ಟ್ವೀಟ್ ಡಿಲೀಟ್ ಮಾಡುವಂತೆ ಸಂಸದ ಹೆಗಡೆಗೆ ಟ್ವಿಟರ್ ಎಚ್ಚರಿಕೆ!

By Kannadaprabha NewsFirst Published Apr 27, 2020, 8:47 AM IST
Highlights

ಟ್ವೀಟರ್‌ ಖಾತೆ ಸ್ಥಗಿತ: ಸಂಸದ ಹೆಗಡೆ ಫೇಸ್‌ಬುಕ್‌ನಲ್ಲಿ ಕಿಡಿ| ಡಿಲೀಟ್‌ ಮಾಡಿದರೆ ಸಕ್ರಿಯ: ಟ್ವೀಟರ್‌| ತೆಗೆವ ಪ್ರಶ್ನೆಯೇ ಇಲ್ಲ: ಅನಂತ್‌ ಕುಮಾರ್‌

 ಕಾರವಾರ(ಏ.27): ತಬ್ಲೀಘಿಗಳ ಬಗ್ಗೆ ಆಕ್ಷೇಪಾರ್ಹ ಬರಹ ಪ್ರಕಟಿಸಲಾಗಿದೆ ಎಂಬ ಆರೋಪದ ಮೇರೆಗೆ ಸಂಸದ ಬಿಜೆಪಿಯ ಫೈರ್‌ಬ್ರಾಂಡ್‌ ಸಂಸದ, ಮಾಜಿ ಕೇಂದ್ರ ಸಚಿವ ಅನಂತ್‌ ಕುಮಾರ್‌ ಹೆಗಡೆ ಅವರ ಟ್ವೀಟರ್‌ ಖಾತೆ ಇದೀಗ ಬ್ಲಾಕ್‌ ಆಗಿದ್ದು, ಟ್ವಿಟರ್‌ ಕಂಪನಿಯ ಈ ನಿರ್ಧಾರಕ್ಕೆ ಹೆಗಡೆ ಫೇಸ್‌ಬುಕ್‌ನಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೆಹಲಿಯ ನಿಜಾಮುದ್ದೀನ್‌ನಲ್ಲಿ ನಡೆದ ತಬ್ಲೀಘಿ ಜಮಾತ್‌ ಸಭೆ ವಿರುದ್ಧ ಅನಂತಕುಮಾರ್‌ ಹೆಗಡೆ ಏ.8ರಿಂದ ಸರಣಿ ಬರಹ ಆರಂಭಿಸಿದ್ದರು. ತಬ್ಲೀಘಿಗಳು ಕೊರೋನಾ ಸೋಂಕು ಹರಡುತ್ತಿದ್ದಾರೆ ಎಂಬ ಅರ್ಥದಲ್ಲಿ ಬರಹ ಪ್ರಕಟಿಸಿದ್ದರು. ಇದೇ ಕಾರಣಕ್ಕೆ ಅವರ ಖಾತೆಯನ್ನು ಬ್ಲಾಕ್‌ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಕೊರೋನಾ ಕೂಡ ಅಸ್ತ್ರವಾಯಿತೆ? ತಬ್ಲಿಘೀ ಕುರಿತು ಸಂಸದ ಕಿಡಿ

ಟ್ವೀಟರ್‌ ಭಾರತ ವಿರೋಧಿ:

