ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳು ಈಗಾಗಲೇ ಯಶಸ್ವಿಯಾಗಿದೆ. ಎಲ್ಲೂ ಲಂಚದ ಹಾವಳಿ ಇಲ್ಲದೆ ಗೃಹ ಲಕ್ಷ್ಮೀ ಯೋಜನೆ ನೇರವಾಗಿ ಫಲಾನುಭವಿಗಳಿಗೆ ತಲುಪುತ್ತಿದೆ.
ಯರಗಟ್ಟಿ (ಮಾ.23): ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳು ಈಗಾಗಲೇ ಯಶಸ್ವಿಯಾಗಿದೆ. ಎಲ್ಲೂ ಲಂಚದ ಹಾವಳಿ ಇಲ್ಲದೆ ಗೃಹ ಲಕ್ಷ್ಮೀ ಯೋಜನೆ ನೇರವಾಗಿ ಫಲಾನುಭವಿಗಳಿಗೆ ತಲುಪುತ್ತಿದೆ. ಕಾಂಗ್ರೆಸ್ ಸಂವಿಧಾನ ಬದ್ಧವಾಗಿ ಚುನಾವಣೆ ಎದುರಿಸಿದರೆ, ಬಿಜೆಪಿ ಧರ್ಮ, ದೇವರು ಎಂದು ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಬೆಳಗಾವಿ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ್ ಹೇಳಿದರು. ಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ ಅವರು,ಸವದತ್ತಿ ಯಲ್ಲಮ್ಮ ಮತಕ್ಷೇತ್ರದ ಜನರು ಎಂದಿಗೂ ಕಾಂಗ್ರೆಸ್ ಪಕ್ಷ ಕೈಬಿಟ್ಟಿಲ್ಲ. ಈ ಭಾರಿ ಲೋಕಸಭೆ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಿದರೆ ಬೆಳಗಾವಿ ಲೋಕಸಭೆ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತದೆ ಎಂದು ಹೇಳಿದರು.
25 ವರ್ಷದಿಂದ ಪಕ್ಷದ ಕಾರ್ಯಕರ್ತರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಮೂವತ್ತು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ನೀರಾವರಿ ಯೋಜನೆಗಳಿಗೆ ಹಾಗೂ ಲೋಕೋಪಯೋಗಿ ಇಲಾಖೆಯಿಂದ ರಸ್ತೆ ಸುಧಾರಣೆಗೆ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಸಾಕಷ್ಟು ಅನುದಾನ ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸವದತ್ತಿ ಮತಕ್ಷೇತ್ರಕ್ಕೆ ಸಾಕಷ್ಟು ಅನುದಾನ ಬಂದಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು. ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನದ ಬಗ್ಗೆ ಕಾರ್ಯಕರ್ತರು ಹೆಮ್ಮೆಯಿಂದ ಜನಸಾಮಾನ್ಯರ ಬಳಿ ಹೇಳಿಕೊಳ್ಳುವಂತಾಗಬೇಕು.
ಕಾರ್ಯಕರ್ತರ ಬದ್ಧತೆ, ಶ್ರಮದಿಂದ ಶಾಸಕ ವೈದ್ಯ ಸವದತ್ತಿಯಲ್ಲಿ ಗೆದ್ದಿದ್ದಾರೆ. ಇದನ್ನು ಮುಂದುವರಿಸಿಕೊಂಡು ಹೋಗಬೇಕು ಎಂದರು. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವಂತಾಗಬೇಕು. ಬಿಜೆಪಿ ವಿರೋಧ ಪಕ್ಷಕ್ಕೆ ಹೋದ ಕೂಡಲೇ ಕಾರ್ಯಕರ್ತರ ನೆನಪಾಗಿದೆ. ಹೊಲಸು ರಾಜಕೀಯ ಶುರು ಮಾಡಿದ್ದಾರೆ. ಕಾನೂನು ಪ್ರಕ್ರಿಯೆಯನ್ನು ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇದನ್ನು ಕಾಂಗ್ರೆಸ್ ಕಾರ್ಯಕರ್ತರು ಜನರಿಗೆ ತಿಳಿಸಬೇಕು ಎಂದು ಹೇಳಿದರು.
ನಾನು ರಾಜಕಾರಣಿಯಲ್ಲ, ರಾಷ್ಟ್ರಕಾರಣಿ: ಡಾ.ಸಿ.ಎನ್.ಮಂಜುನಾಥ್
ಮಾಜಿ ಶಾಸಕ ಆರ್. ವಿ. ಪಾಟೀಲ, ಶಿವಾನಂದ ಕರಿಗೊಣ್ಣವರ, ಮಂಜುನಾಥ ತಡಸಲೂರ, ನಿಖಿಲ ಪಾಟೀಲ, ಉಮೇಶ ಬಾಳಿ, ಪ್ರಕಾಶ ವಾಲಿ, ಉಮೇಶ ಮಾಗುಂಡನ್ನವರ, ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಗೋಪಾಲ ದಳವಾಯಿ, ಯರಗಟ್ಟಿ ಮುನವಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಡಿ. ಟೋಪೋಜಿ, ಸವದತ್ತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲು ಜಕಾತಿ, ಶಂಕರ ಇಟ್ನಾಳ, ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದ್ದಬಸನ್ನವರ, ಮಲಿಕಸಾಬ್ ಬಾಗವಾನ, ಬಂಗಾರೆಪ್ಪ ಹರಳಿ ಸೇರದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಇದ್ದರು.