ಸಚಿವ ಮಧು ಬಂಗಾರಪ್ಪಗೆ ಅಧಿಕಾರದ ಪಿತ್ತ ನೆತ್ತಿಗೇರಿದೆ: ಶಾಸಕ ಎಸ್.ಎನ್.ಚನ್ನಬಸಪ್ಪ ಆಕ್ರೋಶ

ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರಿಗೆ ಅಧಿಕಾರದ ಪಿತ್ತ ನೆತ್ತಿಗೇರಿದೆ. ಆಶ್ರಯ ವಸತಿ ಫಲಾನುಭವಿಗಳಿಗೆ ಲಾಟರಿ ಮೂಲಕ ಮನೆಗಳನ್ನು ವಿತರಿಸಲು ವಸತಿ ಸಚಿವ ಜಮೀರ್ ಅಹಮ್ಮದ್ ಬರಬೇಕಾಗಿತ್ತು.

Mla SN Channabasappa Slams On Minister Madhu Bangarappa At Shivamogga

ಶಿವಮೊಗ್ಗ (ಜ.29): ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರಿಗೆ ಅಧಿಕಾರದ ಪಿತ್ತ ನೆತ್ತಿಗೇರಿದೆ. ಆಶ್ರಯ ವಸತಿ ಫಲಾನುಭವಿಗಳಿಗೆ ಲಾಟರಿ ಮೂಲಕ ಮನೆಗಳನ್ನು ವಿತರಿಸಲು ವಸತಿ ಸಚಿವ ಜಮೀರ್ ಅಹಮ್ಮದ್ ಬರಬೇಕಾಗಿತ್ತು. ಆದರೆ, ಸಚಿವ ಮಧು ಬಂಗಾರಪ್ಪ ಮಂತ್ರಿಗಳು ಬರುವುದನ್ನು ತಡೆದಿದ್ದಾರೆ. ಈ ದುಷ್ಟಬುದ್ಧಿ ಯಾಕೆ ? ಇದು ಯಾವ ಪುರುಷಾರ್ಥಕ್ಕೆ ಎಂಬುದು ಯಕ್ಷ ಪ್ರಶ್ನೆಯಾಗಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋವಿಂದಾಪುರದಲ್ಲಿ ನಿರ್ಮಾಣವಾಗುತ್ತಿರುವ ಆಶ್ರಯ ವಸತಿ ಸಮುಚ್ಛಯದಲ್ಲಿ 658 ಮನೆಗಳನ್ನು ಫಲಾನುಭವಿಗಳಿಗೆ ಲಾಟರಿ ಮೂಲಕ ವಿತರಿಸಲು ಮಂಗಳವಾರ ವಸತಿ ಸಚಿವ ಜಮೀರ್ ಅಹಮ್ಮದ್ ಬರಬೇಕಾಗಿತ್ತು. ನಾನು ಅವರೊಡನೆ 4 ರಿಂದ 5 ಸಭೆ ಮಾಡಿ ಚರ್ಚಿಸಿದ್ದೆ. ವಿದ್ಯುತ್ ಸಂಪರ್ಕಕ್ಕೆ 12 ಕೋಟಿ ರು. ಬೇಕು ಅಂತ ತಿಳಿಸಿದ್ದೆ. ಅದಕ್ಕೆ ಜಮೀರ್ ಒಪ್ಪಿದ್ದರು. ಆದರೆ ಸಚಿವ ಮಧು ಬಂಗಾರಪ್ಪ ಮಂತ್ರಿಗಳು ಬರುವುದನ್ನು ತಡೆದು ಅಡ್ಡಗಾಲು ಹಾಕಿದ್ದಾರೆ. ಈ ಮೂಲಕ ಸಚಿವರು ತಾವು ಬಡವರ ವಿರೋಧಿ ಎಂಬುದನ್ನು ಸಾಬೀತು ಪಡಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Latest Videos

