ಕಾವೇರಿ ವಿಚಾರವಾಗಿ ಅಂಬರೀಶ್ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು: ಸಂಸದೆ ಸುಮಲತಾ

By Kannadaprabha NewsFirst Published Sep 22, 2023, 7:22 AM IST
Highlights

ಕಾವೇರಿ ನದಿ ನೀರಿನ ಹಂಚಿಕೆ ವಿಷಯದಲ್ಲಿ ರಾಜ್ಯದ ಪರವಾಗಿ ಸಮರ್ಥ ವಾದ ಮಂಡಿಸುವಲ್ಲಿ ಆಗುತ್ತಿರುವ ಲೋಪವೇ ಪ್ರತಿ ಬಾರಿ ರಾಜ್ಯಕ್ಕೆ ಹಿನ್ನಡೆಯಾಗಲು ಕಾರಣ ಎಂದು ಸಂಸದೆ ಸುಮಲತಾ ಅಂಬರೀಶ್‌ ಹೇಳಿದರು.

ಮಂಡ್ಯ (ಸೆ.22): ಕಾವೇರಿ ನದಿ ನೀರಿನ ಹಂಚಿಕೆ ವಿಷಯದಲ್ಲಿ ರಾಜ್ಯದ ಪರವಾಗಿ ಸಮರ್ಥ ವಾದ ಮಂಡಿಸುವಲ್ಲಿ ಆಗುತ್ತಿರುವ ಲೋಪವೇ ಪ್ರತಿ ಬಾರಿ ರಾಜ್ಯಕ್ಕೆ ಹಿನ್ನಡೆಯಾಗಲು ಕಾರಣ ಎಂದು ಸಂಸದೆ ಸುಮಲತಾ ಅಂಬರೀಶ್‌ ಹೇಳಿದರು. ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಸಂಸದರ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರತಿ ಬಾರಿಯೂ ರಾಜ್ಯದ ವಿರುದ್ಧವಾಗಿಯೇ ತೀರ್ಪುಗಳು ಬರುತ್ತಿವೆ. ನಮ್ಮ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ನೀರಿನ ವಾಸ್ತವ ಚಿತ್ರಣವನ್ನು ನೀರು ನಿಯಂತ್ರಣ ಸಮಿತಿ ಹಾಗೂ ಪ್ರಾಧಿಕಾರದ ಮುಂದಿಡುತ್ತಿಲ್ಲ ಎಂದು ಆರೋಪಿಸಿದರು.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನಡೆಸಿದ ಸಭೆಯಲ್ಲಿ ತಮಿಳುನಾಡಿನ ಎಲ್ಲ ಅಧಿಕಾರಿಗಳು ಭಾಗಿಯಾಗಿದ್ದರು. ಆದರೆ ನಮ್ಮ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್‌ ಮೂಲಕ ಭಾಗಿಯಾಗಿದ್ದಾರೆ. ಇದರಿಂದ ಏನು ಎಫೆಕ್ಟ್ ಬರಲಿದೆ. ನಮ್ಮಲ್ಲಿರುವ ನೀರಿನ ಪರಿಸ್ಥಿತಿಯನ್ನು ದಾಖಲೆಗಳ ಸಹಿತ ಪ್ರಾಧಿಕಾರದ ಮುಂದಿಡಬೇಕಿದ್ದು ಅಧಿಕಾರಿಗಳ ಜವಾಬ್ದಾರಿಯಲ್ಲವೇ. ಗಂಭೀರ ವಿಷಯವನ್ನು ಉಡಾಫೆಯಾಗಿ ತೆಗೆದುಕೊಂಡಿದ್ದಾರೆ. ಇದನ್ನ ಖಂಡಿಸುತ್ತೇನೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಾವೇರಿ ನೀರಿನ ವಿಚಾರದಲ್ಲಿ ಕಾಂಗ್ರೆಸ್‌ ದುರಹಂಕಾರದ ಮಾತುಗಳನ್ನಾಡುತ್ತಿದೆ: ಅಶ್ವತ್ಥನಾರಾಯಣ

