ರೈತರಿಗಾಗಿ ವಿದ್ಯುತ್ ಖರೀದಿ ಮಾಡಲು ಹಣ ಕಾಯ್ದಿರಿಸುವ ಅಥವಾ ಬರದಿಂದ ತತ್ತರಿಸಿದ ರೈತರ ನೆರವು ನೀಡಲು ಸರ್ಕಾರ ಮುಂದಾಗುತ್ತಿಲ್ಲ ಎಂದು ಮಾಜಿ ಸಚಿವ, ಜೆಡಿಎಸ್ ಮುಖಂಡ ಜಿ.ಟಿ.ದೇವೇಗೌಡ ಆರೋಪಿಸಿದರು.
ಬೆಳಗಾವಿ (ಅ.14): ರಾಜ್ಯದಲ್ಲಿ ಉದ್ಭವಿಸಿರುವ ವಿದ್ಯುತ್ ಸಮಸ್ಯೆಗೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಕಡೆ ಬೆರಳು ತೋರಿಸುವ ಕೆಲಸ ಮಾಡುತ್ತಿದೆ. ಕೇಂದ್ರದ ಪವರ್ ಗ್ರಿಡ್ ಗೆ ಹಣ ಕಟ್ಟಿದರೆ ಹೆಚ್ಚುವರಿ ವಿದ್ಯುತ್ ಸಿಗಲಿದೆ. ರೈತರಿಗಾಗಿ ವಿದ್ಯುತ್ ಖರೀದಿ ಮಾಡಲು ಹಣ ಕಾಯ್ದಿರಿಸುವ ಅಥವಾ ಬರದಿಂದ ತತ್ತರಿಸಿದ ರೈತರ ನೆರವು ನೀಡಲು ಸರ್ಕಾರ ಮುಂದಾಗುತ್ತಿಲ್ಲ ಎಂದು ಮಾಜಿ ಸಚಿವ, ಜೆಡಿಎಸ್ ಮುಖಂಡ ಜಿ.ಟಿ.ದೇವೇಗೌಡ ಆರೋಪಿಸಿದರು. ನಗರಕ್ಕೆ ಪಕ್ಷದ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ನಗರದ ಪ್ರವಾಸಿ ಮಂದಿರದಲ್ಲಿ ತಮ್ಮನ್ನು ಭೇಟಿಯಾದ ರೈತರ ಸಮಸ್ಯೆ ಆಲಿಸಿದ ಜಿಟಿಡಿ, ಹಲವು ವರ್ಷಗಳಿಂದ ಸೋಲಾರ್ ಪವರ್ ಬಳಸಿಕೊಂಡು ರೈತರಿಗೆ ಸತತ 7 ತಾಸು ತ್ರಿಫೇಸ್ ವಿದ್ಯುತ್ ನೀಡಲಾಗುತ್ತಿತ್ತು.
ಆದರೆ ಈಗ ಲೋಡ್ ಶೆಡ್ಡಿಂಗ್ ಮಾಡಿ 2 ಗಂಟೆ ಮಾತ್ರ ತ್ರಿಫೇಸ್ ವಿದ್ಯುತ್ ನೀಡತ್ತಿದ್ದಾರೆ. ಮುಂಚೆ ₹ 10 ಸಾವಿರ ನೀಡಿದರೆ ಪಂಪಸೆಟ್ ಗಳಿಗೆ ವಿದ್ಯುತ್ ಸಂಪರ್ಕ ನೀಡುತ್ತಿದ್ದರು. ಆದರೀಗ ₹ 4ರಿಂದ ₹ 5 ಲಕ್ಷದವರೆಗೆ ರೈತರು ಹಣ ಖರ್ಚು ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಮಾಧಾನ ವ್ಯಕ್ತಪಡಿಸಿದರು.ಪ್ರತಿವರ್ಷ ಕೃಷಿ ಇಲಾಖೆಯಿಂದ ರೈತರಿಗೆ ವಿವಿಧ ಯಂತ್ರೋಪಕರಣ ನೀಡಲಾಗುತ್ತಿತ್ತು. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ನಿಲ್ಲಿಸಿದ್ದು, ಯಾವುದೇ ರೈತ ಪರ ಯೋಜನೆಗಳು ಜಾರಿಯಾಗುತ್ತಿಲ್ಲ ಎಂದು ಆರೋಪಿಸಿದರು.
