ವೈಯಕ್ತಿಕವಾಗಿ ಯಾರ ಮೇಲೂ ನನಗೆ ದ್ವೇಷ ಇಲ್ಲ| ಮಂತ್ರಿ ಮಾಡಿ ಎಂದು ನಾನು ಯಾರ ಮನೆ ಬಳಿಯೂ ಹೋಗಿಲ್ಲ| 1993ರಿಂದ ಬಿಜೆಪಿಯಲ್ಲಿದ್ದು, ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಮೂರು ಬಾರಿ ಶಾಸಕನಾಗಿ ಆಯ್ಕೆ ಆಗಿದ್ದೇನೆ| ಬಿಜೆಪಿ ಯುವಕರ ಪಕ್ಷವಾಗಿದ್ದು, ಯುವಕರಿಗೆ ಆದ್ಯತೆ ನೀಡಿದರೆ ಪಕ್ಷಕ್ಕೆ ಅನುಕೂಲ: ಸತೀಶ್ ರೆಡ್ಡಿ|
ಬೆಂಗಳೂರು(ಜ.14): ಮುಖ್ಯಮಂತ್ರಿಗಳ ಸುತ್ತಮುತ್ತ ಓಡಾಡುವವರಿಗೆ ಮಾತ್ರ ಮಣೆ ಹಾಕಿದರೆ ಸಹಜವಾಗಿ ನೋವು ಆಗಲಿದೆ ಎಂದು ಸಚಿವ ಸ್ಥಾನದ ಆಕಾಂಕ್ಷಿ ಆಗಿದ್ದ ಶಾಸಕ ಸತೀಶ್ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದ ಮಾಜಿ ಸಚಿವ ಅನಂತಕುಮಾರ್ ಅವರು ಇಲ್ಲದಿರುವುದು ನಮ್ಮನ್ನು ಕಾಡುತ್ತಿದೆ. ಅಣ್ಣನಂತೆ ಇದ್ದ ಅನಂತ ಕುಮಾರ್ ಅವರ ಬಳಿ ನೋವು ಹೇಳಿಕೊಳ್ಳುತ್ತಿದ್ದೆವು. ಅಲ್ಲದೆ, ಶಾಸಕರ ನೋವನ್ನು ಕೇಂದ್ರದ ಗಮನಕ್ಕೆ ತರುವ ಪ್ರಯತ್ನ ಅವರು ಮಾಡುತ್ತಿದ್ದರು. ಅನಂತಕುಮಾರ್ ಇದ್ದಿದ್ದರೆ ಖಂಡಿತವಾಗಿಯೂ ಪರಿಹಾರ ಸಿಗುತ್ತಿತ್ತು ಎಂದು ಹೇಳಿದರು.
undefined
ವೈಯಕ್ತಿಕವಾಗಿ ಯಾರ ಮೇಲೂ ನನಗೆ ದ್ವೇಷ ಇಲ್ಲ. ಮಂತ್ರಿ ಮಾಡಿ ಎಂದು ನಾನು ಯಾರ ಮನೆ ಬಳಿಯೂ ಹೋಗಿಲ್ಲ. 1993ರಿಂದ ಬಿಜೆಪಿಯಲ್ಲಿದ್ದು, ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಮೂರು ಬಾರಿ ಶಾಸಕನಾಗಿ ಆಯ್ಕೆ ಆಗಿದ್ದೇನೆ. ಬಿಜೆಪಿ ಯುವಕರ ಪಕ್ಷವಾಗಿದ್ದು, ಯುವಕರಿಗೆ ಆದ್ಯತೆ ನೀಡಿದರೆ ಪಕ್ಷಕ್ಕೆ ಅನುಕೂಲವಾಗಲಿದೆ ಎಂಬುದು ನನ್ನ ಅಭಿಪ್ರಾಯ ಎಂದರು.
ಯಡಿಯೂರಪ್ಪ ಅವರಿಗೆ ಸಮಾನಂತರವಾಗಿ ನಿಲ್ಲುವ ವ್ಯಕ್ತಿತ್ವ ಹೊಂದಿದವರು ಅನಂತಕುಮಾರ್. ಯಡಿಯೂರಪ್ಪ ತಂದೆಯಂತೆ ಇದ್ದರೆ, ಅನಂತಕುಮಾರ್ ಅಣ್ಣನಂತೆ ಇದ್ದರು. ಯಡಿಯೂರಪ್ಪ ಪರಿಹಾರ ಕೊಡುವ ಸ್ಥಿತಿಯಲ್ಲಿ ಇಲ್ಲ ಎಂದು ತಿಳಿಸಿದರು.
ಯಡಿಯೂರಪ್ಪನವರೇ ನಿಮ್ಮ ಮನೆ ದೇವರು ನಿಮಗೆ ಒಳ್ಳೇದು ಮಾಡಲ್ಲ: ವಿಶ್ವನಾಥ್
ರೀ ಯಡಿಯೂರಪ್ಪನವರೇ...
ಇದಕ್ಕೂ ಮುನ್ನ ಖಾರವಾಗಿ ಟ್ವೀಟ್ ಮಾಡಿದ್ದ ಸತೀಶ್ ರೆಡ್ಡಿ, ರೀ ಯಡಿಯೂರಪ್ಪನವರೇ ಮಂತ್ರಿಮಂಡಲ ವಿಸ್ತರಣೆಯಲ್ಲಿ ಸಚಿವರ ಆಯ್ಕೆ ಪ್ರಕ್ರಿಯೆಯ ಮಾನದಂಡಗಳೇನು? ನಿಮಗೆ ನಮ್ಮ ರಾಜ್ಯ ಮತ್ತು ರಾಷ್ಟ್ರದ ನಾಯಕರುಗಳಿಗೆ ನಿಷ್ಠಾವಂತ ಯುವ ಕಾರ್ಯಕರ್ತರು ಕಾಣುತ್ತಿಲ್ಲವೆ? ನಮ್ಮ ಕಷ್ಟ ನಷ್ಟಗಳನ್ನು ಆಲಿಸುತ್ತಿದ್ದ ಅನಂತಕುಮಾರ್ ಅವರು ಇಲ್ಲದಿರುವಿಕೆ ಎದ್ದು ಕಾಣುತ್ತಿದೆ ಎಂದು ಟ್ವೀಟ್ ಮಾಡಿದ್ದರು.
ಸ್ವಲ್ಪ ಸಮಯದ ಬಳಿಕ ಸತೀಶ್ ರೆಡ್ಡಿ ಅವರು ‘ರೀ’ ಎಂಬ ಪದವನ್ನು ತೆಗೆದು ಪರಿಷ್ಕರಿಸಿ, ನಾನು ಭಾವುಕನಾಗಿದ್ದ ಹಿನ್ನೆಲೆಯಲ್ಲಿ ರೀ ಯಡಿಯೂರಪ್ಪನವರೇ ಎಂದು ಟ್ವೀಟ್ ಮಾಡಿದ್ದೆ. ಆ ಪದವನ್ನು ತೆಗೆದು ಹಾಕಲಾಗಿದೆ. ವೈಯಕ್ತಿಕವಾಗಿ ನನಗೆ ಯಾರ ಮೇಲೂ ದ್ವೇಷ ಇಲ್ಲ ಎಂದು ಸ್ಪಷ್ಟಪಡಿಸಿದರು.