ರಾಜ್ಯ ಸರ್ಕಾರ ಘೋಷಿಸಿರುವ ಗ್ಯಾರಂಟಿಗಳಿಂದಾಗಿ ಕೈಗಾರಿಕೋದ್ಯಮ ಮುಚ್ಚುವ ಪರಿಸ್ಥಿತಿ ಬಂದೊದಗಿದೆ ಎಂದು ಶಾಸಕ ಎಂ.ಸತೀಶ್ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೊಮ್ಮನಹಳ್ಳಿ (ಜೂ.24): ರಾಜ್ಯ ಸರ್ಕಾರ ಘೋಷಿಸಿರುವ ಗ್ಯಾರಂಟಿಗಳಿಂದಾಗಿ ಕೈಗಾರಿಕೋದ್ಯಮ ಮುಚ್ಚುವ ಪರಿಸ್ಥಿತಿ ಬಂದೊದಗಿದೆ ಎಂದು ಶಾಸಕ ಎಂ.ಸತೀಶ್ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಹೊಸೂರು ಮುಖ್ಯರಸ್ತೆ, ಗಾರ್ವೆಬಾವಿಪಾಳ್ಯ, ಮಂಗಮ್ಮನ ಪಾಳ್ಯ ಸೇರಿದಂತೆ ರಸ್ತೆ ಅಗಲೀಕರಣ ಹಾಗೂ ರಾಜಕಾಲುವೆ ದುರಸ್ತಿ ಕಾರ್ಯಗಳನ್ನು ಬಿಬಿಎಂಪಿ, ಬಿಡಬ್ಲ್ಯೂಎಸ್‌ಎಸ್‌ಬಿ, ಮೆಟ್ರೋ ಅಧಿಕಾರಿಗಳ ಜೊತೆ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಅವರು, ಸರ್ಕಾರ 200 ಯೂನಿಟ್ ಉಚಿತ ವಿದ್ಯುತ್ ಎಂದು ಹೇಳಿ ಮೀಟರ್ ಚಾರ್ಜ್, ಯೂನಿಟ್ ಚಾರ್ಜ್ ದುಪ್ಪಟ್ಟುಗೊಳಿಸಿದೆ.
ಇದರಿಂದ ಕಾರ್ಖಾನೆಗಳು ಪ್ರತಿಭಟನೆಗೆ ಮುಂದಾಗಿದೆ. ನನ್ನ ಕ್ಷೇತ್ರದಲ್ಲಿ ಗಾರ್ಮೆಂಟ್ಸ್, ಐಟಿ ಬಿಟಿ ಸಂಸ್ಥೆಗಳು ಅಧಿಕವಾಗಿದ್ದು, ಒಂದು ವೇಳೆ ಇವೆಲ್ಲವೂ ಮುಚ್ಚಿಕೊಂಡರೆ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತದೆ. 80 ಯೂನಿಟ್ ಬಿಜೆಪಿ ಸರ್ಕಾರವೇ ಉಚಿತವಾಗಿ ನೀಡಿತ್ತು. ಇದೀಗ ಕಾಂಗ್ರೆಸ್ ಸರ್ಕಾರ ಬಳಕೆ ಮಾಡುತ್ತಿದ್ದ ಯೂನಿಟ್‌ಗಿಂತ ಶೇ.10 ಮಾತ್ರ ಉಚಿತವಾಗಿ ನೀಡಲಿದೆ. ಹಾಗಾದರೆ, 200 ಯೂನಿಟ್ ಫ್ರೀ ಎಂದು ಸರ್ಕಾರ ಹೇಳಿದ್ಯಾಕೆ ಎಂದು ಪ್ರಶ್ನಿಸಿದರು. ಇನ್ನು ಗೃಹಲಕ್ಷ್ಮಿ ಯೋಜನೆ ಸ್ಕೀಂ ಪಡೆಯಲು ಜನತೆ ಹರಸಾಹಸ ಪಡುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಗಮನಹರಿಸಬೇಕಿದೆ ಎಂದರು.
