* ಅಭ್ಯರ್ಥಿ ಪರ ಸರ್ಕಾರಿ ಅಧಿಕಾರಿ ಬಿ ಫಾರಂ ಸ್ವೀಕಾರ
* ಚುನಾವಣಾ ಆಯೋಗದಿಂದ ದೂರು ದಾಖಲು
* ಚಿಕ್ಕಮಗಳೂರು ಕಾಂಗ್ರೆಸ್ ಪರವಾಗಿ ಬಿ ಫಾರ್ಮ್ ಸ್ವೀಕರಿಸಿದ್ದ ಸರ್ಕಾರಿ ಅಧಿಕಾರಿ
ಬೆಂಗಳೂರು, (ನ.26): ವಿಧಾನ ಪರಿಷತ್ ಚುನಾವಣೆ(Karnataka Council Election) ಅಭ್ಯರ್ಥಿ ಪರ ಅವರ ಸಂಬಂಧಿ ಸರ್ಕಾರಿ ಅಧಿಕಾರಿ ಬಿ ಫಾರಂ ಸ್ವೀಕಾರ ವಿಚಾರವಾಗಿ ಚುನಾವಣಾ ಆಯೋಗ ಪ್ರಕರಣ ದಾಖಲಿಸಿದೆ.
ಬೆಂಗಳೂರಿನ(Bengaluru) ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಅಬಕಾರಿ ಅಧಿಕಾರಿ ಬಿ.ಎಂ. ಸುನಿಲ್ ವಿರುದ್ಧ ಪ್ರಕರಣ ದಾಖಲಾಗಿದೆ.
MLC Election: ಚುನಾವಣೆ ಕಣದಿಂದ ಹಿಂದೆ ಸರಿದ ಜೆಡಿಎಸ್, ಕಾಂಗ್ರೆಸ್-ಬಿಜೆಪಿ ನಡುವೆ ಫೈಟ್
ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ಪರವಾಗಿ ಕೆಪಿಸಿಸಿ ಕಚೇರಿಗೆ ಹಾಜರಾಗಿ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಂದ ಬಿ ಫಾರಂ ಸ್ವೀಕರಿಸಿದ್ದರು.
ಚಿಕ್ಕಮಗಳೂರು ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ಬಿ ಫಾರಂ ಸ್ವೀಕರಿಸಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆ, ನೀತಿ ಸಂಹಿತೆ ಉಲ್ಲಂಘನೆ ಆರೋಪದ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಬೆಂಗಳೂರಿನ ಕಾಂಗ್ರೆಸ್ ಪಕ್ಷದ ಕಚೇರಿಗೆ ಬಿ. ಎಂ. ಸುನೀಲ್ ತೆರಳಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರಿಂದ ಚಿಕ್ಕಮಗಳೂರು ಕಾಂಗ್ರೆಸ್ ಅಭ್ಯರ್ಥಿ ಗಾಯಿತ್ರಿ ಶಾಂತೇಗೌಡರ ಪರವಾಗಿ ಬಿ ಫಾರಂ ಪಡೆದು ಅಭ್ಯರ್ಥಿಗೆ ನೀಡಿರುವುದು ತಿಳಿದು ಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.
ಸರ್ಕಾರಿ ಅಧಿಕಾರಿ ಬಿ ಫಾರಂ ಪಡೆಯುವ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದರು. ಈ ಕುರಿತು ಫೋಟೊ, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹ ವ್ಯಕ್ತವಾಗಿತ್ತು. ಸರ್ಕಾರಿ ಅಧಿಕಾರಿ ರಾಜಕೀಯದಲ್ಲಿ ಗುರುತಿಸಿಕೊಳ್ಳಬಾರದು ಎಂದು ನಿಯಮ ಇದ್ದರೂ ಬಿ ಫಾರಂ ಪಡೆದು ಸುನಿಲ್ ನಿಯಮ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ಕ್ರಮಕೈಗೊಳ್ಳುವಂತೆ ರಾಜ್ಯ ಬಿಜೆಪಿ ಸಹ ಟ್ವೀಟ್ ಮೂಲಕ ಆಗ್ರಹಿಸಿತ್ತು.
ಚುನಾವಣೆ ಕಣದಿಂದ ಹಿಂದೆ ಸರಿದ ಜೆಡಿಎಸ್ ಅಭ್ಯರ್ಥಿ
ಚುನಾವಣಾ ಕಣ ರಂಗೇರುತ್ತಿರುವಾಗಲೇ ಕೊಡಗು (Kodagu) ಜೆಡಿಎಸ್ ಅಭ್ಯರ್ಥಿ (JDS Candidate) ನಾಮಪತ್ರ ವಾಪಸ್ ಪಡೆದುಕೊಂಡಿರುವುದು ಅಚ್ಚರಿಗೆ ಕಾರಣವಾಗಿದೆ.
ಕೊಡಗು ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‍ಗೆ (Kodagu MLC) ಜೆಡಿಎಸ್‌ನಿಂದ ಅಖಾಡಕ್ಕಿಳಿಸಿದ್ದ ಇಸಾಕ್ ಖಾನ್(Ishaq Khan ) ನಾಮಪತ್ರ ವಾಪಸ್ ಪಡೆಯುವ ಮೂಲಕ ಚುನಾವಣೆ ಕಣದಿಂದ ಹಿಂದೆ ಸರಿಸಿದಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಬಿಜೆಪಿ-ಕಾಂಗ್ರೆಸ್ ಪಕ್ಷಗಳ ನಡುವೆ ನೇರ ಹಣಾಹಣಿಗೆ ವೇದಿಕೆ ಸಜ್ಜಾಗಿದೆ.