ಚುನಾವಣೆಗೆ ಸ್ಪರ್ಧಿಸಲು ಯಾರಾದರೂ ಸಶಕ್ತ ಯುವಕರು ಮುಂದೆ ಬಂದರೆ ಇಂದೇ ಖುರ್ಚಿ ಮುಂದೆ ಇಟ್ಟು ಹೋಗುತ್ತೇನೆ. ಯಾರಿಗಾದರೂ ಆ ದಮ್ ಇದ್ದರೆ ಮುಂದೆ ಬನ್ನಿ ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು.
ಭಟ್ಕಳ (ಮಾ.06): ಚುನಾವಣೆಗೆ ಸ್ಪರ್ಧಿಸಲು ಯಾರಾದರೂ ಸಶಕ್ತ ಯುವಕರು ಮುಂದೆ ಬಂದರೆ ಇಂದೇ ಖುರ್ಚಿ ಮುಂದೆ ಇಟ್ಟು ಹೋಗುತ್ತೇನೆ. ಯಾರಿಗಾದರೂ ಆ ದಮ್ ಇದ್ದರೆ ಮುಂದೆ ಬನ್ನಿ ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು. ಬೆಳಕೆಯ ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಿತ್ತೂರು-ಖಾನಾಪುರ ಎಲ್ಲಿದೆ ಎಂದು ನಕಾಶೆಯಲ್ಲಿ ಹುಡುಕಲು ಗೊತ್ತಿಲ್ಲದವರು ಸಹ ರಾಜಕಾರಣದ ಬಗ್ಗೆ ಏನೇನೋ ಮಾತನಾಡುತ್ತಿದ್ದಾರೆ. ಚುನಾವಣೆಯನ್ನು ಆಷಾಢಭೂತಿತನದಿಂದ ಗೆಲ್ಲಲಾಗದು. ಪ್ರಜಾಪ್ರಭುತ್ವದಲ್ಲಿ ಚುನಾವಣೆ ಒಂದು ಯುದ್ಧ ಇದ್ದಂತೆ. ಚುನಾವಣೆಯಲ್ಲಿ ಒಂದೊಂದು ಮತಕ್ಕೂ ಪ್ರಾಮುಖ್ಯತೆ ಇದೆ.
ಸೋಲಲು ಒಂದೇ ಮತ ಸಾಕು. ನಾಲ್ಕು ಮತ ಹಾಕುವ ಸಾಮರ್ಥ್ಯ ಇಲ್ಲ ಎಂದು ಯಾವುದೇ ಕಾರ್ಯಕರ್ತರನ್ನು, ಮುಖಂಡರನ್ನು ಹೀಯಾಳಿಸಬೇಡಿ. ಅವರವರ ಸಾಮರ್ಥ್ಯ ಅವರವರಲ್ಲಿರುತ್ತದೆ. ಉಡಾಫೆಯ ಮಾತುಗಳೇ ನಮ್ಮನ್ನು ಸೋಲಿಸಿವೆ ಎಂದು ಎಚ್ಚರಿಸಿದರು. ಸಣ್ಣ ಮನಸ್ಸಿನ, ತುಂಡಾದ ಮನಸ್ಸಿನ ವ್ಯಕ್ತಿಗಳು ದೊಡ್ಡವರಾಗಲು, ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ. ಮುಂದಿನ ವಿಧಾನಸಭೆ ಚುನಾವಣೆ ಬಿಜೆಪಿಯದ್ದಾಗಬೇಕು. ನಾನು ರಾಜಕೀಯದಲ್ಲಿ ಶಾಶ್ವತ ಅಲ್ಲ. ನಾನು ದೇವಸ್ಥಾನದಲ್ಲೇ ಹೇಳುತ್ತೇನೆ. ನಾನು ರಾಜಕಾರಣಿಯಾಗಿ ಹುಟ್ಟಿಯೂ ಇಲ್ಲ, ರಾಜಕಾರಣಿಯಾಗಿ ಸಾಯುವುದಿಲ್ಲ ಎಂದು ಖಡಕ್ ಆಗಿ ಹೇಳಿದ ಅನಂತಕುಮಾರ ಹೆಗಡೆ, ರಾಜಕೀಯ ಬೇಡ, ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದೆ.
ದಿನಬೆಳಗಾದರೆ ಪ್ರಧಾನಿ ಮೋದಿ ಬಗ್ಗೆ ಸಿದ್ದರಾಮಯ್ಯ ಟೀಕೆ ಏಕೆ?: ಎಚ್.ಡಿ.ದೇವೇಗೌಡ
ಆದರೆ ಭಟ್ಕಳ ಸೇರಿದಂತೆ ಎಲ್ಲ ಕಡೆಗಳಿಂದಲೂ ರಾಜಕೀಯದಲ್ಲಿ ಮುಂದುವರಿಯಬೇಕು ಎನ್ನುವ ಒತ್ತಡ ಬಂದಿದ್ದರಿಂದ ಮತ್ತೆ ಸಕ್ರಿಯವಾಗಬೇಕಾಯಿತು ಎಂದು ತಿಳಿಸಿದರು. ಬಿಜೆಪಿಯಿಂದ ಮಾತ್ರ ದೇಶದ ಭದ್ರತೆ, ಸುಭಿಕ್ಷೆ, ಅಭಿವೃದ್ಧಿ ಎಲ್ಲವೂ ಸಾಧ್ಯ. ಬಿಜೆಪಿ ಜನತೆಗೆ ಕೊಟ್ಟ ಭರವಸೆ ಈಡೇರಿಸಿದೆ. ಹೀಗಾಗಿ ದೇಶದ ಅನಿವಾರ್ಯತೆ ಬಿಜೆಪಿಯಾಗಿದೆ. ದೇಶ ಮತ್ತಷ್ಟು ಅಭಿವೃದ್ಧಿ ಆಗಲು ಬಿಜೆಪಿ ಬೇಕೇಬೇಕು. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಿ ಎಂದು ಹೇಳಿದರು. ಸಭೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಎಸ್. ಹೆಗಡೆ, ಮಾಜಿ ಶಾಸಕ ಸುನೀಲ ನಾಯ್ಕ, ಮಂಡಳಾಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ನಿಕಟಪೂರ್ವ ಅಧ್ಯಕ್ಷ ಸುಬ್ರಾಯ ದೇವಡಿಗ ಮುಂತಾದವರಿದ್ದರು.