ಸಿಎಂ ಕುರ್ಚಿ ಕುಸ್ತಿಯಲ್ಲೇ ರಾಜ್ಯ ಸರ್ಕಾರ ಪತನ: ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ

Published : Nov 29, 2025, 09:23 AM IST
MP Renukacharya

ಸಾರಾಂಶ

ಕಾಂಗ್ರೆಸ್ ಸರ್ಕಾರ ನಿಷ್ಕ್ರಿಯವಾಗಿದ್ದು, ಮುಖ್ಯಮಂತ್ರಿ ಕುರ್ಚಿಗಾಗಿ ಕಿತ್ತಾಟ ನಡೆಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಆಂತರಿಕ ಕಚ್ಚಾಟದಿಂದಲೇ ಪತನವಾಗುತ್ತದೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅಣಕವಾಡಿದರು.

ದಾವಣಗೆರೆ (ನ.29): ಮುಖ್ಯಮಂತ್ರಿ ಕುರ್ಚಿಗಾಗಿ ಕಿತ್ತಾಟ ನಡೆಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಆಂತರಿಕ ಕಚ್ಚಾಟದಿಂದಲೇ ಪತನವಾಗುತ್ತದೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅಣಕವಾಡಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಸುಳ್ಳುಗಳನ್ನು ಹೇಳಿಕೊಂಡೇ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ನಿಷ್ಕ್ರಿಯವಾಗಿದ್ದು, ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದು ಹೋಗಿದೆ. ಕಾಂಗ್ರೆಸ್ಸಿನ ಸಚಿವರು, ಶಾಸಕರು ಯಾರ ಮನೆಗೆ ಭೇಟಿ ನೀಡಬೇಕು, ಯಾರನ್ನಾದರೂ ಭೇಟಿಯಾದರೆ ಮತ್ತೆ ಯಾರಾದರೂ ಕಣ್ಣ ಹಾಕುತ್ತಾರೆಂಬ ಭಯ, ಆತಂಕ, ಗೊಂದಲದಲ್ಲಿದ್ದಾರೆ. ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಈಗಂತೂ ಲೋ ಕಮಾಂಡ್ ಆಗಿದೆ ಎಂದು ಟೀಕಿಸಿದರು.

ಆಡಳಿತ ಪಕ್ಷದ ಕೆಲವರು ತಮ್ಮ ನಿಷ್ಟೆ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಅಂತಾರೆ. ಮತ್ತೆ ಕೆಲವರು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮನೆಗೆ ಹೋಗುತ್ತಾರೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಬಲಾಬಲ ಪ್ರದರ್ಶನಕ್ಕೆ ಸಿಎಂ-ಡಿಸಿಎಂ ಮಧ್ಯೆ ಟ್ವೀಟ್ ವಾರ್ ಸಹ ನಡೆಯುತ್ತಿದೆ ಎಂದು ಕುಟುಕಿದರು. ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳುತ್ತಾರೆ. ಕೊಟ್ಟ ಭರವಸೆ ಉಳಿಸಿಕೊಳ್ಳಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಕೆಲವರು ದಲಿತ ಮುಖ್ಯಮಂತ್ರಿ ಆಗಬೇಕೆಂಬ ಬೇಡಿಕೆ ಇಡುತ್ತಿದ್ದಾರೆ. ಆದರೆ, ರಾಜ್ಯದ ರೈತರು ಬೀದಿ ಪಾಲಾಗಿದ್ದರೂ ಕಾಂಗ್ರೆಸ್ಸಿಗರಿಗೆ ಅದ್ಯಾವುದರ ಪರಿವೆಯೇ ಇಲ್ಲ ಎಂದು ಕಿಡಿಕಾರಿದರು.

ಅತಿವೃಷ್ಟಿ, ಅನಾವೃಷ್ಟಿ, ಬೆಲೆ ಕುಸಿತದ ಜೊತೆಗೆ ರೈತ ವಿರೋಧಿ ನೀತಿಯ ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಅನ್ನದಾತ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ, ಆತ್ಮ*ಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಕಾಂಗ್ರೆಸ್ಸಿಗರ ಬೆಂಗಳೂರಿನ ವಿಧಾನಸೌಧದಲ್ಲಿ ಕುಳಿತು, ಕುದುರೆ ವ್ಯಾಪಾರವನ್ನು ಆರಂಭಿಸಿದ್ದಾರೆ. ರಾಜ್ಯದಲ್ಲಿ ಜಾತಿ ಸಂಘರ್ಷ ಹುಟ್ಟು ಹಾಕುವ ಕೆಲಸ ಸಹ ನಡೆದಿದೆ ಎಂದು ಆರೋಪಿಸಿದರು. ಕೆಲ ಕಡೆಗಳಲ್ಲಿ ಆಯಾ ಸಮಾಜದ ಮುಖಂಡರು ಕಾಂಗ್ರೆಸ್‌ಗೆ, ಕಾಂಗ್ರೆಸ್ ಹೈಕಮಾಂಡ್‌ಗೆ ತಕ್ಕ ಪಾಠ ಕಲಿಸುತ್ತೇವೆನ್ನುತ್ತಿದ್ದಾರೆ. ನಮ್ಮ ಸಮುದಾಯದ ಶಾಸಕರು ರಾಜೀನಾಮೆ ಕೊಡಬೇಕೆಂಬ ಕರೆ ನೀಡುತ್ತಿದ್ದಾರೆ. ಕೆಲವರು ಅಹಿಂದ ಶಾಸಕರು ಬಲಾಬಲ ಪ್ರದರ್ಶನಕ್ಕೆ ಸಿದ್ಧವಾಗಬೇಕೆಂದು ಹೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಗೊಂದಲದ ಗೂಡದ ಕಾಂಗ್ರೆಸ್ ಸರ್ಕಾರ

ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ಸ್ಥಾಪಿಸಿ, ಕೃಷಿ ಸಚಿವರೇ ಕಾಣದಂತೆ ಮಾಯವಾಗಿದ್ದಾರೆ. ಕಾಂಗ್ರೆಸ್ಸಿನ ದೆಹಲಿ ವರಿಷ್ಠರು ಇದೇ ಕಾಂಗ್ರೆಸ್ಸಿಗರಿಗೆ ಈಗ ಆಟಕ್ಕೆ ಉಂಟು, ಲೆಕ್ಕಕ್ಕೇ ಇಲ್ಲದಂತಾಗಿದೆ ಎಂದು ತಿಳಿಸಿದರು. ರಾಜ್ಯ ಸರ್ಕಾರದಲ್ಲಿ ಆಗುತ್ತಿರುವ ಬೆಳವಣಿಗೆಗಳ ಹಿನ್ನೆಲೆ ರಾಜ್ಯಪಾಲರು ಮಧ್ಯಪ್ರವೇಶ ಮಾಡಬೇಕು. ಕಾಂಗ್ರೆಸ್ ಸರ್ಕಾರ ಗೊಂದಲದ ಗೂಡಾಗಿದ್ದು, ಹಿಂದೆ ವೀರಪ್ಪ ಮೊಯ್ಲಿ ಸರ್ಕಾರದಲ್ಲಿ ಆದಂತೆಯೇ ಚಾಕು-ಚೂರಿ ಸಂಸ್ಕೃತಿ ಸಹ ಬರಬಹುದು ಎಂದು ಹೇಳಿದರು. ಕಾಂಗ್ರೆಸ್ ಹೈಕಮಾಂಡ್‌ ಏನು ಭರವಸೆ ನೀಡಿತ್ತು ಎಂಬುದನ್ನು ಡಿ.ಕೆ.ಶಿವಕುಮಾರ್‌ ನೇರವಾಗಿ ಹೇಳಲಿ. ನಿಮಗೆ ಅಧಿಕಾರ ಹಸ್ತಾಂತರ ಆಗುತ್ತೋ, ಇಲ್ಲವೋ ಬಹಿರಂಗಪಡಿಸಿ. ಯಾವುದೇ ಪವರ್ ಶೇರಿಂಗ್ ಚರ್ಚೆಯೇ ಆಗಿಲ್ಲವೆಂದು ಸಿದ್ದರಾಮಯ್ಯನವರಾದರೂ ಹೇಳಲಿ. ಶಾಸಕರ ಖರೀದಿ ಕೇಂದ್ರ ಸ್ಥಾಪಿಸಿರುವುದು ನಾಚಿಕೆಗೇಡು ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಮುಖಂಡರಾದ ಪ್ರವೀಣ ಜಾಧವ್, ರಾಜು ವೀರಣ್ಣ, ಪಂಜು ಪೈಲ್ವಾನ್ ಇತರರು ಇದ್ದರು.

ಬಿಜೆಪಿ ತತ್ವ, ಸಿದ್ಧಾಂತ ಒಪ್ಪಿ ಯಾರು ಬೇಕಾದರೂ ನಮ್ಮ ಪಕ್ಷಕ್ಕೆ ಬರಬಹುದು. ಇದನ್ನೆಲ್ಲಾ ಒಪ್ಪಿ ಬಂದರೆ ಸ್ವಾಗತಿಸುವುದು ಸಹಜ. ಡಿ.ಕೆ.ಶಿವಕುಮಾರ್‌ ಬಿಜೆಪಿಗೆ ಬರುವುದಾದರೆ ಅದನ್ನೆಲ್ಲಾ ನಮ್ಮ ರಾಷ್ಟ್ರೀಯ ನಾಯಕರು ತೀರ್ಮಾನಿಸುತ್ತಾರೆ. ಅದೆಲ್ಲವೂ ನನ್ನ ಕೈಯಲ್ಲಿಲ್ಲ. ನಾನೂ ಅಭಿವೃದ್ಧಿ ವಿಚಾರದಲ್ಲಿ ಸಿಎಂ, ಡಿಸಿಎಂ ಇಬ್ಬರನ್ನೂ ಭೇಟಿಯಾಗಿದ್ದೆ.
-ಎಂ.ಪಿ.ರೇಣುಕಾಚಾರ್ಯ, ಬಿಜೆಪಿ ಮಾಜಿ ಸಚಿವ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಂಗನವಾಡಿ, ಆಶಾ ನೌಕರರ ಗೌರವಧನ ಹೆಚ್ಚಿಸಿ: ಸಂಸದ ಡಾ.ಕೆ.ಸುಧಾಕರ್‌ ಮನವಿ
ಬಂಗಾರಪ್ಪ ಅವರ ಹೆಸರಿಗೆ ತಕ್ಕ ರೀತಿ ಮಧು ಮಾತನಾಡಲಿ: ಆರಗ ಜ್ಞಾನೇಂದ್ರ ತಿರುಗೇಟು