ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲು ಸಿದ್ಧತೆ ನಡೆಸಿ ಎಂದು ಅರಸೀಕೆರೆ ಶಾಸಕ ಹಾಗೂ ರಾಜ್ಯ ಗೃಹ ಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ಕಾರ್ಯಕರ್ತರಿಗೆ ಮನವಿ ಮಾಡಿದರು.
ಅರಕಲಗೂಡು (ಫೆ.12): ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲು ಸಿದ್ಧತೆ ನಡೆಸಿ ಎಂದು ಅರಸೀಕೆರೆ ಶಾಸಕ ಹಾಗೂ ರಾಜ್ಯ ಗೃಹ ಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ಕಾರ್ಯಕರ್ತರಿಗೆ ಮನವಿ ಮಾಡಿದರು. ಪಟ್ಟಣದ ಸಂಗೊಳ್ಳಿ ರಾಯಣ್ಣ ಕ್ರೀಡಾಂಗಣದಲ್ಲಿ ರಾಘವೇಂದ್ರ ಯೂತ್ಸ್ ಸ್ಫೋರ್ಟ್ಸ್ ಕ್ಲಬ್ ಆಯೋಜಿಸಿದ್ದ ಸಿದ್ದರಾಮಯ್ಯ ಕಪ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಬಡವರು, ದಲಿತರು, ಶೋಷಿತರು, ಹಿಂದುಳಿದವರು, ಅಲ್ಪಸಂಖ್ಯಾತರ ಏಳಿಗೆಗಾಗಿ ಶ್ರಮಿಸುತ್ತಿದ್ದು ರಾಜ್ಯ ಸರ್ಕಾರ 5 ಗ್ಯಾರಂಟಿಗಳನ್ನು ನೀಡುವ ಮೂಲಕ ಜನಪರವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.
ರಾಜ್ಯದ ಪಾಲಿನ ತೆರಿಗೆ ಹಣವನ್ನು ನೀಡದ ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ವಿರುದ್ದ ಗಟ್ಟಿ ಧ್ವನಿಯಲ್ಲಿ ಪ್ರಶ್ನಿಸಿದ ಮೊದಲ ಮುಖ್ಯಮಂತ್ರಿ. ದೆಹಲಿಯಲ್ಲಿ ಪ್ರತಿಭಟನೆ ನಡೆಸುವ ಮೂಲಕ ದೇಶದೆಲ್ಲೆಡೆ ಸಂಚಲನ ಮೂಡಿಸಿದ್ದಾರೆ ಎಂದು ತಿಳಿಸಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಾಲೂಕಲ್ಲಿ ಕಾಂಗ್ರೆಸ್ ಗೆಲ್ಲಬೇಕಿತ್ತು. ಆದರೆ ವಿವಿಧ ಸಂಗತಿಗಳು ಸೋಲಿಗೆ ಕಾರಣವಾಗಿದೆ. ಇದನ್ನು ಮರೆತು ಎಲ್ಲ ಮುಖಂಡರು ಒಗ್ಗೂಡಿ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಪಣತೊಡಬೇಕಿದೆ ಎಂದರು. ಕಾಂಗ್ರೆಸ್ ಮುಖಂಡರಾದ ಎಂ.ಎ. ಗೋಪಾಲಸ್ವಾಮಿ, ಎಚ್.ಕೆ.ಮಹೇಶ್, ಶ್ರೇಯಸ್ ಪಟೇಲ್, ಸಿ.ಡಿ.ದಿವಾಕರಗೌಡ, ಮಂಜಣ್ಣ, ಎಚ್.ಪಿ.ಶ್ರೀಧರ್ ಗೌಡ, ರಾಮೇಗೌಡ ಹಾಗೂ ತಾಲೂಕು ಕಾಂಗ್ರೆಸ್ ಅಧ್ಯಕ್ಷ ಎಸ್.ಎಸ್. ಪ್ರಸನ್ನ ಕುಮಾರ್ ಮಾತನಾಡಿದರು. ಟಾಸ್ ಹಾಕುವ ಮೂಲಕ ಶಿವಲಿಂಗೇಗೌಡ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿದರು.
