ಶೋಭಾ ಕರಂದ್ಲಾಜೆಗೆ ರಾಜಕೀಯ ಪುನರ್ಜನ್ಮ, ಮೋದಿ ಸಂಪುಟ ಸರ್ಜರಿ ಹಿಂದಿನ ಸತ್ಯಗಳು

By Kannadaprabha News  |  First Published Jul 9, 2021, 6:27 PM IST

7 ವರ್ಷಗಳ ಕಾಲ ಮೋದಿ ಅವಕಾಶ ಕೊಟ್ಟರೂ ಚೆನ್ನಾಗಿ ಕೆಲಸ ಮಾಡಿ ತೋರಿಸದ ತಪ್ಪಿಗೆ ಸದಾನಂದಗೌಡ ಮಂತ್ರಿ ಸ್ಥಾನ ಕಳೆದುಕೊಂಡಿದ್ದಾರೆ. 2016ರಲ್ಲೇ ಅವರನ್ನು ಕೈಬಿಡಲು ಮೋದಿ ಮುಂದಾಗಿದ್ದರಂತೆ. 


ಬೆಂಗಳೂರು (ಜು. 09): ಯಾರು ಏನೇ ಹೇಳಲಿ, ಕೋವಿಡ್‌ 2ನೇ ಅಲೆ ವಿಪರೀತಕ್ಕೆ ಹೋದಾಗ ಕೇಂದ್ರ ಸರ್ಕಾರ ಅದಕ್ಕೆ ಸರಿಯಾಗಿ ತಯಾರಿ ಮಾಡಿಕೊಂಡಿರಲಿಲ್ಲ ಮತ್ತು ಒಂದು ತಂಡವಾಗಿ ಮೊದಲಿನ 15 ದಿನ ಕೆಲಸ ಮಾಡಿರಲಿಲ್ಲ ಎಂಬ ಟೀಕೆಗಳು ಸ್ವಯಂ ಬಿಜೆಪಿಯ ಮತದಾರರಿಂದಲೇ ಶುರುವಾಗಿದ್ದವು.

ಈ ತಪ್ಪನ್ನು ಸರಿ ಮಾಡಿಕೊಳ್ಳಲು ಎಂಬಂತೆ ಕೋವಿಡ್‌ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದ ಡಾ. ಹರ್ಷವರ್ಧನ್‌, ಔಷಧ​ ಪೂರೈಕೆ ಜವಾಬ್ದಾರಿ ಹೊತ್ತಿದ್ದ ಸದಾನಂದಗೌಡ, ಲಸಿಕೆ ಬಗ್ಗೆ ತಪ್ಪು ತಿಳಿವಳಿಕೆ ದೂರ ಮಾಡುವ ಜವಾಬ್ದಾರಿ ಹೊತ್ತಿದ್ದ ಪ್ರಕಾಶ್‌ ಜಾವಡೇಕರ್‌, ಲಾಕ್‌ಡೌನ್‌ನಲ್ಲಿ ಕಾರ್ಮಿಕರಿಗೆ ಸಹಾಯ ಮಾಡುವ ಜವಾಬ್ದಾರಿ ಹೊತ್ತಿದ್ದ ಸಂತೋಷ್‌ ಗಂಗವಾರ್‌ ಅವರನ್ನು ಮೋದಿ ಈಗ ಮನೆಗೆ ಕಳುಹಿಸಿದ್ದಾರೆ. ಇದರಲ್ಲಿ ಡಾ.ಹರ್ಷವರ್ಧನ್‌ ಹರಕೆಯ ಕುರಿ ಆದರಾ ಎಂಬ ಚರ್ಚೆಗೆ ಆಸ್ಪದವಿದೆ. ಚರ್ಚೆಗಳು ಏನೇ ಇರಲಿ, ಯಾವುದೇ ಸರ್ಕಾರ ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳುತ್ತಾ ಆಗಾಗ ಹೊಸ ರಕ್ತಕ್ಕೆ ಅವಕಾಶ ನೀಡುವುದು ಒಳ್ಳೆಯ ಬೆಳವಣಿಗೆ.

