ರಾಜ್ಯಾದ್ಯಂತ ವಿಜಯ ಸಂಕಲ್ಪ ಯಾತ್ರೆಯ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಜೆಪಿಗೆ ಬೆಂಬಲ ವ್ಯಕ್ತಪಡಿಸಿದ್ದು, ಹೆಚ್ಚಿನ ಸೀಟುಗಳನ್ನು ಗೆಲ್ಲುವ ಮೂಲಕ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದ ಯಡಿಯೂರಪ್ಪ.
ಚಿಕ್ಕೋಡಿ(ಮಾ.09): ಬರುವ ಚುನಾವಣೆಯಲ್ಲಿ ಚಿಕ್ಕೋಡಿ-ಸದಲಗಾ ಸೇರಿ 140ಕ್ಕೂ ಹೆಚ್ಚಿನ ಸ್ಥಾನಗಳಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು. ತಾಲೂಕಿನ ಮಾಂಜರಿ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ವಿಜಯ ಸಂಕಲ್ಪಯಾತ್ರೆ ಸಮಾರಂಭವನ್ನುದ್ದೇಶಿ ಮಾತನಾಡಿದ ಅವರು, ರಾಜ್ಯಾದ್ಯಂತ ವಿಜಯ ಸಂಕಲ್ಪ ಯಾತ್ರೆಯ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಜೆಪಿಗೆ ಬೆಂಬಲ ವ್ಯಕ್ತಪಡಿಸಿದ್ದು, ಹೆಚ್ಚಿನ ಸೀಟುಗಳನ್ನು ಗೆಲ್ಲುವ ಮೂಲಕ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು.
ಈಗಾಗಲೇ ತ್ರೀಪುರಾ, ನಾಗಾಲ್ಯಾಂಡ್ ರಾಜ್ಯಗಳಲ್ಲಿ ಬಿಜೆಪಿ ಸ್ಪಷ್ಟಬಹುಮತದೊಂದಿಗೆ ಗೆಲುವು ಸಾಧಿಸಿದ್ದು, ಉತ್ತರ ಪ್ರದೇಶದಲ್ಲಿ ನಡೆದ ಚುನಾವಣೆಯಲ್ಲಿ ಹಲವು ನಾಯಕರು ತಮ್ಮ ಠೇವಣಿಗಳನ್ನು ಕಳೆದುಕೊಂಡಿದ್ದಾರೆ ಎಂದು ತಿಳಿಸಿದರು.
ಶಶಿಕಲಾ ಜೊಲ್ಲೆ ನಿಪ್ಪಾಣಿಯ ಬಿಜೆಪಿ ಅಭ್ಯರ್ಥಿ: ಮಾಜಿ ಡಿಸಿಎಂ ಲಕ್ಷ್ಮಣ ಸವದಿ
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿ, ಪ್ರವಾಹಕ್ಕೆ ತುತ್ತಾಗಿ ಮನೆ ಕಳೆದುಕೊಂಡ ಕೃಷ್ಣಾ ತೀರದ ಜನತೆಗೆ ತಲಾ .5 ಲಕ್ಷಗಳ ಅನುದಾನ, ರೈತರಿಗೆ ಕೃಷಿ ಸಮ್ಮಾನ ಯೋಜನೆಯಡಿ ತಲಾ .10 ಸಾವಿರ ಹಾಗೂ ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಶಿಷ್ಯವೇತನ ಮಂಜೂರು ಮಾಡಿದ ಏಕೈಕ್ ಪಕ್ಷ ಬಿಜೆಪಿ ಅದಕ್ಕಾಗಿ ನಾವು ಬಿಜೆಪಿ ಸಂಕಲ್ಪಯಾತ್ರೆಯ ಮೂಲಕ ತಮ್ಮ ಮುಂದೆ ನಮ್ಮ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಮತ್ತೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರುವಂತೆ ಮಾಡಿ ಎಂದು ಕೇಳಲು ಬಂದಿದ್ದೇವೆ ಎಂದರು.
ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ, ಚಿಕ್ಕೋಡಿ ತಾಲೂಕಿನ ಮಾಂಜರಿ, ಇಂಗಳಿ ಹಾಗೂ ಯಡೂರ ಗ್ರಾಮಗಳಲ್ಲಿ ಪ್ರವಾಹ ಸಂದರ್ಭದಲ್ಲಿ ಮನೆ ಕಳೆದುಕೊಂಡ 3,546 ಜನ ಫಲಾನುಭವಿಗಳಿಗೆ ತಲಾ .5 ಲಕ್ಷಗಳನ್ನು ಬಿಡುಗಡೆ ಮಾಡಿದೆ. ಡಿಗ್ಗೆವಾಡಿ ಬ್ಯಾರೇಜ್‌ಗೆ .70 ಕೋಟಿ, ಕಲ್ಲೋಳ-ಯಡೂರ ಬ್ಯಾರೇಜಿಗೆ .35 ಕೋಟಿ ಹಾಗೂ ಕಳೆದ ಹತ್ತಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮಹಾಲಕ್ಷ್ಮೇ ಏತ ನೀರಾವರಿ ಯೋಜನೆಗೆ .203 ಕೋಟಿಗಳನ್ನು ಮೊದಲನೇ ಹಂತದ ಕಾಮಗಾರಿಗೆ ಬಿಡುಗಡೆ ಮಾಡಿದೆ ಎಂದರು.
ಸಚಿವೆ ಶಶಿಕಲಾ ಜೊಲ್ಲೆ, ಗೋವಿಂದ ಕಾರಜೋಳ, ಶಾಸಕರಾದ ರಮೇಶ ಜಾರಕಿಹೊಳಿ, ಮಾಜಿ ರಾಜ್ಯಸಭೆ ಸದಸ್ಯ ಡಾ.ಪ್ರಭಾಕರ ಕೋರೆ, ಲಕ್ಷ್ಮಣ ಸವದಿ, ರವಿಕುಮಾರ, ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಅರುಣ ಶಹಾಪುರ, ಶಶಿಕಾಂತ ನಾಯಕ್, ಮಹಾಂತೇಶ ಕವಟಗಿಮಠ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ರಾಜೇಶ ನೇರ್ಲಿ, ಉಜ್ವಲಾ ಬಡವನಾಚೆ, ಶಾಂಭವಿ ಅಶ್ವಥಪೂರ, ಸತೀಶ ಅಪ್ಪಾಜಿಗೋಳ, ದುಂಡಪ್ಪ ಬೆಂಡವಾಡೆ ಸೇರಿದಂತೆ ಬಿಜೆಪಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸುರೇಶ ಉಕ್ಕಲಿ ನಿರೂಪಿಸಿದರು. ಸಂಜಯ ಪಾಟೀಲ ವಂದಿಸಿದರು.
