ಸಚಿವ ಎಸ್.ಟಿ.ಸೋಮಶೇಖರ್ ಅವರು ತಮ್ಮ ಮಾಜಿ ಗುರು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮೈಸೂರು, (ಫೆ.08): ಯಡಿಯೂರಪ್ಪನವರದ್ದು ಡಕೋಟಾ ಸರ್ಕಾರ ಎಂದಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಸಚಿವ ಎಸ್.ಟಿ.ಸೋಮಶೇಖರ್ ತಿರುಗೇಟು ಕೊಟ್ಟಿದ್ದಾರೆ.
ಇತ್ತೀಚೆಗೆ ವಿಧಾನಸಭೆ ಅಧಿವೇಶನದ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿ ಚರ್ಚೆ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಸರ್ಕಾರ 'ಟೇಕ್ ಆಫ್' ಅಲ್ಲ ಸಂಪೂರ್ಣ 'ಆಫ್ ಆಗಿ ಕೆಟ್ಟು ನಿಂತಿರುವ ಡಕೋಟ ಬಸ್ ನಂತಾಗಿದೆ ಎಂದು ವ್ಯಂಗ್ಯವಾಡಿದ್ದರು.
ದಾರಿಯಲ್ಲಿ ನಿಂತ ಡಕೋಟಾ ಎಕ್ಸ್‌ಪ್ರೆಸ್ ಸರ್ಕಾರ: ಕಲಾಪದಲ್ಲಿ ಟೀಕಾಪ್ರಹಾರ
ಇನ್ನು ಇದಕ್ಕೆ ಸೋಮಶೇಖರ್ ಮೈಸೂರಿನಲ್ಲಿ ಇಂದು (ಸೋಮವಾರ) ಪ್ರತಿಕ್ರಿಯಿಸಿದ್ದು, ಅವರೇ ಒಬ್ಬರು ಡಕೋಟಾ. ವಿರೋಧ ಪಕ್ಷದ ನಾಯಕರಾಗಿ ಸರಿಯಾಗಿ ಕೆಲಸ ಕೂಡ ಮಾಡುತ್ತಿಲ್ಲ. ಸಿಎಂ ಯಡಿಯೂರಪ್ಪ ಕೊರೋನಾ ಕಾಲದಲ್ಲೇ ಚೆನ್ನಾಗಿ ಕೆಲಸ ಮಾಡಿದ್ದಾರೆ ಎಂದು ತಿರುಗೇಟು ನೀಡಿದರು.
ಕೆಲವರಿಗೆ ಯಾವಾಗ್ಲೂ ಮಾತನಾಡುವ ಚಟ. ಈ ಮೂಲಕ ಪ್ರಚಾರದ ಹುಚ್ಚು. ಅದಕ್ಕೆ ಬಸನಗೌಡ ಪಾಟೀಲ್ ಯತ್ನಾಳ್ ಪದೇ ಪದೇ ಹೇಳಿಕೆ ನೀಡುತ್ತಿದ್ದಾರೆ. ಆದ್ರೆ ಅವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲ ಎಂದು ಸಚಿವ ಎಸ್ ಟಿ ಸೋಮಶೇಖರ್ ಕಿಡಿಕಾರಿದ್ದಾರೆ.
ಕಳೆದ ನಾಲ್ಕು ತಿಂಗಳಿನಿಂದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಆದ್ರೆ ಅವರ ಒಂದು ಮಾತು ಸಹ ನಡೆದಿಲ್ಲ. ಅವರಿಗೆ ಮಾತನಾಡುವ ಚಟ, ಹೀಗಾಗೇ ಅವರ ಮಾತಿಗೆ ಯಾವುದೇ ಕಿಮ್ಮತ್ತಿಲ್ಲ ಎಂದು ಟಾಂಗ್ ಕೊಟ್ಟರು.