ಈಗ ಆದಿಲ್ ಶಾಹಿ ಬಿಜಾಪುರ ಅಲ್ಲ. ಸನಾತನ ಹಿಂದೂ ಧರ್ಮದ ವಿಜಯಪುರ ಆಗಿದೆ. ದೇಶದಲ್ಲಿ ನಿಜವಾದ ಹಿಂದೂ ರಾಷ್ಟ್ರ ನಮ್ಮ ವಿಜಯಪುರದಲ್ಲಿ ಇದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಹೇಳಿದರು.
ವಿಜಯಪುರ (ಸೆ.28): ಈಗ ಆದಿಲ್ ಶಾಹಿ ಬಿಜಾಪುರ ಅಲ್ಲ. ಸನಾತನ ಹಿಂದೂ ಧರ್ಮದ ವಿಜಯಪುರ ಆಗಿದೆ. ದೇಶದಲ್ಲಿ ನಿಜವಾದ ಹಿಂದೂ ರಾಷ್ಟ್ರ ನಮ್ಮ ವಿಜಯಪುರದಲ್ಲಿ ಇದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಹೇಳಿದರು. ನಗರದ ಶ್ರೀ ಸಿದ್ಧೇಶ್ವರ ದೇವಸ್ಥಾನ ಆವರಣದಲ್ಲಿ ಶ್ರೀಸ್ವಾಮಿ ವಿವೇಕಾನಂದ ಸೇನೆಯಿಂದ ಸನಾತನ ಹಿಂದೂ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ಸರ್ವ ಗಜಾನನ ಮಂಡಳಿಗಳಿಗೆ ಸನ್ಮಾನ ಹಾಗೂ ಸಮಾವೇಶದಲ್ಲಿ ಮಾತನಾಡಿದ ಅವರು, ಹಿಂದು ಧರ್ಮಕ್ಕೆ ಬೈಯುವುದು ದೇಶದಲ್ಲಿ ಫ್ಶಾಷನ್ ಆಗಿದೆ. ಅಂತವರೆಲ್ಲರೂ ಹೈಬ್ರಿಡ್ ತಳಿಗಳು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸನಾತನ ಧರ್ಮ ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಸಾಕಷ್ಟು ಜನ ಬಂದು ಹೋದರೂ ಏನು ಮಾಡಲು ಆಗಿಲ್ಲ. ಉಳಿದ ಧರ್ಮಗಳಿಗೆ ಸಂಸ್ಥಾಪಕರು ಇದ್ದಾರೆ. ಆದರೆ, ನಮ್ಮ ಸನಾತನ ಹಿಂದೂ ಧರ್ಮ ದೇವರಿಂದ ಹುಟ್ಟಿಕೊಂಡಿದೆ. ಬ್ರಹ್ಮ, ವಿಷ್ಣು, ಮಹೇಶ್ವರರೇ ಸಂಸ್ಥಾಪಕರು. ನಮ್ಮ ಧರ್ಮ ಯಾರಿಗೂ ಅನ್ಯಾಯ ಮಾಡಿಲ್ಲ. ಮತ್ತೇಕೆ ಮಾತನಾಡುವುದು ಎಂದು ಪ್ರಶ್ನಿಸಿದರು. ಗಣಪತಿ ಸಾರ್ವಜನಿಕ ಆಚರಣೆ ಏಕೆ ಆಯ್ತು ಅಂದರೆ, ಸ್ವಾತಂತ್ರ್ಯ ಪಡೆಯಲು ಸಂಘಟನೆಗಾಗಿ ಜಾಗೃತಿಗೊಳಿಸಲು ಲೋಕಮಾನ್ಯ ಬಾಲ ಗಂಗಾಧರ ತಿಲಕರು ಕರೆ ಕೊಟ್ಟರು. ಆಗ ಜಾರಿಗೆ ಬಂದಿತು ಎಂದು ಹೇಳಿದರು.
