ತಪ್ಪು ಮಾಡಿದರೆ ದೈವ ಕ್ಷಮಿಸುತ್ತದೆ. ಆದರೆ, ಕರ್ಮ ನಮ್ಮನ್ನು ಹಿಂಬಾಲಿಸುತ್ತದೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಸಿಎಂ ಸಿದ್ದರಾಮಯ್ಯಗೆ ಟಾಂಗ್ ನೀಡಿದ್ದಾರೆ.
ಬೆಂಗಳೂರು (ಆ.05): ತಪ್ಪು ಮಾಡಿದರೆ ದೈವ ಕ್ಷಮಿಸುತ್ತದೆ. ಆದರೆ, ಕರ್ಮ ನಮ್ಮನ್ನು ಹಿಂಬಾಲಿಸುತ್ತದೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಸಿಎಂ ಸಿದ್ದರಾಮಯ್ಯಗೆ ಟಾಂಗ್ ನೀಡಿದ್ದಾರೆ. ಬಿಜೆಪಿ- ಜೆಡಿಎಸ್ ಜಂಟಿಯಾಗಿ ಹಮ್ಮಿಕೊಂಡಿರುವ 'ಮೈಸೂರು ಚಲೋ' ಪಾದಯಾತ್ರೆ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ವಿಧಿ ಅನ್ನೋದು ಹೀಗಿರುತ್ತದೆ. ಕಾಲಚಕ್ರದಲ್ಲಿ ನಮ್ಮ ಮೇಲೆ ಸುಳ್ಳು ಆರೋಪ ಮಾಡಿ ಸಿದ್ದರಾಮಯ್ಯ ಬಳ್ಳಾರಿಗೆ ಪಾದಯಾತ್ರೆ ಮಾಡಿದ್ದರು. ಈ ಸುಳ್ಳು ಆರೋಪಗಳಿಂದ ನಮಗೆ ಏನೆಲ್ಲಾ ಸಂಕಷ್ಟಗಳು ಎದುರಾದವು ಎಂಬುದನ್ನು ರಾಜ್ಯದಜನ ನೋಡಿದ್ದಾರೆ. ತಪ್ಪು ಮಾಡಿದರೆ ದೈವ ಕ್ಷಮಿಸುತ್ತದೆ. ಆದರೆ, ಕರ್ಮ ನಮ್ಮನ್ನು ಹಿಂಬಾಲಿಸುತ್ತದೆ ಎಂದು ಸಿದ್ಧರಾಮಯ್ಯ ವಿರುದ್ಧ ಆಕ್ರೋಶ ಹೊರಹಾಕಿದರು.
ಜೈಲಿಗೆ ಕಳುಹಿದ ಎಚ್‌ಡಿಕೆ ಜೊತೆ ಬಿಎಸ್‌ವೈ ಪಾದಯಾತ್ರೆ: ಸಚಿವ ಚಲುವರಾಯಸ್ವಾಮಿ
ಇದ್ದೂ ಸತ್ತಂತಿರುವ ಕಾಂಗ್ರೆಸ್ ಸರ್ಕಾರ: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ. ಎಲ್ಲೆಂದರಲ್ಲಿ ಕೊಲೆ, ಸುಲಿಗೆ, ದರೋಡೆ, ಕಳ್ಳತನ ಹಾಗೂ ಎಲ್ಲ ಇಲಾಖೆಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗುತ್ತಿದೆ. ಸರ್ಕಾರ ಇದ್ದರೂ ಸತ್ತಂತಿದೆ ಎಂದು ಮಾಜಿ ಸಚಿವ ಬಿ.ಶ್ರೀ ರಾಮುಲು ಆರೋಪಿಸಿದರು. ಕಂಪ್ಲಿ ಕೋಟೆಯಲ್ಲಿ ತುಂಗಭದ್ರಾ ಜಲಾಶಯದ ಪ್ರವಾಹದಿಂದ ಸಮಸ್ಯೆ ಅನುಭವಿಸುತ್ತಿರುವ ನದಿ ಪಾತ್ರದ ಜನರ ಮನೆಗಳಿಗೆ ಭೇಟಿ ನೀಡಿ ಅವರ ಸಮಸ್ಯೆಗಳನ್ನು ಆಲಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಕಂಪ್ಲಿ-ಸಿರುಗುಪ್ಪ ಭಾಗ ಸೇರಿ ಅಂದಾಜು 1 ಸಾವಿರ ಎಕರೆಯಷ್ಟು ಬೆಳೆ ನಷ್ಟವಾಗಿದೆ. ನಮ್ಮ ಭಾಗದ ರೈತರು ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ನಲುಗಿ ಹೋಗಿದ್ದಾರೆ. ಪ್ರವಾಹದ ಭೀಕರತೆಯಿಂದ ನಷ್ಟಕ್ಕೊಳಗಾದ ರೈತರ ಕುರಿತು ವರದಿ ಪಡೆದು ಸರ್ಕಾರದ ಗಮನ ಸೆಳೆಯುವ ಮೂಲಕ ನಷ್ಟಕ್ಕೊಳಗಾದ ರೈತರಿಗೆ ಸೂಕ್ತ ಪರಿಹಾರ ಒದಗಿಸುವ ಕಾರ್ಯ ಕೈಗೊಳ್ಳುತ್ತೇವೆ. ಕಂಪ್ಲಿ ಸೇತುವೆ ನಿರ್ಮಾಣಕ್ಕೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ₹69 ಕೋಟಿ ಅನುದಾನ ತಂದು ಸೇತುವೆ ನಿರ್ಮಾಣ ವಿಚಾರಕ್ಕೆ ಜೀವ ತರುವಂತಹ ಕೆಲಸ ಮಾಡಲಾಗಿತ್ತು.
ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ, ಪತ್ನಿ ನೇರ ಆರೋಪಿಗಳು: ಸಂಸದ ಜಗದೀಶ್ ಶೆಟ್ಟರ್
ಆದರೆ ಈಗಿನ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು 2 ವರ್ಷಗಳಾಗುತ್ತಾ ಬಂದರೂ ಈ ಕುರಿತು ಚಕಾರ ಎತ್ತದಿರುವುದು ಶೋಚನೀಯ. ಶಾಸಕರು, ಸಚಿವರು, ಸರ್ಕಾರ ಹಿತಾಸಕ್ತಿ ವಹಿಸಿ ನೂತನ ಸೇತುವೆ ನಿರ್ಮಿಸುವ ಮೂಲಕ ಈ ಭಾಗದ ಜನರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದರು. ಪರಿಶಿಷ್ಟ ಪಂಗಡಗಳ ಸಮುದಾಯದ ಅಭಿವೃದ್ಧಿಗೆ ಇರಿಸಲಾದ ಅನುದಾನದ ಹಗರಣ, ಮುಡಾ ಹಗರಣ ಸೇರಿದಂತೆ ಅನೇಕ ಹಗರಣಗಳಿಂದ ಸರ್ಕಾರ ರಾಜ್ಯದ ಜನತೆಗೆ ಅನ್ಯಾಯವೆಸಗುತ್ತಿದೆ. ಈ ಹಗರಣಗಳ ವಿರುದ್ಧ, ಸಿಎಂ ರಾಜೀನಾಮೆಗೆ ಆಗ್ರಹಿಸಿ ಆ.3ರಂದು ಮೈಸೂರಿನಿಂದ ಬೆಂಗಳೂರಿನವರೆಗೂ ಪಾದಯಾತ್ರೆ ನಡೆಸಲು ನಿರ್ಧರಿಸಿದ್ದಾರೆ. ಎಂದರು.