ಅಡ್ಡಮತದಾನದ ಆರೋಪ: ಬೇಲೂರು ಚನ್ನಕೇಶವ , ಧರ್ಮಸ್ಥಳ ಮಂಜುನಾಥನ ಸನ್ನಿಧಿಯಲ್ಲಿ ಶಾಸಕ ಸುರೇಶ್ ಆಣೆ ಪ್ರಮಾಣ!

Published : Jun 30, 2026, 03:53 PM IST
 HK Suresh

ಸಾರಾಂಶ

ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಆರೋಪ ಎದುರಿಸುತ್ತಿರುವ ಬಿಜೆಪಿ ಶಾಸಕ ಹೆಚ್.ಕೆ. ಸುರೇಶ್, ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ. ತಮ್ಮ ನಿಷ್ಠೆಯನ್ನು ಸಾಬೀತುಪಡಿಸಲು, ಅವರು ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಆಣೆ ಪ್ರಮಾಣ ಮಾಡಿ, ತನಿಖೆಗಾಗಿ ಮಂಪರು ಪರೀಕ್ಷೆಗೂ ಸಿದ್ಧ ಎಂದು ಸವಾಲು ಹಾಕಿದ್ದಾರೆ.

ಹಾಸನ/ಮಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಶಾಸಕರು ಅಡ್ಡ ಮತದಾನ (Cross Voting) ಮಾಡಿದ್ದಾರೆ ಎನ್ನಲಾದ ವಿವಾದ ಕರ್ನಾಟಕ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. ಈ ವಿವಾದದಲ್ಲಿ ಪ್ರಮುಖವಾಗಿ ಕೇಳಿಬಂದಿರುವ ಹಾಸನ ಜಿಲ್ಲೆಯ ಬೇಲೂರು ಕ್ಷೇತ್ರದ ಬಿಜೆಪಿ ಶಾಸಕ ಹೆಚ್.ಕೆ. ಸುರೇಶ್ (ಹುಲ್ಲಳ್ಳಿ ಸುರೇಶ್) ಅವರ ಹೆಸರು ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿತ್ತು. ತಮ್ಮ ಮೇಲಿನ ಈ ಗಂಭೀರ ಆರೋಪವನ್ನು ಕಟುವಾಗಿ ನಿರಾಕರಿಸಿರುವ ಶಾಸಕರು, ಇದೀಗ ದೇವರ ಸನ್ನಿಧಿಯಲ್ಲಿ 'ಆಣೆ ಪ್ರಮಾಣ' ಮಾಡಿದ್ದಾರೆ.

ಬೇಲೂರು ಚನ್ನಕೇಶವ ಸನ್ನಿಧಿ ಮೊದಲ ಭೇಟಿ

ತಮ್ಮ ವಿರುದ್ಧ ಕೇಳಿಬಂದ ಅಡ್ಡ ಮತದಾನದ ಆರೋಪದಿಂದ ತೀವ್ರ ಅಸಮಾಧಾನಗೊಂಡಿದ್ದ ಶಾಸಕ ಹೆಚ್.ಕೆ. ಸುರೇಶ್, ಮೊದಲು ತಮ್ಮದೇ ಕ್ಷೇತ್ರದ ಐತಿಹಾಸಿಕ ಶ್ರೀ ಚನ್ನಕೇಶವ ಸ್ವಾಮಿ ದೇವಾಲಯದಲ್ಲಿ ನೂರಾರು ಕಾರ್ಯಕರ್ತರ ಸಮ್ಮುಖದಲ್ಲಿ ಆಣೆ ಪ್ರಮಾಣ ಮಾಡಿದರು. ತದನಂತರ, ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದರು.

ಧರ್ಮಸ್ಥಳದಲ್ಲಿ, ಮಂಜುನಾಥ ಸ್ವಾಮಿಯ ದರ್ಶನಕ್ಕೂ ಮುನ್ನ ಪವಿತ್ರ ನೇತ್ರಾವತಿ ನದಿಯ ಸ್ನಾನಘಟ್ಟಕ್ಕೆ ಭೇಟಿ ನೀಡಿ, ಮೈಮೇಲೆ ನೀರು ಪ್ರೋಕ್ಷಣೆ ಮಾಡಿಕೊಂಡು ಬಳಿಕ ಸಾಂಪ್ರದಾಯಿಕ ಪದ್ಧತಿಯಂತೆ ಮೊದಲು ಅಣ್ಣಪ್ಪ ಸ್ವಾಮಿ ಬೆಟ್ಟಕ್ಕೆ ತೆರಳಿ ದರ್ಶನ ಪಡೆದ ಅವರು, ನಂತರ ಮಂಜುನಾಥ ಸ್ವಾಮಿಯ ಒಳಾಂಗಣಕ್ಕೆ ತೆರಳಿ ದೇವರ ಸನ್ನಿಧಿಯಲ್ಲಿ "ನಾನು ಅಡ್ಡ ಮತದಾನ ಮಾಡಿಲ್ಲ" ಎಂದು ಆಣೆ ಪ್ರಮಾಣ ಮಾಡಿದರು.