ಕೋರ್ಟ್ ಹೊರಗೆ ಕಾವೇರಿ ಸಮಸ್ಯೆ ಪರಿಹಾರಕ್ಕೆ ನಾವು ಸಿದ್ಧ: ಸಿಎಂ ಸಿದ್ದರಾಮಯ್ಯ
ಜಗತ್ತಿಗೆ ಮಾದರಿಯಾದ ಸಂವಿಧಾನದ ಕೊಡುಗೆ ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಸರಿಯಾಗಿ ನಡೆಸಿಕೊಳ್ಳಲಿ. ಚುನಾವಣೆಯಲ್ಲಿ ಸೋಲಿಸಿದರು. ಅವರು ನಿಧನರಾದಾಗ ಅಂತ್ಯಕ್ರಿಯೆಗೆ ದೆಹಲಿಯಲ್ಲಿ ಜಾಗ ಸಹ ಕೊಡಲಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಬರಲು ಭಗತ್ ಸಿಂಗ್, ತಾತ್ಯಾ ಟೋಪೆ, ರಾಜಗುರು, ಸುಖದೇವ, ಲಾಲಾ ಲಜಪುತರಾಯ್, ವೀರ ಸಾವರ್ಕರ, ಸುಭಾಸಚಂದ್ರ ಬೋಸ್ ರಂತಹ ಮಹಾನ್ ಹೋರಾಟ ಕಾರಣ. ನೆಹರು ಬರೀ ಐಷಾರಾಮಿ ಜೀವನ ನಡೆಸಿದ್ದಾರೆ. ಕಾಲಾಪಾನಿ ಶಿಕ್ಷೆ ಅನುಭವಿಸಿದ ಸಾವರ್ಕರ ಬಗ್ಗೆ ಮಾತಾಡುತ್ತಾರೆ. ಅಂತವರನ್ನು 15 ದಿನ ಆ ಜೈಲಲ್ಲಿ ಇಟ್ಟರೆ ರಾಜಕೀಯನೇ ಬೇಡೆಂದು ಓಡುತ್ತಾರೆ ಎಂದರು.
ವಿಜಯಪುರದಲ್ಲಿ ಹಿಂದುತ್ವ ಸೋಲಿಸಲು ಸಾಕಷ್ಟು ಕುತಂತ್ರ ನಡೆಸಿದರೂ ಏನು ಆಗಲಿಲ್ಲ. ಅದಕ್ಕೆ ಕಾರಣ ನಾವು ಮಾಡಿದ ಅಭಿವೃದ್ಧಿ ಹಾಗೂ ನಮ್ಮ ಜಾಗೃತರಾಗಿರುವುದು. ನನ್ನ ನೀವು ಕೈಬಿಡುವುದಿಲ್ಲ ಎನ್ನುವುದು ಗೊತ್ತು. ಹೀಗಾಗಿ ಎಂದೂ ಕೂಡ ನಮ್ಮನ್ನು ಸೋಲಿಸಲು ಅವರಿಂದ ಆಗದು ಎಂದು ಹೇಳಿದರು. ಎಲ್ಲರೂ ಚುನಾವಣೆ ಸಂದರ್ಭದಲ್ಲಿ ಹಣ ಹಂಚುತ್ತಾರೆ. ಆಸೆ ಆಮಿಷೆ ಒಡ್ಡುತ್ತಾರೆ. ಆದರೆ, ನಾನು ಈಗ ಅತ್ಯಂತ ಖುಷಿಯಿಂದ ದೀಪಾವಳಿ ಆಚರಣೆ ಮಾಡಲು 11 ಸಾವಿರ ಕುಟುಂಬಗಳಿಗೆ ತಲಾ ₹2 ಸಾವಿರ ನೀಡಲು ನಿರ್ಧರಿಸಿದ್ದೇನೆ ಎಂದು ಇದೇ ವೇಳೆ ಘೋಷಣೆ ಮಾಡಿದರು.
ಕಾವೇರಿ ವಿಚಾರದಲ್ಲಿ ನಮ್ಮಲ್ಲಿಯೇ ಒಗ್ಗಟ್ಟಿಲ್ಲ: ಎಚ್.ಡಿ.ದೇವೇಗೌಡ ಬೇಸರ
ಸ್ವಾಮಿ ವಿವೇಕಾನಂದ ಸೇನೆಯ ಅಧ್ಯಕ್ಷ ರಾಘವ ಅಣ್ಣಿಗೇರಿ, 2008 ರಿಂದ ಈವರೆಗೆ ಸ್ವಾಮಿ ವಿವೇಕಾನಂದ ಸೇನೆಯ ಖರ್ಚು ವೆಚ್ಚಗಳನ್ನು ಬಸನಗೌಡ ಪಾಟೀಲ ಯತ್ನಾಳ ಅವರೇ ನೋಡಿಕೊಂಡಿದ್ದಾರೆ. ಅನೇಕ ಸಂಘಟನೆಗಳನ್ನು ನೋಡುತ್ತೇವೆ. ಹಣ ವಸೂಲಿಗೆ ಹುಟ್ಟಿಕೊಂಡಿರುತ್ತವೆ. ಆ ಕೆಟ್ಟ ಚಾಳಿ ನಮ್ಮಲ್ಲಿ ಇಲ್ಲ. 2009 ರಿಂದ ಪ್ರತಿವರ್ಷ ಗಣೇಶ ಹಬ್ಬ ಆಚರಿಸುತ್ತಾ ಬಂದಿದ್ದೇವೆ ಎಂದರು. ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಯುವ ಸಮೂಹ ನೆರದಿತ್ತು.