ಬಿಜೆಪಿಯ ಉಚ್ಚಾಟಿತ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೊಸ ಪಕ್ಷ ಕಟ್ಟುವುದು ಶುದ್ಧ ಸುಳ್ಳು. ಒಂದೇ ವರ್ಷದಲ್ಲಿ ಮರಳಿ ಗೂಡಿಗೆ ಬರುತ್ತಾರೆ. ಅವರ ಸಿದ್ಧಾಂತ, ಹೋರಾಟ ಬಿಜೆಪಿಗೇ ಸೂಟ್ ಆಗುತ್ತದೆ.
ಬೆಳಗಾವಿ (ಏ.02): ಬಿಜೆಪಿಯ ಉಚ್ಚಾಟಿತ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೊಸ ಪಕ್ಷ ಕಟ್ಟುವುದು ಶುದ್ಧ ಸುಳ್ಳು. ಒಂದೇ ವರ್ಷದಲ್ಲಿ ಮರಳಿ ಗೂಡಿಗೆ ಬರುತ್ತಾರೆ. ಅವರ ಸಿದ್ಧಾಂತ, ಹೋರಾಟ ಬಿಜೆಪಿಗೇ ಸೂಟ್ ಆಗುತ್ತದೆ. ನಮ್ಮ (ಕಾಂಗ್ರೆಸ್) ಸಿದ್ಧಾಂತಗಳು ಅವರಿಗೆ ಸೂಟ್ ಆಗಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ. ಆ ಮೂಲಕ ಯತ್ನಾಳ್ ಅವರ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಎದ್ದಿರುವ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಯತ್ನಾಳ್‌ಗೆ ಬಿಜೆಪಿ ಮತ್ತು ಬಿಜೆಪಿಗೆ ಯತ್ನಾಳ್ ಅನಿವಾರ್ಯ ಬಹಳಷ್ಟಿದೆ ಎಂದು ಹೇಳಿದರು. ಇದೇ ವೇಳೆ, ಬೆಲೆ ಏರಿಕೆ ವಿರುದ್ಧ ಬಿಜೆಪಿ ಹಮ್ಮಿಕೊಂಡಿರುವ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿ, ಬಿಜೆಪಿ ಆಡಳಿತದ ಅವಧಿಯಲ್ಲಿಯೇ ಬೆಲೆ ಏರಿಕೆ ಆಗಿದೆ. ಹೀಗಾಗಿ, ಈಗ ಪ್ರತಿಭಟನೆ ಅನಗತ್ಯ. ಅದನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು. ಬೆಲೆ ಏರಿಕೆ ವಿಷಯದ ಬಗ್ಗೆ ಆಯಾ ಇಲಾಖೆಗಳು ಸ್ಪಷ್ಪನೆ ನೀಡಬೇಕಿದೆ.
ಸಿಎಂ ರೇಸಲ್ಲಿ ನಾನು ಆರ್‌ಎಸಿಯಲ್ಲಿದ್ದೇನೆ: ಸಚಿವ ಸತೀಶ್ ಜಾರಕಿಹೊಳಿ
ಬೆಲೆ ಏರಿಕೆ ಬಗ್ಗೆ ಚರ್ಚಿಸಿ ವೈಜ್ಞಾನಿಕ ಮಾರ್ಗ ಕಂಡುಕೊಳ್ಳುವ ಬದಲು ಪ್ರತಿಭಟನೆ ನಡೆಸುವುದು ಅನಾವಶ್ಯಕ ಎಂದು ಹೇಳಿದರು. ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೇಂದ್ರ ಸಚಿವರನ್ನು ಭೇಟಿಯಾಗಿದ್ದೇನೆ. ಬೆಳಗಾವಿ ಅಭಿವೃದ್ಧಿ ಬಗ್ಗೆ ಚರ್ಚಿಸಲಾಗಿದೆ ಅಷ್ಟೆ. ಹೈಕಮಾಂಡ್ ಮಟ್ಟದಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಬಗ್ಗೆ ಚರ್ಚೆಯಾಗಿಲ್ಲ. ಇನ್ನು ಮಾಜಿ ಪ್ರಧಾನಿ ಎಚ್,ಡಿ.ದೇವೇಗೌಡರ ಭೇಟಿ ಆಕಸ್ಮಿಕ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಹೈಕಮಾಂಡ್ ನಿರ್ಧರಿಸುತ್ತೆ: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತಂತೆ ಹೈಕಮಾಂಡ್ ನಿರ್ಣಯ ಮಾಡುತ್ತದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ನಮ್ಮ ಹಂತದಲ್ಲಿ ಇಲ್ಲ. ಅದು ಹೈಕಮಾಂಡ್ ನಿರ್ಣಯ ಮಾಡುತ್ತದೆ. ಈಗಾಗಲೇ ಹೈಕಮಾಂಡ್ ಈ ಬಗ್ಗೆ ಹೇಳಿದ್ದು, ಅವರ ನಿರ್ಧಾರ ಏನೆಂಬುವುದು ಕಾದು ನೋಡಬೇಕು ಎಂದು ತಿಳಿಸಿದರು. ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ರಾಜಣ್ಣ ಹಾಗೂ ಅವರ ಮಗ ಈಗಾಗಲೇ ದೂರು ನೀಡಿದ್ದಾರೆ. ಅದು ಪೊಲೀಸರಿಂದ ತನಿಖೆ ನಡೆಯಬೇಕು. ನಾವು ಏನು ಹೇಳುವುದು ಸಾಧ್ಯವಿಲ್ಲ.
ಸತೀಶ್ - ಎಚ್‌ಡಿಕೆ ಯಾಕೆ ಭೇಟಿ ಮಾಡಿದ್ದಾರೋ ಗೊತ್ತಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್
ತನಿಖೆ ಮಾಡಲಿ ಕಾದು ನೋಡೋಣ. ಆ ಮಹಾನ್ ನಾಯಕ ಯಾರು ಅಂತ ಗೊತ್ತಾಗುತ್ತದೆ ಎಂದರು. ದಲಿತ ಸಚಿವರ ಮಾತಿಗೆ ಹೈಕಮಾಂಡ ಬೆಲೆ ನೀಡಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದೆಲ್ಲವೂ ಈಗ ಬೇಡ. ಯುಗಾದಿ ಹಾಗೂ ರಂಜಾನ ಹಬ್ಬವಿದ್ದು, ಅದರ ಬಗ್ಗೆ ಈಗ ಮಾತನಾಡುವುದು ಬೇಡ ಎಂದರು. ಸಚಿವ ಕೆ.ಜೆ. ಜಾರ್ಜ್ ನಿವಾಸದಲ್ಲಿ ಚರ್ಚೆ ನಡೆಸಿದ್ದರ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ರಾಜಕೀಯ ಅರ್ಥ ಕಲ್ಪಿಸುವುದು ಬೇಡ. ನಮ್ಮ ಜಿಲ್ಲೆ ಹಾಗೂ ಅವರ ಇಲಾಖೆಗೆ ಸಂಬಂಧಿಸಿದ ಅನೇಕ ಕೆಲಸಗಳಿವೆ. ಆದ್ದರಿಂದ ಭೇಟಿಯಾಗಿ ಅಭಿವೃದ್ಧಿ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದು ಹೇಳಿದರು.