ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರಗೆ ಜನರ ಬಗ್ಗೆ ನಿಜವಾದ ಕಾಳಜಿ, ಸ್ವಾಭಿಮಾನವಿದ್ದರೆ ಕೇವಲ ಒಂದು ದಿನದ ಅಹೋರಾತ್ರಿ ಪ್ರತಿಭಟನೆ ಬದಲು ಆಮರಣಾಂತರ ಉಪವಾಸ ಕೈಗೊಳ್ಳಲಿ.
ಚಿಕ್ಕಬಳ್ಳಾಪುರ (ಏ.03): ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರಗೆ ಜನರ ಬಗ್ಗೆ ನಿಜವಾದ ಕಾಳಜಿ, ಸ್ವಾಭಿಮಾನವಿದ್ದರೆ ಕೇವಲ ಒಂದು ದಿನದ ಅಹೋರಾತ್ರಿ ಪ್ರತಿಭಟನೆ ಬದಲು ಆಮರಣಾಂತರ ಉಪವಾಸ ಕೈಗೊಳ್ಳಲಿ. ನಾವೇ ಕಾಂಗ್ರೆಸ್ ನವರು ಜ್ಯೂಸ್ ತೆಗೆದುಕೊಂಡು ಹೋಗಿ ವಿಜಯೇಂದ್ರಣ್ಣ ಪ್ರತಿಭಟನೆ ಬಿಡಿ ಅನ್ನೋವರೆಗೂ ಉಪವಾಸ ಸತ್ಯಾಗ್ರಹ ಮಾಡಲಿ ಎಂದು ಶಾಸಕ ಪ್ರದೀಪ್ ಈಶ್ವರ್ ವ್ಯಂಗ್ಯವಾಡಿದರು. ನಮ್ಮ ಊರಿಗೆ ನಮ್ಮ ಶಾಸಕರು ಕಾರ್ಯಕ್ರಮದಡಿ ಬುಧವಾರ ತಾಲೂಕಿನ ಗೊಲ್ಲಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಿಗೆ ಬೇಟಿ ನೀಡಿ ಜನತೆಯ ಅಹವಾಲು ಸ್ವೀಕರಿಸಿದ ನಂತರ ನಾಸ್ತಿಮನಹಳ್ಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಪ್ರಚಾರಕ್ಕಾಗಿ ಬಿಜೆಪಿ ಪ್ರತಿಭಟನೆ: ಬೆಲೆ ಏರಿಕೆ ವಿರೋಧಿಸಿ ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ಬಿಜೆಪಿ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆ ಕುರಿತು ಮಾತನಾಡಿ, ಕೇವಲ ಪ್ರಚಾರಕ್ಕಾಗಿ ಒಂದು ದಿನ ಪ್ರತಿಭಟನೆ ಮಾಡೋದಲ್ಲ. ಮಾಧ್ಯಮಗಳಲ್ಲಿ ತೋರಿಕೆಗೆ, ಕೇಂದ್ರ ಸರ್ಕಾರದವರ ಒತ್ತಡಕ್ಕೆ ಮಾಡೋದು ಅಹೋರಾತ್ರಿ ಧರಣಿ, ಅದು ಬಿಟ್ಟು ನೇರವಾಗಿ ನಮ್ಮ ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ಮನೆಗೆ ಬಂದು ಮಾತಾಡಲಿ, ವಿಜಯೇಂದ್ರ ಅವರೇ ಬನ್ನಿ ಸಿಎಂ ಬಳಿ ಈ ಬಗ್ಗೆ ಮಾತನಾಡಿ, ಅದು ಬಿಟ್ಟು ಪ್ರಚಾರಕ್ಕಾಗಿ ಪ್ರತಿಭಟನೆ ಮಾಡೋದು ಸರಿಯಲ್ಲ ಎಂದು ಹೇಳಿದರು.
ಹೊಸ ಪಕ್ಷ ಕಟ್ಟಿದವರ್ಯಾರೂ ಯಶಸ್ವಿಯಾಗಿಲ್ಲ ಎಂದ ಮುರುಗೇಶ ನಿರಾಣಿ ಡಿಕೆಶಿ ಜೊತೆ ಪಿಸುಮಾತು
ಯರ್ರನಾಗೇನಹಳ್ಳಿ, ಮೋಟೂರು, ನಾರೇನಹಳ್ಳಿ, ಕೊಂಡೇನಹಳ್ಳಿ ನಾಸ್ತಿಮನ ಹಳ್ಳಿಗಳಲ್ಲಿ ಸಾಕಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗದವರೇ ಹೆಚ್ಚಾಗಿದ್ದಾರೆ. ಈ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸುಮಾರು 7 ಕಿಲೋ ಮೀಟರ್ ರಸ್ತೆ ಕಳೆದ ಹನ್ನೆರಡು ವರ್ಷಗಳಿಂದ ಹಾಳಾಗಿದೆ. ಅದಕ್ಕೆ 7 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಿಸಲು ಅದಿಕಾರಿಗಳಿಗೆ ಎಸ್ಟೀ ಮೇಟ್ ತಯಾರಿಸಲು ತಿಳಿಸಿದ್ದೇನೆ ಎಂದರು.