ಶರಾವತಿ ಸಂತ್ರಸ್ತರಿಗೆ ನ್ಯಾಯ ಕೊಡಿಸುವ ಜವಾಬ್ದಾರಿ ನಮ್ಮ ಮೇಲಿದೆ: ಮಧು ಬಂಗಾರಪ್ಪ

ನಾನು ಜಮೀರ್ ಅವರೊಡನೆ ಮಾತನಾಡಿದ್ದರ ಪರಿಣಾಮ ಸ್ಲಂ ಬೋರ್ಡ್ ಸಮಸ್ಯೆ ಪರಿಹಾರವಾಯಿತು. ನಾನು ಆಶ್ರಯ ಸಮಿತಿಯ ಅಧ್ಯಕ್ಷ. ಮನೆ ಹಂಚಿಕೆ ವಿಷಯದ ಕುರಿತು ಸಚಿವರ ಜೊತೆ ಮಾತನಾಡಿದ್ದೇನೆ. ಆದರೆ, ಬಡವರಿಗೆ ಮನೆ ಹಂಚಿಕೆಗೂ ಪುರುಸೊತ್ತು ಇಲ್ಲ ಅಂದರೆ ಮಧುಬಂಗಾರಪ್ಪ ಅವರಿಗೆ ಉಸ್ತುವಾರಿ ಸಚಿವರ ಪಟ್ಟ ಯಾಕೆ ಬೇಕು ಎಂದು ಪ್ರಶ್ನಿಸಿದರು. ಫೆ.4ರಂದು ಆಶ್ರಯ ಸಮಿತಿ ಸಭೆ ಕರೆದಿದ್ದೇನೆ. ಆಶ್ರಯ ಸಮಿತಿಯ ನಿರ್ಣಯವಿಲ್ಲದೆ ಸಚಿವರು ಆಶ್ರಯ ಮನೆ ಹಂಚುತ್ತಾರಾ ಎಂದು ಸವಾಲು ಹಾಕಿದ ಅವರು, ಕೆ.ಎಸ್.ಈಶ್ವರಪ್ಪ ಗ್ರಾಮೀಣಾಭಿವೃದ್ಧಿ ಸಚಿವರಿದ್ದಾಗ ಕುಡಿಯುವ ನೀರಿಗೆ 16 ಕೋಟಿ ರು. ನೀಡಿದ್ದರು. 

ಬಡ ಫಲಾನುಭವಿಗಳು ಸಾಲ ಸೋಲ ಮಾಡಿ, ಮಾಂಗಲ್ಯ ಸರ ಅಡವಿಟ್ಟು 21 ಕೋಟಿ ರು. ನೀಡಿದ್ದಾರೆ. ಆಶ್ರಯ ಯೋಜನೆ ಬಂಗಾರಪ್ಪ ತಂದಿದ್ದು ನಿಜ. ಆದರೆ, ಈಗ ನೀವೇನು ಮಾಡ್ತಾ ಇದ್ದೀರಿ ? ನಿಮ್ಮದೇ ಸರ್ಕಾರ ಇದ್ದರೂ ಹಣ ತರುವ ಯೋಗ್ಯತೆ ನಿಮಗಿಲ್ಲ ಎಂದು ಛೇಡಿಸಿದರು. ಜುಲೈ 2023ರೊಳಗೆ ನಿರ್ಮಾಣದ ಯೋಜನೆ ಮುಗಿಯಬೇಕಿತ್ತು. 3000 ಮನೆ ನಿರ್ಮಾಣಕ್ಕೆ ಅವಕಾಶವಿದೆ. 620 ಮನೆ ಕೊಟ್ಟಾಗಿದೆ. 652ಕ್ಕೆ ಈಗ ಅವಕಾಶವಿದೆ. 576 ಮನೆಗಳು ಮುಗಿಯುವ ಹಂತದಲ್ಲಿವೆ. ಬಡ ಫಲಾನುಭವಿಗಳ 21 ಕೋ ಟಿ ರು. ಗುತ್ತಿಗೆದಾರರಿಗೆ ಸಂದಾಯ ಮಾಡಲಾಗಿದೆ. ಮನೆ ಹಸ್ತಾಂತರಿಸದೆ ಬಡವರನ್ನು ಭಿಕ್ಷೆ ಬೇಡುವ ಸ್ಥಿತಿಗೆ ತಂದಿದ್ದೀರಿ. ನಿಮ್ಮಪ್ಪನ ಆಸ್ತಿಯನ್ನು ಅವರು ಕೇಳುತ್ತಿಲ್ಲ ಎಂದು ಹರಿಹಾಯ್ದರು.

