Karnataka Politics: ಈಶ್ವರಪ್ಪ ಮದುವೆಗೆ ಹೆಣ್ಣಿನವರು ಒಪ್ಪಬೇಕಲ್ವಾ?: ಪ್ರಿಯಾಂಕ್‌

Published : Sep 19, 2022, 03:00 AM IST
Karnataka Politics: ಈಶ್ವರಪ್ಪ ಮದುವೆಗೆ ಹೆಣ್ಣಿನವರು ಒಪ್ಪಬೇಕಲ್ವಾ?: ಪ್ರಿಯಾಂಕ್‌

ಸಾರಾಂಶ

ಮರಳಿ ಸಚಿವ ಸಂಪುಟ ಸೇರುವ ಬಗ್ಗೆ ಮಾಜಿ ಸಚಿವ ಈಶ್ವರಪ್ಪ ‘ನಾನು ಇವತ್ತೇ ಮದುವೆ ಗಂಡು ಆಗಲು ತಯಾರಿದ್ದೇನೆ’ ಎಂದು ನೀಡಿರುವ ಹೇಳಿಕೆಗೆ ಶಾಸಕ ಪ್ರಿಯಾಂಕ್‌ ಖರ್ಗೆ ತಿರುಗೇಟು ನೀಡಿದ್ದಾರೆ. ಈಶ್ವರಪ್ಪ ಮದುವೆ ಗಂಡಾಗಲು ರೆಡಿ ಇದ್ದಾರೆ. 

ಕಲಬುರಗಿ (ಸೆ.19): ಮರಳಿ ಸಚಿವ ಸಂಪುಟ ಸೇರುವ ಬಗ್ಗೆ ಮಾಜಿ ಸಚಿವ ಈಶ್ವರಪ್ಪ ‘ನಾನು ಇವತ್ತೇ ಮದುವೆ ಗಂಡು ಆಗಲು ತಯಾರಿದ್ದೇನೆ’ ಎಂದು ನೀಡಿರುವ ಹೇಳಿಕೆಗೆ ಶಾಸಕ ಪ್ರಿಯಾಂಕ್‌ ಖರ್ಗೆ ತಿರುಗೇಟು ನೀಡಿದ್ದಾರೆ. ಈಶ್ವರಪ್ಪ ಮದುವೆ ಗಂಡಾಗಲು ರೆಡಿ ಇದ್ದಾರೆ. ಆದ್ರೆ ಹೆಣ್ಣಿನವರು ಒಪ್ಪಬೇಕಲ್ವಾ? ಪ್ರೀತಿ ಯಾವತ್ತೂ ಟೂ ವೇ ಇದ್ರೆ ಸಂಸಾರ ಮಾಡಬಹುದು. ಇದು ಒನ್‌ ವೇ ಆಯ್ತಲ್ಲ ಎಂದು ಲೇವಡಿ ಮಾಡಿದರು. ಸಂಪುಟದಲ್ಲಿ ಸೇರೋದು ಬಿಡಿ, ಕೈ ಬಿಡುವಾಗಲೂ ಎಷ್ಟುಸಲೀಸಾಗಿ ಬಿಟ್ರು. ಯಾರಾದರೂ ಒಬ್ಬ ಮಂತ್ರಿಯಾದ್ರೂ ಬಂದು ಈಶ್ವರಪ್ಪ ಅವರನ್ನು ಸಮರ್ಥಿಸಿಕೊಂಡ್ರಾ? ಸಿಎಂ ಕೂಡಾ ಈಶ್ವರಪ್ಪ ಅವರನ್ನು ಸದನದಲ್ಲಿ ಸಮರ್ಥಿಸಿಕೊಳ್ಳಲಿಲ್ಲ. ನಮ್ಮ ಪ್ರತಿಭಟನೆ ನಂತರ ಬಿಜೆಪಿ ಮುಜುಗರಕ್ಕೊಳಗಾಗಿ ಈಶ್ವರಪ್ಪ ರಾಜೀನಾಮೆ ಕೊಟ್ಟರು. ನಾವು ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಮಿಸ್‌ಕಾಲ್‌ ದಾಖಲೆ ಆರಂಭಿಸಿದ್ದೇವೆ. 75 ಸಾವಿರ ಮಿಸ್‌ಕಾಲ್‌ಗಳು ಕೇವಲ ನಾಲ್ಕು ದಿನಗಳಲ್ಲಿ ಬಂದಿವೆ ಎಂದರು.

