ತಾವು ತೊರೆದ ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಮುಂಬರುವ ಉಪಚುನಾವಣೆಗೆ ತಮ್ಮ ಪುತ್ರನನ್ನೇ ಕಣಕ್ಕಿಳಿಸಲು ಹಾವೇರಿಯ ನೂತನ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೆರೆಮರೆಯಲ್ಲಿ ಕಸರತ್ತು ಆರಂಭಿಸಿದ್ದಾರೆ.
ಬೆಂಗಳೂರು (ಜೂ.19): ತಾವು ತೊರೆದ ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಮುಂಬರುವ ಉಪಚುನಾವಣೆಗೆ ತಮ್ಮ ಪುತ್ರನನ್ನೇ ಕಣಕ್ಕಿಳಿಸಲು ಹಾವೇರಿಯ ನೂತನ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೆರೆಮರೆಯಲ್ಲಿ ಕಸರತ್ತು ಆರಂಭಿಸಿದ್ದಾರೆ. ಈ ಮೊದಲು ಪುತ್ರ ಭರತ್‌ನನ್ನು ಚುನಾವಣಾ ರಾಜಕೀಯಕ್ಕೆ ಕರೆತರುವ ಬಗ್ಗೆ ಬೊಮ್ಮಾಯಿ ಅವರು ತುಸು ಅರೆಮನಸ್ಸು ಹೊಂದಿದ್ದರು. ತಮಗೆ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಸಚಿವ ಸ್ಥಾನ ಸಿಗುವ ಬಗ್ಗೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಆ ನಿರೀಕ್ಷೆ ಹುಸಿಯಾದ ಬಳಿಕ ಪುತ್ರನನ್ನು ಸಕ್ರಿಯ ರಾಜಕಾರಣಕ್ಕೆ ಕರೆತರುವ ಬಗ್ಗೆ ನಿರ್ಧಾರ ಕೈಗೊಂಡಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ಆದರೆ, ಬಿಜೆಪಿ ಹೈಕಮಾಂಡ್ ಬಸವರಾಜ ಬೊಮ್ಮಾಯಿ ಅವರ ಪುತ್ರನಿಗೆ ಟಿಕೆಟ್ ನೀಡುವುದೋ ಅಥವಾ ಇಲ್ಲವೋ ಎಂಬುದಕ್ಕೆ ಇನ್ನೂ ಸಾಕಷ್ಟು ಸಮಯವಿದೆ. ಸುದೀರ್ಘ ಚರ್ಚೆ, ಲಾಬಿ ನಡೆಯುವ ನಿರೀಕ್ಷೆಯಿದೆ. ಹಾಗೆ ನೋಡಿದರೆ ಶಿಗ್ಗಾವಿ ವಿಧಾನಸಭಾ ಕ್ಷೇತ್ರ ಬೊಮ್ಮಾಯಿ ಪ್ರತಿನಿಧಿಸುವ ಹಾವೇರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇಲ್ಲ. ಅದು ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿ. ಆದರೂ ಬೊಮ್ಮಾಯಿ ಅವರು ಭವಿಷ್ಯದ ಲೆಕ್ಕಾಚಾರದ ಹಿನ್ನೆಲೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕವೂ ಶಿಗ್ಗಾವಿ ಕ್ಷೇತ್ರದಲ್ಲಿ ಪದೇ ಪದೇ ಭೇಟಿ, ಬಿರುಸಿನ ಸಂಚಾರ ಆರಂಭಿಸಿದ್ದಾರೆ.
undefined
ತಮಿಳುನಾಡು ಮಾದರಿಯಲ್ಲಿ ರಾಜ್ಯದಲ್ಲಿ ನೀಟ್ ರದ್ದು ಚಿಂತನೆ: ಡಿ.ಕೆ.ಶಿವಕುಮಾರ್ ಸುಳಿವು
ತಮ್ಮ ಹಾವೇರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಎಂಟು ವಿಧಾನಸಭಾ ಕ್ಷೇತ್ರಗಳನ್ನು ಬಿಟ್ಟು ಪಕ್ಕದ ಶಿಗ್ಗಾವಿ ಕ್ಷೇತ್ರದಲ್ಲೇ ಹೆಚ್ಚು ಓಡಾಡುತ್ತಿರುವುದು, ಮುಖಂಡರೊಂದಿಗೆ ಸಮಾಲೋಚನೆ ನಡೆಸುತ್ತಿರುವುದು ಸಹಜವಾಗಿಯೇ ಚರ್ಚೆಗೆ ಗ್ರಾಸವಾಗಿದೆ. ಶಿಗ್ಗಾವಿ ಕ್ಷೇತ್ರದಲ್ಲಿ ಬಿಜೆಪಿಯಲ್ಲಿ ಅಭ್ಯರ್ಥಿಗಳಾಗುವ ಸಾಮರ್ಥ್ಯವುಳ್ಳ ಇತರ ಮುಖಂಡರು ಇಲ್ಲ ಎಂದೇನಲ್ಲ. ಶಶಿಧರ್ ಎಲಿಗಾರ್, ಶ್ರೀಕಾಂತ್ ದುಂಡಿಗೌಡರ್, ಶೋಭಾ ನಿಸ್ಸಿಮಗೌಡರ್ ಅವರು ಉಪಚುನಾವಣೆಯ ಆಕಾಂಕ್ಷಿಗಳಾಗಿದ್ದಾರೆ. ಈ ಮೂವರೂ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಸೇರಿದವರು ಎನ್ನುವುದು ವಿಶೇಷ. ಕ್ಷೇತ್ರದ ಲಿಂಗಾಯತರ ಪೈಕಿ ಪಂಚಮಸಾಲಿ ಸಮುದಾಯ ಪ್ರಾಬಲ್ಯ ಹೊಂದಿದೆ.