Tap to resize

Latest Videos

ಕೆಲಸ ಮಾಡಿ, ಇಲ್ಲವೇ ಮನೆಗೆ ಹೋಗಿ

ಪ್ರಜಾಪ್ರಭುತ್ವದಲ್ಲಿ ಆಡಳಿತ ಸುಧಾರಣೆ ತರುವುದು ತೀರಾ ಪ್ರಯಾಸದ ಕೆಲಸ. ಅದರಲ್ಲೂ ಜಾತಿ ಸಮೀಕರಣದ ಮತ್ತು ಪ್ರಾಂತ್ಯಗಳ ರಾಜಕಾರಣದ ಅನಿವಾರ್ಯತೆಗಳ ಮಧ್ಯೆ ಯಾರೋ ಒಬ್ಬರನ್ನು ಸಂಪುಟದಿಂದ ತೆಗೆಯುವುದು, ಹೊಸಬರನ್ನು ತರುವುದು ಸುಲಭ ಅಲ್ಲ. ಆದರೆ ಇವೆಲ್ಲವುದರ ಮಧ್ಯೆಯೂ ಮೋದಿ, ತಾವು ಕೊಟ್ಟಕೆಲಸ ಅಚ್ಚುಕಟ್ಟಾಗಿ ಮಾಡಿ, ಇಲ್ಲದಿದ್ದರೆ ಮನೆಗೆ ಕಳುಹಿಸುತ್ತೇನೆ ಎಂದಿದ್ದಾರೆ. ಸರ್ಕಾರದ ಅಧಿ​ಕಾರಿ ಮೂಲಗಳು ಹೇಳುವ ಪ್ರಕಾರ, ಪ್ರಕಾಶ್‌ ಜಾವ್ಡೇಕರ್‌ ಪರಿಸರ ಇಲಾಖೆಗೆ ಸಮಯವನ್ನೇ ಕೊಡುತ್ತಿರಲಿಲ್ಲ. ಜೊತೆಗೆ ಮೋದಿಯವರು ವಿದೇಶಿ ಪ್ರೆಸ್‌ಗಳಲ್ಲಿ ಬಂದ ವರದಿಗಳಿಂದ ತೀವ್ರ ಬೇಸರಗೊಂಡಿದ್ದರಂತೆ. ಇನ್ನು ಸದಾನಂದಗೌಡರನ್ನು ಕೈಬಿಡಬೇಕು ಎಂದು ಬಹಳ ಮೊದಲೇ ತೀರ್ಮಾನ ತೆಗೆದುಕೊಳ್ಳಲಾಗಿತ್ತಂತೆ.

ಉತ್ತರ ಪ್ರದೇಶದ ಜಾತಿ ರಾಜಕೀಯದಲ್ಲ ಮಾಯಾವತಿ ಏಕಾಂಗಿಯಾಗಿದ್ದು ಹೇಗೆ?

