
ಹುಬ್ಬಳ್ಳಿ (ಸೆ.20): ರಾಜ್ಯ ಸರ್ಕಾರ ನಡೆಸಲು ಮುಂದಾಗಿರುವ ಜಾತಿ ಗಣತಿ ಮೂರ್ಖ, ಅಯೋಗ್ಯತನದ ಸಮೀಕ್ಷೆ ಯಾಗಿದ್ದು, ರಾಜ್ಯ ಸರ್ಕಾರ ಕೂಡಲೇ ಇದನ್ನು ಕೈಬಿಡಬೇಕು ಎಂದು ಬಿಜೆಪಿಯಿಂದ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಆಗ್ರಹಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಗಣತಿಯ ಮಾದರಿ ರೂಪಿಸಿದವರನ್ನು ಕಪಾಳಕ್ಕೆ ಹೊಡೆಯಬೇಕು. ವ್ಯವಸ್ಥಿತವಾಗಿ ಹಿಂದೂ ಸಮಾಜ ಒಡೆದು ಸಾಬರಿಗೆ (ಮುಸ್ಲಿಂ) ಅನುಕೂಲ ಮಾಡಿಕೊಡುವ ಹುನ್ನಾರ ಇದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ವೀರಶೈವ-ಲಿಂಗಾಯತ ಎರಡು ಒಂದೇ: ವೀರಶೈವ-ಲಿಂಗಾಯತ ಎರಡೂ ಒಂದೇ. ಇವು ಹಿಂದೂ ಧರ್ಮದ ಭಾಗ. ವೀರಶೈವ, ಲಿಂಗಾಯತ ಅಧಿಕೃತ ಧರ್ಮವಲ್ಲ. ಅದಕ್ಕೆ ಕೇಂದ್ರ ಸರ್ಕಾರದಿಂದ ಮಾನ್ಯತೆಯೂ ಸಿಕ್ಕಿಲ್ಲ. ಹೀಗಾಗಿ ಲಿಂಗಾಯತ ಸಮುದಾಯದವರು ಜಾತಿ ಸಮೀಕ್ಷೆ ಸಂದರ್ಭದಲ್ಲಿ ಧರ್ಮ ಕಾಲಂನಲ್ಲಿ ಹಿಂದೂ, ಜಾತಿ ಕಾಲಂನಲ್ಲಿ ವೀರಶೈವ ಎಂದು ಬರೆಸಬೇಕು ಎಂದು ವಿನಂತಿಸಿದರು. ಹಿಂದೂ ಧರ್ಮ ಬೇಡ ಎನ್ನುವ ಸ್ವಾಮೀಜಿಗಳು ಕೇಸರಿ ಬಟ್ಟೆ ತ್ಯಾಗ ಮಾಡಿ, ಹಸಿರು, ಬಿಳಿ ಬಟ್ಟೆ ಧರಿಸಲಿ. ಹಿಂದೂ ಧಾರ್ಮಿಕ ಸಂಪ್ರದಾಯಗಳಿಗೆ ಅಪಮಾನ ಮಾಡುವುದು ಸ್ವಾಮೀಜಿಗಳ ಉದ್ದೇಶ ಎಂದು ಕಿಡಿಕಾರಿದರು.
ಪೊಲೀಸರು ಹಿಂದೂ ಕಾರ್ಯಕರ್ತರ ಮೇಲೆ ಸ್ವಯಂ ಆಗಿ ಪ್ರಕರಣ ದಾಖಲಿಸುತ್ತಾರೆ. ಯಾರನ್ನೋ ಖುಷಿ ಪಡಿಸಲಿಕ್ಕೆ ಅಧಿಕಾರಿಗಳು ಕೆಲಸ ಮಾಡಬಾರದು ಎಂದು ಆಗ್ರಹಿಸಿದರು. ಗಣಪತಿ ಡಿಜೆ ಹಚ್ಚಿದಕ್ಕೆ, ಸಭೆಗಳಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂದು ಪೊಲೀಸರು ಎಫ್‌ಐಆರ್ ದಾಖಲು ಮಾಡುತ್ತಾರೆ. ಬರುವ 2028ಕ್ಕೆ ರಾಜ್ಯದಲ್ಲಿ ಹಿಂದೂಗಳ ಪರವಾದ ಜೆಸಿಬಿ ಪಕ್ಷ ಅಧಿಕಾರಕ್ಕೆ ಬರುತ್ತದೆ. ಹಿಂದೂಗಳ ಮೇಲೆ ದಾಖಲಾದ ಪ್ರಕರಣ ವಾಪಸ್ ಪಡೆಯೋದೇ ಮೊದಲ ಕೆಲಸ ಎಂದರು. ಸನಾತನ ಧರ್ಮದಲ್ಲಿ ಮೂರ್ತಿ ಪೂಜೆ ಮಾಡುವ ಅಧಿಕಾರ ದಲಿತ ಮಹಿಳೆಯರಿಗೂ ಇದೆ ಎಂದು ನಾನು ಹೇಳಿಕೆ ನೀಡಿದ್ದರೆ, ನನ್ನ ಹೇಳಿಕೆಯನ್ನು ಕೆಲವು ಶಾಸಕರು ತಿರುಚಿದ್ದಾರೆ.
ಅದನ್ನು ನ್ಯಾಯಾಧೀಶರ ಮುಂದೆ ತೋರಿಸಿದಾಗ ಸುಮ್ಮನಾದರು ಎಂದು ಹೇಳಿದರು. ಈಗಿನ ಕಾಲದಲ್ಲಿ ಭಾರತ, ಭಾರತ ಆಗಿ ಉಳಿದಿಲ್ಲ. ಅಂಬೇಡ್ಕರ್ ಸಂವಿಧಾನದಂತೆ ಭಾರತ ನಡೆಯಬೇಕು. ದೇವೇಗೌಡ ಅವರು ಸಿದ್ದರಾಮಯ್ಯ ಅವರನ್ನು ಉಚ್ಚಾಟನೆ ಮಾಡಿದ್ದಕ್ಕೆ ಸಿದ್ದು ಸಿಎಂ ಆಗಿದ್ದಾರೆ. ಅದೇ ರೀತಿ ನನ್ನನ್ನು ಉಚ್ಚಾಟನೆ ಮಾಡಿದ್ದಾರೆ. 2028ಕ್ಕೆ ನಾನು ಸಿಎಂ ಆಗುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ವಕೀಲ ಎಸ್.ಆರ್. ಹೆಗಡೆ, ವರುಣ ಆನವಟ್ಟಿ, ದೀಪಕ್ ಮಡಿವಾಳರ, ಅಭಿಷೇಕ ಆನವಟ್ಟಿ, ಸಿದ್ದಪ್ಪ ಕುರಿ ಇತರರು ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.