ದೋಸ್ತಿ ಕೆಡವಲು 8 ಸಲ ಪ್ರಯತ್ನ ನಡೆಸಿದ್ದೆ: ರಹಸ್ಯ ಬಿಚ್ಚಿಟ್ಟ ರಮೇಶ್‌!

By Web DeskFirst Published Nov 16, 2019, 7:35 AM IST
Highlights

ದೋಸ್ತಿ ಸರ್ಕಾರ ಕೆಡವಲು 8 ಸಲ ಪ್ರಯತ್ನ ನಡೆಸಿದ್ದೆ!| ರಹಸ್ಯ ಬಿಚ್ಚಿಟ್ಟರಮೇಶ್‌ ಜಾರಕಿಹೊಳಿ| ಸಿದ್ದು ಸೈಡ್‌ಲೈನ್‌ ಆಗಿದ್ದರು, ಡಿಕೆಶಿ ದರ್ಬಾರ್‌ ಹೆಚ್ಚಿತ್ತು| ಹೀಗಾಗಿ, ದೋಸ್ತಿ ಸರ್ಕಾರ ಕೆಡವಲು ತೀರ್ಮಾನಿಸಿದೆವು|  ಬಿಜೆಪಿ ನಾಯಕರ ಅನುಮತಿ ಪಡೆದು ಸರ್ಕಾರ ಬೀಳಿಸಿದೆ

ಬೆಳಗಾವಿ[ನ.16]: ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರ್ಕಾರ ಕೆಡವಿ, ಬಿಜೆಪಿ ನೇತೃತ್ವದ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಗೋಕಾಕ ಕ್ಷೇತ್ರದ ಅನರ್ಹ ಶಾಸಕ ರಮೇಶ ಜಾರಕಿಹೊಳಿ ಅವರು ಸರ್ಕಾರ ಕೆಡವಿದ್ದು ಹೇಗೆ ಮತ್ತು ಏಕೆ ಎಂಬ ಸ್ಫೋಟಕ ಕಾರಣಗಳನ್ನು ಮೊದಲ ಬಾರಿ ಬಿಚ್ಚಿಟ್ಟಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮೂಲೆಗುಂಪು ಮಾಡಿ ಸಚಿವ ಡಿ.ಕೆ.ಶಿವಕುಮಾರ್‌ ಅವರ ಕೈಗೆ ಪಕ್ಷ ನೀಡುವ ಪಿತೂರಿ ನಡೆದಾಗಲೇ ಮೈತ್ರಿ ಸರ್ಕಾರವನ್ನು ಕೆಡವಲು ನಿರ್ಧರಿಸಿದ್ದೆವು ಎಂದು ಹೇಳಿರುವ ಅವರು, ನಾವು ಏಳೆಂಟು ಬಾರಿ ನಡೆಸಿದ ಪ್ರಯತ್ನ ವಿಫಲವಾಗಿತ್ತು ಎಂದು ತಿಳಿಸಿದ್ದಾರೆ.

ಬಿಜೆಪಿಗೆ ಸೇರಲು ರಮೇಶ್ ಮತ್ತು ತಂಡ ಮುಂದಿಟ್ಟಿದ್ದ ಆ ಒಂದೇ ಒಂದು ಕಂಡಿಶನ್!

ಸುಪ್ರೀಂ ಕೋರ್ಟ್‌ನ ತೀರ್ಪಿನ ನಂತರ ಇದೆ ಮೊದಲಬಾರಿ ಶುಕ್ರವಾರ ಗೋಕಾಕಗೆ ಆಗಮಿಸಿದ ಅವರಿಗೆ ಬಿಜೆಪಿ ಹಮ್ಮಿಕೊಂಡಿದ್ದ ಸ್ವಾಗತ ಸಮಾವೇಶದಲ್ಲಿ ಮಾತನಾಡಿ, ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಹಸಿರು ನಿಶಾನೆ ತೋರಿದ ಬಳಿಕವೇ ಮೈತ್ರಿ ಸರ್ಕಾರ ಕೆಡವಲು ಮುಂದಾದೆ ಎಂದೂ ಮಾಹಿತಿ ನೀಡಿದರು.

