ಇಂಡಿಯಾ ಘಟಬಂದನ್‌ನಲ್ಲಿ ಸ್ಟಾಲಿನ್ ಕೂಡ ಇದ್ದಾರೆ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಲೋಕಸಭೆ ಚುನಾವಣೆಯಲ್ಲಿ ಹೊಂದಾಣಿಕೆ ವಿಚಾರದ ಜೊತೆ ಈ ಬಗ್ಗೆಯೂ ಮಾತನಾಡಬೇಕಿತ್ತು ಎಂದು ಸಂಸದ ಬಿ.ವೈ.ರಾಘವೇಂದ್ರ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
ಶಿವಮೊಗ್ಗ (ಸೆ.28): ಇಂಡಿಯಾ ಘಟಬಂದನ್‌ನಲ್ಲಿ ಸ್ಟಾಲಿನ್ ಕೂಡ ಇದ್ದಾರೆ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಲೋಕಸಭೆ ಚುನಾವಣೆಯಲ್ಲಿ ಹೊಂದಾಣಿಕೆ ವಿಚಾರದ ಜೊತೆ ಈ ಬಗ್ಗೆಯೂ ಮಾತನಾಡಬೇಕಿತ್ತು ಎಂದು ಸಂಸದ ಬಿ.ವೈ.ರಾಘವೇಂದ್ರ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ವಿಚಾರದಲ್ಲಿ ಬೆಂಗಳೂರು ಬಂದ್ ಮಾಡುವ ಪರಿಸ್ಥಿತಿಗೆ ಬರಬಾರದಿತ್ತು. ನ್ಯಾಯಾಲಯದಲ್ಲಿ ಸರಿಯಾಗಿ ವಾದ ಮಾಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಕುಟುಕಿದರು.
ಬೆಂಗಳೂರಿಗೆ ವರ್ಷಕ್ಕೆ 40 ಟಿಎಂಸಿ ಕುಡಿಯುವ ನೀರು ಬೇಕಾಗುತ್ತದೆ. ರೈತರಿಗೆ 100 ಹೆಚ್ಚು ಟಿಎಂಸಿ ನೀರು ಬೇಕಾಗುತ್ತದೆ. ರಾಜ್ಯದ ರೈತರ ಹಿತದೃಷ್ಟಿಯಿಂದ ಕೆಲಸ ಮಾಡಬೇಕಾಗಿತ್ತು. ಮುಖ್ಯಮಂತ್ರಿಗಳು ಗ್ಯಾರಂಟಿ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಡಿಸಿಎಂ ಅವರ ಕೆಲಸದಲ್ಲಿ ಅವರು ಬ್ಯುಸಿ ಆಗಿದ್ದಾರೆ ಎಂದು ಛೇಡಿಸಿದರು.
ಕಾವೇರಿ ವಿಚಾರವಾಗಿ ಮಧ್ಯಸ್ಥಿಕೆ ವಹಿಸಬೇಕು ಎಂದು ಪ್ರಧಾನಮಂತ್ರಿಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಪತ್ರ ಬರೆದಿದ್ದಾರೆ. ಈ ವಿಚಾರದಲ್ಲಿ ಕೇಂದ್ರ ಜಲ ಸಂಪನ್ಮೂಲ ಸಚಿವ ಶೇಖಾವತ್ ಇದಕ್ಕೆ ಇಂಟರ್ ಫಿಯರ್ ಆಗಿದ್ದಾರೆ. ಈ ವಿಷಯ ಸರ್ಕಾರದ ಮಟ್ಟದಲ್ಲಿ ಇಲ್ಲ. ಕಾವೇರಿ ವಿಷಯದಲ್ಲಿ ಎರಡು ಮೂರು ಸಮಿತಿ ರಚನೆ ಮಾಡಿದ್ದಾರೆ. ಈ ಸಮಿತಿಯಲ್ಲಿ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಲು ಬರಲ್ಲ ಎಂದರು. ತಮಿಳುನಾಡು ಹೆಚ್ಚಿನ ಪ್ರದೇಶದಲ್ಲಿ ಕೃಷಿ ಚಟುವಟಿಕೆ ಮಾಡುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ನೀರು ಬಳಕೆ ಮಾಡುತ್ತಿದೆ. ಈ ಬಗ್ಗೆ ನ್ಯಾಯಾಲಯದಲ್ಲಿ ಮನವರಿಕೆ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.
ಕೋರ್ಟ್ ಹೊರಗೆ ಕಾವೇರಿ ಸಮಸ್ಯೆ ಪರಿಹಾರಕ್ಕೆ ನಾವು ಸಿದ್ಧ: ಸಿಎಂ ಸಿದ್ದರಾಮಯ್ಯ
ರಾಜ್ಯ ಸರ್ಕಾರ 6ನೇ ಗ್ಯಾರಂಟಿ ಯೋಜನೆಯಾಗಿ ಹೆಚ್ಚಿನ ಮದ್ಯದ ಅಂಗಡಿ ತೆರೆಯಲು ಹೊರಟಿದೆ. ಇದರ ವಿರುದ್ಧ ಮಹಿಳಾ ಸಂಘ ಹೋರಾಟ ಮಾಡುತ್ತಿದೆ. ರೆವಿನ್ಯು ಹೆಚ್ಚಿಸುವ ಸಲುವಾಗಿ ಇದಕ್ಕೆ ಕೈ ಹಾಕಿದ್ದಾರೆ. ಬಡವರ ಹಣ ಕಿತ್ತುಕೊಂಡು ಸರ್ಕಾರ ನಡೆಸುವ ಕೆಲಸ ಮಾಡುತ್ತಿದೆ. ಸರ್ಕಾರ ಇದೆ ಅಂತಾ ಯಾರಿಗೂ ಅನಿಸುತ್ತಿಲ್ಲ. ಹೆಣ್ಣುಮಕ್ಕಳಿಗೆ ಫ್ರೀ ಕೊಡ್ತಾರೆ, ಗಂಡುಮಕ್ಕಳಿಂದ ಕಿತ್ತುಕೊಳ್ಳುತ್ತಾರೆ. ಕರೆಂಟ್ ಬಿಲ್ ಫ್ರೀ ಅಂತಾರೆ, ಕರೆಂಟ್ ಬಿಲ್ ಹೆಚ್ಚಿಗೆ ಮಾಡ್ತಾರೆ. ಈಗ ತೆರಿಗೆ ದುಡ್ಡನ್ನು ಬಾಚಿಕೊಳ್ಳಲು ಮದ್ಯದ ದರ ಹೆಚ್ಚಳ ಮಾಡಿದ್ದಾರೆ ಎಂದು ಟೀಕಿಸಿದರು.