
ದಾವಣಗೆರೆ (ಸೆ.06): ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಬೆಂಬಲಿಗರ ಕ್ರಿಮಿನಲ್ ಕೇಸ್ ಹಿಂಪಡೆಯಲು ರಾಜ್ಯ ಸಚಿವ ಸಂಪುಟ ಸಭೆ ನಿರ್ಧಾರ ಕೈಗೊಂಡಿರುವುದು ನಿಮ್ಮ ಭಂಡತನಕ್ಕೆ ತಾಜಾ ಉದಾಹರಣೆಯಾಗಿದೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಗೂಂಡಾಗಾರಿ ಮಾಡಿದವರು, ಬೆಂಕಿ ಹಚ್ಚಿದವರ ಕೇಸ್‌ಗಳನ್ನು ವಾಪಸ್ ಪಡೆಯಬಾರದು. ಬೇಕಿದ್ದರೆ ರೈತರು, ಜನಪರ ಹೋರಾಟಗಾರರು ಇದ್ದರೆ ಅವರ ಕೇಸ್ ಹಿಂಪಡೆಯಲಿ ಎಂದರು.
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಸಲು ಚುನಾವಣಾ ಆಯೋಗಕ್ಕೆ ಶಿಫಾರಸು ಮಾಡಲು ಸಚಿವ ಸಂಪುಟ ತೀರ್ಮಾನ ಕೈಗೊಂಡಿದೆ. ಇದು ನೋಡಿದರೆ, ರಾಹುಲ್ ಗಾಂಧಿ ಆರೋಪಿಸಿದಂತೆ ರಾಜ್ಯದಲ್ಲಿ 136 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ಸಿನವರೇ ಮತಗಳ್ಳತನ ಮಾಡಿದ್ದಾರಾ? ಚುನಾವಣಾ ಆಯೋಗ ಸ್ವಾಯತ್ತ ಸಂಸ್ಥೆಯಾಗಿದ್ದು, ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತದೆ. ರಾಜ್ಯ ಸರ್ಕಾರಕ್ಕೆ ಚುನಾವಣೆ ನಡೆಸಲು ತಾಕತ್ತು ಇಲ್ಲ, ಧೈರ್ಯವೂಇಲ್ಲ. ಚುನಾವಣೆ ಮುಂದೂಡಲು ಇದು ನೆಪ ಅಷ್ಟೇ ಎಂದು ಟೀಕಿಸಿದರು. ಬಿಜೆಪಿ ಹಿರಿಯ ಮುಖಂಡ ಚಂದ್ರಶೇಖರ ಪೂಜಾರ, ಯುವ ಮುಖಂಡರಾದ ರಾಜು ವೀರಣ್ಣ, ಪ್ರವೀಣ ಜಾಧವ್, ಪಂಜು ಪೈಲ್ವಾನ ಇತರರು ಇದ್ದರು.
ರಾಜ್ಯ ಸರ್ಕಾರವೂ ತೆರಿಗೆ ಇಳಿಸಲು ಒತ್ತಾಯ: ಕೇಂದ್ರ ಸರ್ಕಾರದ ಜಿಎಸ್‌ಟಿ ಸರಳೀಕರಣ ಮಾದರಿಯಲ್ಲೇ ರಾಜ್ಯ ಸರ್ಕಾರವೂ ತೆರಿಗೆ ದರ ಇಳಿಸಲಿ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಒತ್ತಾಯಿಸಿದರು. ಜಿಎಸ್‌ಟಿ ಸರಳೀಕರಣ ಮಾಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾಮರಾಮನ್ ಅವರನ್ನು ಅಭಿನಂದಿಸುತ್ತೇವೆ. ಜಿಎಸ್‌ಟಿ ಸರಳೀಕರಣದಿಂದಾಗಿ ರೈತರು, ಮಧ್ಯಮ ವರ್ಗದ ಜನರಿಗೆ ಸಾಕಷ್ಟು ಅನುಕೂಲವಾಗಿದೆ. ಅಗತ್ಯ ವಸ್ತುಗಳು, ಸಣ್ಣ ಕಾರುಗಳ ಖರೀದಿಗೆ ಇದರಿಂದ ಅನುಕೂಲ ಆಗಿದೆ. ಜಿಎಸ್‌ಟಿ ಸರಳೀಕರಣದಿಂದ ರಾಜ್ಯಕ್ಕೆ ₹17 ಸಾವಿರ ಕೋಟಿ ನಷ್ಟವಾಗುತ್ತಿದೆ ಎಂದು ಕಾಂಗ್ರೆಸ್ಸಿಗರು ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಸರ್ಕಾರದ ನಿರ್ಧಾರದಿಂದಲೇ ಕರ್ನಾಟಕದಲ್ಲಿ ಬೆಲೆ ಏರಿಕೆಯಾಗಿದೆ. ಪ್ರತಿ ಲೀಟರ್ ಡೀಸೆಲ್‌ಗೆ ಶೇ.21.17 ಹಾಗೂ ಪೆಟ್ರೋಲ್‌ಗೆ ಶೇ.29.84ರಷ್ಟು ಮಾರಾಟ ತೆರಿಗೆ ಹೆಚ್ಚಿಸಿದ್ದೀರಿ. ನೋಂದಣಿ ಶುಲ್ಕ, ಮುದ್ರಾಂಕ ಶುಲ್ಕ ಹೆಚ್ಚಿಸಿದ್ದೀರಿ. ನಿಮ್ಮ ಸುಳ್ಳು ಭರವಸೆಗಳ ಈಡೇರಿಕೆಗಾಗಿ ಜನರ ಜೇಬಿಗೆ ಕತ್ತರಿ ಹಾಕುತ್ತಿದ್ದೀರಿ. ಜನರ ಶಾಪ ನಿಮ್ಮ ಸರ್ಕಾರವನ್ನು ತಟ್ಟುತ್ತದೆ. ಡಕೋಟಾ ಬಸ್‌ಗಳನ್ನು ಓಡಿಸುವುದೇ ಶಕ್ತಿ ಯೋಜನೆಯ ಸಾಧನೆಯಾ ಎಂದು ಪ್ರಶ್ನಿಸಿದರು. ಮೋದಿ ಸರ್ಕಾರದ ಜಿಎಸ್‌ಟಿ ಸರಳೀಕರಣವನ್ನು ರಾಜ್ಯ ಸರ್ಕಾರ ಸ್ವಾಗತಿಸಬೇಕಿತ್ತು. ನರೇಂದ್ರ ಮೋದಿಗೆ ಧನ್ಯವಾದ ಹೇಳುವ ಬದಲು ಕಾಂಗ್ರೆಸ್ಸಿಗರು ಬೊಕ್ಕಸಕ್ಕೆ ನಷ್ಟವೆನ್ನುತ್ತಾರೆ. ಎಲ್ಲ ತೆರಿಗೆ ಇಳಿಸದಿದ್ದರೆ ಜನರು ನಿಮಗೆ ಶಾಪ ಹಾಕುತ್ತಾರೆ ಎಂದು ಎಂ.ಪಿ.ರೇಣುಕಾಚಾರ್ಯ ಎಚ್ಚರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.