ನನ್ನ ವಿರುದ್ಧ ದೊಡ್ಡ ಷಡ್ಯಂತ್ರ ನಡೆದಿದೆ: ಹಣಕ್ಕೆ ಮಾರಾಟವಾಗುವವನಲ್ಲ ನಾನು

ಧರ್ಮಸ್ಥಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಹೆಚ್.ಕೆ. ಸುರೇಶ್, ತಮ್ಮ ರಾಜಕೀಯ ವಿರೋಧಿಗಳ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದರು. "ನನ್ನ ವಿರುದ್ಧ ರಾಜಕೀಯವಾಗಿ ದೊಡ್ಡ ಷಡ್ಯಂತ್ರ ರೂಪಿಸಲಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ವತಃ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ನನ್ನ ಕ್ಷೇತ್ರಕ್ಕೆ ಬಂದು ನನಗಾಗಿ ಪ್ರಚಾರ ಮಾಡಿದ್ದಾರೆ. ಅಂತಹ ನಾಯಕರಿಗೆ ಮತ್ತು ಪಕ್ಷಕ್ಕೆ ನಾನು ಮೋಸ ಮಾಡಿದರೆ ಭಗವಂತ ನನ್ನನ್ನು ಎಂದಿಗೂ ಕ್ಷಮಿಸುವುದಿಲ್ಲ, ಮೆಚ್ಚುವುದೂ ಇಲ್ಲ. ಹಣದ ಆಮಿಷ ಒಡ್ಡಿ ನನ್ನನ್ನು ಕೊಂಡುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ಭಗವಂತ ನನ್ನನ್ನು ಆರ್ಥಿಕವಾಗಿ ಸಮೃದ್ಧವಾಗಿ ಇಟ್ಟಿದ್ದಾನೆ. ನನ್ನ ಕ್ಷೇತ್ರದ ಜನತೆ ಮಾತ್ರ ನನ್ನನ್ನು ಪ್ರೀತಿಯಿಂದ ಕೊಂಡುಕೊಳ್ಳಬಹುದೇ ವಿನಃ, ಕೋಟಿ ಕೋಟಿ ಹಣ ನೀಡಿ ನನ್ನ ನಿಷ್ಠೆಯನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ."

ಮಂಜುನಾಥನ ಮೇಲೆ ಆಣೆ ಮಾಡಿದ್ದೇನೆ, ಧೈರ್ಯವಿದ್ದರೆ ಮಂಪರು ಪರೀಕ್ಷೆ ಮಾಡಿಸಲಿ!

ಅಡ್ಡ ಮತದಾನದ ತನಿಖೆಗೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿಯ ಹಿರಿಯ ನಾಯಕ ಸಿ.ಟಿ. ರವಿ ಅವರು ನೀಡಿರುವ ವರದಿಯ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದ ಸುರೇಶ್, ಈ ವಿವಾದದ ಸತ್ಯಾಸತ್ಯತೆ ಹೊರಬರಲು ಮುಕ್ತ ಸವಾಲೊಂದನ್ನು ಹಾಕಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ ಎಂಬ ಧೈರ್ಯದಿಂದಲೇ ಪವಿತ್ರ ಪುಣ್ಯಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಎದುರು ಆಣೆ ಮಾಡಿದ್ದೇನೆ. ಇನ್ನುಳಿದಿದ್ದನ್ನು ಆ ಮಂಜುನಾಥನೇ ನೋಡಿಕೊಳ್ಳುತ್ತಾನೆ. ನನ್ನ ವಿರುದ್ಧ ಸುಮ್ಮನೆ ಅಪಪ್ರಚಾರ ಮಾಡುವ ಬದಲು, ಧೈರ್ಯವಿದ್ದರೆ ನನಗೆ ಮಂಪರು ಪರೀಕ್ಷೆ (Narco-Analysis Test) ಮಾಡಿಸಲಿ. ಕೇವಲ ನನಗಷ್ಟೇ ಅಲ್ಲ, ನನ್ನೊಂದಿಗೆ ಬಿಜೆಪಿಯ ಎಲ್ಲಾ ಶಾಸಕರಿಗೂ ಮಂಪರು ಪರೀಕ್ಷೆ ಮಾಡಿಸಲಿ. ಆಗ ಸತ್ಯ ಏನೆಂಬುದು ಇಡೀ ರಾಜ್ಯಕ್ಕೆ ತಿಳಿಯುತ್ತದೆ. ಇದರಲ್ಲಿ ನಮ್ಮವರ ಕೈವಾಡವಿದೆಯೋ ಅಥವಾ ಹೊರಗಿನವರ ಪಿತೂರಿಯೋ ಎನ್ನುವುದು ಜಗಜ್ಜಾಹೀರಾಗಲಿ" ಎಂದು ಸವಾಲು ಹಾಕಿದರು.