ರೈಲ್ವೆ, ಕಾನೂನು, ಕೊನೆಗೆ ಗೊಬ್ಬರ ಹೀಗೆ ಯಾವ ಖಾತೆ ಕೊಟ್ಟರೂ ಸದಾ ಚೆನ್ನಾಗಿ ಕೆಲಸ ಮಾಡಿಲ್ಲ ಎಂಬ ಬೇಸರವನ್ನು ಸ್ವಯಂ ಮೋದಿ ಮತ್ತು ಅಮಿತ್‌ ಶಾ ಇಬ್ಬರೂ ಅನೇಕ ಬಾರಿ ತೋಡಿಕೊಂಡಿದ್ದರಂತೆ. ಇನ್ನು ರವಿಶಂಕರ್‌ ಪ್ರಸಾದ್‌ರಿಂದ ಅರುಣ್‌ ಜೇಟ್ಲಿ ತರಹದ ಒಂದು ಸಹಾಯವನ್ನು ಮೋದಿ ನಿರೀಕ್ಷಿಸುತ್ತಿದ್ದರು. ಆದರೆ ಅದು ಸಿಕ್ಕಹಾಗಿಲ್ಲ. ಸ್ವತಃ ತಮ್ಮ ನೀಲಿ ಕಣ್ಣಿನ ಹುಡುಗ ಪಿಯೂಷ್‌ ಗೋಯಲ್‌ರಿಂದ ಕೂಡ ಮೋದಿ ರೈಲ್ವೆ ಖಾತೆಯನ್ನು ಕಿತ್ತುಕೊಂಡು ತಮಗೆ ಒಳ್ಳೆಯ ರಿಸಲ್ಟ್‌ ಬೇಕು, ಇಲ್ಲವಾದರೆ ಸಹಿಸೋದಿಲ್ಲ ಎಂದು ಹೇಳುವ ಪ್ರಯತ್ನ ಮಾಡಿದ್ದಾರೆ. ಆದರೆ ಉದ್ಯಮಿಗಳು ಮತ್ತು ಸಾಮಾನ್ಯ ಜನರು ಹಣಕಾಸು ನಿರ್ವಹಣೆ ಬಗ್ಗೆ ಅತೀವ ಬೇಸರ ವ್ಯಕ್ತಪಡಿಸಿದರೂ ನಿರ್ಮಲಾ ಸೀತಾರಾಮನ್‌ರ ಖಾತೆ ಬದಲಾವಣೆ ಮಾಡದಿರುವುದು ಸೋಜಿಗದ ವಿಷಯ.

ಮೋದಿ ಸರ್ಕಾರ ಬಗ್ಗೆ ಜನರಲ್ಲಿ ಬೆಟ್ಟದಷ್ಟುನಿರೀಕ್ಷೆಗಳಿವೆ. ಆದರೆ ಆ ಬೆಟ್ಟವನ್ನು ಎತ್ತಿ ಹಿಡಿಯಬಲ್ಲ ಒಂದು ತಂಡದ ಕೊರತೆಯೂ ಇದೆ. ಸ್ವಯಂ ಮೋದಿ ಹಗಲು ರಾತ್ರಿ ಒಂದು ಮಾಡಿ ಕೆಲಸ ಮಾಡುತ್ತಾರೆಂಬುದು ಹೌದು. ಆದರೆ ಒಂದು ಒಳ್ಳೆಯ ಟೀಂ ಇರದೇ ಅದು ಸಾಕಾಗೋದಿಲ್ಲ. ಮೋದಿ ಅವರಿಗೂ ಇದು ನಿಧಾನವಾಗಿ ಅರಿವಿಗೆ ಬರುತ್ತಿದೆ. ರಾಜಕಾರಣದಲ್ಲಿ ಆಗಾಗ ಹಿಂದೆ ತಿರುಗಿ ನೋಡಿ ಬೆಂಬಲಿಗರ ಅಂಬೋಣ ಏನು ಎಂದು ಅರಿತುಕೊಂಡು ತಿದ್ದಿಕೊಳ್ಳುವುದು ಒಳ್ಳೆಯದು. ತುಂಬಾ ತಡವಾದರೆ ಕಷ್ಟ.