ರಾಜ್ಯಕ್ಕೆ ಕಾಂಗ್ರೆಸ್ ಸರ್ಕಾರದ 6ನೇ ಗ್ಯಾರಂಟಿ ರೈತರ ಆತ್ಮಹತ್ಯೆ: ಜಿ.ಟಿ.ದೇವೇಗೌಡ
ರೈತ ಮುಖಂಡ ಅರವಿಂದ ಮಾತನಾಡಿ, ಕೋವಿಡ್ ಲಾಕ್ಡೌನ್, ಬರದಿಂದ ಸಾಕಷ್ಟು ತೊಂದರೆಗೆ ಸಿಲುಕಿದ್ದಾರೆ. ಸುಮಾರು 10-15 ವರ್ಷಗಳಿಂದ ಅತಿವೃಷ್ಟಿ, ಅನಾವೃಷ್ಟಿಗಳ ಕಾರಣ ಬೆಳೆ ಕೈಗೆ ಬಾರದೇ ಸಾಲದ ಸುಳಿಗೆ ಸಿಲುಕಿದ್ದಾರೆ. ಸಾಲ ಮರುಪಾವತಿಸಲು ಆಗುತ್ತಿಲ್ಲ. ಸರ್ಕಾರ ರೈತರ ಸಾಲಮನ್ನಾ ಮಾಡಬೇಕೆಂದು ಆಗ್ರಹಿಸಿದರು. ರೈತಮುಖಂಡರಾದ ಮಲ್ಲಿಕಾರ್ಜುನ, ಅಡಿವೆಪ್ಪ ,ಈರಣ್ಣಾ ,ಧರ್ಮರಾಜ ಗೌಡರ, ಮಹಾಂತೇಶ ಕಮತೆ, ಬಸನಗೌಡಾ ಪಾಟೀಲ, ಬೀರಪ್ಪ ದೇಶನೂರ ,ಬಿ.ಎಸ್. ಬೊಗೂರ, ರುದ್ರಗೌಡ ಪಾಟೀಲ ಇತರರು ಇದ್ದರು.
ಬಿಜೆಪಿ - ಜೆಡಿಎಸ್ ಮೈತ್ರಿ ತಾಪಂ, ಗ್ರಾಪಂನಲ್ಲೂ ಆಗುತ್ತೆ: ಜಿ.ಟಿ.ದೇವೇಗೌಡ
ರೈತರಿಗೆ ಅಭಯ ನೀಡಿದ ಮಾಜಿ ಸಿಎಂ ಎಚ್ಡಿಕೆ: ತಮ್ಮನ್ನು ಭೇಟಿಯಾದ ರೈತರು ಸಮಸ್ಯೆ ಕುರಿತು ಹೇಳಿಕೊಳ್ಳುತ್ತಿದ್ದಂತೆ ಶಾಸಕ ಜಿ.ಟಿ. ದೇವೇಗೌಡ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ದೂರವಾಣಿ ಕರೆ ಸ್ಪೀಕರ್ ಆನ್ ಮಾಡಿದರು. ಈ ವೇಳೆ ರೈತರು ಅನುಭವಿಸುತ್ತಿರುವ ತೊಂದರೆಗಳ ಬಗ್ಗೆ ಮಾಸಿ ಸಿಎಂ ಎಚ್ಡಿಕೆ ಬಳಿ ಅಳಲು ತೋಡಿಕೊಂಡು, ಸರ್ಕಾರದ ಮೇಲೆ ಒತ್ತಡ ತಂದು ರೈತರಿಗೆ ಶೀಘ್ರ ಬರ ಪರಿಹಾರ ಕೊಡಿಸುವಂತೆ ಮನವಿ ಮಾಡಿದರು. ರೈತರಿಗೆ ಅಭಯ ನೀಡಿದ ಕುಮಾರಸ್ವಾಮಿ, ನಮ್ಮ ಸರ್ಕಾರದಲ್ಲಿ ರೈತರ ಶ್ರೇಯೋಭಿವೃದ್ಧಿಗಾಗಿ ಹತ್ತು ಹಲವು ಯೋಜನೆ ನೀಡಿದ್ದೇವೆ. ಶೀಘ್ರವೇ ಬೆಂಗಳೂರಿನಲ್ಲಿ ನಿಮ್ಮೊಂದಿಗೆ ಸಭೆ ಮಾಡುತ್ತೇನೆ ಎಂದು ಭರವಸೆ ನೀಡಿದರು.