ನಾನು ಸಿಎಂ ಆಗಿದ್ದಾಗ ಕೃಷ್ಣಗೆ ಪ್ರವಾಹ ಬಂದಾಗ ಯಾರ ಮನೆ ಬಳಿ ನೀರು ಬಂದಿದೆ ಅಂತಹವರಿಗೆ ತಕ್ಷಣದಿಂದ ಜಾರಿಗೆಯಾಗುವಂತೆ .10 ಸಾವಿರಗಳನ್ನು ಹಾಗೂ ಮನೆ ಕಳೆದುಕೊಂಡವರಿಗೆ ಪ್ರಥಮ ಬಾರಿಗೆ ಎನ್‌ಡಿಆರ್‌ಎಫ್ ಮಾರ್ಗಸೂಚಿಗೂ ಮೀರಿ .5 ಲಕ್ಷಗಳ ಅನುದಾನ ಬಿಡುಗಡೆ ಮಾಡಿದ್ದೇನೆ. ಬರುವ 25ಕ್ಕೆ ನರೇಂದ್ರ ಮೋದಿಯವರು ದಾವಣಗೆರೆಗೆ ಆಗಮಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಈ ಭಾಗದಿಂದ ಪಾಲ್ಗೊಳ್ಳಿ ಅಂತ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿ ಕಾಂಗ್ರೆಸ್ ಪಕ್ಷ ಅವಮಾನ ಮಾಡಿದೆ. ಆದರೆ, ಸಾಮಾಜಿಕ ನ್ಯಾಯದ ಪರ ಬಿಜೆಪಿ ಕೆಲಸ ಮಾಡಿದೆ. ಆದ್ದರಿಂದ ರಾಜ್ಯದಲ್ಲಿ ಬದಲಾವಣೆಯನ್ನು ಚಿಕ್ಕೋಡಿ-ಸದಲಗಾ ಕ್ಷೇತ್ರದಿಂದ ಆಗಲಿ ಅಂತ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
17 ಜನರಲ್ಲೂ ಯಾರೊಬ್ಬರೂ ಪಕ್ಷ ಬಿಟ್ಟು ಹೋಗುವುದಿಲ್ಲ
ಕಾಂಗ್ರೆಸ್‌ನವರಿಗೆ ಸೋಲಿನ ಭೀತಿ ಕಾಡುತ್ತಿದೆ. ಕಾಂಗ್ರೆಸ್‌ನಿಂದ ಬರುವವರಿಗೆ ಸ್ವಾಗತ, ಹೋಗುವವರನ್ನು ಗೌರವಯುತವಾಗಿ ಕಳುಹಿಸಿಕೊಡುತ್ತೇವೆ. 17 ಜನರಲ್ಲೂ ಯಾರೊಬ್ಬರೂ ಪಕ್ಷ ಬಿಟ್ಟು ಹೋಗುವುದಿಲ್ಲ. ಅಧಿಕಾರಕ್ಕೆ ಬರುವ ಪಕ್ಷ ಬಿಟ್ಟು ಏಕೆ ಹೋಗ್ತಾರೆ? ಅವತ್ತಿನಿಂದ ಇವತ್ತಿನವರೆಗೂ ಪಕ್ಷ ಕಟ್ಟಲು ಬೆನ್ನೆಲುಬಾಗಿ ಸಹಕಾರ ನೀಡಿದ್ದಾರೆ. ಆ ತರ ಯಾರೊಬ್ಬರೂ ಸಹ ಪಕ್ಷ ಬಿಟ್ಟು ಹೋಗಲ್ಲ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸ್ಪಷ್ಟನೆ ನೀಡಿದರು.
ತಾಲೂಕಿನ ಮಾಂಜರಿ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ವಿಜಯ ಸಂಕಲ್ಪ ಯಾತ್ರೆಗೂ ಮುನ್ನ ಅಂಕಲಿ ಗ್ರಾಮದ ಮಾಜಿ ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ ನಿವಾಸದ ಆವರಣದಲ್ಲಿ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷದ ಹಿರಿಯ ಮುಖಂಡ ಮಾಜಿ ಸಚಿವ ವಿ.ಸೋಮಣ್ಣ ಅವರು ಪಕ್ಷ ಬಿಡ್ತಾರೆ ಅನ್ನೋದರಲ್ಲಿ ಸತ್ಯಾಂಶ ಇಲ್ಲಾ. ಬಿಜೆಪಿ ಪಕ್ಷದಿಂದ ಕಾಂಗ್ರೆಸ್‌ಗೆ ಸಚಿವರು, ಶಾಸಕರು ಸೇರ್ತಾರೆ ಎಂಬ ವಿಚಾರ, ನನ್ನ ಪ್ರಕಾರ ಆ ರೀತಿ ಯಾವುದಕ್ಕೂ ಅವಕಾಶ ಇಲ್ಲಾ. ಯಾರು ಪ್ರಯತ್ನ ಮಾಡುತ್ತಿಲ್ಲ. ಇಲ್ಲಿಂದ ಹೋದ ಮೇಲೆ ಸೋಮಣ್ಣ ಅವರನ್ನು ಕರೆದು ಮಾತನಾಡುತ್ತೇನೆ ಎಂದು ತಿಳಿಸಿದರು.
