ವರುಣದಲ್ಲಿ ಸ್ಪರ್ಧಿಸು ಎಂದು ಯಾರೂ ಹೇಳಿಲ್ಲ, ಸಿದ್ದಗಂಗಾ ಶ್ರೀಗಳ ಆಶೀರ್ವಾದ ಪಡೆದ ಸಚಿವ ಸೋಮಣ್ಣ
ತುಮಕೂರು(ಏ.11): ನಾನು ಹೈಕಮಾಂಡ್ ಅಲ್ಲ. ಚುನಾವಣೆಯಲ್ಲಿ ಟಿಕೆಟ್ ಕೊಡೋದು, ಬಿಡೋದು ಪಕ್ಷದ ವರಿಷ್ಠರಿಗೆ ಬಿಟ್ಟವಿಷಯ. ನನ್ನ ಮಗನಿಗೆ ಎಂಎಲ್‌ಎ ಟಿಕೆಟ್ ಕೊಟ್ಟರೂ ಸಂತೋಷ, ಕೊಡದಿದ್ದರೂ ಸಂತೋಷ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.
ನಗರದ ಸಿದ್ಧಗಂಗಾ ಮಠಕ್ಕೆ ಸೋಮವಾರ ಭೇಟಿ ನೀಡಿ ಸಿದ್ಧಲಿಂಗ ಸ್ವಾಮಿಗಳ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಚುನಾವಣೆಯ್ಲಿ ಯಾರಿಗಾದರೂ ಟಿಕೆಟ್ ಕೊಡಲೇಬೇಕು. ಹೀಗಾಗಿ ಅರ್ಹತೆ ಇರುವವರಿಗೆ ಟಿಕೆಟ್ ಕೊಡುತ್ತಾರೆ. ನನ್ನ ಮಗನಿಗೆ ಕೊಟ್ಟರೆ ಕೆಲಸ ಮಾಡುತ್ತೇನೆ. ಹೋರಾಟ ಮಾಡುತ್ತೇನೆ. ಕಾರ್ಯಕರ್ತರು ಪಕ್ಷದ ಮುಖಂಡರೆಲ್ಲ ಸೇರಿ ಕೆಲಸ ಮಾಡುತ್ತಾರೆ ಎಂದು ಭರವಸೆ ನೀಡಿದರು.
undefined
ವರುಣ ಕ್ಷೇತ್ರದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಸ್ಪರ್ಧೆಗೆ ಸಂಬಂಧಿಸಿ ಮಾತನಾಡಿದ ಸೋಮಣ್ಣ, ನನ್ನನ್ನು ವರುಣ ಕ್ಷೇತ್ರಕ್ಕೆ ಹೋಗು ಎಂದು ಯಾರೂ ಈವರೆಗೆ ಕೇಳಿಲ್ಲ. ಇದೆಲ್ಲ ಊಹಾಪೋಹ. ನನಗೆ ಈ ವಿಚಾರದಲ್ಲಿ ಯಾವುದೇ ಒತ್ತಡ ಇಲ್ಲ ಎಂದರು.
ವರಿಷ್ಠರಿಗೆ ಈ ಚುನಾವಣೆ ಒಂದು ಪ್ರತಿಷ್ಠೆ. ರಾಜ್ಯ ರಾಜಕಾರಣದಲ್ಲಿ ಡಬಲಲ್ ಇಂಜಿನ್ ಸರ್ಕಾರ ಅನೇಕ ಜನಪರ ಕೆಲಸಗಳನ್ನು ಮಾಡಿದೆ. ಅದರಿಂದ ಉಪಯೋಗ ಏನಾಗಿದೆ ಎಂಬುದು ಜನರಿಗೆ ಗೊತ್ತಿದೆ. ಎಲ್ಲೆಲ್ಲಿ ಏನೇನು ಆಗಬೇಕೋ ಅದು ಆಗುತ್ತದೆ. ತಮಗೂ ಒಂದೊಂದು ಸಾರಿ ಅನುಮಾನ ಕಾಡುತ್ತದೆ. ಹಾಗಾಗಿ ಯಾರನ್ನು ಎಲ್ಲೆಲ್ಲಿ ನಿಲ್ಲಿಸಬೇಕು ಎಂಬುದು ವರಿಷ್ಠರಿಗೆ ಗೊತ್ತಿದೆ. ಎಲ್ಲಾ ವರಿಷ್ಠರಿಗೆ ಬಿಟ್ಟಿದ್ದು ಎಂದರು.
ಗೆಲ್ಲುವ ಸಾಧ್ಯತೆ ಇರೋ ಕ್ಷೇತ್ರಗಳೆಲ್ಲ ಕಾಂಗ್ರೆಸ್ ತೆಕ್ಕೆಯಲ್ಲಿವೆ. ಹಾಗಾಗಿ ಮಕ್ಕಳಿಗೆ ಟಿಕೆಟ್ ಕೊಟ್ಟರೆ ನಿಲ್ಲಿಸುತ್ತೇವೆ. ಇಲ್ಲ ಅಂದರೆ ಇಲ್ಲ. ಪಕ್ಷದ ಚೌಕಟ್ಟಿನಲ್ಲಿ ಎಲ್ಲೆಲ್ಲಿ ಹೇಳಬೇಕೋ ಎಲ್ಲಾ ಹೇಳಿದ್ದು, ಕೇಳಿದ್ದು ಎಲ್ಲಾ ಆಯ್ತು ಎಂದರು.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.