ಹುಬ್ಬಳ್ಳಿಯಲ್ಲಿ 30 ವರ್ಷಗಳ ಹಿಂದೆ ರಾಮಜನ್ಮಭೂಮಿಗೆ ಹೋರಾಡಿದ ಹಿಂದೂಗಳನ್ನು ಬಂಧಿಸುತ್ತಿರುವ ಸರ್ಕಾರ, 3-4 ವರ್ಷಗಳ ಹಿಂದೆ ಗಲಭೆ ಮಾಡಿದವರನ್ನು ಯಾಕೆ ರಕ್ಷಣೆ ಮಾಡುತ್ತಿದೆ?
ಮಂಡ್ಯ (ಜ.02): ಹುಬ್ಬಳ್ಳಿಯಲ್ಲಿ ರಾಮ ಜನ್ಮಭೂಮಿ ಕುರಿತ ಹೋರಾಟ ಮಾಡಿದ ಹಿಂದೂ ಕಾರ್ಯಕರ್ತ ಕಳೆದ 31 ವರ್ಷದಿಂದ ನಗರದಲ್ಲಿಯೇ ವಾಸವಾಗಿದ್ದನು. ಆದರೆ, ರಾಮ ಮಂದಿರ ಉದ್ಘಾಟನೆ ವೇಳೆಯೇ ಹಿಂದೂ ಕಾರ್ಯಕರ್ತರನ್ನು ಯಾಕೆ ಬಂಧಿಸಿದ್ದೀರಿ ಎಂಬುದಕ್ಕೆ ಸರ್ಕಾರ ಸ್ಪಷ್ಟೀಕರಣ ನೀಡಬೇಕು ಎಂದು ಶಾಸಕ ಮಹೇಶ್ ಟೆಂಗಿನಕಾಯಿ ಆಗ್ರಹಿಸಿದರು.
ಮಂಡ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ- ಧಾರವಾಡದಲ್ಲಿ ಹಳೇ ಕೇಸ್ ರೀ ಓಪನ್ ಮಾಡಲಾಗಿದೆ. 31 ವರ್ಷದ ಹಿಂದಿನ ಘಟನೆಯ ಸಂಬಂಧ ಹಿಂದೂ ಕಾರ್ಯಕರ್ತರ ಬಂಧನವಾಗಿದೆ. ಈ ಪೈಕಿ ಒಬ್ಬರು ಕಳೆದ 30 ವರ್ಷಗಳು ಎಲ್ಲಿಯೂ ಹೋಗದೇ ಆಟೋ ಓಡಿಸುತ್ತಾ, ಸಾಮಾನ್ಯ ಜೀವನ ಮಾಡ್ತಿದ್ದ ವ್ಯಕ್ತಿಯನ್ನ ಈಗ ಯಾಕೆ ಬಂಧಸಿದ್ದೀರಾ? ಈ ಬಗ್ಗೆ ಸರ್ಕಾರ ಸ್ಪಷ್ಟೀಕರಣ ಕೊಡಬೇಕಾಗಿದೆ. ಒಂದೆಡೆ ವ್ಯಕ್ತಿ ಬಂಧಿಸಿದರೆ, ಮತ್ತೊಂದೆಡೆ ಈ ಸರ್ಕಾರ 3-4 ವರ್ಷ ಹಿಂದೆ ಹುಬ್ಬಳ್ಳಿ ಗಲಭೆ ಮಾಡಿದವರ ಪರ ನಿಲ್ಲುತ್ತದೆ ಎಂದು ಹೇಳಿದರು.
ರಾಮ ಜನ್ಮಭೂಮಿಗಾಗಿ 30 ವರ್ಷದ ಹಿಂದೆ ಹೋರಾಡಿದ ಹಿಂದೂ ಕಾರ್ಯಕರ್ತರನ್ನು ಬಂಧಿಸುತ್ತಿರುವ ಕಾಂಗ್ರೆಸ್ ಸರ್ಕಾರ!
ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಲ್ಪಸಂಖ್ಯಾತರು ಸಾವಿರಾರು ಸಂಖ್ಯೆಯಲ್ಲಿ ಸೇರಿ ಗಲಭೆ ನಡೆಸಿದ್ದರು. ಪೊಲೀಸ್ ಠಾಣೆ ಕಬ್ಜ ಮಾಡಿದ್ರು, ಕಮಿಷನರ್ ಕಾರು ಪುಡಿ ಮಾಡಿದರು, ಪೊಲೀಸರಿಗೆ, ಮಂದಿರಗಳಿಗೆ ಕಲ್ಲು ಹೊಡೆದರು. ಅವತ್ತು ಬಿಜೆಪಿ ಸರ್ಕಾರ 750 ಜನರನ್ನ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಿತ್ತು. ಆದರೆ ಕಾಂಗ್ರೆಸ್ ಬಂದ 6 ತಿಂಗಳಲ್ಲಿ ಡಿಸಿಎಂ ಪತ್ರ ಬರೆದಿದ್ದಾರೆ. ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿದ್ದವರು ಅಮಾಯಕರು. ಅವರನ್ನ ಬಿಡುಗಡೆ ಮಾಡುವಂತೆ ಪತ್ರ ಬರೆದಿದ್ದರು. ಒಂದೆಡೆ ಬಂಧನ ಮಾಡುವ ಕೆಲಸ ಮಾಡಿದ್ರೆ, ಮತ್ತೊಂದೆಡೆ ಈ ಸರ್ಕಾರ ಜೈಲಲ್ಲಿರುವ ಗಲಭೆಕೋರರನ್ನ ಬಿಡಿಸುವ ಪ್ರಯತ್ನ ಮಾಡುತ್ತಿದೆ. ಹಿಂದೂಗಳ ಮೇಲೆ ದ್ವೇಷಕಾರುವ ಕೆಲಸವನ್ನ ಈ ಸರ್ಕಾರ ವ್ಯವಸ್ಥಿತವಾಗಿ ಮಾಡುತ್ತಿದೆ ಎಂದು ಕಿಡಿಕಾರಿದರು.
ಅಯೋಧ್ಯೆ ರಾಮಮಂದಿರ ಉದ್ಘಾಟನೆ ಮಾಡುವುತ್ತಿರುವುದು ಇಡೀ ದೇಶ, ಜಗತ್ತಿಗೆ ಸಂತಸದ ವಿಷಯವಾಗಿದೆ. ಜ.22ಕ್ಕೆ ಅಭೂತಪೂರ್ವ ಕಾರ್ಯಕ್ರಮ ನಡೆಯಲಿದೆ. ದೇಶದ 140 ಕೋಟಿ ಜನರ ಹೆಮ್ಮೆಯ ವಿಚಾರವಾಗಿದೆ. ಈ ಸಂಧರ್ಭದಲ್ಲಿ ದ್ವೇಷ ರಾಜಕಾರಣವನ್ನು ಕಾಂಗ್ರೆಸ್ ಮಾಡ್ತಿದೆ. ಪೊಲೀಸರನ್ನ ದುರುಪಯೋಗ ಪಡಿಸಿಕೊಳ್ತಿದೆ. ಇದು ನಮ್ಮ ದಿನಚರಿ ಕೆಲಸ ಎಂದು ಗೃಹಸಚಿವರು ಹೇಳಿದ್ದಾರೆ. ಎಲ್‌ಒಪಿ ಕೇಸ್‌ಗಳಲ್ಲಿ ಇದು ಒಂದು ಎಂದು ಹೇಳಿಕೆ ನೀಡಿದ್ದಾರೆ. 31 ವರ್ಷದಲ್ಲಿ ಬಹಳಷ್ಟು ಬಾರಿ ನಿಮ್ಮದೆ ಸರ್ಕಾರ ಇತ್ತು. ಹಾಗಾದ್ರೆ ನಿಮ್ಮ ವೈಫಲ್ಯನಾ ಅಥವಾ ಪೊಲೀಸರ ವೈಫಲ್ಯವಾ? ಈ ಕೇಸ್‌ನಲ್ಲಿದ್ದ ವ್ಯಕ್ತಿಯನ್ನ 31 ವರ್ಷಗಳ ಕಾಲ ಯಾಕೆ ಬಂಧಿಸಲಿಲ್ಲ. ಈ ಬಗ್ಗೆ ಗೃಹ ಸಚಿವರು ಸ್ಪಷ್ಟೀಕರಣ ನೀಡಲಿ ಎಂದು ಆಗ್ರಹಿಸಿದರು.