ಬಡವರಿಗೆ ಮನೆ ಕೊಟ್ಟರೆ ಬ್ಯಾಂಕ್ ನವರು ಸಾಲ ಕೊಡುತ್ತಾರೆ. ನಮ್ಮ ಕರ್ತವ್ಯ ಮಾಡ್ಳಿಕ್ಕೂ ಬಿಡ್ತಿಲ್ಲ. ಅದ್ಕೂ ಅಡ್ಡ ಬರ್ತಾರೆ ಎಂದು ದೂರಿದ ಅವರು, ಇನ್ನು ಯಾವುದೇ ಕಾರಣಕ್ಕೂ ಸಚಿವರ ಉದ್ಧಟತನವನ್ನು ಸಹಿಸಿಕೊಳ್ಳುವುದಿಲ್ಲ. ಬ್ರಹ್ಮ ಬಂದರೂ ಮನೆ ಹಸ್ತಾಂತರವನ್ನು ನಿಲ್ಲಿಸುವುದಿಲ್ಲ. ಬಡವರ ಜೊತೆ ಹುಡುಗಾಟ ಮಾಡುತ್ತಿರುವ ಸಚಿವರಿಗೆ ಏರಿದ ಪಿತ್ತವನ್ನು ಇಳಿಸಲು ಬಡವರೇ ಬರ್ತಾರೆ ಎಂದು ಗುಡುಗಿದರು. ಸಚಿವ ಮಧು ಶಿವಮೊಗ್ಗದ ರಾಜಕೀಯ ಸಂಸ್ಕೃತಿಯನ್ನು ಹಾಳುಮಾಡುತ್ತಿದ್ದಾರೆ. ಅವರು ತಮ್ಮ ನಾಲಿಗೆ ಮೇಲೆ ಹಿಡಿತ ಸಾಧಿಸಲಿ. ಅಧಿಕಾರಿಗಳ ಮೇಲೆ ಹಿಡಿತ ಸಾಧಿಸುವ ಸಂಚು ಬಿಡಬೇಕು. ಸಚಿವರ ಉದ್ಧಟತನಕ್ಕೆ ಉತ್ತರ ಕೊಡುವುದು ನಮಗೂ ಗೊತ್ತಿದೆ ಎಂದರು.

ಮುಡಾ ಕೇಸಲ್ಲಿ ಲೋಕಾಯುಕ್ತ ಕ್ಲೀನ್ ಚಿಟ್ ನೀಡಿದ್ರೆ ಹೋರಾಟ: ವಿಜಯೇಂದ್ರ

ಇತ್ತೀಚೆಗೆ ಸರ್ಕಾರಿ ಅಧಿಕಾರಿಗಳು ಶಿಷ್ಟಾಚಾರದ ಉಲ್ಲಂಘನೆ ಮಾಡುತ್ತಿದ್ದಾರೆ. ಯಾವುದೇ ಸರ್ಕಾರಿ ಕಾರ್ಯಕ್ರಮಗಳು ಅಥವಾ ಸಭೆಗಳು ಇರುವಾಗ ಕರಪತ್ರದಲ್ಲಿ ಔಪಚಾರಿಕವಾಗಿ ಹೆಸರನ್ನು ಹಾಕುತ್ತಾರೆ ಅಷ್ಟೇ. ಆದರೆ, ಅದನ್ನು ಅಧಿಕೃತವಾಗಿ ನಮಗೆ ತಲುಪಿಸುವುದಿಲ್ಲ. ನಮಗೆ ಆಹ್ವಾನ ಕೂಡ ಮಾಡದೇ, ಕಾರ್ಯಕ್ರಮದ ಬಗ್ಗೆ ತಿಳಿಸದೇ ಅವಮಾನ ಮಾಡುತ್ತಿದ್ದಾರೆ. ಇದು ಬಿಜೆಪಿಯ ವಿಧಾನ ಪರಿಷತ್ ಸದಸ್ಯರಿಗೆ, ಸಂಸದರಿಗೂ ಈ ರೀತಿಯ ಅನುಭವವಾಗಿದೆ. ಆದ್ದರಿಂದ ಇದರ ವಿರುದ್ಧ ಸದನದ ಕಲಾಪದಲ್ಲಿ ಹಕ್ಕುಚ್ಯುತಿ ಮಂಡಿಸಲಾಗುವುದು ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಡಿ.ಮೋಹನ್ ರೆಡ್ಡಿ, ದೀನದಯಾಳ್, ಮಂಜುನಾಥ್ ನವಿಲೆ, ಕೆ.ವಿ.ಅಣ್ಣಪ್ಪ, ಶ್ರೀನಾಗ್ ಇದ್ದರು.

vuukle one pixel image
click me!
vuukle one pixel image vuukle one pixel image