾಜ್‌ ಹಾಗೂ 1.72 ಕೋಟಿ ರು. ಮೌಲ್ಯದ ಪೋಶ್‌ ಕಾರನ್ನು ಶಾಂತಕುಮಾರಿ ಹೊಂದಿದ್ದಾರೆ. ನಾಗರಾಜ್‌ ಬಳಿ ಲ್ಯಾಂಡ್‌ ರೋವರ್‌, ಮರ್ಸಿಡಿಸ್‌ ಬೆಂಜ್‌ ಸೇರಿ ಹಲವು ದುಬಾರಿ ಕಾರುಗಳಿವೆ.

609.17 ಕೋಟಿ ಸ್ಥಿರಾಸ್ತಿ:

ಎಂಟಿಬಿ ನಾಗರಾಜ್‌ ಹೆಸರಿನಲ್ಲಿ 31.09 ಕೋಟಿ ರು. ಮೌಲ್ಯದ 57.33 ಎಕರೆ ಕೃಷಿ ಜಮೀನು, 309.86 ಕೋಟಿ ರು. ಪ್ರಸಕ್ತ ಮಾರುಕಟ್ಟೆಮೌಲ್ಯವುಳ್ಳ 63.22 ಲಕ್ಷ ಚದರಡಿಯಷ್ಟುಕೃಷಿಯೇತರ ಜಮೀನು, 39 ಕೋಟಿ ರು. ಮೌಲ್ಯದ 1.43 ಲಕ್ಷ ವಿಸ್ತೀರ್ಣದ ವಾಣಿಜ್ಯ ಕಟ್ಟಡಗಳು, 39.14 ಕೋಟಿ ರು. ಮೌಲ್ಯದ ವಸತಿ ಕಟ್ಟಡಗಳಿವೆ.

ಪತ್ನಿ ಹೆಸರಿನಲ್ಲಿ 26.40 ಕೋಟಿ ರು. ಮೌಲ್ಯದ 4 ಎಕರೆ ಕೃಷಿ ಜಮೀನು, 94.47 ಕೋಟಿ ರು. ಮೌಲ್ಯದ 4.50 ಲಕ್ಷ ಚದರಡಿ ಕೃಷಿಯೇತರ ಜಾಗ, 28.10 ಕೋಟಿ ರು. ಮೌಲ್ಯದ ವಾಣಿಜ್ಯ ಕಟ್ಟಡ, 40.44 ಕೋಟಿ ರು. ಮೌಲ್ಯದ ವಸತಿ ಕಟ್ಟಡ ಸೇರಿದಂತೆ 189.41 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.

click me!