ಸಚಿವರಾಗಲು ಅನರ್ಹಗೊಂಡು ನಿರಾಸೆಯಲ್ಲಿರುವ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರು ಮುಂದೆ ಸಾಗೋಣ ಬನ್ನಿ ಎಂದು ಸಿದ್ದರಾಮಯ್ಯನವರಿಗೆ ಆಹ್ವಾನ ನೀಡಿದ್ದಾರೆ.
ಬೆಂಗಳೂರು, (ಡಿ.04): ರಾಜಕೀಯದಲ್ಲಿ ಹಾವು-ಮುಂಗಸಿ ತರ ಇರುವ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಬಿಜೆಪಿ ವಿಧಾನಪರಿಷತ್ ಸದ್ಯಸ ಮತ್ತೆ ಒಂದಾಗ್ತಾರಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.
ಯಾಕಂದ್ರೆ ಕುರುಬ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ ವಿಚಾರವಾಗಿ ಸಿದ್ದರಾಮಯ್ಯ ನೇತೃತ್ವದಲ್ಲಿ ಹೋರಾಟಕ್ಕೆ ನಾವು ಬರುತ್ತೇವೆ. ಹಳೆಯದೆಲ್ಲವನ್ನು ಮರೆತು ಮುಂದೆ ಸಾಗೋಣ ಬನ್ನಿ ಎಂದು ಹೇಳುವ ಮೂಲಕ ವಿಶ್ವನಾಥ್ ಅವರು ಸಿದ್ದರಾಮಯ್ಯರನ್ನು ಹೋರಾಟಕ್ಕೆ ಆಹ್ವಾನಿಸಿದ್ದಾರೆ.
ಕುರುಬರ ಎಸ್‍ಟಿ ಹೋರಾಟ: ಈಶ್ವರಪ್ಪ ಹಿಂದೆ ಆರ್‌ಎಸ್‌ಎಸ್, ಸಿದ್ದರಾಮಯ್ಯ ಗಂಭೀರ ಆರೋಪ
ಹೌದು.. ಶುಕ್ರವಾರ ಮೈಸೂರಿನಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಎಂಎಲ್ಸಿ ಎಚ್.ವಿಶ್ವನಾಥ್, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಕರೆಯುತ್ತಿರುವುದು ರಾಜಕೀಯ ನಾಯಕತ್ವಕ್ಕಲ್ಲ, ಸಮಾಜದ ನಾಯಕತ್ವಕ್ಕೆ ಮಾತ್ರ ಎಂದು ಸ್ಪಷ್ಟಪಡಿಸಿದರು.
ಸದ್ಯದ ಸ್ಥಿತಿಯಲ್ಲಿ ಮೀಸಲಾತಿ ವಿಚಾರದಲ್ಲಿ ಹೋರಾಟದ ಅವಶ್ಯಕತೆ ಇದೆ. ಆದರೆ ನೀವೂ ಹೋರಾಟಕ್ಕೆ ಬರಲ್ಲ ಎಂದು ತಿಳಿಸಿದ್ದೀರಿ. ಅಲ್ಲದೇ ಎಸ್.ಟಿ. ಸಮುದಾಯವನ್ನು ಹೈಜಾಕ್ ಮಾಡುತ್ತಿದ್ದಾರೆ ಎಂದು ಹೇಳುತ್ತೀರಿ. ಅಂತಹ ದೊಡ್ಡ ಸಮುದಾಯವನ್ನು ಯಾರೂ ಹೈಜಾಕ್ ಮಾಡಲು ಆಗಲ್ಲ. ನಿಮ್ಮನ್ನೇ ಎಲ್ಲರೂ ಹೋರಾಟಕ್ಕೆ ಬನ್ನಿ ಎಂದು ಕರೆದಿರುವುದರ ಅರ್ಥವನ್ನಾದರೂ ತಿಳಿದುಕೊಳ್ಳಿ ಎಂದರು.
ಹೆಚ್ ಎಂ ರೇವಣ್ಣ, ಈಶ್ವರಪ್ಪ, ಸ್ವಾಮೀಜಿಗಳು ಸಹ ಹೋರಾಟಕ್ಕೆ ನಿಮ್ಮನ್ನು ಆಹ್ವಾನಿಸಿದ್ದಾರೆ. ಆದರೆ ನೀವೂ ಮಾತ್ರ ನನ್ನನ್ನು ಯಾರೂ ಕರೆದಿಲ್ಲ ಎಂದು ತಿಳಿಸಿದ್ದೀರಿ ಎಂದಿರುವ ಎಚ್ ವಿಶ್ವನಾಥ್, ನೀವೂ ಬನ್ನಿ ಸಿದ್ದರಾಮಯ್ಯನವರೇ ನಿಮ್ಮ ನಾಯಕತ್ವದಲ್ಲಿ ನಾವು ಹೋಗುತ್ತೇವೆ. ನಿಮಗೆ ನೆನಪಿರಬಹುದು ಕನಕಗೋಪುರ ಬಿದ್ದಾಗ, ಮಠ ಕಟ್ಟಿದಾಗ ನೀವು ಇರಲಿಲ್ಲ. ಮಠ ಕಟ್ಟುವುದು ಅಷ್ಟು ಸುಲಭ ಅಲ್ಲ. ಕಾಗಿನೆಲೆ ಮಹಾಸಂಸ್ಥಾಪಕ ಅಧ್ಯಕ್ಷ ನಾನೇ ಆಗಿದ್ದೇನೆ ಎಂದು ಹೇಳಿದರು.
ನಾವೆಲ್ಲ ಸೇರಿ ಈ ಕೆಲಸ ಮಾಡಬೇಕಿದೆ. ಈಗಲಾದರೂ ಹೋರಾಟಕ್ಕೆ ಬನ್ನಿ. ನಿಮ್ಮ ಸಹಕಾರ ಸಮುದಾಯಕ್ಕೆ, ಸಮಾಜಕ್ಕೆ, ರಾಜ್ಯಕ್ಕೆ ಬೇಕಾಗಿದೆ. ನಮ್ಮ ಜೊತೆ ಸೇರಿಕೊಳ್ಳಿ. ಸಮಯದಲ್ಲಿ ಏಳಿಗೆಗೆ ಸಹಾಯ ಮಾಡಿ ಎಂದು ಮನವಿ ಮಾಡಿದರು.