
ಬೆಂಗಳೂರು (ಜ.2): ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯ ಯಶವಂತಪುರ ಶಾಸಕ ಎಸ್ ಟಿ ಸೋಮಶೇಖರ್ ಆಡಳಿತಾರೂಢ ಕಾಂಗ್ರೆಸ್ ನಾಯಕರ ಭೇಟಿ ಮುಂದುವರೆಸಿದ್ದಾರೆ. ಸೋಮವಾರ ಡಿಸಿಎಂ ಡಿ ಕೆ ಶಿವಕುಮಾರ್ ಅವರ ನಿವಾಸದಲ್ಲಿ ಭೇಟಿ ಮಾಡಿದ ಅವರು, ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡುತ್ತಾರೆ ಎಂಬ ಊಹಾಪೋಹಗಳು ಹಬ್ಬಿವೆ.
ಕೇಂದ್ರದ ಮಾಜಿ ಸಚಿವ ಡಿವಿ ಸದಾನಂದಗೌಡ ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದರೂ, ಬೆಂಗಳೂರು ಉತ್ತರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಮತ್ತೆ ಸ್ಪರ್ಧಿಸಬೇಕು ಎಂದು ಸೋಮಶೇಖರ್ ಒತ್ತಾಯಿಸಿದ್ದಾರೆ.
ಒಂದು ವೇಳೆ ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರನ್ನು ಕಣಕ್ಕಿಳಿಸಿದರೆ ಸೋಮಶೇಖರ್ ಅವರನ್ನು ಬೆಂಬಲಿಸುವ ಸಾಧ್ಯತೆ ಕಡಿಮೆಯಿದ್ದು, ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವ ಚಿಂತನೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ತಮ್ಮ ಪುತ್ರ ನಿಶಾಂತ್ ಅಭ್ಯರ್ಥಿಯಾಗಬೇಕೆಂದು ಅವರು ಲಾಬಿ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಒಂದು ವೇಳೆ ಪುತ್ರನಿಗೆ ಟಿಕೆಟ್ ಸಿಗದಿದ್ದರೆ ಕಾಂಗ್ರೆಸ್ ಅಭ್ಯರ್ಥಿಗೆ ತಮ್ಮ ಬೆಂಬಲ ನೀಡಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ತಮ್ಮ ಬೆಂಬಲಿಗರನ್ನು ಕಾಂಗ್ರೆಸ್‌ಗೆ ಕಳುಹಿಸಿ ಕಣಕ್ಕೆ ಇಳಿದಿದ್ದಾರೆ.
ಎಸ್‌ಟಿ ಸೋಮಶೇಖರ್ ಹೇಳಿದ್ದೇನು?
ಕೆಲವು ಬಿಜೆಪಿ ನಾಯಕರು ರಾತ್ರಿಯ ಸಮಯದಲ್ಲಿ ಬಂದು ಶಿವಕುಮಾರ್ ಅವರನ್ನು ಭೇಟಿಯಾಗಿ ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳುತ್ತಾರೆ, ನಮ್ಮ ಕ್ಷೇತ್ರದ ಬಗ್ಗೆ ಒಂದು ಮನವಿ ಇತ್ತು ಹಾಗಾಗಿ ಬಂದಿದ್ದೆ. ಕೆಲ ಬಿಜೆಪಿ ಶಾಸಕರು ರಾತ್ರಿ ಬರುತ್ತಾರೆ. ಮತ್ತೊಂದಿಷ್ಟು ಜನ ಮಾಧ್ಯಮದ ಕಣ್ಣು ತಪ್ಪಿಸಿ ಹೋಗುತ್ತಾರೆ. ನಾನು ರಾಜರೋಷವಾಗಿ ಬಂದು ಹೋಗುತ್ತಿದ್ದೇನೆ. ಕೆಲವರ ಹಾಗೆ ಕತ್ತಲಲ್ಲಿ ಬಂದು ಹೋಗಲ್ಲ. ನಾನಿದ್ದಾಗಲೂ ಸಾಕಷ್ಟು ಜನ ಬರುತ್ತಿದ್ದರು. ಆದರೆ ನೀವು ಅವರನ್ನು ಗಮನಿಸುವುದಿಲ್ಲ, ಯಶವಂತಪುರ ಶಾಸಕರನ್ನು ಮಾತ್ರ ಗಮನಿಸುತ್ತೀರಿ ಎಂದು ಪ್ರತಿಕ್ರಿಯಿಸಿದರು.
ಆದರೆ ಅವರ ಭೇಟಿಯ ಬಗ್ಗೆ ಅವರು ಹೆಚ್ಚಿನ ವಿಷಯ ಬಹಿರಂಗಪಡಿಸಲಿಲ್ಲ. ಇತ್ತೀಚೆಗೆ ಅವರು ಮಾಜಿ ಸಚಿವ ಶಿವರಾಮ ಹೆಬ್ಬಾರ್ ಅವರೊಂದಿಗೆ ಇತ್ತೀಚೆಗೆ ಗೃಹ ಸಚಿವ ಡಾ ಜಿ ಪರಮೇಶ್ವರ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ್ದರು.
ಕಾಂಗ್ರೆಸ್ ಶಾಸಕಾಂಗ ಸಭೆಗೆ ಹೋಗಿಲ್ಲ, ಊಟಕ್ಕೆ ಹೋಗಿದ್ದೆ: ಶಾಸಕ ಎಸ್.ಟಿ.ಸೋಮಶೇಖರ್
ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಯ ನಂತರ ಎಂಎಲ್‌ಸಿ ಹೆಚ್ ವಿಶ್ವನಾಥ್ ಅವರೊಂದಿಗೆ ಕಾಂಗ್ರೆಸ್ ನಾಯಕರ ಔತಣ ಕೂಟದಲ್ಲಿ ಭಾಗಿಯಾಗಿದ್ದು ಭಾರೀ ಚರ್ಚೆಗೆ ಕಾರಣವಾಗಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ವಿಜಯೇಂದ್ರ ಅವರು ಇದನ್ನು ಗಂಭೀರ ವಿಷಯ ಎಂದು ಬಣ್ಣಿಸಿದ್ದು, ಸೋಮಶೇಖರ್ ಮತ್ತು ಹೆಬ್ಬಾರ್ ಅವರಿಂದ ವಿವರಣೆ ಕೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.