ಸದಾ ಸ್ವಯಂಕೃತ ತಪ್ಪುಗಳು

7 ವರ್ಷಗಳ ಕಾಲ ಮೋದಿ ಅವಕಾಶ ಕೊಟ್ಟರೂ ಚೆನ್ನಾಗಿ ಕೆಲಸ ಮಾಡಿ ತೋರಿಸದ ತಪ್ಪಿಗೆ ಸದಾನಂದಗೌಡ ಮಂತ್ರಿ ಸ್ಥಾನ ಕಳೆದುಕೊಂಡಿದ್ದಾರೆ. 2016ರಲ್ಲೇ ಅವರನ್ನು ಕೈಬಿಡಲು ಮೋದಿ ಮುಂದಾಗಿದ್ದರಂತೆ. ಆದರೆ 2018ರಲ್ಲಿ ಚುನಾವಣೆ ಇದೆ, ಒಕ್ಕಲಿಗರು ಯಾರೂ ಇಲ್ಲ ಎಂದು ಮುಂದುವರೆಸಿದ್ದರು. 2019ರಲ್ಲೂ ಮೋದಿ ಸಾಹೇಬರಿಗೆ ಮನಸ್ಸಿರಲಿಲ್ಲ. ಆದರೆ ಆಗಲೂ ಒಕ್ಕಲಿಗರ ಕೋಟಾ ಬೇಕು ಎಂದು ಮುಂದುವರೆಸಿದ್ದರು. ಆದರೆ ಸದಾನಂದಗೌಡ ತಮ್ಮ ಇಲಾಖೆಯಲ್ಲಿ ಅಷ್ಟೇನೂ ಸಕ್ರಿಯರಾಗಿರಲಿಲ್ಲ.

ಬಹುತೇಕ ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆಯನ್ನು ಮೋದಿ ಅವರ ಪರಮಾಪ್ತ ರಾಜ್ಯ ಸಚಿವ ಮನಸುಖ್‌ ಭಾಯಿ ಮಾಂಡವೀಯ ನಡೆಸುತ್ತಿದ್ದರು. ಹಿಂದೆ ರೈಲ್ವೆ ಇಲಾಖೆ ದೊರೆತಾಗಲೂ ಪೂರ್ತಿ ದೇಶದ ಚಿತ್ರಣ ಇಟ್ಟುಕೊಂಡು ತ್ವರಿತವಾಗಿ ಕೆಲಸ ಮಾಡದೆ ಫೈಲ್‌ ಇಟ್ಟುಕೊಂಡು ಬೆಂಗಳೂರಿಗೆ ಓಡಾಡುತ್ತಾ ಸದಾನಂದಗೌಡರು ಪ್ರಧಾನಿಯ ಅಸಮಾಧಾನಕ್ಕೆ ಕಾರಣರಾಗಿದ್ದರು. ಆದರೆ ಈಗ ಹೊಸ ತಲೆಮಾರಿನ ಒಕ್ಕಲಿಗ ಸಿ.ಟಿ.ರವಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆದ ಮೇಲೆ ಮತ್ತು ಶೋಭಾ ಸಂಘದ ಜೊತೆಗಿನ ಸಂಬಂಧ ರಿಪೇರಿಯಾದ ನಂತರ ಸದಾನಂದಗೌಡರನ್ನು ಕೈಬಿಡಲಾಗಿದೆ. ಬಹುಶಃ ಇದು ಸದಾನಂದಗೌಡರ ರಾಜಕೀಯ ಅಂತ್ಯಗೊಳ್ಳುವ ಸೂಚನೆಯೂ ಹೌದು.

ಯೋಗಿಯೊಬ್ಬರನ್ನೇ ನೆಚ್ಚಿಕೊಂಡರೆ ಮತ್ತೆ ಗೆಲ್ಲಲು ಅಸಾಧ್ಯವೆಂದು ಮೋದಿ ಹೊಸ ದಾಳ!

