
ಬೆಂಗಳೂರು (ಸೆ.03): ಒಳಮೀಸಲು ಹಂಚಿಕೆ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸಂಪುಟದ ಕೆಲವು ಸಚಿವರ ಒತ್ತಡಕ್ಕೆ ಮಣಿದಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಸಂಸದ ಗೋವಿಂದ ಕಾರಜೋಳ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾ.ನಾಗಮೋಹನ್ ದಾಸ್ ಅವರ ವರದಿಯನ್ನು ಸರ್ಕಾರ ಗಾಳಿಗೆ ತೂರಿದೆ. ಅವರ ಒಳ ಮೀಸಲು ಹಂಚಿಕೆಯನ್ನು ಬದಿಗಿಟ್ಟಿದೆ. ಸಾಮಾಜಿಕ ಬದ್ಧತೆ ಪ್ರದರ್ಶನ ಮಾಡಿದ್ದ ನಮ್ಮ ಮಾಧುಸ್ವಾಮಿ ನೇತೃತ್ವದ ವರದಿಯನ್ನೂ ಧಿಕ್ಕರಿಸಿದೆ ಎಂದರು.
ಬಳಿಕ ಈಗ 150 ಕೋಟಿ ರು. ಮೊತ್ತದ ಸಮೀಕ್ಷೆ ಮಾಡಿ ನಾಗಮೋಹನ್ ದಾಸ್ ವರದಿಗೂ ಅಪಮಾನ ಮಾಡಿದ್ದಾರೆ. ಆ ಮೂಲಕ ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್ ಸರ್ಕಾರ ಧಕ್ಕೆ ಮಾಡಿದೆ. ಸಿದ್ದರಾಮಯ್ಯ ಸರ್ಕಾರವನ್ನು ನಾವು ಒಪ್ಪುವುದಿಲ್ಲ. ಇದು ಸರ್ವ ಸಮ್ಮತ ಅಲ್ಲ. ನೂರೊಂದು ಜಾತಿಗೆ ಇದರಿಂದ ನ್ಯಾಯ ಸಿಕ್ಕಿಲ್ಲ. ಕೇವಲ ಡಾ.ಜಿ.ಪರಮೇಶ್ವರ್, ಎಚ್.ಸಿ.ಮಹಾದೇವಪ್ಪ ಹಾಗೂ ಶಿವರಾಜ್ ತಂಗಡಗಿ ಅವರಿಗೆ ಮಾತ್ರ ಸಮಾಧಾನ ಆಗಿದೆ ಅಷ್ಟೆ. ಗುರುವಾರದ ಸಂಪುಟ ಸಭೆಯಲ್ಲಿ ಈ ಬಗ್ಗೆ ಮರು ಪರಿಶೀಲನೆ ಮಾಡಬೇಕು ಎಂದು ಆಗ್ರಹಿಸಿದರು.
ಅಲೆಮಾರಿ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕಿದೆ. ಅವರಿಗೆ ಈ ಸರ್ಕಾರ ನ್ಯಾಯ ಕೊಡಬೇಕು. ಎಲ್ಲರಿಗೂ ಸಮರ್ಪಕವಾಗುವ ರೀತಿ ಮೀಸಲು ಹಂಚಿಕೆ ಮಾಡಬೇಕು. ಹೀಗಾಗಿ ಸರ್ವ ಪಕ್ಷಗಳ ಜನಪ್ರತಿನಿಧಿಗಳ ಹಾಗೂ ವಿಚಾರ ಜ್ಞಾನ ಹೊಂದಿರುವವರ ಸಭೆ ಮಾಡಬೇಕು. ಆ ಮೂಲಕ ಸಾಮಾಜಿಕ ನ್ಯಾಯ ಒದಗಿಸಿ ಎಂದು ಒತ್ತಾಯಿಸಿದರು.
ಒಳಮೀಸಲಾತಿ ಜಾರಿ ಮಾಡದಿದ್ರೆ ಉಗ್ರ ಹೋರಾಟ: ಸುಪ್ರೀಂಕೋರ್ಟ್ ನೀಡಿರುವ ಆದೇಶದಂತೆ ರಾಜ್ಯದಲ್ಲಿ ಒಳ ಮೀಸಲಾತಿಯನ್ನು ಜಾರಿ ಮಾಡದಿದ್ದರೆ ಸಮುದಾಯದ ಮುಖಂಡರು ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲು ಚಿಂತಿಸಿದ್ದಾರೆ. ಸರ್ಕಾರ ಕೂಡಲೇ ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ಎಚ್ಚರಿಕೆ ನೀಡಿದರು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪರಿಶಿಷ್ಟ ಜಾತಿಯ ಮೀಸಲಾತಿ ಶೇ.15 ರಿಂದ 17ಕ್ಕೆ ಹೆಚ್ಚಿಸಲಾಗಿದೆ. ಎಸ್ಟಿಯ ಮೀಸಲಾತಿ ಶೇ.3 ರಿಂದ 7ಕ್ಕೆ ಏರಿಸಲಾಗಿದೆ. ಈಗಾಗಲೇ ಇದು ಅನುಷ್ಠಾನದಲ್ಲಿಯೂ ಇದೆ ಎಂದು ಹೇಳಿದರು.
ಸಚಿವರಾದ ಕೆ.ಎಚ್. ಮುನಿಯಪ್ಪ ಮತ್ತು ಆರ್.ಬಿ. ತಿಮ್ಮಾಪೂರ ಪಕ್ಷ ಮತ್ತು ಸರ್ಕಾರದಲ್ಲಿ ಚಲಾವಣೆಯಲ್ಲಿಲ್ಲದ ನಾಣ್ಯದಂತಿದ್ದಾರೆ. ಇವರಿಗೆ ಯಾವೂರ ದಾಸಯ್ಯ ಎನ್ನುವವರೂ ಕೂಡ ಇಲ್ಲ ಎಂದು ಕಿಚಾಯಿಸಿದರು. ಮಾಜಿ ಸಚಿವ ನಾರಾಯಣಸ್ವಾಮಿ ಮಾತನಾಡಿ, ದೇಶದಲ್ಲಿ ಒಳಮೀಸಲಾತಿ ನೀಡುವುದು ಇದೇ ಮೊದಲಲ್ಲ. ಪಂಜಾಬ್ ಸರ್ಕಾರ ವಾಲ್ಮೀಕಿ ಜನಾಂಗಕ್ಕೆ ಒಳಮೀಸಲಾತಿ ನೀಡಿದೆ. ಹೀಗಿದ್ದಾಗ ಒಳಮೀಸಲಾತಿ ಜಾರಿಯಾಗುವುದರಲ್ಲಿ ಯಾವುದೇ ತೊಂದರೆಯಾಗುವುದಿಲ್ಲ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.