ಸಾಕಷ್ಟು ಅಕ್ಕಿ ದಾಸ್ತಾನಿದ್ದರೂ ಕೇಂದ್ರ ಸರ್ಕಾರ ಕೊಡುತ್ತಿಲ್ಲ: ಸಚಿವ ಮುನಿಯಪ್ಪ
ಇದೇ ವೇಳೆ ಸಂಸದ ತೇಜಸ್ವಿ ಸೂರ್ಯ ಎಸ್‌ಎಸ್‌ಬಿ, ಮೆಟ್ರೋ ಅಧಿಕಾರಿಗಳ ಜೊತೆ ಪರಿಶೀಲನೆ ನಡೆಸಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ಬೊಮ್ಮನಹಳ್ಳಿ ಸರ್ವಿಸ್ ರಸ್ತೆ, ಜಂಕ್ಷನ್, ಟ್ರಾಫಿಕ್ ಸಮಸ್ಯೆಗಳ ಬಗ್ಗೆ ಕೂಲಂಕುಷವಾಗಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಸ್ಕೈವಾಕ್ ನಿರ್ಮಾಣ, ಬೇಗೂರು ಕೆರೆಯಿಂದ ಬರುತ್ತಿರುವ ನೀರು ವೆಂಟ್ ಸಣ್ಣದಾಗಿರುವುದರಿಂದ ಹೊಸ ವೆಂಟ್ ಮಾಡಲು ತೀರ್ಮಾನಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಬಿಬಿಎಂಪಿ ಜಂಟಿ ಆಯುಕ್ತರು, ಮೆಟ್ರೋ ಚೀಫ್ ಇಂಜಿನಿಯರುಗಳು, ಟ್ರಾಫಿಕ್ ಪೊಲೀಸ್ ಡಿಸಿಪಿ, ಎಸಿಪಿ, ಜಲಮಂಡಳಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ರೋಗಮುಕ್ತ, ಆತ್ಮಾನಂದ ಜೀವನಕ್ಕೆ ಯೋಗ: ಭಾರತದ ಪ್ರಾಚೀನ ಸಾಧಕರು ರೋಗಮುಕ್ತ, ಆತ್ಮಾನಂದ ಯುಕ್ತ ಜೀವನಕ್ಕಾಗಿ ಮಾನವರಿಗೆ ಒದಗಿಸಿಕೊಟ್ಟಅಪೂರ್ವ ಕಲೆ ಯೋಗ ಎಂದು ಶಾಸಕ ಎಂ.ಸತೀಶ್ ರೆಡ್ಡಿ ಹೇಳಿದರು. 9ನೇ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಎಚ್.ಎಸ್.ಆರ್. ಲೇಔಟ್‌ನಲ್ಲಿ ಇರುವ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡ ಯೋಗ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕರು, ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸುತ್ತಿದೆ.
ವಿದ್ಯುತ್ ಶುಲ್ಕದ ಮೇಲಿನ ತೆರಿಗೆ ಇಳಿಕೆ ಬಗ್ಗೆ ಬಜೆಟ್ ಬಳಿಕ ಪರಿಶೀಲನೆ: ಸಿಎಂ ಸಿದ್ದರಾಮಯ್ಯ
ಯೋಗಾಭ್ಯಾಸದ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸಲು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಪ್ರಪಂಚದಾದ್ಯಂತ ಜನರನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಇಂದಿನ ಒತ್ತಡದ ಜೀವನಕ್ಕೆ ಯೋಗವು ಬಹುಮುಖ್ಯವೆಂದರು. ನಂತರ ಸಾಮೂಹಿಕ ಯೋಗಾಭ್ಯಾಸ ನಡೆಸಿ, ಕ್ಷೇತ್ರದ ಜನತೆಗೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಶುಭಾಶಯ ತಿಳಿಸಿದರು. ಈ ಸಂದರ್ಭದಲ್ಲಿ ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಗುರುಮೂರ್ತಿ ರೆಡ್ಡಿ, ಸ್ಥಳೀಯ ಬಿಜೆಪಿ ಮುಖಂಡರು, ವಿದ್ಯಾರ್ಥಿಗಳು ಹಾಗೂ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.