ಶೋಭಾಗೊಂದು ಪುನರ್ಜನ್ಮ

ಒಂದು ಕಾಲದಲ್ಲಿ ಶೋಭಾ ಕರಂದ್ಲಾಜೆ ಅಂದರೆ ಯಡಿಯೂರಪ್ಪನವರ ಕಣ್ಣು, ಕಿವಿ, ಮೂಗು ಎಂದು ಚರ್ಚೆ ಚಾಲ್ತಿಯಲ್ಲಿತ್ತು. ಈ ಇಮೇಜ್‌ನಿಂದ ಶೋಭಾ ಒಂದು ಹಂತದವರೆಗೆ ವೇಗವಾಗಿ ಬೆಳೆದರು. ಇದು ಅನಂತ ಕುಮಾರ್‌, ಈಶ್ವರಪ್ಪ, ಶಂಕರಮೂರ್ತಿ, ಯತ್ನಾಳರ ಸಿಟ್ಟಿಗೆ ಮೂಲವಾಗಿ ದಿಲ್ಲಿಯಲ್ಲಿ ಶೋಭಾ ಅಂದರೆ ಬೇಡ ಎನ್ನುವ ಹಂತಕ್ಕೆ ಬೇಸರ ಇತ್ತು. 2017 ಮತ್ತು 2019ರಲ್ಲಿ ಶೋಭಾರನ್ನು ಮಂತ್ರಿ ಮಾಡಲು ಸ್ವತಃ ಯಡಿಯೂರಪ್ಪನವರೇ ಪ್ರಯತ್ನಪಟ್ಟರೂ ಸಾಧ್ಯ ಆಗಿರಲಿಲ್ಲ. ಮೋದಿ, ಶಾ ಮತ್ತು ಜೇಟ್ಲಿ ಮೂವರೂ ಒಪ್ಪುತ್ತಿರಲಿಲ್ಲ. 2018ರಲ್ಲಿ ಶೋಭಾ ಯಶವಂತಪುರಕ್ಕೆ ನಿಲ್ಲುತ್ತೇನೆ ಎಂದಾಗ ಅಮಿತ್‌ ಶಾ ಅವರೇ ಬೇಡ ಎಂದುಬಿಟ್ಟರು.

2019ರಲ್ಲಿ ಉಡುಪಿಗೆ ಶೋಭಾ ಬೇಡ ಎಂದು ಸಿ.ಟಿ.ರವಿ ಮತ್ತು ಬಿ.ಎಲ್‌.ಸಂತೋಷ್‌ ಅವರು ಅಮಿತ್‌ ಶಾರನ್ನು ಒಪ್ಪಿಸಿಯೇಬಿಟ್ಟಿದ್ದರು. ಆದರೆ ಯಡಿಯೂರಪ್ಪ ಹಟ ಹಿಡಿದು ಒಪ್ಪಿಸಿದ್ದರು. ಆದರೆ ರಾಜ್ಯದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆದ ಮೇಲೆ ಶೋಭಾ ಪೂರ್ತಿ ಮೌನ ವಹಿಸಿದ್ದರು. ವಿಜಯೇಂದ್ರ ಸಕ್ರಿಯರಾಗುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಮೌನ ವಹಿಸಿ, ಸಂಘದ ಪ್ರಚಾರಕ ಮುಕುಂದ್‌ ಮತ್ತು ಸಂತೋಷ್‌ ಜೊತೆಗೆ ಸಂಬಂಧ ಸರಿ ಮಾಡಿಕೊಂಡಿದ್ದರು. ಹೀಗಾಗಿ ಕೊನೆಗೆ ಸದಾನಂದರನ್ನು ತೆಗೆಯುವುದು ಅಂತಿಮ ಆದಾಗ ಪ್ರತಾಪ ಸಿಂಹರಿಗೆ ಇನ್ನೂ ವಯಸ್ಸಿದೆ, ಶೋಭಾಗೆ ಹಿರಿತನ ಇದೆ, ಮಹಿಳೆ ಇದ್ದಾರೆ, ಮಂತ್ರಿಯಾಗಿ ಕೆಲಸ ಮಾಡಿದ ಅನುಭವ ಇದೆ ಎನ್ನುವ ಕಾರಣಕ್ಕೆ ಮಂತ್ರಿ ಮಾಡಲಾಗಿದೆ. ಶೋಭಾರ ಒಂದು ಪ್ಲಸ್‌ ಪಾಯಿಂಟ್‌ ಎಂದರೆ ಸಾಮರ್ಥ್ಯ ಇದೆ. ಒಳ್ಳೆ ಕೆಲಸ ಮಾಡಿ ತೋರಿಸಿದರೆ ಅವರಿಗೆ ನಿಶ್ಚಿತವಾಗಿ ಇದು ರಾಜಕೀಯ ಪುನರ್‌ಜನ್ಮವೇ ಹೌದು.