undefined
ಗುಂಪುಗಾರಿಕೆ ಮರೆತು ಒಂದಾಗಬೇಕು: ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಗುಂಪುಗಾರಿಕೆ ಮರೆತು ಎಲ್ಲರೂ ಒಂದಾಗಬೇಕು ಎಂದು ಕೆ.ಎಂ. ಶಿವಲಿಂಗೇಗೌಡ ಹೇಳಿದರು. ಕಾಂಗ್ರೆಸ್ ಕಚೇರಿಯಲ್ಲಿ ಸನ್ಮಾನ ಸ್ವೀಕರಿಸಿ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಅರಕಲಗೂಡು ಕಾಂಗ್ರೆಸ್ ಪಕ್ಷದಲ್ಲಿ ಗುಂಪುಗಾರಿಕೆ ಹುಟ್ಟಿಗೆ ಪಕ್ಷದ ರಾಜ್ಯ ಮಟ್ಟದ ನಾಯಕರೇ ಕಾರಣರಾಗಿದ್ದಾರೆ. ಹೀಗಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಸೋಲಿಗೆ ಕಾರಣವಾಯಿತು. ಮುಂದೆ ಪಕ್ಷದಲ್ಲಿ ಗುಂಪುಗಾರಿಕೆ ಬೇಡ. ಈ ನಿಟ್ಟಿನಲ್ಲಿ ರಾಜ್ಯ ನಾಯಕರು ಇಬ್ಬರು ನಾಯಕರನ್ನು ಕರೆಸಿ ಪ್ರತ್ಯೇಕ ಜವಾಬ್ದಾರಿ ನೀಡಿ ಒಂದುಗೂಡಿಸುತ್ತಾರೆ. ಸದ್ಯದಲ್ಲೇ ಸಿಹಿ ಸುದ್ದಿ ಸಿಗಲಿದೆ. ಕಾರ್ಯಕರ್ತರು ಬಿನ್ನಾಭಿಪ್ರಾಯ ಮರೆತು ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು ಎಂದರು.
ಭದ್ರಾ ಮೇಲ್ದಂಡೆಗೆ ಕೇಂದ್ರ ಅನುದಾನದ ಬಗ್ಗೆ ಅನುಮಾನ ಬೇಡ: ಸಚಿವ ನಾರಾಯಣಸ್ವಾಮಿ
ಶ್ರೀಧರಗೌಡ ಬಗ್ಗೆ ಕಾರ್ಯಕರ್ತರ ಅಸಮಾಧಾನ: ಸಿದ್ದರಾಮಯ್ಯ ಕಪ್ ಕ್ರಿಕೆಟ್ ಪಂದ್ಯಾವಳಿ ಚಾಲನೆ ಕಾರ್ಯಕ್ರಮದಲ್ಲಿ ಮುಖಂಡ ಎಚ್.ಪಿ. ಶ್ರೀಧರ್ ಗೌಡ ಭಾಗವಹಿಸಿದ್ದಕ್ಕೆ ಅಸಮಧಾನ ವ್ಯಕ್ತಪಡಿಸಿ ಸಭೆಯಲ್ಲಿ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಕೆಲಕಾಲ ಗೊಂದಲದ ವಾತಾವರಣ ನಿಮಾರ್ಣವಾಗಿತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆದ ಕಹಿ ಘಟನೆಗಳನ್ನು ಮರೆಯಬೇಕು. ಇಲ್ಲವಾದರೆ ಪಕ್ಷದ ಸಂಘಟನೆ ಅಸಾಧ್ಯ. ಹಿಂದಿನ ಘಟನೆಗಳನ್ನು ಮರೆತು ಎಲ್ಲರೂ ಒಟ್ಟಾಗಿ ಪಕ್ಷ ಸಂಘಟನೆ ಮಾಡಬೇಕು ಎಂದು ಶಿವಲಿಂಗೇಗೌಡ ಅಭಿಮಾನಿಗಳನ್ನು ಸಮಾಧಾನಪಡಿಸಿದರು.