ಕಾಂಗ್ರೆಸ್ ಮೇಲ್ಮನೆ ಟಿಕೆಟ್‌ಗೆ ಭಾರೀ ಲಾಬಿ: 2 ಸ್ಥಾನಕ್ಕೆ ಡಜನ್‌ ಮಂದಿ ರೇಸ್‌ನಲ್ಲಿ!

By Kannadaprabha News  |  First Published May 26, 2020, 2:19 PM IST

ಕಾಂಗ್ರೆಸ್‌ ಮೇಲ್ಮನೆ ಟಿಕೆಟ್‌ಗೆ ಭಾರಿ ಲಾಬಿ| ಯಾರಿಗೆ ಟಿಕೆಟ್‌?- ಲಭ್ಯ 2 ಸ್ಥಾನಕ್ಕೆ ಅಲ್ಪಸಂಖ್ಯಾತರು, ಹಿಂದುಳಿದವರ ಒತ್ತಡ| ನಜೀರ್‌, ಜಬ್ಬಾರ್‌, ನಿವೇದಿತ್‌, ಐವಾನ್‌ ರೇಸ್‌ನಲ್ಲಿ


ಬೆಂಗಳೂರು(ಮೇ.26): ವಿಧಾನಸಭೆಯಿಂದ ವಿಧಾನಪರಿಷತ್ತಿನ ಏಳು ಸ್ಥಾನಗಳಿಗೆ ಜೂನ್‌ನಲ್ಲಿ ನಡೆಯಲಿರುವ ಚುನಾವಣೆಗೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ಗಳಿಸಲು ಭರ್ಜರಿ ಲಾಬಿ ಆರಂಭವಾಗಿದೆ.

ವಿಧಾನಸಭೆಯಲ್ಲಿ 68 ಸ್ಥಾನ ಬಲ ಹೊಂದಿರುವ ಕಾಂಗ್ರೆಸ್‌ ಈ ಸ್ಥಾನಗಳ ಪೈಕಿ ಎರಡು ಸ್ಥಾನಗಳನ್ನು ಸುಲಭವಾಗಿ ಗೆಲ್ಲಬಹುದು. 34 ಸದಸ್ಯ ಬಲ ಹೊಂದಿರುವ ಜೆಡಿಎಸ್‌ ಜತೆ ಹೊಂದಾಣಿಕೆಯಾದರೆ ಮೂರನೇ ಸ್ಥಾನಕ್ಕೂ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಬಹುದು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಗೆಲ್ಲಬಲ್ಲ ಎರಡು ಸ್ಥಾನಗಳನ್ನು ತನ್ನ ಸಹಜ ಮತಬ್ಯಾಂಕ್‌ ವರ್ಗ ಎನಿಸಿದ ಅಲ್ಪಸಂಖ್ಯಾತ ಹಾಗೂ ಹಿಂದುಳಿದವರಿಗೆ ನೀಡಲು ಈಗಾಗಲೇ ಪಕ್ಷದಲ್ಲಿ ತೀರ್ಮಾನವಾಗಿದೆ.

Tap to resize

Latest Videos

undefined

ಈ ತೀರ್ಮಾನದ ಹಿನ್ನೆಲೆಯಲ್ಲಿ ಡಜನ್‌ಗಟ್ಟಲೆ ಅಲ್ಪಸಂಖ್ಯಾತ ಹಾಗೂ ಹಿಂದುಳಿದ ನಾಯಕರು ಪರಿಷತ್ತಿಗೆ ಸ್ಥಾನ ಗಿಟ್ಟಿಸಲು ಹರಸಾಹಸ ಆರಂಭಿಸಿದ್ದಾರೆ.