ಇನ್ನು ಈ ಟ್ವೀಟ್‌ಗಳನ್ನು ತೆಗೆದು ಹಾಕಿದಲ್ಲಿ ಮಾತ್ರ ಖಾತೆಯನ್ನು ಮತ್ತೆ ಸಕ್ರಿಯಗೊಳಿಸುವುದಾಗಿ ಟ್ವೀಟರ್‌ ಸಂಸ್ಥೆ ತಿಳಿಸಿದ್ದು, ಅನಂತಕುಮಾರ್‌ ಹೆಗಡೆ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ತಬ್ಲೀಘಿ ಜಮಾತ್‌ ವಿರುದ್ಧದ ಟ್ವೀಟ್‌ ನೆಪವಾಗಿಸಿಕೊಂಡು ಅಕೌಂಟ್‌ ಲಾಕ್‌ ಮಾಡಲಾಗಿದೆ. ಟ್ವಿಟರ್‌ನ ರಾಷ್ಟ್ರ ವಿರೋಧಿ ನಡೆಯನ್ನು ನಾನು ಖಂಡಿಸುತ್ತಿದ್ದು, ಯಾವುದೇ ಕಾರಣಕ್ಕೂ ಟ್ವೀಟ್‌ ತೆಗೆದು ಹಾಕುವ ಪ್ರಶ್ನೆಯೇ ಇಲ್ಲ ಎಂದು’ ಸವಾಲು ಹಾಕಿದ್ದಾರೆ. ಈ ಸಂಬಂಧ ಫೇಸ್‌ಬುಕ್‌ನಲ್ಲಿ ಹೆಗಡೆ ಪೋಸ್ಟ್‌ ಕೂಡ ಹಾಕಿದ್ದು, ‘ಟ್ವಿಟರ್‌ ಭಾರತ ವಿರೋಧಿ ನೀತಿ ಅನುಸರಿಸುತ್ತಿದೆ. ದೇಶವನ್ನು ಒಡೆಯುವ ಟ್ವೀಟ್‌ಗಳ ಪ್ರಚಾರ ಮಾಡುವ ಉದ್ಯಮವಾಗುತ್ತಿದೆ ಎಂದು ಆರೋಪಿದ್ದಾರೆ.

'ಘಟಾನುಘಟಿಗಳು, ಮುತ್ಸದ್ಧಿಗಳು, ಇಸ್ಲಾಂ ಅಪಾಯ ಅಂದಾಜಿಸುವಲ್ಲಿ ವಿಫಲರಾದರೇ?' ಹೆಗಡೆ ಪ್ರಶ್ನೆ ಒಳಾರ್ಥ!

ಕೆಲವು ದಿನಗಳ ಹಿಂದೆ ಗುರುಪಟವಂತ್‌ ಸಿಂಗ್‌ ಪನ್ನೂನ್‌ ಎಂಬಾತನ ಟ್ವಿಟ್ಟರ ಖಾತೆಯಿಂದ ದೇಶ ವಿರೋಧಿ ಟ್ವೀಟ್‌ ಹಾಕಲಾಗಿತ್ತು. ಪಂಜಾಬ… ರಾಜ್ಯವನ್ನು ಭಾರತದಿಂದ ಸ್ವತಂತ್ರಗೊಳಿಸಿ, ಖಾಲೀಸ್ತಾನ್‌ ಎಂಬ ಪ್ರತ್ಯೇಕ ರಾಷ್ಟ್ರವನ್ನಾಗಿಸಬೇಕೆಂದು ಬರೆಯಲಾಗಿತ್ತು. ಟ್ವೀಟರಿಗೆ ಹಣ ಪಾವತಿಸಿ ದೇಶವಿರೋಧಿ ವಿಚಾರವನ್ನು ಜಾಹೀರಾತು ಹಾಕಿಸಿದ್ದರು ಗುರುಪಟವಂತ್‌ ಸಿಂಗ್‌ ಎಂದು ಆರೋಪಿಸಿರುವ ಸಂಸದ ಹೆಗಡೆ, ಈ ವಿಚಾರವನ್ನು ಪ್ರಧಾನಿ ಮತ್ತು ಗೃಹ ಸಚಿವರ ಗಮನಕ್ಕೆ ತಂದಿರುವುದಾಗಿ ತಿಳಿಸಿದ್ದಾರೆ.

ಟ್ವಿಟರ್‌ನಲ್ಲಿ ವೆರಿಫೈಡ್‌ ವಿಐಪಿ ಖಾತೆ ಹೊಂದಿರುವ ಅನಂತ ಕುಮಾರ ಹೆಗಡೆ, 2016ರಿಂದ ಸಕ್ರಿಯರಾಗಿದ್ದು, 74,300 ಫಾಲೋವರ್ಸ್‌ ಹೊಂದಿದ್ದಾರೆ.

click me!