ಪ್ರಸ್ತುತ ವಿಧಾನಸಭಾ ಚುನಾವಣೆ ನಡೆದರೆ ಬಿಜೆಪಿ 135 ಸ್ಥಾನ ಗೆಲ್ಲುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಿರುಕನ ಕನಸು ಕಾಣುತ್ತಿದ್ದಾರೆ ಎಂದು ಶಾಸಕ ಕೆ.ಎಂ. ಉದಯ್ ಲೇವಡಿ ಮಾಡಿದರು.
ಮದ್ದೂರು (ಡಿ.01): ಪ್ರಸ್ತುತ ವಿಧಾನಸಭಾ ಚುನಾವಣೆ ನಡೆದರೆ ಬಿಜೆಪಿ 135 ಸ್ಥಾನ ಗೆಲ್ಲುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿರುಕನ ಕನಸು ಕಾಣುತ್ತಿದ್ದಾರೆ ಎಂದು ಶಾಸಕ ಕೆ.ಎಂ. ಉದಯ್ ಲೇವಡಿ ಮಾಡಿದರು. ತಾಲೂಕಿನ ಚಿಕ್ಕರಸಿನಕೆರೆ ಗ್ರಾಮದ ಕಾರ್‍ಯಕ್ರಮವೊಂದರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಯಡಿಯೂರಪ್ಪ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದಾಗ ರಾಜ್ಯದ ಎಲ್ಲ ಕ್ಷೇತ್ರದಾದ್ಯಂತ ಸಂಚಾರ ನಡೆಸಿದ್ದರೂ ಸಹ ಚುನಾವಣೆಯಲ್ಲಿ 113 ಸ್ಥಾನ ಗೆಲ್ಲಲು ಸಾಧ್ಯವಾಯಿತು. ಮುಂದಿನ ಚುನಾವಣೆಯಲ್ಲಿ ಬಿಜೆಪಿ 113 ಸ್ಥಾನಕ್ಕಿಂತ ಕೆಳಗೆ ಹೋದರೂ ಆಚ್ಚರಿಪಡಬೇಕಾಗಿಲ್ಲ ಎಂದು ಮೂದಲಿಸಿದರು.
ಈಗ ಚುನಾವಣೆ ನಡೆದರೆ ಬಿಜೆಪಿ ಬಹುಮತ ಸಾಧಿಸಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಯಡಿಯೂರಪ್ಪ ಬಾಯಿ ಚಪಲಕ್ಕೆ ಮಾತನಾಡುವುದನ್ನು ಬಿಟ್ಟು ವಾಸ್ತವ ಅರಿತು ಅವರು ಮಾತನಾಡಬೇಕು. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ರಾಜ್ಯದ ಜನರ ಮನಸ್ಸನ್ನು ಗೆದ್ದಿದೆ. ಇದನ್ನು ಸಹಿಸಲಾರದ ಯಡಿಯೂರಪ್ಪ ಬಾಯಿಗೆ ಬಂದಂತೆ ಮಾತನಾಡುತ್ತಾರೆ ಎಂದು ಟೀಕಿಸಿದರು. ವಿಧಾನ ಸಭಾ ಚುನಾವಣೆ ಇನ್ನೂ ನಾಲ್ಕೂವರೆ ವರ್ಷ ಇದೆ. ಅಲ್ಲಿಯವರೆಗೆ ವಿಪಕ್ಷ ನಾಯಕ ಆರ್.ಅಶೋಕ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಯಾರ್‍ಯಾರ ಮತ ಸೆಳೆಯುತ್ತಾರೋ ಅಥವಾ ಮಕ್ಕಾಡೆ ಮಲಗುತ್ತಾರೋ ಎಂಬುದನ್ನು ಕಾಲವೇ ಉತ್ತರಿಸುತ್ತದೆ ಎಂದರು.
ಭ್ರೂಣಹತ್ಯೆ ಕೇಸ್ ಸಿಐಡಿ, ಎಸ್‌ಐಟಿ ತನಿಖೆಗೆ ನೀಡಲು ಚಿಂತನೆ: ಸಚಿವ ಚಲುವರಾಯಸ್ವಾಮಿ
ಈಗಾಗಲೇ ನಾಲ್ಕು ರಾಜ್ಯಗಳ ಚುನಾವಣೆ ನಡೆಯುತ್ತಿರುವ ಛತ್ತೀಸ್‌ಘಡ, ಮಧ್ಯಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಬಹುಮತದಿಂದ ಅಧಿಕಾರಕ್ಕೆ ಬರಲಿದೆ. ರಾಜಸ್ಥಾನ ಚುನಾವಣೆಯಲ್ಲಿ ಶೇ.50ರಷ್ಟು ದೊರೆಯಲಿದೆ ಎಂದು ಭವಿಷ್ಯ ನುಡಿದರು. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಿಂದ ರಾಜ್ಯದಲ್ಲಿ ಯಾವುದೇ ರಾಜಕೀಯ ಸ್ಥಿತ್ಯಂತರ ನಡೆಯುವುದಿಲ್ಲ. ಪದೇ ಪದೇ ಸೋಲಿನಿಂದ ಹತಾಶರಾಗಿರುವ ಜೆಡಿಎಸ್ ನಾಯಕರಿಗೆ ಯಾವುದೇ ಪಕ್ಷದೊಂದಿಗೆ ಅನಿವಾರ್‍ಯವಾಗಿದೆ. ಹೀಗಾಗಿ ಮಾಜಿ ಸಿಎಂ ಕುಮಾರಸ್ವಾಮಿ ಬಿಜೆಪಿ ರೆಂಬೆ ಹಿಡಿದು ನೇತಾಡುತ್ತಿದ್ದಾರೆ ಎಂದು ಟೀಕಿಸಿದರು. ಈ ವೇಳೆ ಭಾರತೀನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಲಿಂಗೇಗೌಡ, ಜಿಪಂ ಮಾಜಿ ಅಧ್ಯಕ್ಷ ಬಸವರಾಜು, ಮಾಜಿ ಸದಸ್ಯ ಅಣ್ಣೂರು ರಾಜೀವ್, ಯಜಮಾನ್ ಶಿವಲಿಂಗೇಗೌಡ, ಚನ್ನೇಗೌಡ ಮತ್ತಿತರರಿದ್ದರು.