ನಿರ್ಮಲಾ ಸೀತಾರಾಮನ್‌ರನ್ನು ರಾಜ್ಯದಿಂದ ಆಯ್ಕೆಮಾಡಿದ್ದು ದೊಡ್ಡ ದುರಂತ: ಲಕ್ಷ್ಮಣ ಸವದಿ

By Kannadaprabha NewsFirst Published Feb 7, 2024, 6:23 AM IST
Highlights

ವಿತ್ತಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ನಮ್ಮ ರಾಜ್ಯದ ಸಂಸದರಾಗಿ ಆಯ್ಕೆ ಮಾಡಿದ್ದೇ ದೊಡ್ಡ ದುರಂತ. ಅವರು ಮಂತ್ರಿಯಾಗಿ ರಾಜ್ಯ ಸರ್ಕಾರಕ್ಕಾದ ತಾರತಮ್ಯ ಸರಿಪಡಿಸುವುದನ್ನು ಬಿಟ್ಟು ಅದನ್ನು ಸಮರ್ಥಿಸಿಕೊಳ್ಳುವುದು ಸರಿಯಲ್ಲ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು. 

ನವದೆಹಲಿ (ಫೆ.07): ವಿತ್ತಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ನಮ್ಮ ರಾಜ್ಯದ ಸಂಸದರಾಗಿ ಆಯ್ಕೆ ಮಾಡಿದ್ದೇ ದೊಡ್ಡ ದುರಂತ. ಅವರು ಮಂತ್ರಿಯಾಗಿ ರಾಜ್ಯ ಸರ್ಕಾರಕ್ಕಾದ ತಾರತಮ್ಯ ಸರಿಪಡಿಸುವುದನ್ನು ಬಿಟ್ಟು ಅದನ್ನು ಸಮರ್ಥಿಸಿಕೊಳ್ಳುವುದು ಸರಿಯಲ್ಲ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು. ದೆಹಲಿಯಲ್ಲಿ ಮಂಗಳವಾರ ಸುದ್ದಿಗಾರರ ಜತೆಗೆ ಮಾತನಾಡಿ, ನಾವು ಕೇಂದ್ರದ ಮುಂದೆ ನಮ್ಮ ಹಕ್ಕನ್ನಷ್ಟೇ ಮಂಡಿಸುತ್ತಿದ್ದೇವೆ. ಬಿಜೆಪಿ ರಾಜ್ಯದಲ್ಲಿ ಪ್ರತಿಪಕ್ಷವಾಗಿರುವ ಕಾರಣಕ್ಕೆ ರಾಜ್ಯ ಸರ್ಕಾರವನ್ನು ಟೀಕೆ ಮಾಡುತ್ತಿದೆ. ಅನುದಾನ ಹಂಚಿಕೆಯಲ್ಲಿ ತಾರತಮ್ಯ ಆಗಿಲ್ಲ ಎಂದಾದರೆ ರಾಜ್ಯದ 25 ಬಿಜೆಪಿ ಸಂಸದರು ದೆಹಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆ ಕುರಿತು ಮನವರಿಕೆ ಮಾಡಿಕೊಡಲಿ ಎಂದರು.

ಗ್ಯಾರಂಟಿ ಸಮಾವೇಶದಿಂದ ದೂರ ಉಳಿದ ಶಾಸಕ ಸವದಿ: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನದ ಕುರಿತ ಸೋಮವಾರ ನಡೆದ ಸಮಾವೇಶದಿಂದ ಮಾಜಿ ಡಿಸಿಎಂ, ಅಥಣಿ ಕಾಂಗ್ರೆಸ್‌ ಶಾಸಕ ಲಕ್ಷ್ಮಣ ಸವದಿ ಗೈರಾಗಿರುವುದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಮಾಜಿ ಸಿಎಂ ಜಗದೀಶ ಶೆಟ್ಟರ್‌ ಕಾಂಗ್ರೆಸ್‌ ತೊರೆದು ಮರಳಿ ಬಿಜೆಪಿಗೆ ಸೇರ್ಪಡೆಯಾದ ಬೆಳವಣಿಗೆ ಬೆನ್ನ ಹಿಂದೆಯೇ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕೂಡ ಮರಳಿ ಬಿಜೆಪಿ ಸೇರ್ಪಡೆಯಾಗುತ್ತಾರೆ ಎಂಬುದರ ಕುರಿತು ಬಿಜೆಪಿ ವಲಯದಲ್ಲೇ ತೀವ್ರ ಚರ್ಚೆಗಳು ನಡೆಯುತ್ತಿವೆ. ಇತ್ತೀಚೆಗಷ್ಟೇ ಬೆಳಗಾವಿಯಲ್ಲಿ ಬಿಜೆಪಿ ನಾಯಕರ ಜೊತೆಗೆ ಲಕ್ಷ್ಮಣ ಸವದಿ ಒಂದೇ ಕಾರಿನಲ್ಲಿ ಓಡಾಡಿರುವುದು ಕೂಡ ಹಲವು ಚರ್ಚೆಗೆ ಕಾರಣವಾಗಿತ್ತು. 

ಹೆಸರಲ್ಲೇ ಲಕ್ಷ್ಮಣ ಇರುವಾಗ ರಾಮ ಮಂದಿರಕ್ಕೆ ಹೋಗದಿರಲು ಸಾಧ್ಯವೆ: ಶಾಸಕ ಲಕ್ಷ್ಮಣ ಸವದಿ

ಬಿಜೆಪಿ ನಾಯಕರು ಸವದಿ ಸಂಪರ್ಕದಲ್ಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇದರ ನಡುವೆಯೇ ಸೋಮವಾರ ಐದು ಗ್ಯಾರಂಟಿ ಯೋಜನೆಗಳ ಸಮರ್ಪಕವಾಗಿ ಅನುಷ್ಠಾನ ಕುರಿತ ಜಿಲ್ಲಾಡಳಿತ ಆಯೋಜಿಸಿದ ಸಮಾವೇಶದಿಂದ ಲಕ್ಷ್ಮಣ ಸವದಿ ದೂರ ಉಳಿದಿರುವುದು ಹಲವು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ. ಈಗಾಗಲೇ ಬಿಜೆಪಿ ನಾಯಕರು ಸವದಿ ಜೊತೆಗೆ ಮಾತುಕತೆ ಮಾಡಿದ್ದಾರೆ ಎನ್ನಲಾಗಿದ್ದು, ಅವರು ಬಿಜೆಪಿ ಸೇರ್ಪಡೆಯಾಗುವುದಾದರೆ ಅವರಿಗೆ ಲೋಕಸಬಾ ಚುನಾವಣೆ ಟಿಕೆಟ್‌ ನೀಡುವ ಕುರಿತು ಹಲವು ಚರ್ಚೆ ನಡೆಯುತ್ತಿವೆ. ಅದರಂತೆ ಅವರ ಪುತ್ರನಿಗೆ ಅಥಣಿ ವಿಧಾನಸಭೆ ಉಪಚುನಾವಣೆಗೆ ಟಿಕೆಟ್‌ ನೀಡುವ ಕುರಿತು ಚರ್ಚೆ ನಡೆದಿವೆ ಎನ್ನಲಾಗಿದೆ.

click me!