ಕೇಂದ್ರ ಮಧ್ಯಪ್ರವೇಶಿಸಲಾಗದು: ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಮನಗಂಡು ಸುಪ್ರೀಂಕೋರ್ಟ್‌ ರಿಲೀಫ್ ಕೊಡಬಹುದೆಂದು ಭಾವಿಸಿದ್ದೆವು. ಅಲ್ಲಿಯೂ ಮತ್ತೆ ನಮಗೆ ಅನ್ಯಾಯ ಆಗಿದೆ. ಆದರೂ ಸುಪ್ರಿಂಕೋರ್ಟ್ ಆದೇಶ ಗೌರವಿಸಬೇಕು, ಪಾಲಿಸಬೇಕು. ಇದನ್ನ ನಾನು ರಾಜಕೀಯವಾಗಿ ಮಾತನಾಡುವುದಿಲ್ಲ. ಈಗ ಯಾರೂ ಮಧ್ಯಪ್ರವೇಶಿಸದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಕೇಂದ್ರಸರ್ಕಾರವೂ ಮಧ್ಯಪ್ರವೇಶಿಸಲಾಗುವುದಿಲ್ಲ. ಅನ್ಯಾಯ ಆಗುವ ರೈತರಿಗೆ ಏನು ಉತ್ತರ ಕೊಡಬೇಕು ಎಂಬ ಬಗ್ಗೆ ಆಲೋಚಿಸಬೇಕು. ಮತ್ತೆ ಸುಪ್ರಿಂಕೋರ್ಟ್ ಹತ್ತಿರ ಹೋಗಿ ಹೋರಾಟ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. ಅಣೆಕಟ್ಟೆಯಲ್ಲಿರುವ 16 ಟಿಎಂಸಿ ನೀರಿನಲ್ಲಿ ತಮಿಳುನಾಡಿಗೆ ನೀರು ಬಿಟ್ಟು, ಕೃಷಿ ಮತ್ತು ಕುಡಿಯಲು ಬಳಸಬೇಕಿದೆ. 4 ಟಿಎಂಸಿ ನೀರು ಡೆಡ್‌ ಸ್ಟೋರೇಜ್ ಇದೆ. ಮಳೆ ಬಂದರೆ ಮಾತ್ರ ಕಷ್ಟ ಬಗೆಹರಿಯಲಿದೆ. ಬೇರೆ ದಾರಿ ಕಾಣುತ್ತಿಲ್ಲ ಎಂದು ಅಸಹಾಯಕರಾಗಿ ನುಡಿದರು.