ಸಿಂಗಾಪುರ ಮಾಡಲಿಲ್ಲ: ಈ ಭಾಗದ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯ, ಬಸ್ ವ್ಯವಸ್ಥೆ ಮತ್ತು ಮೊಬೈಲ್ ನೆಟ್‍ವರ್ಕ್ ಸಮಸ್ಯೆ ಬಗ್ಗೆ ಜನ ಸಮಸ್ಯೆ ಹೇಳಿಕೊಂಡಿದ್ದಾರೆ. ಹಿಂದೆ ಶಾಸಕರಾಗಿ ಮತ್ತು ಈಗ ಸಂಸದರಾಗಿರುವ ಮಹಾನುಭಾವರು ಚಿಕ್ಕಬಳ್ಳಾಪುರವನ್ನು ಸಿಂಗಾಪುರ ಮಾಡೋದಾಗಿ ಹೇಳಿದ್ರು. ಇದೇನಾ ಅವರ ಅಭಿವೃದ್ದಿ ಎಂದು ಪರೋಕ್ಷವಾಗಿ ಸಂಸದ ಡಾ.ಕೆ.ಸುಧಾಕರ್ ವಿರುದ್ಧ ವಾಗ್ದಾಳಿ ನಡೆಸಿದರು. 2022ರಲ್ಲಿ ಇದ್ದ ಜಿಲ್ಲಾಧಿಕಾರಿ ಆರ್.ಲತ ಮತ್ತು ಸಚಿವರಾಗಿದ್ದ ಮಹಾನುಭಾವರು ಚಿಕ್ಕಬಳ್ಳಾಪುರ ಜಿಲ್ಲೆಯ ಸುಮಾರು 20,016.99 ಹೆಕ್ಟೇರ್ ಪ್ರದೇಶವನ್ನು ಪರಿಭಾವಿತ ಅರಣ್ಯ ಪ್ರದೇಶವೆಂದು ಘೋಷಿಸಿ ಅರಣ್ಯ ಇಲಾಖೆಗೆ ವರ್ಗಾಯಿಸಲು ಕಾರಣರಾಗಿದ್ದಾರೆ. ಸುಮಾರು ವರ್ಷಗಳಿಂದ ಉಳುಮೆ ಮಾಡುತ್ತಿದ್ದು ರೈತರಿಗೆ ಇದರಿಂದ ತೊಂದರೆಯಾಗಿದೆ ಎಂದರು.
ಬಿಜೆಪಿ ಕೇಂದ್ರ ಸರ್ಕಾರದ ಮೇಲೆ ಪ್ರತಿಭಟನೆ ಮಾಡಲಿ: ಸಚಿವ ರಾಮಲಿಂಗಾರೆಡ್ಡಿ
ಪರಿಭಾವಿತ ಅರಣ್ಯ, ಕೋರ್ಟ್‌ಗೆ ಮೊರೆ: ಅರಣ್ಯವಲ್ಲದ ಇತರೆ ಪ್ರದೇಶಗಳನ್ನು ಪರಿಭಾವಿತ ಅರಣ್ಯ ಪ್ರದೇಶದ ವ್ಯಾಪ್ತಿಗೆ ಸೇರ್ಪಡೆ ಮಾಡುವುದು ಸಮಂಜಸವಲ್ಲ. ಅಂತಹ ಪರಿಭಾವಿತ ಅರಣ್ಯ ಪ್ರದೇಶವನ್ನು ಅರಣ್ಯ ವ್ಯಾಪ್ತಿಯಿಂದ ಕೈಬಿಡಲು ಅಗತ್ಯ ಕ್ರಮವಹಿಸಲು ನಾವು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದು ಅಲ್ಲಿ ನ್ಯಾಯ ದೊರಕುವ ವಿಶ್ವಾಸವಿದೆ ಎಂದರು ಈ ವೇಳೆ ತಾಲೂಕು ತಹಸೀಲ್ದಾರ್ ಅನಿಲ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ್, ತಾಲೂಕು ಆರೋಗ್ಯ ಅಧಿಕಾರಿ ಡಾ.ಮಂಜುಳಾ,ಎಡಿಎಲ್ಆರ್ ವಿವೇಕ್ ಮಹದೇವ್, ಪಿಡಿಓ ಸತ್ಯಪ್ರಸಾದ್, ಮಂಡಿಕಲ್ ಮತ್ತು ಮಂಚೇನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗಭೂಷಣ್,ನಗರಸಭಾ ಸದಸ್ಯ ಕಣಿತಹಳ್ಳಿವೆಂಕಟೇಶ್, ಮುಖಂಡರಾದ ಅರವಿಂದ್, ಪೆದ್ದಣ್ಣ, ನುಗುತಹಳ್ಳಿ ರವಿ, ರಮೇಶ್ ಬಾಬು, ಜಿ.ಉಮೇಶ್, ಅಲ್ಲು ಅನಿಲ್, ವಿನಯ್ ಬಂಗಾರಿ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.