ರೆಸಾರ್ಟಿನಲ್ಲೇ ಕುತಂತ್ರ: 2018ರಲ್ಲಿ ವಿಧಾನಸಭಾ ಚುನಾವಣೆ ಬಳಿಕ ಕಾಂಗ್ರೆಸ್‌ ಶಾಸಕರು ಎಲ್ಲರೂ ಬೆಂಗಳೂರು ಬಳಿ ಬಿಡದಿ ರೆಸಾರ್ಟ್‌ಗೆ ಹೋಗಿದ್ದರು. ಜಿಲ್ಲೆಯಿಂದ ನಮಗಿಂತ ಮೊದಲೇ ಶಾಸಕರಾದ ಮಹಾಂತೇಶ ಕೌಜಲಗಿ, ಲಕ್ಷ್ಮೀ ಹೆಬ್ಬಾಳ್ಕರ್‌ ಹೋಗಿದ್ದರು. ಆಗಲೇ ನನ್ನ ವಿರುದ್ಧ ಕುತಂತ್ರ ನಡೆದಿತ್ತು. ಕೊನೆಗೆ ನಾನು, ಮಹೇಶ ಕುಮಟಳ್ಳಿ, ಶ್ರೀಮಂತ ಪಾಟೀಲ ಅಲ್ಲಿಗೆ ಹೋದೆವು. ಆಗ ವಿಚಿತ್ರ ಸನ್ನಿವೇಶ ನಡೆದಿತ್ತು. ಆಗ ಎಲ್ಲವೂ ಡಿ.ಕೆ.ಶಿವಕುಮಾರ್‌ ಆಡಳಿತವೇ ನಡೀತಿತ್ತು ಎಂದರು.

ಬಿಎಸ್‌ವೈ ಜೊತೆ ಮಾತುಕತೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಂಬಿ ನಾವು ರಾಜಕೀಯ ಮಾಡಿದ್ದೆವು. ಆದರೆ, ಅವರನ್ನೇ ಸೈಡ್‌ಲೈನ್‌ ಮಾಡಿ, ಸಚಿವ ಡಿ.ಕೆ.ಶಿವಕುಮಾರ್‌ ಕೈಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಕೊಡುವ ಪಿತೂರಿ ಕೂಡ ನಡೆದಿತ್ತು. ಇದರಿಂದ ಅಸಮಾಧಾನ ಹೊಂದಿ ನಾನು ಮತ್ತು ಶಾಸಕ ಶಂಕರ್‌ ಸೇರಿಕೊಂಡು 2018ರ ಮೇ 15ರಂದೇ ಮೈತ್ರಿ ಸರ್ಕಾರ ಬೀಳಿಸುವ ನಿರ್ಧಾರ ಕೈಗೊಂಡೆವು. ಇದಾದ ನಂತರ ಮೊದಲ ಬಾರಿ ಯಡಿಯೂರಪ್ಪನವರ ಜತೆಗೆ ಮಾತುಕತೆ ನಡೆಸಿದೆ. ಆಗ ಯಡಿಯೂರಪ್ಪನವರು, ‘ರಮೇಶ್‌ ನಿನ್ನ ನಂಬಬಹುದಾ?’ ಎಂದು ಕೇಳಿದ್ದರು. ಇದಕ್ಕೆ ನಾನು ‘ಮುಳುಗಲಿ, ತೇಲಲಿ ನನ್ನ ನಂಬಿ’ ಎಂದು ಹೇಳಿದ್ದೆ ಎಂದು ತಮ್ಮ ಅನುಭವದ ವೃತ್ತಾಂತವನ್ನು ಬಿಚ್ಚಿಟ್ಟರು.