ಬೊಮ್ಮಾಯಿ ಅವರ ಸಾದರ ಲಿಂಗಾಯತ ಸಮುದಾಯದ ಬಲ ತೀರಾ ಕಡಿಮೆ. ಆದರೆ, ಬೊಮ್ಮಾಯಿ ಅವರು ಅದನ್ನು ಮೀರಿ ತಮ್ಮ ವೈಯಕ್ತಿಕ ವರ್ಚಸ್ಸಿನಿಂದ ಗೆದ್ದು ಬರುತ್ತಿದ್ದರು. ಕಳೆದ ಬಾರಿ ಕಾಂಗ್ರೆಸ್ ಪಕ್ಷ ಈ ಕ್ಷೇತ್ರದಿಂದ ಪಂಚಮಸಾಲಿ ಸಮುದಾಯದವರನ್ನು ಕಣಕ್ಕಿಳಿಸಲು ಪ್ರಯತ್ನ ನಡೆಸಿ ಕೊನೆ ಕ್ಷಣದಲ್ಲಿ ಹಿಂದೆ ಸರಿಯಿತು. ಕಾಂಗ್ರೆಸ್‌ನ ಮಾಜಿ ಸಚಿವ ಹಾಗೂ ಹಾಲಿ ಶಾಸಕ ವಿನಯ್ ಕುಲಕರ್ಣಿ ಅವರ ಪತ್ನಿಯನ್ನು ಕಣಕ್ಕಿಳಿಸುವ ಪ್ರಸ್ತಾಪ ಕೇಳಿಬಂದಿತ್ತು. ಇದೀಗ ಮುಂಬರುವ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಪಂಚಮಸಾಲಿ ಸಮುದಾಯದವರನ್ನು ಕಣಕ್ಕಿಳಿಸಿದರೆ ಕಷ್ಟವಾಗಲಿದೆ.
ರಾಜಕಾಲುವೆ ಒತ್ತುವರಿ ಮಾಡಿ ಕಟ್ಟಿದ್ದರೆ ದರ್ಶನ್ ಮನೆ ತೆರವು: ಡಿಕೆಶಿ
ಈ ನಿಟ್ಟಿನಲ್ಲಿ ಕುಟುಂಬ ರಾಜಕಾರಣ ಮತ್ತು ಲಿಂಗಾಯತ ಒಳಪಂಗಡದ ಬಲಾಬಲದ ಆಧಾರದ ಮೇಲೆ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿ ಅವರನ್ನು ಹೊರತುಪಡಿಸಿ ಪಂಚಮಸಾಲಿ ಸಮುದಾಯದವರೊಬ್ಬರಿಗೆ ಅವಕಾಶ ಕಲ್ಪಿಸಬೇಕು ಮಾತು ಬಿಜೆಪಿ ಪಾಳೆಯದಲ್ಲಿ ಕೇಳಿಬರುತ್ತಿದೆ. ಆದರೆ, ಯಾರನ್ನೇ ಕಣಕ್ಕಿಳಿಸಿದರೂ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಬಸವರಾಜ ಬೊಮ್ಮಾಯಿ ಅವರ ನೆರವು ಬೇಕಾಗುತ್ತದೆ. ಅಷ್ಟರ ಮಟ್ಟಿಗೆ ಕ್ಷೇತ್ರದಲ್ಲಿ ಹಿಡಿತ ಹೊಂದಿದ್ದಾರೆ. ಪಕ್ಷದ ವರಿಷ್ಠರು ಬಸವರಾಜ ಬೊಮ್ಮಾಯಿ ಅವರ ಪುತ್ರನಿಗೆ ಮಣೆ ಹಾಕುತ್ತಾರೋ ಅಥವಾ ಅವರನ್ನು ಮನವೊಲಿಸಿ ಬೇರೊಬ್ಬರನ್ನು ಕಣಕ್ಕಿಳಿಸುವ ನಿರ್ಧಾರ ಕೈಗೊಳ್ಳುತ್ತಾರೋ ಎಂಬುದನ್ನು ಕಾದು ನೋಡಬೇಕು.