ಅಲ್ಪಸಂಖ್ಯಾತರ ಕೋಟಾದಲ್ಲಿ ಆರೇಳು ಮಂದಿ ಲಾಬಿ ನಡೆಸುತ್ತಿದ್ದರೂ ಮಂಚೂಣಿಯಲ್ಲಿ ಇರುವವರು ಮಾಜಿ ವಿಧಾನ ಪರಿಷತ್‌ ಸದಸರಾದ ನಜೀರ್‌ ಅಹ್ಮದ್‌, ಅಬ್ದುಲ್‌ ಜಬ್ಬಾರ್‌, ನಿವೇದಿತ್‌ ಆಳ್ವ ಹಾಗೂ ಐವಾನ್‌ ಡಿಸೋಜಾ. ಈ ಪೈಕಿ ನಿವೇದಿತ್‌ ಆಳ್ವ ಹೆಸರು ಕೊಂಚ ಮುನ್ನಡೆಯಲ್ಲಿದೆ. ಮಾರ್ಗರೆಟ್‌ ಆಳ್ವ ಅವರ ಪುತ್ರರಾದ ನಿವೇದಿತ್‌ ಆಳ್ವ ನೇರವಾಗಿ ಹೈಕಮಾಂಡ್‌ನೊಂದಿಗೆ ಹೊಂದಿರುವ ಸಂಪರ್ಕದಿಂದಾಗಿ ಅವರ ಹೆಸರು ಕೊಂಚ ಬಲವಾಗಿ ಕೇಳಿಬರುತ್ತಿದೆ.

ನಿವೇದಿತ್‌ ಆಳ್ವ ಅವರ ಸಹೋದರ ನಿಖಿಲ್‌ ಆಳ್ವ ಎಐಸಿಸಿಯ ಸೋಷಿಯಲ್‌ ಮೀಡಿಯಾದ ಮುಖ್ಯಸ್ಥರಾಗಿರುವುದು ಹಾಗೂ ರಾಹುಲ್‌ ಗಾಂಧಿ ಅವರೊಂದಿಗೆ ಸಾಮೀಪ್ಯ ಹೊಂದಿದ್ದಾರೆ. ಹೀಗಾಗಿ ನಿವೇದಿತ್‌ಗೆ ಅವಕಾಶ ಹೆಚ್ಚಿದೆ ಎನ್ನಲಾಗುತ್ತಿದೆ. ಆದರೆ, ನಿವೇದಿತ್‌ ಆಳ್ವಗೆ ರಾಜ್ಯದಲ್ಲಿ ಯಾವ ಪ್ರಭಾವಿ ನಾಯಕರ ಬೆಂಬಲವೂ ಇಲ್ಲ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ನಜೀರ್‌ ಅಹ್ಮದ್‌ ಅಥವಾ ಐವಾನ್‌ ಡಿಸೋಜಾ ಅವರ ಹೆಸರು ಬೆಂಬಲಿಸುವ ಸಾಧ್ಯತೆಯಿದೆ. ಇನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ ಬೆಂಬಲ ದೊರಕಿದರೆ ಆಳ್ವ ಹಾದಿ ಸುಗಮವಾಗಬಹುದು.