ಅಯೋಧ್ಯೆ ರಾಮಮಂದಿರದಲ್ಲಿ ಬ್ರಾಹ್ಮಣರಿಂದಲೇ ಮೊದಲ ಪೂಜೆ ಮಾಡಿಸ್ತೇವೆಂದ ಸೆಕ್ಯೂಲರ್ ಕಾಂಗ್ರೆಸ್ ಸಚಿವ!
ರಾಮಮಂದಿರ ತಲೆ ಎತ್ತವ ವೇಳೆ ದ್ವೇಷ ಹುಟ್ಟಾಕುವ ಕೆಲಸ ಮಾಡ್ತಿದೆ. ಸರ್ಕಾರ ಈ ಕೂಡಲೇ ಬಂಧಿತರನ್ನು ಬಿಡುಗಡೆ ಮಾಡಬೇಕು. ನಾಳೆ ವಿಪಕ್ಷ ನಾಯಕರ ನೇತೃತ್ವದಲ್ಲಿ ಹುಬ್ಬಳ್ಳಿಯಲ್ಲಿ ಪ್ರತಿಭಟನೆ ಮಾಡಲಾಗುತ್ತದೆ. ಹಿಂದೂ ಕಾರ್ಯಕರ್ತರನ್ನ ಹೆದರಿಸಿ, ಬೆದೆರಿಸುವ ಕೆಲಸ ಆಗ್ತಿದೆ. ಇವರ ಪೊಳ್ಳು ಬೆದರಿಕೆಗೆ ನಾವ್ಯಾರು ಬಗ್ಗಲ್ಲ. ತಪ್ಪು ಮಾಡಿದವರ ವಿರುದ್ಧ ತನಿಖೆ ನಡೆಯಲಿ. ಆದರೆ 31 ವರ್ಷಗಳ ಬಳಿಕ ಬಂಧನ ಮಾಡೋದಾದರೆ ಈ ಹಿಂದೆ ಯಾಕೆ ಮಾಡಿರಲಿಲ್ಲ. ನಮ್ಮ ವೈಫಲ್ಯ ಎಂದು ಸಿಎಂ ಒಪ್ಪಿಕೊಳ್ತಾರ? ಯಾರು ವೈಫಲ್ಯ ಇದೆ ಅವರು ರಾಜೀನಾಮೆ ನೀಡಲಿ. ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಸರ್ಕಾರ ನಿಲ್ಲಿಸಲಿ. ಹಿಂದೂ ಕಾರ್ಯಕರ್ತರನ್ನ ದ್ವೇಷಿಸುವುದು ನಿಲ್ಲಿಸಿ. ರಾಜ್ಯದಲ್ಲಿ ಎಲ್ಲರೂ ಮತ ನೀಡಿ ನಿಮ್ಮನ್ನು ಗೆಲ್ಲಿಸಿದ್ದಾರೆ. ಅವರ ವಿಶ್ವಾಸ ಉಳಿಸಿಕೊಳ್ಳುವ ಕೆಲಸ ಮಾಡಿ ಎಂದು ಶಾಸಕ ಮಹೇಶ್ ಟೆಂಗಿನಕಾಯಿ ವಾಗ್ದಾಳಿ ನಡೆಸಿದರು.