ಚಿಕ್ಕಬಳ್ಳಾಪುರ (ಆ.29): ಬಿಎಸ್ ವೈ ಒಳ್ಳೆಯ ಕೆಲಸ ಮಾಡಿದರೂ ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದು ಯಾಕೆ ಎನ್ನುವ ಡಿಕೆಶಿ ಹೇಳಿಕೆಗೆ ಇದು ಬಿಜೆಪಿ ಆಂತರಿಕ ವಿಚಾರ ಎಂದು ಸಚಿವ ಸುಧಾಕರ್ ತಿರುಗೇಟು ನೀಡಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿಂದು ಮಾತನಾಡಿದ ಆರೋಗ್ಯ ಸಚಿವ ಸುಧಾಕರ್ ಇದು ಬಿಜೆಪಿ ಪಕ್ಷದ ಆಂತರಿಕ ವಿಚಾರ. ಈ ಬಗ್ಗೆ ಹೈಕಮಾಂಡ್ ಬಿಎಸ್ ವೈ ಜೊತೆ ಚರ್ಚೆ ಮಾಡಿ ಬದಲಾವಣೆ ಮಾಡಿದ್ದಾರೆ ಎಂದರು.
'ಸಿದ್ದು-ಡಿಕೆಶಿ ಕೇವಲ ಫೋಟೋ ಫ್ರೆಂಡ್ಸ್: ಇಬ್ಬರ ಮಧ್ಯೆ ಸಿಎಂ ಸ್ಥಾನಕ್ಕೆ ಪೈಪೋಟಿ'
ಬಿಜೆಪಿಯಲ್ಲಿ ಕೆಲವೊಂದು ನೀತಿಗಳಿವೆ. ಅವುಗಳಿಗೆ ಅನುಗುಣವಾಗಿ ನಿರ್ಧಾರ ಆಗಿವೆ. ಅನ್ಯಪಕ್ಷದ ನಾಯಕರು ನಮ್ಮ ಆಂತರಿಕ ವಿಚಾರಗಳಿಗೆ ತಲೆ ಹಾಕದಿರುವುದು ಒಳ್ಳೆಯದು ಎಂದು ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ನಲ್ಲಿ ಏನೇನಾಗುತ್ತಿದೆ ನಮಗೂ ಗೊತ್ತಿದೆ. ಎಐಸಿಸಿಯ ಮಹಿಳಾ ಪ್ರತಿನಿಧಿ ರಾಜೀನಾಮೆ ನೀಡಿದ್ದು ಯಾಕೆ? ಛತ್ತೀಸ್‌ಗಡ, ರಾಜಸ್ಥಾನ ದಲ್ಲಿ ಏನು ಆಗುತ್ತಿದೆ ನಮಗೂ ಗೊತ್ತಿದೆ. ಆದರೆ ನಾವು ಬೇರೆ ಪಕ್ಷಗಳ ಬಗ್ಗೆ ಮಾತನಾಡಲ್ಲ ಅದು ನನ್ನ ಕೆಲಸವಲ್ಲ ಎಂದರು.