
ಹಾವೇರಿ (ಡಿ.15): ರಾಜ್ಯ ಸರ್ಕಾರ ನುಡಿದಂತೆ ನಡೆದಿಲ್ಲ. ಮೆಕ್ಕೆಜೋಳ ಖರೀದಿಸಿಲ್ಲ, ಬೆಳೆ ಹಾನಿ ಪರಿಹಾರ ಕೊಟ್ಟಿಲ್ಲ. ಯಾವುದೇ ಅಭಿವೃದ್ಧಿ ಆಗಿಲ್ಲ. ಹಾಗಾಗಿ ನೂತನವಾಗಿ ಆಯ್ಕೆಯಾಗಿರುವ ಮಂಡಲ ಅಧ್ಯಕ್ಷರು ಜಿಲ್ಲಾ ಘಟಕದೊಂದಿಗೆ ಸೇರಿ ಮುಂದಿನ ಹತ್ತು ದಿನಗಳಲ್ಲಿ ಹಾವೇರಿ ಜಿಲ್ಲೆಯಲ್ಲಿ ಕೆಟ್ಟಿರುವ ರಸ್ತೆಗಳ ಫೋಟೊ ತೆಗೆದು ರಸ್ತೆ ಗ್ಯಾರಂಟಿ ಕೊಡುವಂತೆ ಆಂದೋಲನ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಏರ್ಪಡಿಸಿದ ಹಾವೇರಿ ನಗರ, ಗ್ರಾಮೀಣ, ಹತ್ತಿಮತ್ತೂರ ಮಂಡಲಗಳ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಯಾವಾಗ ಒಳ್ಳೆಯ ಕೆಲಸ ಮಾಡಲು ಸೇರುತ್ತೇವೆ ಅದೆ ಒಳ್ಳೆಯ ಗಳಿಗೆ. ಬುದ್ಧಿ ಮತ್ತು ಹೃದಯ ಯಾವಾಗ ಒಂದೇ ಸಮಯಕ್ಕೆ ಸೇರುತ್ತದೆ ಅದೆ ಅಮೃತ ಗಳಿಗೆ. ಈಗ ಹಾವೇರಿ ಬಿಜೆಪಿಗೆ ಅಮೃತ ಗಳಿಗೆ ಬಂದಿದೆ. ನೂತನ ಅಧ್ಯಕ್ಷರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಕೊಡುವ ಕೆಲಸ ನಿಷ್ಠೆಯಿಂದ ಮಾಡಿ ನಾವು ನಿಮಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತೇವೆ. ರಾಜಕೀಯವಾಗಿ ಪ್ರಮುಖ ಘಟ್ಟದಲ್ಲಿ ನಾವಿದ್ದೇವೆ. ಚುನಾವಣೆ ಇನ್ನೂ ಎರಡೂವರೆ ವರ್ಷ ಇದೆ. ಆದರೆ, ಯುದ್ಧದ ತಯಾರಿ ಶಾಂತಿಯ ಕಾಲದಲ್ಲಿ ಮಾಡಬೇಕು. ನಮ್ಮ ಪಕ್ಷವನ್ನು ಬೂತ್ ಮಟ್ಟದಲ್ಲಿ ತಯಾರಿ ಮಾಡುವ ಕಾಲ ಬಂದಿದೆ. ಸಕ್ರೀಯರಾದವರನ್ನು ಎಸ್ಸಿ, ಎಸ್ಟಿ, ರೈತರು, ಯುವಕರು, ಮಹಿಳೆಯರ ಘಟಕ ಮಾಡಬೇಕು. ಏಳು ಘಟಕ ಮಾಡಿದರೆ ಸುಮಾರು ಎಪ್ಪತ್ತು ಜನರಾಗುತ್ತಾರೆ. ಬೂತ್ ಪದಾಧಿಕಾರಿಗಳ ಆಯ್ಕೆಯನ್ನು ಪ್ರಾಮಾಣಿಕವಾಗಿ ಮಾಡಬೇಕು. ಎಲ್ಲ ಬೂತ್‌ಗಳಿಗೆ ಹೋಗಿ ಹಿರಿಯುರು ಯುವಕರನ್ನು ಸೇರಿಸಿ ಆಯ್ಕೆ ಮಾಡಬೇಕು ಎಂದು ಸಲಹೆ ನೀಡಿದರು.