ಹಿಂದುಳಿದ ಕೋಟಾದಲ್ಲಿ ಸ್ಥಾನ ಪಡೆಯಲು ಪೈಪೋಟಿ ವಿಪರೀತ ಎನಿಸುವಷ್ಟಿದೆ. ಮಾಜಿ ಪರಿಷತ್‌ ಸದಸ್ಯರಾದ ಬೋಸರಾಜ್‌, ಎಚ್‌.ಎಂ. ರೇವಣ್ಣ, ಎಂ.ಸಿ. ವೇಣುಗೋಪಾಲ್‌, ನಟಿ ಜಯಮಾಲ, ಮಾಜಿ ಮೇಯರ್‌ ರಾಮಚಂದ್ರಪ್ಪ ಸೇರಿದಂತೆ ಹಲವು ನಾಯಕರು ಪ್ರಬಲ ಪೈಪೋಟಿ ನಡೆಸಿದ್ದಾರೆ. ಜಯನಗರ ಕ್ಷೇತ್ರವನ್ನು ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯ ರೆಡ್ಡಿಗೆ ಬಿಟ್ಟುಕೊಟ್ಟಿದ್ದ ಎಂ.ಸಿ.ವೇಣುಗೋಪಾಲ್‌ ಈ ’ತ್ಯಾಗ’ಕ್ಕಾಗಿ ಒಂದೂವರೆ ವರ್ಷಗಳ ಕಾಲ ವಿಧಾನಪರಿಷತ್‌ ಸದಸ್ಯ ಸ್ಥಾನ ಪಡೆದಿದ್ದರು. ಈಗ ಅವರೂ ನಿವೃತ್ತರಾಗಿದ್ದು, ಹೇಗಾದರೂ ಮಾಡಿ ಮುಂದುವರೆಯಲು ಯತ್ನಿಸುತ್ತಿದ್ದಾರೆ. ಇನ್ನು ಸಿದ್ದರಾಮಯ್ಯ ಅವರ ಬೆಂಬಲ ಪಡೆದು ವಿಧಾನಪರಿಷತ್‌ ಪ್ರವೇಶಿಸಲು ಮಾಜಿ ಮೇಯರ್‌ ರಾಮಚಂದ್ರಪ್ಪ ಹಾಗೂ ಎಚ್‌.ಎಂ. ರೇವಣ್ಣ ಅವರ ನಡುವೆ ಪೈಪೋಟಿಯಿದೆ. ಹೈಕಮಾಂಡ್‌ ಸಂಪರ್ಕ ಹೊಂದಿರುವ ಬೋಸ್‌ರಾಜ್‌ ಅವರು ಸಹ ತಮ್ಮದೇ ಮೂಲಗಳಿಂದ ಪೈಪೋಟಿ ನಡೆಸಿದ್ದು, ಅಂತಿಮವಾಗಿ ಯಾರಿಗೆ ಸ್ಥಾನ ದೊರೆಯಬಹುದು ಎಂಬುದನ್ನು ಕಾದು ನೋಡಬೇಕು.

ಇನ್ನು ಜೆಡಿಎಸ್‌ ಬೆಂಬಲ ದೊರೆತರೆ ಗೆಲ್ಲಬಹುದಾದ ಮೂರನೇ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಎಂ.ಆರ್‌. ಸೀತಾರಾಂ, ರಾಣಿ ಸತೀಶ್‌, ಭಾರತಿ ಶಂಕರ್‌ ಮೊದಲಾದವರು ಪ್ರಯತ್ನ ನಡೆಸಿದ್ದಾರೆ. ಈ ಮೂರನೇ ಸ್ಥಾನವನ್ನು ಮಹಿಳಾ ಮೀಸಲಾಗಿ ಪರಿವರ್ತಿಸಬೇಕು ಎಂಬುದು ಕಾಂಗ್ರೆಸ್‌ನ ಮಹಿಳಾ ನಾಯಕಿಯರ ವಾದ. ನೇರವಾಗಿ ಸೋನಿಯಾ ಗಾಂಧಿ ಅವರೊಂದಿಗೆ ಸಂಪರ್ಕ ಹೊಂದಿರುವ ರಾಣಿ ಸತೀಶ್‌ ಅವರು ಪರಿಷತ್ತಿನಲ್ಲಿ ಮಹಿಳೆಯರ ಪ್ರಾತಿನಿಧ್ಯ ಕಡಿಮೆ (ಜೂನ್‌ ನಂತರ ಕಾಂಗ್ರೆಸ್‌ನಿಂದ ವೀಣಾ ಅಚ್ಚಯ್ಯ ಮಾತ್ರ ಉಳಿದುಕೊಳ್ಳುತ್ತಾರೆ) ಇರುವುದರಿಂದ ತಮಗೆ ಅವಕಾಶ ನೀಡಬೇಕು ಎಂದು ಲಾಬಿ ನಡೆಸಿದ್ದಾರೆ.

ಆದರೆ, ಪಕ್ಷವನ್ನು ಆರ್ಥಿಕವಾಗಿ ಬಲಪಡಿಸುವಂತಹ ವ್ಯಕ್ತಿಗೆ ಈ ಸ್ಥಾನ ನೀಡುವ ಸಾಧ್ಯತೆಯೇ ಹೆಚ್ಚು ಎಂದು ಮೂಲಗಳು ಹೇಳುತ್ತವೆ.

click me!