ಟಾರ್ಗೆಟ್ ಮಾಡಲು ಡಿಕೆಶಿ ಭವಿಷ್ಯದ ಸಿಎಂ ಎಂದಿದ್ದೇ ಕಾರಣವೇ?

ತಮ್ಮನ್ನು ರಾಜಕೀಯವಾಗಿ ಟಾರ್ಗೆಟ್ ಮಾಡುತ್ತಿರುವುದರ ಹಿಂದಿನ ಅಸಲಿ ಕಾರಣವನ್ನು ಬಿಚ್ಚಿಟ್ಟ ಶಾಸಕ ಸುರೇಶ್, ಕಳೆದ ವಿಧಾನಸಭಾ ಅಧಿವೇಶನದ ಸಂದರ್ಭದಲ್ಲಿ ಎತ್ತಿನಹೊಳೆ ಯೋಜನೆಯ ಅನುದಾನದ ವಿಷಯವಾಗಿ ಅಂದಿನ ಜಲಸಂಪನ್ಮೂಲ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿದ್ದೆ. ಕ್ಷೇತ್ರದ ಹಿತದೃಷ್ಟಿಯಿಂದ ಅನುದಾನ ಕೇಳುವಾಗ, ಅವರನ್ನು 'ಭಾವಿ ಮುಖ್ಯಮಂತ್ರಿ' ಎಂದು ಕರೆದಿದ್ದೆ. ನನ್ನ ಕ್ಷೇತ್ರದ ಕೆಲಸಕ್ಕಾಗಿ ನಾನು ಆಡಿದ ಆ ಒಂದು ಮಾತು ಈಗ ನನಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿರಬಹುದು. ಅದೇ ಕಾರಣವನ್ನು ಇಟ್ಟುಕೊಂಡು ಕೆಲವರು ನನ್ನ ವಿರುದ್ಧ ವ್ಯವಸ್ಥಿತವಾಗಿ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಧರ್ಮಾಧಿಕಾರಿಗಳ ಭೇಟಿ

ದೇವಸ್ಥಾನದಲ್ಲಿ ಆಣೆ ಪ್ರಮಾಣ ಮತ್ತು ವಿಶೇಷ ಪೂಜೆ ನೆರವೇರಿಸಿದ ನಂತರ, ಶಾಸಕ ಹೆಚ್.ಕೆ. ಸುರೇಶ್ ಅವರು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾದರು. ಹೆಗ್ಗಡೆಯವರಿಗೆ ಹಾರ ಹಾಕಿ ಗೌರವ ಸಲ್ಲಿಸಿದ ಶಾಸಕರು, ಕೆಲಕಾಲ ರಾಜಕೀಯ ವಿದ್ಯಮಾನಗಳ ಕುರಿತು ಮಾತುಕತೆ ನಡೆಸಿ ಅವರ ಆಶೀರ್ವಾದ ಪಡೆದರು. ಒಟ್ಟಾರೆಯಾಗಿ, ಬಿಜೆಪಿಯ ಒಳಜಗಳ ಹಾಗೂ ಅಡ್ಡ ಮತದಾನದ ವಿವಾದವು ಇದೀಗ ಧರ್ಮಸ್ಥಳದ ಅಂಗಳ ತಲುಪಿದ್ದು, ಮುಂದೇನಾಗಲಿದೆ ಎಂದು ಜಾದು ನೋಡಬೇಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Yogi Adityanath: ರಾಮಭಕ್ತರ ಮೇಲೆ ಗುಂಡು ಹಾರಿಸಿದವರು ಈಗ ರಾಮಭಕ್ತಿ ಬಗ್ಗೆ ಮಾತಾಡ್ತಾರೆ!
'ರಾಜಕೀಯದಲ್ಲಿ ಓಡ್ತಿರಬೇಕು, ಓಡದಿದ್ರೆ ಹಿಂದೆ ಬೀಳ್ತೀವಿ..' ಸಿದ್ದರಾಮಯ್ಯ ಕಡೆಗಣನೆ ಬಗ್ಗೆ ಸತೀಶ್ ಜಾರಕಿಹೊಳಿ ಹಿಂಗ್ಯಾಕ ಅಂದ್ರು!?