
ಬೆಂಗಳೂರು (ಸೆ.21): ‘ರಾಜ್ಯಾದ್ಯಂತ ನಿಗದಿಯಂತೆ ಸೆ.22ರಿಂದಲೇ ಆರ್ಥಿಕ, ಸಾಮಾಜಿಕ ಸಮೀಕ್ಷೆ ಶುರುವಾಗಲಿದೆ. ಸಮೀಕ್ಷೆ ಕುರಿತು ಇರುವ ಕೆಲ ಗೊಂದಲ ಬಗೆಹರಿಸಲು ಹಿಂದುಳಿದ ವರ್ಗಗಳ ಆಯೋಗಕ್ಕೆ ಸಲಹೆ ನೀಡಿದ್ದೇವೆ. ಆಯೋಗ ಸಾಂವಿಧಾನಿಕ ಸಂಸ್ಥೆ ಆಗಿರುವುದರಿಂದ ಅವರೇ ನಿರ್ಧಾರ ಮಾಡಿ ಕ್ರಮ ಕೈಗೊಳ್ಳುತ್ತಾರೆ’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕೆಲ ಗೊಂದಲಗಳ ಬಗ್ಗೆ ಚರ್ಚೆ ನಡೆಸಿ ಆಯೋಗಕ್ಕೆ ಸಲಹೆ ನೀಡಿದ್ದೇವೆ. ಆಯೋಗ ಒಂದು ಸಾಂವಿಧಾನಿಕ ಸಂಸ್ಥೆ. ಆಯೋಗಕ್ಕೆ ನಿರ್ದೇಶನ ನೀಡಲು ಅಥವಾ ಒತ್ತಡ ಹಾಕಲು ಸಾಧ್ಯವಿಲ್ಲ. ಕೇವಲ ಸಲಹೆ ನೀಡಬಹುದು. ಆಯೋಗದವರು ಸಂಪೂರ್ಣ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತಾರೆ. ಆ ಬಳಿಕ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗಳಾಗಲಿವೆ ಎಂದು ಹೇಳಿದರು.
ಕ್ರಿಶ್ಚಿಯನ್ ಜತೆ ಹಿಂದೂ ಜಾತಿಗಳ ಸೇರ್ಪಡೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಮತ್ತೆ-ಮತ್ತೆ ಹೇಳುತ್ತಿದ್ದೇನೆ. ಇದು ಜಾತಿ ಸಮೀಕ್ಷೆ ಅಲ್ಲ. ಕ್ರಿಶ್ಚಿಯನ್ ಜಂಗಮ, ಕ್ರಿಶ್ಚಿಯನ್ ಕುರುಬ ಎಂಬ ಕಾಲಂ ಸೃಷ್ಟಿ ನಾವು ಮಾಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಾಗಲಿ, ನಾನಾಗಲಿ ಅಥವಾ ಆಯೋಗದವರಾಗಲಿ ಬರೆಸಿಲ್ಲ. ಹಿಂದಿನ ಕಾಂತರಾಜು ಆಯೋಗದವರು ಸಮೀಕ್ಷೆ ನಡೆಸುವ ವೇಳೆ ಸಾರ್ವಜನಿಕರೇ ಈ ರೀತಿಯಾಗಿ ತಮ್ಮ ತಮ್ಮ ಸಮುದಾಯಗಳು ಎಂದು ಸ್ವಇಚ್ಛೆಯಿಂದ ಬರೆಸಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಜನ ಬರೆದಿದ್ದನ್ನು ಆಯೋಗ ಪಟ್ಟಿಯಲ್ಲಿ ಸೇರಿಸಿದೆ. ಯಾರಿಗೂ ಈ ರೀತಿ ಬರೆಯಿಸಿ ಎಂದು ಸಮೀಕ್ಷೆಗೆ ಹೋದವರು ಹೇಳಲು ಸಾಧ್ಯನಾ? ಯಾವುದೇ ವಿಷಯದ ಬಗ್ಗೆ ಚರ್ಚೆ ನಡೆಯಬಾರದು ಎಂದರೆ ಹೇಗೆ? ಎಂದು ಮರು ಪ್ರಶ್ನಿಸಿದರು.