ಸಂತೋಷ್‌ರ ದಿಲ್ಲಿ ಛಾಪು

ಕಳೆದ ಎರಡು ವರ್ಷಗಳಲ್ಲಿ ದಿಲ್ಲಿಯಲ್ಲಿ ಕರ್ನಾಟಕ ಬಿಜೆಪಿಯ ಕುರಿತಾದ ನಿರ್ಣಯದಲ್ಲಿ ಜಾಸ್ತಿ ಯಾರದಾದರೂ ನಡೆದಿದ್ದರೆ ಅದು ಸಂತೋಷ್‌ರದು. ತೇಜಸ್ವಿ ಸೂರ್ಯಗೆ ಟಿಕೆಟ್‌ ಕೊಡಿಸುವುದರಿಂದ ಶುರುವಾದ ಸಂತೋಷ್‌ರ ಪ್ರಭಾವ ಮಂತ್ರಿಗಳ ಆಯ್ಕೆಯಲ್ಲೂ ಸ್ಪಷ್ಟವಾಗಿ ಕಾಣುತ್ತಿದೆ. ದಲಿತ ಎಡಗೈ ವರ್ಗಕ್ಕೆ ಸೇರಿದ ಆನೇಕಲ್‌ ನಾರಾಯಣಸ್ವಾಮಿ ಅವರನ್ನು ಚಿತ್ರದುರ್ಗಕ್ಕೆ ಕರೆದುಕೊಂಡು ಹೋಗಿ ಟಿಕೆಟ್‌ ಕೊಡಿಸಿದ್ದ ಸಂತೋಷ್‌, ಈಗ ಮಂತ್ರಿ ಮಾಡಿಸಿದ್ದಾರೆ. ಇನ್ನು ಭಗವಂತ ಖೂಬಾ ಕೂಡ ಸಂತೋಷ್‌ ಅವರದೇ ಆಯ್ಕೆ.

ಕಾಂಚೀವರಂ ಸಿಲ್ಕ್ to ಬನಾರಸ್: ಸೀರೆಯಲ್ಲಿ ಮಿಂಚಿದ ಸಚಿವೆಯರು

ಉದಾಸಿ ಹೆಸರು ಪಕ್ಕಕ್ಕೆ ಸರಿದು ಖೂಬಾಗೆ ಸಿಕ್ಕಿದ್ದು ಸಂತೋಷ್‌ ಅವರಿಂದ. ಶೋಭಾ ಕರಂದ್ಲಾಜೆ ಅವರಿಗೂ, ಸಂತೋಷ್‌ರಿಗೂ ಕೆಜೆಪಿ ಕಾಲದಿಂದ ಸಂಬಂಧ ಅಷ್ಟಕಷ್ಟೆ. ಆದರೆ ಕಳೆದ ಕೆಲ ತಿಂಗಳುಗಳಲ್ಲಿ ಶೋಭಾ ಮುತುವರ್ಜಿ ವಹಿಸಿ ಮುಕುಂದ್‌ ಮತ್ತು ಸಂತೋಷ್‌ ಜೊತೆಗಿನ ಸಂಬಂಧ ರಿಪೇರಿ ಮಾಡಿಕೊಂಡಿದ್ದಾರೆ. ಒಟ್ಟಾರೆ ದಿಲ್ಲಿಯಲ್ಲಿ ಕರ್ನಾಟಕ ಬಿಜೆಪಿ ಮಟ್ಟಿಗೆ ಈಗ ಸಂತೋಷ್‌ ಮಾತು ನಿರ್ಣಾಯಕ.

