
ಹೊಸಕೋಟೆ (ಏ.03): ಬಿಜೆಪಿಯವರು ಬೆಲೆ ಏರಿಕೆ ಮುಂದಿಟ್ಟುಕೊಂಡು ರಾಜ್ಯ ಸರ್ಕಾರದ ಮೇಲೆ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಮಾಡುವ ಬದಲಾಗಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೇಲೆ ಮಾಡಲಿ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರಿ ಔಷಧಿಗಳ ಮೇಲೆ ಶೇ.12ರಷ್ಟು ಹೆಚ್ಚಳ, ಆರೋಗ್ಯ ವಿಮೆ ಮೇಲೆ ಶೇ.18ರಷ್ಟು ಜಿಎಸ್ಟಿ, ಎಟಿಎಂ ಬಳಕೆ ಶುಲ್ಕ ಹೆಚ್ಚಳ, ಟೋಲ್ ಶುಲ್ಕ ಹೆಚ್ಚಳ, ಅಕ್ಕಿ ಬೆಲೆ ಹೆಚ್ಚಳ, ಪೆಟ್ರೋಲ್ ಡೀಸೆಲ್ ಗ್ಯಾಸ್ ಬೆಲೆ ಹೆಚ್ಚಳ... ಹೀಗೆ ಮೋದಿ ಅಧಿಕಾರಕ್ಕೆ ಬಂದ ಮೇಲೆ ದೇಶದಲ್ಲಿ 100 ಕೋಟಿ ಜನ ಹಣವಿಲ್ಲದೆ ವಸ್ತುಗಳನ್ನ ಖರೀದಿ ಮಾಡುವ ಶಕ್ತಿ ಕಳೆದುಕೊಂಡಿದ್ದಾರೆ.
ಇದು ಮೋದಿ ಅವರ 11 ವರ್ಷದ ಸಾಧನೆ, ಇದರ ವಿರುದ್ಧ ಬಿಜೆಪಿಯವರು ಪ್ರತಿಭಟನೆ ಮಾಡಬೇಕು ಎಂದರು. 18 ಬಿಜೆಪಿ ಶಾಸಕರ ಅಮಾನತು ಸರಿ: ಸದನ ನಡೆಯುವ ಸಂದರ್ಭದಲ್ಲಿ ವಿರೋಧ ಪಕ್ಷದ 18 ಬಿಜೆಪಿ ಶಾಸಕರು ಸ್ಪೀಕರ್ ಕಟ-ಕಟೆಗೆ ಹತ್ತಿ ಗಲಾಟೆ ಮಾಡಿದ್ದು ರಾಜ್ಯದ ಜನರು ನೇರ ಪ್ರಸಾರದಲ್ಲಿ ನೋಡಿದ್ದಾರೆ. ಈ ರೀತಿಯ ಸ್ಪೀಕರ್ ಕಟ-ಕಟೆಗೆ ಹತ್ತಿ ಗಲಾಟೆ ಮಾಡಿದ್ದು ಇತಿಹಾಸದಲ್ಲೇ ಇಲ್ಲ. ಆದ್ದರಿಂದ ಸ್ಪೀಕರ್ ಅವರು ಅವರನ್ನು ಅಮಾನತು ಮಾಡಿದ್ದಾರೆ. ಬಿಜೆಪಿಯವರು ವಿನಾಕಾರಣ ಸುಳ್ಳು ಹೇಳುವುದು ಅವರಿಗೆ ಶೋಭೆಯಲ್ಲ ಎಂದರು.