ಬಿಜೆಪಿ ಪಕ್ಷದಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇಲ್ಲ, ಎಲ್ಲರೂ ಒಟ್ಟಾಗಿದ್ದೇವೆ. ವಿ.ಸೋಮಣ್ಣ, ಡಿ.ಕೆ.ಶಿವಕುಮಾರ್ ಭೇಟಿಯಾಗಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆಸಿದ ಅವರು, ಡಿ.ಕೆ.ಶಿವಕುಮಾರ್ ಅವರು ಎಲ್ಲರನ್ನೂ ಕರೆದು ಮಾತನಾಡುವುದು ನಿರಂತರವಾಗಿ ಮಾಡುತ್ತಿದ್ದಾರೆ. ಆದರೆ, ಅವರ ಮಾತಿಗೆ ನಮ್ಮ ನಾಯಕರು ಬಲಿಯಾಗುವುದಿಲ್ಲ, ಪಕ್ಷ ಬಿಟ್ಟು ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸೋಲಿನ ಭೀತಿಯಿಂದ ರಾಜ್ಯಕ್ಕೆ ಪದೇ ಪದೇ ಮೋದಿ, ಅಮಿತ್ ಶಾ ಬರ್ತಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯನವರು ಹಾಗೇ ಹೇಳಲು ತೊಂದರೆ ಇಲ್ಲ. ಅವರು ಬರುತ್ತಿರುವುದರಿಂದ ಕಾಂಗ್ರೆಸ್‌ಗೆ ಸೋಲಿನ ಭೀತಿ ಜಾಸ್ತಿ ಆಗಿದೆ ಅನ್ನೋದು ನಿಜ. ಅದನ್ನ ಅವರೇ ಒಪ್ಪಿಕೊಂಡಿದ್ದಾರೆ. ಅದಕ್ಕೆ ಸಂತೋಷ ಪಡುತ್ತೇನಿ ಎಂದರು.
ರಾಹುಲ್ ಗಾಂಧಿ ಪಾದಯಾತ್ರೆಯ ಮ್ಯಾಜಿಕ್ ನಡೆದಿಲ್ಲ: ಸಚಿವ ಗೋವಿಂದ ಕಾರಜೋಳ
ಹಾಲಿ 7 ಜನ ಶಾಸಕರಿಗೆ ಟಿಕೆಟ್ ಸಿಗಲ್ಲ ಎಂಬ ಮಾತು ಚರ್ಚೆಯಲ್ಲಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಐದಾರು ಶಾಸಕರಿಗೆ ಟಿಕೆಟ್ ಸಿಗಲ್ಲ ಅನ್ನೋ ವಾತಾವರಣ ಇದೆ ಅಂತಾ ಹೇಳಿದ್ದೇನೆ. ಅಂತಿಮವಾಗಿ ಏನೇ ತೀರ್ಮಾನ ಮಾಡುವುದಾರೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಆ ರೀತಿ ಆಗಬಹುದು ಅಂತಾ ನಾನು ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಗುಜರಾತ್ ಮಾದರಿಯಲ್ಲಿ ಟಿಕೆಟ್ ಹಂಚಿಕೆ ಆಗುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿ, ನಾನು ಆ ರೀತಿ ಊಹಾಪೋಹಗಳಿಗೆ ಉತ್ತರ ಕೊಡುವುದಿಲ್ಲ. ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದರು. ಗೋಷ್ಠಿಯಲ್ಲಿ ಡಾ.ಪ್ರಭಾಕರ ಕೋರೆ, ಸಚಿವೆ ಶಶಿಕಲಾ ಜೊಲ್ಲೆ, ಗೋವಿಂದ ಕಾರಜೋಳ, ಅಣ್ಣಾಸಾಹೇಬ್ ಜೊಲ್ಲೆ, ಲಕ್ಷ್ಮಣ ಸವದಿ ಉಪಸ್ಥಿತರಿದ್ದರು.