ವಸತಿ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಯ ಸವಲತ್ತು ಮತ್ತು ಸೌಲಭ್ಯಗಳಿಗಾಗಿ ಜನರು ಬೆಂಗಳೂರಿಗೆ ಬರುವುದನ್ನು ತಪ್ಪಿಸಲು ಆ.1ರಿಂದ ಜಿಲ್ಲಾ ಮಟ್ಟದಲ್ಲಿ ಜನತಾ ದರ್ಶನ ಆರಂಭಿಸಿ ತಾವೇ ಜನರ ಬಳಿಗೆ ಹೋಗಲು ವಸತಿ ಮತ್ತು ಅಲ್ಪಸಂಖ್ಯಾತರ ಇಲಾಖೆಯ ಸಚಿವ ಜಮೀರ್ ಅಹಮದ್ ಖಾನ್ ನಿರ್ಧರಿಸಿದ್ದಾರೆ.
ಬೆಂಗಳೂರು (ಜೂ.09): ವಸತಿ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಯ ಸವಲತ್ತು ಮತ್ತು ಸೌಲಭ್ಯಗಳಿಗಾಗಿ ಜನರು ಬೆಂಗಳೂರಿಗೆ ಬರುವುದನ್ನು ತಪ್ಪಿಸಲು ಆ.1ರಿಂದ ಜಿಲ್ಲಾ ಮಟ್ಟದಲ್ಲಿ ಜನತಾ ದರ್ಶನ ಆರಂಭಿಸಿ ತಾವೇ ಜನರ ಬಳಿಗೆ ಹೋಗಲು ವಸತಿ ಮತ್ತು ಅಲ್ಪಸಂಖ್ಯಾತರ ಇಲಾಖೆಯ ಸಚಿವ ಜಮೀರ್ ಅಹಮದ್ ಖಾನ್ ನಿರ್ಧರಿಸಿದ್ದಾರೆ. ಗುರುವಾರ ಕೊಳಗೇರಿ ಅಭಿವೃದ್ಧಿ ಮಂಡಳಿಯ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಪ್ರತಿ ತಿಂಗಳು ಒಂದೊಂದು ಜಿಲ್ಲೆಯಲ್ಲಿ ಎರಡು ದಿನ ಜನತಾ ದರ್ಶನ ನಡೆಸಲಿದ್ದೇನೆ.
ಜಿಲ್ಲೆ ವ್ಯಾಪ್ತಿಯ ಎರಡೂ ಇಲಾಖೆಗಳ ಎಲ್ಲ ತಾಲೂಕು ಮಟ್ಟದ ಅಧಿಕಾರಿಗಳು ಅಲ್ಲಿರಲಿದ್ದಾರೆ ಎಂದು ಹೇಳಿದರು. ಆಗಸ್ಟ್ ಒಳಗೆ ಎರಡೂ ಇಲಾಖೆಗಳಿಗೆ ಸಂಬಂಧಿಸಿದ ಸಮಸ್ಯೆ ಇದ್ದರೆ ಪರಿಹರಿಸಲು ಅಧಿಕಾರಿಗಳಿಗೆ ಗಡುವು ನೀಡಿದರು. ಜನತಾ ದರ್ಶನ ಸಂದರ್ಭದಲ್ಲಿ ಏನಾದರೂ ಸಮಸ್ಯೆ ಕಂಡು ಬಂದರೆ ಅಥವಾ ಅಧಿಕಾರಿಗಳ ಮಟ್ಟದಲ್ಲಿ ತಪ್ಪು ನಡೆದಿದ್ದರೆ ದೂರುಗಳು ಬಂದರೆ ಅಂತಹವರ ವಿರುದ್ಧ ಸ್ಥಳದಲ್ಲೇ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಗೃಹಮಂಡಳಿ, ರಾಜೀವ್ ಗಾಂಧಿ ವಸತಿ ನಿಗಮ, ಕೊಳಗೇರಿ ಅಭಿವೃದ್ಧಿ ಮಂಡಳಿ, ಅಲ್ಪ ಸಂಖ್ಯಾತರ ಇಲಾಖೆಗೆ ಸಂಬಂಧಿಸಿದ ಕಾರ್ಯಕ್ರಮಗಳು ಮತ್ತು ಯೋಜನೆಗಳು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಯಾವುದೇ ದುರುಪಯೋಗ ಇಲ್ಲದಂತೆ ಜಾರಿಗೊಳಿಸುವ ಹೊಣೆಗಾರಿಕೆ ಅಧಿಕಾರಿಗಳ ಮೇಲಿದೆ.
ಆ.17/18ಕ್ಕೆ ಬೆಳಗಾವಿಯಲ್ಲಿ ‘ಗೃಹಲಕ್ಷ್ಮಿ’ ಯೋಜನೆಗೆ ಚಾಲನೆ: ಸಿಎಂ ಸಿದ್ದರಾಮಯ್ಯ
ಕೊಳೆಗೇರಿಗಳಲ್ಲಿ ವಾಸಿಸುತ್ತಿರುವ ಲಕ್ಷಾಂತರ ಜನರು ಕಡು ಬಡುವರಿದ್ದು, ನೀವು ಮಾಡುವ ಕೆಲಸ ದೇವರು ಮೆಚ್ಚುವಂತೆ ಇರಬೇಕು ಎಂದು ಹೇಳಿದರು. ಹೊಸದಾಗಿ ಘೋಷಿಸಿರುವ ಬೆಂಗಳೂರಿನ 25 ಸೇರಿದಂತೆ 154 ಕೊಳೆಗೇರಿಗಳಲ್ಲಿ ಮೂಲ ಸೌಕರ್ಯ ಸೇರಿ ಇತರೆ ಅಭಿವೃದ್ಧಿ ಕಾರ್ಯವನ್ನು ಒಂದು ತಿಂಗಳಲ್ಲಿ ಪ್ರಾರಂಭಿಸಬೇಕು. ತಿಂಗಳ ಗಡುವು ನಂತರ ನಾನೇ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸುತ್ತೇನೆ ಎಂದು ತಿಳಿಸಿದರು. ಕೊಳೆಗೇರಿ ಅಭಿವೃದ್ಧಿ ಮಂಡಳಿ ಆಯುಕ್ತ ಬಿ. ವೆಂಕಟೇಶ್ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ರಾಜಕಾರಣ ಬೇಕೋ ಬೇಡ್ವೋ ಅನಿಸಿದೆ: ಸಂಸದ ಡಿ.ಕೆ.ಸುರೇಶ್
ಅಧಿಕಾರಿ ಅಮಾನತಿಗೆ ಆದೇಶ: ಪ್ರಗತಿ ಪರಿಶೀಲನೆಗೆ ಗೈರು ಹಾಜರಾದ ಅಧಿಕಾರಿಗಳ ವಿರುದ್ಧ ಸಿಡಿಮಿಡಿಗೊಂಡ ಸಚಿವ ಜಮೀರ್ ಅಹಮದ್, ಮೇಲಧಿಕಾರಿಗಳ ಅನುಮತಿ ಪಡೆಯದೆ, ಸಕಾಲಿಕ ಕಾರಣ ಕೊಡದೆ ಗೈರು ಹಾಜರಾದವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು. ಇದೇ ವೇಳೆ ಆಯುಕ್ತರ ಅನುಮತಿ ಪಡೆಯದೆ ಸಭೆಗೆ ಗೈರಾಗಿದ್ದ ಮಂಡ್ಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ದರ್ಶನ್ ಜೈನ್ ಅವರನ್ನು ಅಮಾನತು ಮಾಡುವಂತೆ ಅದೇಶಿಸಿದರು.