'ರಮೇಶ್ ಜಾರಕಿಹೊಳಿ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಒಳ್ಳೆಯ ಕೆಲಸ ಮಾಡ್ತಿದೆ'

ಅಮಿತ್‌ ಶಾ ಭೇಟಿ: ಎರಡನೇ ಬಾರಿ ಮಾತುಕತೆಗಾಗಿ ರಾಜ್ಯ ಬಿಜೆಪಿ ಉಸ್ತುವಾರಿ ಆಗಿದ್ದ ಮುರಳೀಧರರಾವ್‌ ಅವರೊಂದಿಗೆ ಹೈದರಾಬಾದ್‌ನಲ್ಲಿ ಅಮಿತ್‌ ಶಾ ಅವರನ್ನು ಭೇಟಿಯಾದೆ. ಅಲ್ಲಿ ಯಡಿಯೂರಪ್ಪರನ್ನು ಸಿಎಂ ಮಾಡೋದಾದ್ರೆ ಬಿಜೆಪಿಗೆ ಬರೋದಾಗಿ ಹೇಳಿದೆ. ಅದಕ್ಕೆ ಅಮಿತ್‌ ಶಾ, ಗೋ ಅಹೆಡ್‌ ಎಂದು ಹೇಳಿದರು. ಅಲ್ಲಿಂದ ಏಳೆಂಟು ಬಾರಿ ಸರ್ಕಾರ ಕೆಡವಲು ಯತ್ನಿಸಿದಾಗ ವಿಫಲವಾಯಿತು. ನಂತರ ಯಡಿಯೂರಪ್ಪ ಮತ್ತು ಜಗದೀಶ ಶೆಟ್ಟರ್‌ ವಾಪಸ್‌ ಕಾಂಗ್ರೆಸ್‌ಗೆ ಹೋಗಿ ಎಂದರು. ಆದರೆ, ಹಠ ಹಿಡಿದು ಸರ್ಕಾರ ಕೆಡವಿ ಬಿಜೆಪಿ ಸೇರಿದ್ದೇನೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.

ಸಿದ್ದು ವಿರುದ್ಧ ಕಿಡಿ: ಕಾಂಗ್ರೆಸ್‌ ನಾಯಕರ ದುರಹಂಕಾರ, ಮಾಜಿ ಸಿಎಂ ಸಿದ್ದರಾಮಯ್ಯರ ಸೊಕ್ಕಿನ ಹಿನ್ನೆಲೆಯಲ್ಲಿ ಮತ್ತು ಡಿಕೆಶಿ ಭ್ರಷ್ಟಾಚಾರದಿಂದ ಬೇಸತ್ತು ಅನಿವಾರ್ಯವಾಗಿ ಬಿಜೆಪಿ ಸೇರಬೇಕಾದ ಸ್ಥಿತಿ ನಿರ್ಮಾಣವಾಯಿತು. ಹೀಗಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಸೊಕ್ಕಿನಿಂದ ಸರ್ಕಾರ ಬಿದ್ದಿದೆ ಹೊರತು, ಬಿಜೆಪಿ ಅಧಿಕಾರ ದಾಹದಿಂದ ಅಲ್ಲ ಎಂದರು.

'ರಮೇಶ್ ಜಾರಕಿಹೊಳಿ‌ ಕುತಂತ್ರಕ್ಕೆ ಇಡೀ ಜಿಲ್ಲೆ ಬಲಿಯಾಗಿದೆ'

ನಾನು ಎಂದೂ ಸಚಿವ ಸ್ಥಾನಕ್ಕಾಗಿ ಚಮಚಾಗಿರಿ ಮಾಡಿಲ್ಲ ಎಂದ ಅವರು, ಸಿದ್ದರಾಮಯ್ಯ, ಸತೀಶ ಅವರ ನಡುವೆ ಜಗಳ ನಡೆದಿತ್ತು. ಹೀಗಾಗಿ ನನ್ನನ್ನು ಅನಿವಾರ್ಯವಾಗಿ ಮಂತ್ರಿಯಾಗಿ ಮಾಡಿದರು. ಆದರೆ, ಮೂರು ತಿಂಗಳ ನಂತರ ನನ್ನನ್ನು ಸಚಿವ ಸ್ಥಾನದಿಂದ ಕೆಳಗಿಳಿಸಿ ರಾಜಕೀಯವಾಗಿ ಮುಗಿಸಬೇಕು ಎನ್ನುವ ದುರುದ್ದೇಶ ಅವರಲ್ಲಿತ್ತು. ಹಿಂದುಳಿದ ವರ್ಗದ ನಾಯಕರು ಬೆಳೆಯಬಾರದು ಎಂಬುದು ಸಿದ್ದರಾಮಯ್ಯ ಉದ್ದೇಶವಾಗಿದೆ ಎಂದು ಕಿಡಿಕಾರಿದರು.