ಟಿಕೆಟ್‌ ಸಮೀಕ್ಷೆ ನಡೆಸುತ್ತಿದ್ದಾರೆ: ಡಿ.ಕೆ.ಶಿವಕುಮಾರ್‌ ಅವರು ಪಕ್ಷದ ಅಧ್ಯಕ್ಷರು. ಅಧ್ಯಕ್ಷರು ಕೂಡಾ ಆಂತರಿಕ ಸಮೀಕ್ಷೆ ನಡೆಸುತ್ತಿದ್ದಾರೆ. ಯಾರು ಕ್ರಿಯಾಶೀಲರು, ಕೆಲಸ ಹೇಗೆ ಮಾಡುತ್ತಿದ್ದಾರೆಂದು ನೋಡುತ್ತಿದ್ದಾರೆ. ಟಿಕೆಟ್‌ ನೀಡುವಲ್ಲಿ ಅವರ ಅಭಿಪ್ರಾಯವೂ ಪ್ರಮುಖವಾಗುತ್ತದೆ ಎಂದು ಶಾಸಕ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ. ಕೆಲಸ ಮಾಡುವವರಿಗೆ ಮಾತ್ರ ಮುಂದಿನ ಚುನಾವಣೆಯಲ್ಲಿ ಟಿಕೆಟ್‌ ನೀಡಲಾಗುವುದು ಎಂದು ಡಿಕೆಶಿ ಹೇಳಿರುವುದಕ್ಕೆ ಕಾಂಗ್ರೆಸ್‌ನಲ್ಲೇ ಕೆಲವರು ವಿರೋಧಿಸಿದ್ದು, ಟಿಕೆಟ್‌ ನೀಡುವುದು ವರಿಷ್ಠರು ಎಂದಿದ್ದಾರಲ್ಲ ಎಂದು ಕಲಬುರಗಿಯಲ್ಲಿ ಸುದ್ದಿಗಾರರು ಪ್ರಶ್ನಿಸಿದ್ದಕ್ಕೆ ಪ್ರಿಯಾಂಕ್‌ ಅವರು ಈ ರೀತಿ ಪ್ರತಿಕ್ರಿಯಿಸಿದರು.

Karnataka Politics: ತಾಕತ್ತಿದ್ದರೆ ಭ್ರಷ್ಟಾಚಾರ ತನಿಖೆ ಮಾಡಿ: ಸಿಎಂಗೆ ಪ್ರಿಯಾಂಕ್‌ ಖರ್ಗೆ ಸವಾಲ್‌