ಮೋದಿಗೆ ಪರಮಾಪ್ತ ಅಶ್ವಿನಿ ವೈಷ್ಣವ

ಭಾರತದಲ್ಲಿ ರಾಜಕಾರಣವೇ ಒಂದು ವೃತ್ತಿ. ಹೀಗಾಗಿ ವಕೀಲರನ್ನು ಬಿಟ್ಟು ಉಳಿದ ವೃತ್ತಿಪರರು ರಾಜಕಾರಣಕ್ಕೆ ಬಂದು ಅವಕಾಶ ಗಿಟ್ಟಿಸಿ, ಅಧಿಕಾರ ಹಿಡಿಯುವುದು ಕಷ್ಟ. ಬಹಳ ಅಂದರೆ ಮಂತ್ರಿಗಳ ಸಲಹೆಗಾರರಾಗಬಹುದಿತ್ತು ಅಷ್ಟೆ. ಆದರೆ ನಿಧಾನವಾಗಿ ಮೋದಿ ವೃತ್ತಿಪರರನ್ನು ಮಂತ್ರಿ ಸ್ಥಾನಕ್ಕೆ ತರುತ್ತಿದ್ದಾರೆ. ಎಸ್‌.ಜಯಶಂಕರ್‌, ಹರ್‌ದೀಪ ಪುರಿ, ಆರ್‌.ಕೆ.ಸಿಂಗ್‌ ಜೊತೆಗೆ ಈ ಬಾರಿ ಮೋದಿ ಇನ್ನೊಬ್ಬ ಮಾಜಿ ಐಎಎಸ್‌ ಅಧಿಕಾರಿ ಅಶ್ವಿನಿ ವೈಷ್ಣವ ಅವರಿಗೆ ಮಹತ್ವದ ರೈಲ್ವೆ ಖಾತೆ ಕೊಟ್ಟಿದ್ದಾರೆ. ಮೋದಿ ಬಿಜೆಪಿ ಕೆಲಸಕ್ಕಾಗಿ ದಿಲ್ಲಿಯಲ್ಲಿದ್ದಾಗ 2000ರಲ್ಲಿ ಅಶ್ವಿನಿ ವೈಷ್ಣವ ವಾಜಪೇಯಿ ಕಚೇರಿಯಲ್ಲಿ ಅಧಿಕಾರಿ. ಮುಂದೆ ಮೋದಿ ಗುಜರಾತ್‌ನ ಮುಖ್ಯಮಂತ್ರಿ ಆದಾಗ ಅಶ್ವಿನಿ ವೈಷ್ಣವರನ್ನು ಗಾಂಧಿನಗರಕ್ಕೆ ಕರೆಸಿಕೊಂಡರು.