ಸಮಿತಿ ರಚಿಸುವ ಭರವಸೆ: ದೆಹಲಿಯಲ್ಲಿ ಜಲಶಕ್ತಿ ಸಚಿವರನ್ನ ಭೇಟಿ ಮಾಡಿದ್ದೇನೆ. ಏನಾದರೂ ದಾರಿ ಮಾಡಿಕೊಡಿ ಎಂದು ಕೇಳಿದ್ದೇನೆ. ಒಂದು ಕಮಿಟಿ ಮಾಡಿ ವಾಸ್ತವ ಪರಿಸ್ಥಿತಿ ತಿಳಿಯಲು ಸರ್ವೆ ಮಾಡಿಸುತ್ತೇನೆ ಎಂದಿದ್ದಾರೆ. ನಮಗೆ ಉಳಿದಿರುವ ದಾರಿ ಬೇರೆ ಇಲ್ಲ ಕುಡಿಯುವ ನೀರಿನ ಅಗತ್ಯ ಬಿಟ್ಟು, ಕೃಷಿಗೆ ನೀರನ್ನ ಬಿಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು‌ ಹೇಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ರೈತರ ನೆರವಿಗೆ ಬರಬೇಕು. ಸರ್ಕಾರ ಪರಿಹಾರ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ತಮಿಳುನಾಡು ಜೊತೆ ಮಾತನಾಡಲಿ: ನದಿ ನೀರು ಹಂಚಿಕೆ ವಿಷಯದಲ್ಲಿ ಕರ್ನಾಟಕ ಮತ್ತು ತಮಿಳುನಾಡು ಪರಸ್ಪರ ಕುಳಿತು ಮಾತುಕತೆ ನಡೆಸಬೇಕು. ಇಲ್ಲಿನ ಪರಿಸ್ಥಿತಿಯನ್ನು ನಾವು ತಿಳಿಸಿಕೊಡಬೇಕು. ನೀರು ಕೊಡಲು ಆಗುವುದಿಲ್ಲ ಎಂಬುದಕ್ಕಿಂತ ನಮ್ಮ ಪರಿಸ್ಥಿತಿ ಏನಿದೆ ಎಂದು ನೋಡಿ ಎಂದು ತಿಳಿಸಬೇಕು. ನಮ್ಮಲ್ಲೂ ತಮಿಳಿಗರು ಇದ್ದಾರೆ. ಅವರಿಗೆ ಕೊಡುವುದಕ್ಕೂ ನೀರು ಬೇಡವೇ ಎಂದು ಪ್ರಶ್ನಿಸಿದರು. ನೀರಿನ ವಿಚಾರವಾಗಿ ರಾಜಕೀಯ ತುಂಬಾ ನಡೆಯುತ್ತಿದೆ. ಪಾಕಿಸ್ತಾನದ ಜೊತೆ ಕೂಡ ಮಾತನಾಡಿದ್ದೇವೆ. ಅಂದ ಮೇಲೆ ತಮಿಳುನಾಡು ಜೊತೆ ಏಕೆ ಮಾತನಾಡಲು ಸಾಧ್ಯವಿಲ್ಲ. ಪರಿಹಾರ ಸಿಗುವುದಾದರೆ ಏಕೆ ಮಾತನಾಡಬಾರದು. ಬೇರೆ ದಾರಿ ಕಾಣುತ್ತಿಲ್ಲ. ಅಧಿವೇಶನದಲ್ಲಿ ಈ ವಿಚಾರವಾಗಿ ಮಾತನಾಡಲು ಅವಕಾಶ ಕೇಳಿದ್ದೇನೆ ಎಂದರು.

ಸರ್ಕಾರದ ಪರ ನಿಲ್ಲಲು ರೆಡಿ: ಕಾವೇರಿ ವಿಚಾರವಾಗಿ ಅಂಬರೀಶ್ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಈಗ ನಾನು ಏನು ಮಾಡಬೇಕು ಎಂದು ಯೋಚನೆ ಮಾಡುತ್ತಿದ್ದೇನೆ. ರೈತರು, ಜನರು ಏನು ಹೇಳುತ್ತಾರೆ ಕೇಳುತ್ತೇನೆ. ಮಳೆದ ಬಾರದೇ ಇದ್ದರ ಕುಡಿಯುವ ನೀರಿಗೆ ಏನು ಮಾಡಬೇಕೊ ಗೊತ್ತಿಲ್ಲ. ಸರ್ಕಾರದ ಪರ ನಿಲ್ಲಲು ನಾನು ರೆಡಿ ಇದ್ದೇನೆ. ನಾನು ಸಂಸದೆಯಾಗಿ ಏನು ಮಾಡಬೇಕೋ ಮಾಡುತ್ತಿದ್ದೇನೆ ಎಂದರು. ರೈತರಿಗೆ ಆಗಿರುವ ನಷ್ಟವನ್ನು ಸರ್ಕಾರ ಬರಿಸಬೇಕಿದೆ. ಜಿಲ್ಲೆಯ ಏಳು ತಾಲೂಕುಗಳಲ್ಲೂ ತೀವ್ರ ಬರ ಇದೆ. ಈಗ ಸುಮಲತಾ ರಾಜೀನಾಮೆ ವಿಚಾರ ಮಾತನಾಡುವ ಸಮಯವಲ್ಲ. ಜನರು ಮುಗ್ದರಿದ್ದಾರೆ. ಮಾಹಿತಿ‌ ಇರುವುದಿಲ್ಲ. ಸದ್ಯ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡುವ ಪರಿಸ್ಥಿತಿ ಇಲ್ಲ. ಕೇಂದ್ರದ ಬಳಿ‌ ಕೀ ಇದ್ದಿದ್ದರೆ ಈ ಹಿಂದೆ ಅಂಬರೀಶ್ ಏಕೆ ರಾಜೀನಾಮೆ ಕೊಡುತ್ತಿದ್ದರು ಎಂದು ಪ್ರಶ್ನಿಸಿದರು.

