
ಕಾರ್ಕಳ (ಮೇ.26): ಶಿಕ್ಷಣ ಕ್ಷೇತ್ರ ಮಣಿಪಾಲದಲ್ಲಿ ರಾಜಾರೋಷವಾಗಿ ರೌಡಿಗಳು ಗ್ಯಾಂಗ್ ವಾರ್ ನಡೆಸಿದ್ದಾರೆ. ಸಿನಿಮೀಯ ರೀತಿಯಲ್ಲಿ ಕಾರುಗಳನ್ನು ಬಳಸಿ ಕಾದಾಡಿದ್ದಾರೆ. ಕ್ರಿಮಿನಲ್‌ಗಳಿಗೆ ಆಳುವ ಸರ್ಕಾರದ ಕಾನೂನಿನ ಭಯ ಇಲ್ಲದಂತಾಗಿದೆ ಎಂಬುದಕ್ಕೆ ಇದೊಂದು ಜ್ವಲಂತ ಉದಾಹರಣೆ ಎಂದು ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉಡುಪಿ, ದಕ್ಷಿಣ ಕನ್ನಡದಂಥ ಜಿಲ್ಲೆಗಳಲ್ಲಿ ಮಾತ್ರವಲ್ಲ ಇಡೀ ರಾಜ್ಯದಲ್ಲಿ ಈಗ ಕಾನೂನು- ಸುವ್ಯವಸ್ಥೆ ಕುಸಿದು ಬಿದ್ದಿದೆ.
ಪೊಲೀಸ್ ಠಾಣೆಗಳನ್ನು ರಾಜಕೀಯ ದ್ವೇಷ ತೀರಿಸಿಕೊಳ್ಳುವ ಅಸ್ತ್ರವಾಗಿ ಬಳಸಿಕೊಳ್ಳುವುದಕ್ಕೆ ಕಾಂಗ್ರೆಸ್ ಸರ್ಕಾರ ಮುಂದಾಗಿದ್ದರ ಪರಿಣಾಮವಾಗಿ ಇಂದು ಕ್ರಿಮಿನಲ್‌ಗಳು ವಿಜೃಂಭಿಸುವಂತಾಗಿದೆ. ಇದು ಗೃಹ ಇಲಾಖೆ ಹಾಗೂ ಗೃಹ ಸಚಿವರ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿರುವ ಸುನಿಲ್ ಕುಮಾರ್, ಸಿದ್ದರಾಮಯ್ಯನವರೇ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿರುವ ನಿಮಗೆ ಸ್ವಾಗತ. ಆದರೆ ಇಲ್ಲಿಂದ ಹೊರಡುವುದಕ್ಕೆ ಮೊದಲು ಕೆಲ ಪ್ರಶ್ನೆಗಳಿಗೆ ಉತ್ತರಿಸಿ ಹೋಗಿ.
ಕಾನೂನು-ಸುವ್ಯವಸ್ಥೆ ಕಾಪಾಡಲಾರದ ಗೃಹ ಸಚಿವರಿಂದ ಎಂದು ರಾಜೀನಾಮೆ ಪಡೆಯುತ್ತೀರಿ?, ಪೊಲೀಸ್ ಠಾಣೆಯನ್ನು ಆಳುವ ಸರ್ಕಾರದ ಆಳಾಗಿಸಿಕೊಂಡಿರುವುದಕ್ಕೆ ಎಂದು ಮುಕ್ತಾಯ ಹಾಡುತ್ತೀರಿ?, ಕ್ರಿಮಿನಲ್‌ಗಳಿಗೂ ನಿಮ್ಮ ಸರ್ಕಾರಕ್ಕೂ ಒಳ ಒಪ್ಪಂದ ಏರ್ಪಟ್ಟಿದ್ದರೆ ಮಾಸಿಕ ಹಫ್ತಾ ಎಷ್ಟು ನಿಗದಿ ಮಾಡಿದ್ದೀರಿ?, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಪೊಲೀಸರ ಕೈ ಕಟ್ಟಿ ಹಾಕಿದ್ದೀರಾ?, ಜನರ ಶಾಂತಿ- ನೆಮ್ಮದಿ ಕಾಪಾಡಲಾರದ ಸರ್ಕಾರ ಅಧಿಕಾರದಲ್ಲಿದ್ದು ಪ್ರಯೋಜನವುಂಟೇ?.
ಕಾಂಗ್ರೆಸ್ಸಿಗೆ ರಾಜ್ಯ ಸರ್ಕಾರವೇ ಎಟಿಎಂ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ಕ್ರಿಮಿನಲ್‌ಗಳ ಅಟ್ಟಹಾಸ ನಿಲ್ಲಿಸದ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ಭಯವೇಕೆ?, ಸಿದ್ದರಾಮಯ್ಯನವರೇ ನಿಮಗೊಂದು ನೇರ ಸವಾಲು ಈ ಘಟನೆಗೆ ಕಾರಣವಾದ ಗ್ಯಾಂಗ್ ಸ್ಟಾರ್‌ಗಳನ್ನು ಎಷ್ಟು ಗಂಟೆಯೊಳಗೆ ಬಲಿ ಹಾಕುತ್ತೀರಿ? ಸಣ್ಣ ಕಾರಣಕ್ಕೆ ಶಾಸಕರನ್ನು ಬಂಧಿಸಲು ದಂಡು ಕಳುಹಿಸುವ ನಿಮ್ಮ ಸರ್ಕಾರಕ್ಕೆ ಪುಂಡರನ್ನು ಬಂಧಿಸುವ ಗಂಡೆದೆ ಇಲ್ಲವೇ? ಎಂದು ಸಿಎಂ ಹಾಗೂ ಸರ್ಕಾರದ ವಿರುದ್ಧ ಗುಡುಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.