ಸರ್ಕಾರದ ಮೂಲಗಳು ಹೇಳುವ ಪ್ರಕಾರ, ಹಣಕಾಸು, ಕಲ್ಲಿದ್ದಲು, ಗಣಿ, ಪರಿಸರ ನೀತಿ ತಯಾರಿಸುವಲ್ಲಿ ಅಶ್ವಿನಿ ತೆರೆಯ ಹಿಂದೆ ಸಾಕಷ್ಟುಕೆಲಸ ಮಾಡಿದ್ದರು. ಹೀಗಾಗಿ ಮೋದಿ, ಪಿಯೂಷ್‌ ಗೋಯಲ್‌ರನ್ನು ಬದಿಗೆ ಸರಿಸಿ ರೈಲ್ವೆ ಇಲಾಖೆ ಮತ್ತು ಮಾಹಿತಿ ತಂತ್ರಜ್ಞಾನ ಕೊಟ್ಟಿದ್ದಾರೆ. ರೈಲ್ವೆಗೆ ಸದಾನಂದಗೌಡ, ಸುರೇಶ್‌ ಪ್ರಭು, ಪಿಯೂಷ್‌ ಗೋಯಲ್‌ರನ್ನು ತಂದು ಕೂರಿಸಿದರೂ ಮೋದಿ ನಿರೀಕ್ಷೆಯಷ್ಟುಕೆಲಸ ಆಗಿಲ್ಲ. ಹೀಗಾಗಿ ಈಗ ತಮ್ಮ ಇಷ್ಟದ ಅಧಿಕಾರಿಗೆ ಖಾದಿ ತೊಡಿಸಿ, ಕುರ್ಚಿ ಮೇಲೆ ಕೂರಿಸಿ ಪ್ರಯೋಗ ಮಾಡುತ್ತಿದ್ದಾರೆ.

ಗಡ್ಕರಿ, ರಾಜನಾಥ್‌ ಮೌನ

ಮೋದಿ ಸಂಪುಟದಲ್ಲಿ ಅತ್ಯಂತ ಹೆಚ್ಚು ಕೆಲಸ ಮಾಡುವ ಸಕ್ರಿಯ ಮಂತ್ರಿ ಎಂದರೆ ನಿತಿನ್‌ ಗಡ್ಕರಿ. ಈ ಮಾತನ್ನು ಬಿಜೆಪಿ ವಿರೋಧಿಗಳೂ ಒಪ್ಪುತ್ತಾರೆ. ಆದರೆ ಈ ಬಾರಿಯ ಪುನಾರಚನೆಯಲ್ಲಿ ಗಡ್ಕರಿ ಅವರಿಂದ ಸಣ್ಣ, ಮಧ್ಯಮ ಕೈಗಾರಿಕೆ ವಾಪಸ್‌ ತೆಗೆದುಕೊಂಡು ನಾರಾಯಣ್‌ ರಾಣೆಗೆ ನೀಡಲಾಗಿದೆ. ರಾಣೆ ಬಿಜೆಪಿಗೆ ಬಂದು ಮಂತ್ರಿ ಆಗುವುದು ಗಡ್ಕರಿಗೆ ಇಷ್ಟಇರಲಿಲ್ಲ. ಆದರೆ ಈ ವಿಷಯದಲ್ಲಿ ದೇವೇಂದ್ರ ಫಡ್ನವೀಸ್‌ ಮಾತು ಹೆಚ್ಚು ನಡೆದಂತೆ ಕಾಣುತ್ತಿದೆ. ಉತ್ತರ ಪ್ರದೇಶದ 13 ಮಂತ್ರಿಗಳು ಸಂಪುಟದಲ್ಲಿದ್ದಾರೆ. ಆದರೆ ರಾಜನಾಥ ಸಿಂಗ್‌ ಮಾತು ಜಾಸ್ತಿ ನಡೆಯುತ್ತಿಲ್ಲ. ಬಿಜೆಪಿ ಮೂಲಗಳು ಹೇಳುವ ಪ್ರಕಾರ, ದಿಲ್ಲಿಯಲ್ಲಿ ಅಮಿತ್‌ ಶಾ ವರ್ಸಸ್‌ ಗಡ್ಕರಿ, ಅಮಿತ್‌ ಶಾ ವರ್ಸಸ್‌ ಯೋಗಿ ಸಣ್ಣ ಮನಸ್ತಾಪ ಒಳಗೊಳಗೇ ಹೊತ್ತಿಕೊಂಡಿದೆ. ಬಿಜೆಪಿಯಲ್ಲಿ ಇವು ಗಮನಿಸಲೇಬೇಕಾದ ಹೊಸ ಬೆಳವಣಿಗೆಗಳು.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

- ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ

click me!