ರಾಜೀನಾಮೆ ನೀಡಲು ಹಿಂಜರಿಯೋಲ್ಲ: ಮಂಡ್ಯ ಜಿಲ್ಲೆಯ ಜನ ನನಗೆ ಮತ ಹಾಕಿದ್ದಾರೆ. ನನಗೆ ಜವಾಬ್ದಾರಿ ಕೊಟ್ಟಿದ್ದಾರೆ. ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ಮುಂದಿನ ದಿನಗಳಲ್ಲಿ ರಾಜೀನಾಮೆ ನೀಡಲು ಯೋಚನೆ ಮಾಡುವುದಿಲ್ಲ. ರಾಜ್ಯ ಸರ್ಕಾರ ಮೇಲೆ ಸುಮ್ಮನೆ ನಮ್ಮನ್ನು ದೂರಬಾರದು. ರಾಜಕೀಯಕ್ಕಾಗಿ ಟೀಕೆ ಯಾರು ಬೇಕಾದರೂ ಮಾಡಬಹುದು. ನಿಮಗೆ ಪಿಎಂ ಅವರ ಭೇಟಿಗೆ ಅವಕಾಶ ಸಿಕ್ಕಿಲ್ಲ. ಯಾಕೇಂತ ನಮಗೂ ಗೊತ್ತಿಲ್ಲ. ಪ್ರಧಾನಿಯವರು ನನಗೆ ಸಮಯ ಕೊಟ್ಟಿದ್ದರು. ಮಂಡ್ಯದ ಪರಿಸ್ಥಿತಿ ಬಗ್ಗೆ ಮಾತನಾಡಿದ್ದೇನೆ. 

ತಮಿಳುನಾಡಿಗೆ ಕಾವೇರಿ ನೀರು ಹರಿಸಿದರೆ ಹೋರಾಟ ಅನಿವಾರ್ಯ: ಶಾಸಕ ದರ್ಶನ್ ಪುಟ್ಟಣ್ಣಯ್ಯ ಎಚ್ಚರಿಕೆ

ಫೋಟೊಗೆ ಫೋಸ್ ಕೊಡಲು ಪಿಎಂ ಅವರಿಗೆ ಸಮಯವಿಲ್ಲ. ಅಂತಹ ಅವಶ್ಯಕತೆ ನನಗೆ ಇಲ್ಲ ಎಂದು ನೇರವಾಗಿ ಹೇಳಿದರು. ಕಾವೇರಿ ವಿಚಾರದಲ್ಲಿ ನಟರು ನಿಲ್ಲುತ್ತಾರೆ. ಈ ವಿಚಾರದಲ್ಲಿ ಸಿನಿಮಾ ನಟರಿಗೂ ಜವಾಬ್ದಾರಿ ಇದೆ. ಸುಮ್ಮನೆ ವಿವಾದ ಮಾಡಬಾರದು ಎಂದು ಸುಮ್ಮನಿದ್ದಾರೆ. ಮಾತನಾಡದಿದ್ದ ಮಾತ್ರಕ್ಕೆ ನಮ್ಮ ವಿರುದ್ಧವಿದ್ದಾರೆ ಎಂದಲ್ಲ ಎಂದು ನಟರ ಮೌನದ ಬಗ್ಗೆ ಸಮರ್ಥನೆ ನೀಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್‌, ಮುಖಂಡ ಎಸ್.ಸಚ್ಚಿದಾನಂದ, ಹನಕೆರೆ ಶಶಿಕುಮಾರ್‌ ಇತರರಿದ್ದರು.

click me!