ಸಮೀಕ್ಷೆಯಲ್ಲಿ ಯಾವುದೇ ಗೊಂದಲವಿಲ್ಲ: ನಮ್ಮಲ್ಲಿ ಸಮೀಕ್ಷೆಗೆ ಸಂಬಂಧಿಸಿ ಯಾವುದೇ ಗೊಂದಲ ಇಲ್ಲ. ಒಂದು ತಿಂಗಳ ಮುಂಚಿತವಾಗಿಯೇ ಸಮೀಕ್ಷೆ ದಿನಾಂಕ ಪ್ರಕಟಿಸಿದ್ದೇವೆ. ಈಗಾಗಲೇ ಅದಕ್ಕೆ ಬೇಕಾದ ಸಿದ್ಧತೆ ನಡೆದಿವೆ. ಅಕ್ಟೋಬರ್‌ನಲ್ಲಿ ಸಮೀಕ್ಷೆ ಪೂರ್ಣಗೊಂಡು ಡಿಸೆಂಬರ್‌ನಲ್ಲಿ ಆಯೋಗ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ವರದಿಯನ್ನು ಸರ್ಕಾರ ಜಾರಿ ಮಾಡುವ ಕೆಲಸವನ್ನು ಮಾಡಿಯೇ ಮಾಡುತ್ತದೆ ಎಂದು ಶಿವರಾಜ್ ತಂಗಡಗಿ ಹೇಳಿದರು. ನಮ್ಮಲ್ಲಿ ಯಾವುದೇ ಅಪಸ್ವರಗಳಿಲ್ಲ. ಯಾವುದೇ ಸಮುದಾಯದ ನಾಯಕರ ಒತ್ತಡಗಳಿಲ್ಲ. ಸಚಿವ ಸಂಪುಟ ಸಭೆಯಲ್ಲಿ ಸಾದಕ-ಬಾಧಕ ಬಗ್ಗೆ ಚರ್ಚೆ ನಡೆದಿದೆಯಷ್ಟೇ. ಇದಕ್ಕೆ ನಿಮ್ಮ ಭಾಷೆಯಲ್ಲಿ ವಿರೋಧ ಎನ್ನುತ್ತೀರಿ? ನಾವು ಚರ್ಚೆ ಎನ್ನುತ್ತೇವೆ ಎಂದು ಮಾರ್ಮಿಕವಾಗಿ ಹೇಳಿದರು.
ಬಿಜೆಪಿಗರಿಗೆ, ಬಿಜೆಪಿ ಮಂತ್ರಿಗಳಿಗೆ ಪ್ರಧಾನಿ ಮೋದಿ ಅವರ ಬಳಿ ಮಾತನಾಡಲು ಸಾಧ್ಯನಾ? ಮೋದಿಯವರು ಅವರ ಕೈಗೆ ಸಿಗುತ್ತಾರೆಯೇ? ಸುಮ್ಮನೆ ಇಲ್ಲ-ಸಲ್ಲದ ಆರೋಪ ಮಾಡುತ್ತಾರೆ. ಬಿಜೆಪಿಯವರಿಗೆ ಜಾತಿ, ಮಸೀದಿ ಕಂಡರೆ ಪ್ರೀತಿ. ಅಭಿವೃದ್ಧಿ ಬಗ್ಗೆ ಬಿಜೆಪಿಯವರು ಮಾತನಾಡುತ್ತಿಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಕೇವಲ ಧರ್ಮ ಜಾತಿಗಳ ಬಗ್ಗೆಯೇ ಚರ್ಚೆ ಮಾಡುತ್ತಾ ಹೋದರೆ, ದೇಶ ಅವನತಿಯತ್ತ ಸಾಗುತ್ತದೆ. ಪಾಕಿಸ್ತಾನ, ಬಾಂಗ್ಲಾದೇಶ ಹಾಳಾಗಿರುವುದೇ ಧರ್ಮದ ಚರ್ಚೆ ಮಾಡಿಯೇ ಎಂದರು.
ಸಾರ್ವಜನಿಕರ ಮನೆಗಳ ಬಳಿ ಸಮೀಕ್ಷೆಗಾಗಿ ಶಿಕ್ಷಕರು ಬರಲಿದ್ದು, ದಯಮಾಡಿ ಸೂಕ್ತ ಮಾಹಿತಿ ನೀಡಿ ಸಹಕರಿಸಿ. ಯಾವುದೇ ಒತ್ತಡಕ್ಕೆ ಒಳಗಾಗದೇ ಉತ್ತರ ನೀಡಿ.
- ಶಿವರಾಜ್ ತಂಗಡಗಿ, ಕನ್ನಡ ಮತ್ತು ಸಂಸ್ಕೃತಿ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.