ಜಾರಕಿಹೊಳಿ ಉವಾಚ

1. 2018ರ ವಿಧಾನಸಭೆ ಚುನಾವಣೆ ಫಲಿತಾಂಶ ಬರುತ್ತಿದ್ದಂತೆ ಬಿಡದಿ ರೆಸಾರ್ಟ್‌ ಸೇರಿದ್ದೆವು

2. ಅಲ್ಲಿ ವಿಚಿತ್ರ ಸನ್ನಿವೇಶ ಇತ್ತು. ಸಿದ್ದು ಸೈಡ್‌ಲೈನ್‌ ಆಗಿದ್ದರು. ಡಿಕೆಶಿ ದರ್ಬಾರ್‌ ನಡೀತಿತ್ತು

3. ಅದನ್ನು ನೋಡಿ ನಾನು, ಶಂಕರ್‌ ಮೈತ್ರಿ ಸರ್ಕಾರ ಬೀಳಿಸುವ ನಿರ್ಧಾರ ಕೈಗೊಂಡೆವು

4. ಬಳಿಕ ಯಡಿಯೂರಪ್ಪ ಭೇಟಿ ಆದೆವು. ಅವರು ‘ನಂಬಬಹುದಾ?’ ಅಂತ ಕೇಳಿದರು

5. ‘ನಾನು ತೇಲಲಿ ಮುಳುಗಲಿ, ನಿಮ್ಮ ಬೆನ್ನು ಬಿಡುವುದಿಲ್ಲ’ ಎಂದು ಮಾತು ಕೊಟ್ಟಿದ್ದೆ

6. ಆ ನಂತರ ಹೈದ್ರಾಬಾದಲ್ಲಿ ಅಮಿತ್‌ ಶಾರನ್ನು ಭೇಟಿ ಆದೆವು. ‘ಗೋ ಅಹೆಡ್‌’ ಅಂದರು

7. ಈ ಮಧ್ಯೆ, ಸಿದ್ದು-ಸತೀಶ್‌ ಜಾರಕಿಹೊಳಿ ಮಧ್ಯೆ ಜಗಳದಿಂದಾಗಿ ನನ್ನ ಮಂತ್ರಿ ಮಾಡಿದರು

8. ಮೂರು ತಿಂಗಳಲ್ಲಿ ಕೆಳಗಿಳಿಸಿ ನನ್ನನ್ನು ರಾಜಕೀಯವಾಗಿ ಮುಗಿಸಲು ಸಂಚು ಹೂಡಿದ್ದರು

9. ಇದೆಲ್ಲವೂ ಗೊತ್ತಾಗಿ, ಮೈತ್ರಿ ಸರ್ಕಾರ ಕೆಡವಲು 7-8 ಬಾರಿ ಪ್ರಯತ್ನಿಸಿ ವಿಫಲನಾದೆ

10 ಕಾಂಗ್ರೆಸ್‌ಗೆ ಮರಳಿ ಎಂದು ಬಿಎಸ್‌ವೈ, ಶೆಟ್ಟರ್‌ ಸಲಹೆ ನೀಡಿದರೂ ಬಿಡದೆ ಸರ್ಕಾರ ಕೆಡವಿದೆ

ಗೋಕಾಕ: ಪ್ರತಿಷ್ಠೆಯನ್ನೇ ಪಣಕಿಟ್ಟ ಜಾರಕಿಹೊಳಿ ಸಹೋದರರು!

click me!