ಮತಾಂತರ ಕಾಯ್ದೆ ವಿರುದ್ಧ ಕೋರ್ಟ್‌ಗೆ: ‘ರಾಜ್ಯ ಸರ್ಕಾರದ ಮತಾಂತರ ನಿಷೇಧ ಕಾಯ್ದೆಯು ಧಾರ್ಮಿಕ ಸ್ವಾತಂತ್ರ್ಯ ಹಾಗೂ ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು ಕಸಿಯುವ ಕಾನೂನು. ಹೀಗಾಗಿ ವಿಧೇಯಕದ ವಿರುದ್ಧ ಕಾನೂನು ಹೋರಾಟ ನಡೆಸುತ್ತೇವೆ. ನಾವು ಅಧಿಕಾರಕ್ಕೆ ಬಂದರೆ ಕಾಯ್ದೆಯನ್ನು ಹಿಂಪಡೆಯುತ್ತೇವೆ’ ಎಂದು ಮಾಜಿ ಸಚಿವ ಹಾಗೂ ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ ಖರ್ಗೆ ಹೇಳಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಕಾಯ್ದೆ ಅಸಂವಿಧಾನಿಕವಾಗಿದ್ದು, ಸಂವಿಧಾನದ ಪರಿಚ್ಛೇದ 25ರಿಂದ 28ರವರೆಗೂ ನೀಡಿರುವ ಧರ್ಮದ ಆಚರಣೆ ಮತ್ತು ಪ್ರಚಾರದ ಹಕ್ಕನ್ನು ಕಸಿಯುತ್ತದೆ. ಈ ವಿಧೇಯಕ ಸುಪ್ರೀಂ ಕೋರ್ಟ್‌ ತೀರ್ಪುಗಳ ಉಲ್ಲಂಘನೆಯಾಗಿದ್ದು, ಕೇವಲ ಕೇಶವಕೃಪಾದ ಮನವೊಲಿಸಲು ಈ ಕಾಯ್ದೆ ತಂದಿದ್ದಾರೆ. ಈ ಕಾನೂನಿನ ಮಾನ್ಯತೆಯನ್ನು ನಾವು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ ಎಂದು ಕಿಡಿ ಕಾರಿದ್ದಾರೆ.

‘ಸರ್ಕಾರದ ವಿಧೇಯಕದ ಉದ್ದೇಶ ಹಾಗೂ ಕಾರಣಗಳಲ್ಲಿ ಬಲವಂತದ ಮತಾಂತರ ಹೆಚ್ಚಾಗುತ್ತಿದೆ ಎಂದು ಉಲ್ಲೇಖಿಸಿದೆ. ಸರ್ಕಾರದ ಬಳಿ ಈ ಬಲವಂತದ ಮತಾಂತರದ ಬಗ್ಗೆ ಅಂಕಿಅಂಶಗಳಿವೆಯೇ? ಕಳೆದ 3 ವರ್ಷಗಳಲ್ಲಿ ಎಷ್ಟುಮತಾಂತರವಾಗಿದೆ ಎಂದು ಹೇಳಿದೆಯೇ? ಸದನದಲ್ಲಿ ಚರ್ಚೆ ಮಾಡುವಾಗ ಬಿಜೆಪಿ ಶಾಸಕರು ಹೊಸದುರ್ಗದಲ್ಲಿ ತಮ್ಮ ತಾಯಿಗೆ ಒತ್ತಾಯಪೂರ್ವಕವಾಗಿ ಮತಾತಂತರ ಮಾಡಲಾಗಿದೆ ಎಂದು ಹೇಳಿಕೆ ನೀಡಿದ್ದರು. ತಹಸೀಲ್ದಾರ್‌ ಅವರು ತನಿಖೆ ವರದಿ ನೀಡಿದಾಗ ಅದರಲ್ಲಿ ತಾಲೂಕಿನಲ್ಲಿ ಎಲ್ಲಿಯೂ ಬಲವಂತದ ಮತಾಂತರ ಆಗಿಲ್ಲ ಎಂದು ತಿಳಿಸಲಾಗಿತ್ತು. ಇದಕ್ಕಾಗಿ ತಹಸೀಲ್ದಾರ್‌ ಅವರನ್ನೇ ವರ್ಗಾವಣೆ ಮಾಡಿದ್ದರು. ಬಲವಂತದ ಮತಾಂತರ ಎಂದು ಹೇಗೆ ಹೇಳುತ್ತೀರಿ?’ ಎಂದು ಪ್ರಶ್ನಿಸಿದರು.