ಸರ್ಕಾರದ ವಿರುದ್ಧ ಆಂದೋಲನ: ರಾಜ್ಯ ಮಟ್ಟದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಹೋರಾಟ ಮಾಡಬೇಕು. ಮೂರು ಅಧ್ಯಕ್ಷರು ಮನೆ, ಮಠ ಮರೆಯಬೇಕು. ನಾವು ನೀವು ಸೇರಿ ಹೋರಾಟ ಮಾಡೋಣ, ಸುದೀರ್ಘವಾದ ಹೋರಾಟ ಮಾಡಲು ಅವಕಾಶ ಇದೆ. ರೈತರಿಗೆ ಬೇಕಾದ ರಸ್ತೆ, ತಾಲೂಕು ಹಾಗೂ ಜಿಲ್ಲಾ ರಸ್ತೆಗಳ ಅಭಿವೃದ್ಧಿಗೆ ಹೋರಾಟ ಮಾಡಬೇಕು. ಎಲ್ಲವನ್ನು ಸಾಮಾಜಿಕ ಜಾಲತಾಣ ಮಾಧ್ಯಮಗಳಲ್ಲಿ ಹಾಕಬೇಕು ಟೀಕೆ ಬಂದಾಗ, ವಿರೋಧ ಬಂದಾಗ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಅರ್ಥ. ಇದಕ್ಕೆ ಪೂರಕವಾಗಿ ಜಿಲ್ಲಾ ಪದಾಧಿಕಾರಿಗಳು ಪೂರಕವಾಗಿ ಮತ್ತು ಮಂಡಲ ಪದಾಧಿಕಾರಿಗಳು ಒಂದು ವಾರದಲ್ಲಿ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಶಿವರಾಜ ಸಜ್ಜನ, ಮುಖಂಡರಾದ ಗವಿಸಿದ್ದಪ್ಪ ದ್ಯಾಮಣ್ಣವರ, ಎನ್.ಎಂ.ಈಟೇರ, ಡಿ.ಎಸ್.ಮಾಳಗಿ, ಮುತ್ತಣ್ಣ ಯಲಿಗಾರ, ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಮಾರುತಿ ಗೊರವರ, ಕಿರಣ ಕೊಳ್ಳಿ, ಬಸವರಾಜ ಕೋಳಿವಾಡ, ನಿಕಟ ಪೂರ್ವ ಅಧ್ಯಕ್ಷರಾದ ಗಿರೀಶ ತುಪ್ಪದ, ಬಸವರಾಜ ಕಳಸೂರ, ಪ್ರಧಾನ ಕಾರ್ಯದರ್ಶಿಗಳಾದ ನಂಜುಡೇಶ ಕಳ್ಳೇರ, ಸಂತೋಷ ಆಲದಕಟ್ಟಿ ಸೇರಿದಂತೆ ಪ್ರಮುಖರು, ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.
ಎಲ್ಲಾ ತಾಲೂಕುಗಳಲ್ಲಿ ಎಲ್ಲ ವರ್ಗದವರಿಗೆ ಸರಿಯಾದ ಪ್ರಾತಿನಿಧ್ಯ ದೊರೆಯುವಂತೆ ಮಾಡಬೇಕು. ಎಸ್‌ಸಿ, ಎಸ್‌ಟಿ, ಒಬಿಸಿ, ಮಹಿಳಾ ಮೋರ್ಚಾ, ರೈತ ಮೋರ್ಚಾಗಳನ್ನು ಬಲಪಡಿಸಬೇಕು. ಜಿಲ್ಲಾ ಮಟ್ಟದಲ್ಲಿ ಮೋರ್ಚಾಗಳು ಗಟ್ಟಿಯಾದರೆ ತಾಲೂಕು ಮೋರ್ಚಾಗಳು ಗಟ್ಟಿಯಾಗುತ್ತವೆ. ನಾವು ಪ್ರತಿಯೊಂದು ಜಿಲ್ಲಾ ಪಂಚಾಯತಿಗಳಿಗೆ ಬರುತ್ತೇವೆ ಅಲ್ಲಿನ ಸಮಸ್ಯೆ ನೋಡಿ ಪ್ರತಿಭಟನೆ ಮಾಡುತ್ತೇವೆ. ಮುಂದಿನ ಮೂರು ತಿಂಗಳು ನಿರಂತರ ಈ ರೀತಿ ಕಾರ್ಯಕ್ರಮ ಮಾಡುವ ಮೂಲಕ ರಾಜ್ಯದಲ್ಲಿ ಹಾವೇರಿ ಜಿಲ್ಲಾ ಘಟಕ ಮಾದರಿಯಾಗಲಿ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ನೂತನವಾಗಿ ನೇಮಕಗೊಂಡ ಮಂಡಲ ಅಧ್ಯಕ್ಷರು ತಮ್ಮ ತಮ್ಮ ಬೂತ್, ಮಂಡಲ ವ್ಯಾಪ್ತಿಯಲ್ಲಿ ಪಕ್ಷವನ್ನು ಮತ್ತಷ್ಟು ಬಲಗೊಳಿಸಬೇಕು. ಪಕ್ಷ ಸಂಘಟನೆಗೆ ನಮ್ಮ ಗುರಿ ಎಂದು ಅರಿತುಕೊಳ್ಳಬೇಕು. ಪಕ್ಷದ ಹಿರಿಯ ನಾಯಕರು, ಮುಖಂಡರುಗಳ ವಿಶ್ವಾಸ ತೆಗೆದುಕೊಂಡು ಬರುವ ಎಲ್ಲಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು. ಕೇಂದ್ರ ಸರಕಾರ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ಕೆಲಸ ಮಾಡಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.