ತಿಮ್ಮಪ್ಪನ ದರ್ಶನಕ್ಕೆ ಶಿಫಾರಸು ಬಗ್ಗೆ ಆಂಧ್ರ ಸಿಎಂ ಜತೆ ಚರ್ಚೆ: ಸಚಿವ ರಾಮಲಿಂಗಾರೆಡ್ಡಿ
ಸೂಕ್ತ ಜಾಗ ಕೊಟ್ಟರೆ ಕೆಎಸ್‌ಆರ್‌ಟಿಸಿ ಡಿಪೋ: ಹೊಸಕೋಟೆ ನಗರದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಡಿಪೋ ಹಾಗೂ ಬಸ್ ನಿಲ್ದಾಣಕ್ಕೆ ಶಾಸಕ ಶರತ್ ಬಚ್ಚೇಗೌಡ ಮನವಿ ಮಾಡಿದ್ದು ಸೂಕ್ತ ಜಾಗ ಕೊಟ್ಟರೆ ಕೂಡಲೇ ನಿರ್ಮಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ಬೆಂಗಳೂರು ನಗರಕ್ಕೆ ಹತ್ತಿರದಲ್ಲಿರುವ ಹೊಸಕೋಟೆ ವ್ಯಾಪಕವಾಗಿ ಬೆಳದಿದೆ. ಹೊಸಕೋಟೆ ಮೂಲಕವೇ ಆಂಧ್ರ, ತಮಿಳುನಾಡು ಹಾಗೂ ನೆರೆಯ ಕೋಲಾರ ಮಾಲೂರು, ಚಿಂತಾಮಣಿ ಭಾಗಗಳಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸುತ್ತವೆ. ಈಗ ಕೆಎಸ್‌ಆರ್‌ಟಿಸಿ ಘಟಕಕ್ಕೆ ಶಾಸಕ ಶರತ್ ಬಚ್ಚೇಗೌಡರು ಬೇಡಿಕೆ ಇಟ್ಟಿದ್ದಾರೆ. ಹೊಸಕೋಟೆ ನಗರಕ್ಕೆ ಈ ಹಿಂದೆ ಬಿಎಂಟಿಸಿ ಬಸ್ ಟರ್ಮಿನಲ್ ಸಹ ನಾನೇ ಕೊಟ್ಟಿದ್ದೆ. ಈಗ ಕೆಸ್‌ಆರ್‌ಟಿಸಿಗೆ ಸೂಕ್ತ ಜಾಗ ಕೊಟ್ಟರೆ ಡಿಪೋ ಹಾಗೂ ಬಸ್ ನಿಲ್ದಾಣ ಕೊಡುತ್ತೇನೆ ಎಂದರು.
ಆರೋಗ್ಯ ಯೋಜನೆ ವಿಸ್ತರಣೆ: ಸದ್ಯ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ನೌಕರರಿಗೆ ಕಲ್ಪಿಸಿರುವ ನಗದು ರಹಿತ ವೈದ್ಯಕೀಯ ಚಿಕಿತ್ಸೆ ನೀಡುವ ಆರೋಗ್ಯ ಯೋಜನೆಯನ್ನು ವಾಯುವ್ಯ ಹಾಗೂ ಕಲ್ಯಾಣ ಕರ್ನಾಟಕ ನಿಗಮಗಳಲ್ಲಿ ಹಂತ ಹಂತವಾಗಿ ಜಾರಿ ಮಾಡಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ಬಿಜೆಪಿಯ ಎಸ್.ಕೇಶವಪ್ರಸಾದ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಸಾರಿಗೆ ನೌಕರರು ಪ್ರತಿ ತಿಂಗಳು 660 ರು. ಕಟ್ಟಿದರೆ ಅವರ ತಂದೆ-ತಾಯಿ ಸೇರಿ ಕುಟುಂಬದ ಸದಸ್ಯರು ಉಚಿತವಾಗಿ ಚಿಕಿತ್ಸೆ ಪಡೆಯಬಹುದಾಗಿದೆ. ರಾಜ್ಯದ 250 ಆಸ್ಪತ್ರೆಗಳಲ್ಲಿ ಚಿಕಿತ್ಸೆ ದೊರೆಯಲಿದೆ ಎಂದರು.
ಅಶೋಕ್ ಅವಧಿಯಲ್ಲಿ ಶೇ.48ರಷ್ಟು ಬಸ್ ಪ್ರಯಾಣ ದರ ಹೆಚ್ಚಳ: ಸಚಿವ ರಾಮಲಿಂಗಾರೆಡ್ಡಿ ಟಾಂಗ್
ನಷ್ಟದಲ್ಲಿ ನಾಲ್ಕು ನಿಗಮ: ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ವಾಯುವ್ಯ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳು ನಷ್ಟದಲ್ಲಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದ ಸಾರಿಗೆ ಉತ್ತಮವಾಗಿದೆ. ಜನರಿಗೆ ಸೇವೆ ನೀಡುವುದೇ ಮೂಲ ಉದ್ದೇಶವಾಗಿದೆ ಎಂದರು. ಕಳೆದ 5 ವರ್ಷಗಳಲ್ಲಿ ಕೆಎಸ್‌ಆರ್‌ಟಿಸಿ ಒಟ್ಟು 1500.34 ಕೋಟಿ ರು., ಬಿಎಂಟಿಸಿ 1544.62 ಕೋಟಿ ರು., ಕಲ್ಯಾಣ ಕರ್ನಾಟಕ ಸಾರಿಗೆ 777.64 ಕೋಟಿ ರು. ಹಾಗೂ ವಾಯುವ್ಯ ಕರ್ನಾಟಕ ಸಾರಿಗೆ 1386.58 ಕೋಟಿ ರು. ನಷ್ಟದಲ್ಲಿದೆ ಎಂದು ಸಚಿವರು ವಿವರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.