‘ಇನ್ನು ಈ ವಿಧೇಯಕದಲ್ಲಿ ಸೆಕ್ಷನ್‌ 3ರಲ್ಲಿ ತಪ್ಪು ನಿರೂಪಣೆ, ಬಲವಂತ, ವಂಚನೆ, ಮದುವೆ ವಾಗ್ದಾನದಿಂದ ಮಾಡುವ ಮತಾಂತರ ನಿಷೇಧ ಎಂದು ಹೇಳಲಾಗಿದೆ. ಗುಜರಾತಿನಲ್ಲಿ ಇದೇ ಪ್ಯಾರ ಹಾಕಲಾಗಿದ್ದು, ಇದು ಅಂತರ್‌ಜಾತಿ ವಿವಾಹಕ್ಕೆ ಅಡ್ಡಿಯಾಗುತ್ತದೆ ಎಂಬ ಕಾರಣಕ್ಕೆ 2021ರಲ್ಲಿ ಇದಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಇದು ಸರ್ಕಾರದ ಗಮನಕ್ಕೆ ಬಂದಿಲ್ಲವೇ?’ ಎಂದು ತರಾಟೆಗೆ ತೆಗೆದುಕೊಂಡರು. ‘ಸೆಕ್ಷನ್‌ 4ನಲ್ಲಿ ಮತಾಂತರಗೊಂಡವರ ಬಗ್ಗೆ ರಕ್ತ ಸಂಬಂಧಿಗಳ ಮಾತ್ರವಲ್ಲ, ಮೂರನೇ ವ್ಯಕ್ತಿ ಕೂಡ ದೂರು ನೀಡಿದರೆ ಆ ದೂರು ದಾಖಲಾಗುತ್ತದೆ ಎಂದು ತಿಳಿಸಲಾಗಿದೆ. ಇದು ನೈತಿಕ ಪೊಲೀಸ್‌ ಗಿರಿಯಾಗಿದ್ದು, ಸಂವಿಧಾನ ವಿರುದ್ಧವಾಗಿದೆ. 

Karnataka Politics: ಡಬಲ್‌ ಎಂಜಿನ್‌ ಅಲ್ಲ, ಡಬಲ್‌ ದೋಖಾ ಸರ್ಕಾರ: ಪ್ರಿಯಾಂಕ್‌ ಖರ್ಗೆ

ದೂರು ಯಾರೇ ಕೊಟ್ಟರೂ ಈ ಪ್ರಕರಣವನ್ನು ಮತಾಂತರಗೊಂಡವರು ಸಾಬೀತುಪಡಿಸಬೇಕಾಗಿದೆ. ಇದು ಎಂತಹ ನ್ಯಾಯ ಹಾಗೂ ಕಾನೂನು?’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇನ್ನು ಯಾರಾದರೂ ಸ್ವಇಚ್ಛೆಯಿಂದ ಬೇರೆ ಧರ್ಮ ಪಾಲಿಸಬೇಕಾದರೆ, ಜಿಲ್ಲಾಧಿಕಾರಿಗಳು ಹಾಗೂ ಸಮಾಜ ಕಲ್ಯಾಣ ಇಲಾಖೆಗೆ ನೊಟೀಸ್‌ ನೀಡಿ ಅನುಮತಿ ಪಡೆಯಬೇಕೆಂದು ತಿಳಿಸಲಾಗಿದೆ. ಸಂವಿಧಾನದಲ್ಲಿ ನೀಡಲಾಗಿರುವ ಹಕ್ಕನ್ನು ಬಳಸಿಕೊಳ್ಳಲು ನಾವು ಸಚಿವಾಲಯ ಹಾಗೂ ಜಿಲ್ಲಾಧಿಕಾರಿಗಳ ಅನುಮತಿ ಯಾಕೆ ಪಡೆಯಬೇಕು?’ ಎಂದು ಪ್ರಶ್ನಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?
ಸಂಸದ ಭೀಮ್ ಆರ್ಮಿ ಸಹ ಸಂಸ್ಥಾಪಕ ಚಂದ್ರಶೇಖರ್ ಅಜಾದ್ ವಿರುದ್ಧ ಮಾಜಿ ಗರ್ಲ್‌ಫ್ರೆಂಡ್ ಬಾಂಬ್